ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ಕನ್ನಡ ಮನಸ್ಸು ಶಾಲೆ ಮುಚ್ಚಲ್ಲ

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ವಿದ್ಯಾಗಿರಿ (ಮೂಡುಬಿದಿರೆ): `ಮಾರುಕಟ್ಟೆ ಮನೋಧರ್ಮದಿಂದ ಕನ್ನಡ ಶಾಲೆಗಳು ಉಳಿಯುವುದಿಲ್ಲ. ನಿಜವಾದ ಕನ್ನಡ ಮನಸ್ಸು ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ~ ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಚಾಟಿ ಬೀಸಿದರು.
 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಇಲ್ಲಿನ ವಿದ್ಯಾಗಿರಿಯ ಸುಂದರಿ ಸುನಂದ ಆಳ್ವ ಆವರಣದ ಪಂಡಿತ್ ಭೀಮ್‌ಸೇನ್ ಜೋಷಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಶುಕ್ರವಾರ ಬೆಳಿಗ್ಗೆ ~ಕನ್ನಡ ಮನಸ್ಸು: ಸಂಘರ್ಷ ಮತ್ತು ಸಾಮರಸ್ಯ~ ಪರಿಕಲ್ಪನೆಯಲ್ಲಿ ~ಆಳ್ವಾಸ್ ನುಡಿಸಿರಿ -2011~ ಉದ್ಘಾಟಿಸಿ ಅವರು ಮಾತನಾಡಿದರು.

~ನಿಜವಾದ ಕನ್ನಡ ಮನಸ್ಸು ಕನ್ನಡದ ನಿರಾಶ್ರಿತರನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಕನ್ನಡ ನಾಡಿನ ಒಳಗಿರುವವರನ್ನು ಮರೆಯುವುದಿಲ್ಲ. ಕನ್ನಡ ಮಹಿಳೆಯರ ಮಾನ ಹರಾಜು ಆಗುವಾಗ ಸುಮ್ಮನಿರುವುದಿಲ್ಲ. ಶ್ರಮಿಕರ ಶೋಷಣೆ ಹಾಗೂ ದಲಿತ ದೌರ್ಜನ್ಯ ಕಂಡು ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ~ ಎಂದರು.

~ಮಾರುಕಟ್ಟೆ ಮನೋಧರ್ಮದಿಂದ ಅನಾರೋಗ್ಯಕರ ಸ್ಪರ್ಧೆ ನಿರ್ಮಾಣ ಆಗುತ್ತಿದೆ. ಕನ್ನಡಿಗರು ಇಂಗ್ಲಿಷ್ ಭಾಷೆ ಕಲಿಯಬೇಕು ಎಂದು ಆರಂಭದಿಂದಲೇ ಹೇಳುತ್ತಾ ಬಂದವನು ನಾನು. ಅದು ಹೊರಗೇ ಇರಲಿ, ಮನಸ್ಸನ್ನು ಮಾರುಕಟ್ಟೆ ಮಾಡಬಾರದು.

ದೇಶದಲ್ಲಿ ಈಗ ಅಂತಹುದೇ ಆರ್ಥಿಕ ಸನ್ನಿವೇಶ ನಿರ್ಮಾಣಗೊಂಡಿದೆ. ಕನ್ನಡದ ಮನಸ್ಸು ಆಘಾತ ಅನುಭವಿಸುತ್ತಿದೆ. ಜಾಗತೀಕರಣದ ಹುಸಿ ಮಾದರಿಗಳಿಂದ ಕನ್ನಡ ಮನಸ್ಸು ಮರಣ ಹೊಂದಬಾರದು~ ಎಂದು ಬರಗೂರು ಗಮನ ಸೆಳೆದರು.

~ಸಾಮರಸ್ಯ ಎಂದರೆ ಅಸಹಾಯಕತೆ ಅಲ್ಲ. ಸಂಘರ್ಷ ಎಂದರೆ ಆಕ್ರಮಣಶೀಲತೆ ಅಲ್ಲ. ಕನ್ನಡಿಗರು ಕೀಳರಿಮೆಯಿಂದ ನರಳುವುದು ಬೇಡ. ಕನ್ನಡ ಮನಸ್ಸಿನ ಆತ್ಮಶಕ್ತಿ ಹೆಚ್ಚಿಸಬೇಕು. ಆ ಮೂಲಕ ಸಾಮರಸ್ಯ- ಸಂಘರ್ಷ ಪುನರ್‌ರಚಿಸುವ ಕೆಲಸ ನಡೆಯಬೇಕು~ ಎಂದು ಆಗ್ರಹಿಸಿದರು.

ಕನ್ನಡ ಮನಸ್ಸಿಗೆ ಏಕಕಾಲಕ್ಕೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಒಳಗೊಳ್ಳುವ ಸಾಧ್ಯತೆ ಇದೆ. ಅಸಹನೆ ಕನ್ನಡ ಮನಸ್ಸಿನದ್ದು ಅಲ್ಲ. ಇಂದು ಅಂತರರಾಷ್ಟ್ರೀಯತೆ ಎಂದರೆ ಅಮೆರಿಕದ ~ಬುಶ್ ವ್ಯವಸ್ಥೆ~ಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು ಎಂಬಂತಾಗಿದೆ ಎಂದು  ಬೇಸರ ವ್ಯಕ್ತಪಡಿಸಿದರು. 

ದೇಶದಲ್ಲಿ ಇಂದು ಮಾರುಕಟ್ಟೆ ಮನೋಧರ್ಮ ಬೆಳೆದಿದೆ. ಅಮೆರಿಕದ ಅಮಲಿನಲ್ಲಿ ಹಾಳಾಗುತ್ತಿರುವ ಮನಸ್ಸುಗಳನ್ನೇ ಕಾಣುತ್ತಿದ್ದೇವೆ. ಅರಿವು ಎಲ್ಲ ಕಡೆಯಿಂದಲೂ ಬರಲಿ. ಆದರೆ ಅಮಲು ಬೇಡ. ಇಡೀ ದೇಶದಲ್ಲಿ ರಾಜಕೀಯ ನಾಯಕತ್ವವನ್ನು ಸೋಲಿಸುವ ಮಟ್ಟಿಗೆ ಆರ್ಥಿಕ ನಾಯಕತ್ವ ಬೆಳೆದಿದೆ.
 
ನಮ್ಮನ್ನು ಆಳುವುದು ಆರ್ಥಿಕ ನಾಯಕತ್ವ. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ಆಡಳಿತಗಾರರು ಆರ್ಥಿಕ ನಾಯಕತ್ವಕ್ಕೆ ತಲೆಬಾಗುತ್ತಿದ್ದಾರೆ. ತೈಲ ಬೆಲೆಯನ್ನೂ ಇಳಿದಷ್ಟು ನಿಶಕ್ತಿ ರಾಜಕೀಯ ನಾಯಕರಿಗೆ ಬಂದು ಬಿಟ್ಟಿದೆ ಎಂದು ಕಿಡಿ ಕಾರಿದರು.   

ಭಾರತದ ಮೂವರು ಜನರಲ್ಲಿ ಒಬ್ಬರು ಬಡತನ ರೇಖೆಗಿಂತ(ಶೇ. 41.5) ಕೆಳಗೆ ಇದ್ದಾರೆ. ಕೇಂದ್ರ ಸರ್ಕಾರವೇ ನೇಮಿಸಿದ ಅರ್ಜುನ್ ಸೇನ್ ಗುಪ್ತ ಸಮಿತಿ 2007ರಲ್ಲಿ ನೀಡಿದ ವರದಿಯಲ್ಲಿ 45 ಕೋಟಿ ಮಂದಿ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಶೇ. 77.2 ಮಂದಿಯ ದೈನಂದಿನ ತಲಾ ಆದಾಯ ರೂ. 22 ಇದೆ ಎಂಬುದು ಬಹಿರಂಗಗೊಂಡಿತ್ತು ಎಂದು ಅವರು ದೇಶದ ಜನರ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಿದರು.

ಹಿರಿಯ ಸಂಶೋಧಕ ನಾಡೋಜ ಎಂ.ಎಂ. ಕಲಬುರ್ಗಿ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಎಂ.ಮೋಹನ ಆಳ್ವ, ಮಿಜಾರುಗುತ್ತ ಆನಂದ ಆಳ್ವ ಮತ್ತಿತರರಿದ್ದರು. ಈ ಸಂದರ್ಭ ಆಳ್ವಾಸ್ ನುಡಿಸಿರಿ-2010ರ ನೆನಪಿನ ಸಂಚಿಕೆ ~ಕನ್ನಡ ಮನಸ್ಸು- ಜೀವನಮೌಲ್ಯಗಳು~ ಬಿಡುಗಡೆ ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT