ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜ ಗುರು ಕೈಯಲ್ಲಿ ಗಜ

ಕಲಾಪ
Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಭಾವವನ್ನೂ ನಿರೂಪಿಸಿ, ಅಭಿವ್ಯಕ್ತವಾದವನ್ನೂ ಅಡಕಮಾಡಿದಂಥ ಕಲಾಕೃತಿಗಳನ್ನು ಅಯಾಚಿತವಾಗಿ ಚಿತ್ರಿಸುವ ಅನೇಕ ಕಲಾವಿದರಿದ್ದಾರೆ. ಅಂತಹ ಕಲಾವಿದರಲ್ಲಿ ಹುಬ್ಬಳ್ಳಿಯ ಜಿ.ಆರ್‌. ಮಲ್ಲಾಪೂರ ಕೂಡ ಒಬ್ಬರು.

ಬೆಂಗಳೂರಲ್ಲಿ ನಡೆಯುವ (ಜನವರಿ 5) ಚಿತ್ರಸಂತೆಯ ‘ಚಿತ್ರಕಟ್ಟೆ’ಯಲ್ಲಿ ಮಲ್ಲಾಪೂರರ ಕಲಾಕೃತಿಗಳು ಜನಸಾಮಾನ್ಯರಿಗೆ ವೀಕ್ಷಣೆಯ ಸುಖ ನೀಡಲಿವೆ. ಕಾರಣ ಅವರ ವಸ್ತು ವಿಷಯಗಳ ಆಯ್ಕೆ. ವಸ್ತು ವಿಷಯವೆಂಬುದು ಭೂತವಿದ್ದಂತೆ. ಅದನ್ನು ಹೆಡೆಮುರಗಿ ಕಟ್ಟುವುದೇ ಕಲಾತ್ಮಕತೆಯ ಅಭಿವ್ಯಕ್ತಿ. ಕಲಾವಿದರ ಕೃತಿಗಳಲ್ಲಿ ಆಕಾಶ, ಭೂಮಿ, ತರು–ಲತೆ, ಪ್ರಾಣಿಪಕ್ಷಿ, ಮನುಷ್ಯರು ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡ ಜೀವಂತಿಕೆ ಇರುತ್ತದೆ. ಮಲ್ಲಾಪೂರ ಕಾಣುವ ವಸ್ತುವಿನ ಬೆನ್ನೇರಿ ಹೊರಟಿದ್ದಾರೆ.

ವಸ್ತುವಿನ ಬೆನ್ನೇರಿ ಸವಾರಿ ಹೊರಡುವುದು ಸರಳವೇನಲ್ಲ. ಆಯಾಚಿತ ಭಾವ ಬಯಸುವಂಥದ್ದು. ಇದು ಕಲಾವಿದರಿಗೆ ದಕ್ಕಿದ ಇನ್ನೊಂದು ಅಭಿವ್ಯಕ್ತಿ. ಆಕಳಿಗೆ ರೊಟ್ಟಿ ಕೊಡುತ್ತಿರುವ ಹುಡುಗರು ಕೃತಿ ನಮ್ಮ ವಠಾರವನ್ನು ಜ್ಞಾಪಿಸುತ್ತದೆ. ಕಲ್ಲಂಗಡಿ ಹಣ್ಣು ತಿನ್ನುತ್ತಿರುವವ, ಡೋಲು ಮಾರುವವ, ಸೈಕಲ್‌ ಟೈರನ್ನು ಹಿಡಿದುಕೊಂಡಿರುವವ ಮತ್ತು ತೊರೆಯಲ್ಲಿ ಬಟ್ಟೆ ಒಗೆಯುತ್ತಿರುವ ಮಹಿಳೆಯ ದೃಶ್ಯಗಳು, ಕಲಾವಿದರ ಅಭಿವ್ಯಕ್ತಿಗೆ ಹಿಡಿದ ಕನ್ನಡಿಯೇ ಸರಿ.

ಮಲ್ಲಾಪೂರರು ಸರಣಿ ಚಿತ್ರಗಳನ್ನು ಪ್ರಕಟಿಸುವುದರಲ್ಲಿ ಸಿದ್ಧಹಸ್ತರು. ಇವರ ಸರಣಿ ಚಿತ್ರಗಳಲ್ಲಿ ಆನೆಗೆ ಅಗ್ರ ಸ್ಥಾನ. ಮೂರು ಕೃತಿಗಳಲ್ಲಿ ನೆರಳು–ಬೆಳಕಿನ ಬಣ್ಣಗಳ ಸಂಯೋಜನೆ ಇದೆ. ಸ್ನಾನ ಮಾಡುತ್ತಿರುವ ಆನೆ ಸೊಂಡಿಲಿನಿಂದ ನೀರು ಚಿಮುಕಿಸಿಕೊಳ್ಳುತ್ತಿದೆ.

ಮಾವುತನೊಬ್ಬ ಮೈ ಉಜ್ಜುತ್ತಿದ್ದಾನೆ. ಇನ್ನೊಬ್ಬ ಮೇಲೆ ಕುಳಿತಿದ್ದಾನೆ. ಹಿನ್ನೆಲೆಯಲ್ಲಿ ಆಕಾಶ, ಬೆಟ್ಟ ಗುಡ್ಡಗಳು ವಾಶ್‌ ತಂತ್ರಗಾರಿಕೆಯಲ್ಲಿ ಮಸುಕಾಗಿ ಕಾಣುತ್ತವೆ. ಇಲ್ಲವೆ ಹಾಗೆ ನೀರಿನಿಂದ ಹೊರಬರುತ್ತಿರುವ ಮತ್ತು ನಡೆಯುತ್ತಿರುವ ಆನೆಯ ಹಿನ್ನೆಲೆಯಲ್ಲಿ ಮೊದಲಿನ ತಂತ್ರವನ್ನೇ ಹೊಂದಿವೆ. ಕಲಾವಿದರು ಬೇಕೆನಿಸುವ ವಸ್ತುವಿಗೆ ಮಾತ್ರ ಪ್ರಾಶಸ್ತ್ಯ ನೀಡಿ ಉಳಿದವುಗಳನ್ನು ಗೌಣಗೊಳಿಸಿದ್ದಾರೆ. ಆನೆ ಕಿವಿಗಳು ಪಟಪಟನೆ ಬಡಿದುಕೊಂಡು ಕಣ್ಣುಗಳು ಕಿವಿಗಳಿಂದ ಮುಚ್ಚಿಕೊಂಡಂತೆ ಇನ್ನೊಂದು ಕೃತಿಯಲ್ಲಿ ಪ್ರಕಟಿಸಿದ್ದು, ಇಲ್ಲಿ ಮಾವುತನು ‘ಕಬ್ಬನ್ನು ಸೊಂಡಿಲಲ್ಲಿ ಕೊಟ್ಟು ಬರುತ್ತೀಯಾ ಇನ್ನು’ ಎನ್ನುವಂತೆ ನೋಡುತ್ತಿದ್ದಾನೆ. ಮತ್ತೊಂದರಲ್ಲಿ ಹಿಂದೆ ಒಬ್ಬ, ಮುಂದೆ ಇನ್ನೊಬ್ಬ ಮಾವುತರು ಇದ್ದಾರೆ. ಆನೆ ಲಗುಬಗೆಯಲ್ಲಿ ಹೊರಟಿದೆ. ಇಲ್ಲಿ ಆನೆ ಶುಭ್ರವಾಗಿದ್ದು, ಅದರ ಮೇಲೆ ಗಾಢ ಬೆಳಕು ಇರುವುದು ಸ್ಪಷ್ಟವಾಗಿದೆ.

ಭೂದೃಶ್ಯದಲ್ಲಿ (ಜಲವರ್ಣ) ಬಳಸಿದ ತಂತ್ರಗಾರಿಕೆಯನ್ನು ಕಲಾವಿದರು ಆಯ್ಕೆ ಮಾಡಿಕೊಂಡು ಅಥವಾ ಅದೇ ಮಾದರಿಯ ಬಣ್ಣಗಳನ್ನೇ ಆಕ್ರಿಲಿಕ್‌ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಪ್ರಕೃತಿ ಚಿತ್ರಗಳನ್ನು ನೈಜತೆಗಿಳಿಸುವ ಇವರ ಭಿನ್ನಶೈಲಿಯನ್ನು ಮಾದರಿ ಎನ್ನಬಹುದು.

ಬೆಂಗಳೂರಿನ ಕೆ. ಚಿನ್ನಪ್ಪ ಮತ್ತು ಹುಬ್ಬಳ್ಳಿಯ ಶಾನವಾಜ್‌  ಗಜರಾಜನನ್ನು ಭಿನ್ನ ಶೈಲಿಯಲ್ಲಿ ಪ್ರಕಟಿಸಿದ್ದಾರೆ.
ಮಲ್ಲಾಪೂರರ ಇನ್ನೊಂದು ಕೃತಿ ‘ಗೂಳಿ ಕದನ’ ಗಮನ ಸೆಳೆಯುತ್ತದೆ. ಇಲ್ಲೂ ಇದೆ ಎಂದರೆ ಇದೆ; ಇಲ್ಲವೆಂದರೆ ಇಲ್ಲ ಎನ್ನುವ ಹಿನ್ನೆಲೆಯನ್ನು ತೋರಿಸಿದ್ದಾರೆ. ಕಾಳಗದಿಂದ ದೂಳೆದ್ದಿದ್ದು, ವಠಾರ ಮಂಕಾಗಿ ಕಾಣುತ್ತದೆ.

1994–95ರಲ್ಲಿ ಮಲ್ಲಾಪೂರ ಕಲಾ ವಿದ್ಯಾರ್ಥಿಯಾಗಿದ್ದಾಗ ರಾಯಚೂರಿನಲ್ಲಿ ಭೂದೃಶ್ಯವನ್ನು ಚಿತ್ರಿಸುತ್ತಿದ್ದರು. ಅಲ್ಲಿಯ ಡಿ.ಸಿ.ಸಂಜಯ ದಾಸ್‌ಗುಪ್ತಾ ಅವುಗಳನ್ನು ಗಮನಿಸಿ, ರಾಯಚೂರಿನಲ್ಲಿಯ ಕೆಲವು ದೃಶ್ಯಗಳನ್ನು ಚಿತ್ರಿಸಿಕೊಡುವಂತೆ ಕೇಳಿಕೊಂಡಿದ್ದರು. ನಂತರ ಡಿ.ಸಿ. ಅವನ್ನು ತಮ್ಮ ಕಚೇರಿಯಲ್ಲಿ ನೇತುಹಾಕಿದ್ದರು. ಹೀಗೆ ದೃಶ್ಯಗಳನ್ನೂ ಕೇಂದ್ರೀಕರಿಸಿ, ಪರಿಧಿಯ ಸುತ್ತ ಗಿರಕಿ ಹೊಡೆಯುವಂತೆ ಮಾಡುವುದರಲ್ಲಿ ಜಿ.ಆರ್‌. ಮಲ್ಲಾಪೂರೆ ಗೆಲ್ಲುತ್ತಾರೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT