ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಲಿಂಗಪ್ಪ ಕಾಲೊನಿ ರಸ್ತೆ ನರಕ ದರ್ಶನ!

Last Updated 22 ಜುಲೈ 2013, 8:25 IST
ಅಕ್ಷರ ಗಾತ್ರ

ರಾಯಚೂರು: ಸುಸಜ್ಜಿತ, ವ್ಯವಸ್ಥಿತ ಹಾಗೂ ಪ್ರತಿಷ್ಠಿತರು ವಾಸಿಸುವ ಬಡಾವಣೆ ಎಂಬ ಹೆಗ್ಗಳಿಕೆ ಪಡೆದಿರುವ ನಗರದ ನಿಜಲಿಂಗಪ್ಪ ಕಾಲೊನಿ. ಕೆಲ ವರ್ಷಗಳ ಹಿಂದೆ ಈ ಬಡಾವಣೆ ರಸ್ತೆಗಳನ್ನು ಕಂಡು ಜನ ಖುಷಿ ಪಡುತ್ತಿದ್ದರು.

ಇಂಥ ಸುಸಜ್ಜಿತ ಬಡಾವಣೆಯಲ್ಲಿ ವಾಸಿಸುತ್ತಿರುವ ಬಗ್ಗೆ ಸಂತೋಷ ಪಡುತ್ತಿದ್ದರು. ಆದರೆ, ಈಗ ಈ ಬಡಾವಣೆ ನಿವಾಸಿಗಳಷ್ಟೇ ಅಲ್ಲ. ಈ ಬಡಾವಣೆಯಲ್ಲಿ ಸಂಚರಿಸುವ ಜನ, ವಾಹನ ಸವಾರರೂ ರೋಸಿ ಹೋಗಿದ್ದಾರೆ!

ಹದಗೆಟ್ಟ ಬಡಾವಣೆ ರಸ್ತೆ ಜನರ ನಿದ್ದೆಗೆಡಿಸಿವೆ. ಹೌದು ಈ ಬಡಾವಣೆ ರಸ್ತೆಗಳಲ್ಲಿ ದ್ವಿಚಕ್ರವಾಹನದಲ್ಲಿ ಒಂದು ಸುತ್ತು ಹಾಕಿದರೆ ಸಾಕು ಸುಸ್ತೋ ಸುಸ್ತು. ಆಯತಪ್ಪಿದರೆ ಕೆಸರಿನ ಸ್ನಾನ.

ಬೇಡಪ್ಪ ಬೇಡ. ನಡೆದುಕೊಂಡೇ ಹೋಗೋಣ ಎಂದು ರಸ್ತೆಯಲ್ಲಿ, ರಸ್ತೆ ಪಕ್ಕ ನಡೆದುಕೊಂಡು ಹೋದರೆ ರಸ್ತೆಯಲ್ಲಿ ಬಿದ್ದ ತಗ್ಗು ಗುಂಡಿಯಲ್ಲಿ ಎದ್ದು ಬಿದ್ದು ಪ್ರಯಾಸ ಪಟ್ಟು ಸಾಗುವ ದ್ವಿಚಕ್ರವಾಹನ, ಕಾರ್, ಟ್ರ್ಯಾಕ್ಟರ್, ಆಟೊಗಳು ನಿಮಗೆ ಕ್ಷಣಾರ್ಧದಲ್ಲಿ ಕೆಸರಿನ ಸ್ನಾನ ಮಾಡಿಸಿ ರೋಂಯ್ಯನೆ ಪರಾರಿಯಾಗಿ ಬಿಡುತ್ತವೆ. ಇದು ಉತ್ಪ್ರೆಕ್ಷೆ ಅಲ್ಲ. ನಿತ್ಯ ಕಾಣುವ ದೃಶ್ಯ.

ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಮಾಜಿ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಓ, ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಈ ಬಡಾವಣೆ ನಿವಾಸಿಗಳು.

ಬಡಾವಣೆ ರಸ್ತೆಗಳು ಮೊದಲೇ ಹದಗೆಟ್ಟಿದ್ದವು. ಅರೆಬರೆ ಕಾಮಗಾರಿಯಿಂದ ಮತ್ತಷ್ಟು ಹದಗೆಟ್ಟಿದ್ದು, ಕಳೆದ ಒಂದು ವರ್ಷದ ಹಿಂದೆ ರೈಲ್ವೆ ಸೇತುವೆ ಮರು ನಿರ್ಮಾಣ ಹಿನ್ನೆಲೆಯಲ್ಲಿ ರಾಯಚೂರು-ಲಿಂಗಸುಗೂರು ರಸ್ತೆಯಲ್ಲಿದ್ದ ರೈಲ್ವೆ ಸೇತುವೆ ಒಡೆದು ಹಾಕಲಾಯಿತು. ಸೇತುವೆ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ನಗರದಿಂದ ಹೊರ ಹೋಗುವ ಮತ್ತು ಒಳ ಬರುವ ಕಾರು, ದ್ವಿಚಕ್ರವಾಹನ, ಆಟೊ, ಟ್ರ್ಯಾಕ್ಟರ್‌ಗಳು ಈ ಬಡಾವಣೆ ರಸ್ತೆ ಮಾರ್ಗವಾಗಿ(ರೈಲ್ವೆ ಹಳಿ ಪಕ್ಕ) ಸಂಚರಿಸುತ್ತವೆ.  ಭಾರಿ ವಾಹನಗಳು ಗೋಶಾಲ ರಸ್ತೆ, ಬೈಪಾಸ್ ಮಾರ್ಗವಾಗಿ ಸಂಚರಿಸುತ್ತವೆ.

ಸಣ್ಣ ವಾಹನ ಸಂಚಾರದಿಂದಲೇ ನಿಜಲಿಂಗಪ್ಪ ಕಾಲೊನಿ ಬಡಾವಣೆ ರಸ್ತೆಗಳು ಒಂದೇ ವರ್ಷದಲ್ಲಿ ಹದಗೆಟ್ಟು ಹೋಗಿವೆ. ಈಗ ಮಳೆಗಾಲ ಶುರುವಾಗಿದ್ದ, ಒಂದೇ ವಾರದಲ್ಲಿ ಕೆಸರಿನ ಗುಂಡಿಗಳಾಗಿವೆ. ರಸ್ತೆ ಮಧ್ಯೆಯೇ ಇರುವ ಮ್ಯಾನ್ ಹೊಲ್ ಅನಾಹುತಕ್ಕೆ ಬಾಯ್ತೆರೆದು ಕುಳಿತಿವೆ. ವಾಹನ ಸವಾರರು, ಪಾದಾಚಾರಿಗಳು ಕಣ್ತಪ್ಪಿ ಕಾಲಿಟ್ಟರೆ ಅನಾಹುತ ಎಂಬ ಅತಂಕ ಎಂದು ಬಡಾವಣೆ ನಿವಾಸಿಗಳು ತಿಳಿಸುತ್ತಾರೆ.

ಈಗ ಬಡಾವಣೆಯೊಳಗಿನ ರಸ್ತೆಯಲ್ಲಿನ ಗುಂಡಿಗಳಿಗೆ ಕೆಂಪು ಮಣ್ಣು ಸುರಿದು  ದುರಸ್ತಿ ಕೆಲಸ ನಡೆದಿದ್ದರೂ ಮತ್ತಷ್ಟು ಕೆಸರು ಸೃಷ್ಟಿಗೆ ಕಾರಣವಾಗಿದೆ. ಹದಗೆಡುವ ಸಂದರ್ಭದಲ್ಲಿ ದುರಸ್ತಿ ಮಾಡಬೇಕಿತ್ತು. ಈಗ ಎಷ್ಟೇ ಕಷ್ಟವಾದರೂ ಕಲ್ಲು ಮತ್ತು ಡಾಂಬರ್ ಹಾಕಿ ದುರಸ್ತಿ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಇನ್ನಷ್ಟು ಈ ರಸ್ತೆ ಹದಗೆಡುತ್ತದೆ. ಆಗ ನಗರದೊಳಗೆ ಮತ್ತು ಹೊರಗೆ ಹೋಗುವ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತದೆ ಎಂದು ಸಮಸ್ಯೆ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT