ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಘಟ್ಟ ಸಂತೆ: ಇಲ್ಲಗಳದ್ದೇ ಚಿಂತೆ..!

Last Updated 21 ಮೇ 2012, 8:20 IST
ಅಕ್ಷರ ಗಾತ್ರ

ಮದ್ದೂರು: `ತೆಂಗಿನಕಾಯಿ ಸಂತೆ~ ಎಂದೇ ಹೆಸರಾದ ಸಮೀಪದ ನಿಡಘಟ್ಟದ ಸಂತೆಗೆ ಮೂಲ ಸಮಸ್ಯೆಗಳದ್ದೇ ಚಿಂತೆಯಾಗಿ ಪರಿಣಮಿಸಿದೆ.

ಮೈಸೂರು-ಬೆಂಗಳೂರು ಹೆದ್ದಾರಿ ಬದಿಯಲ್ಲಿರುವ ತಾಲ್ಲೂಕಿನ ಗಡಿಯಂಚಿನ ಗ್ರಾಮ ನಿಡಘಟ್ಟ ಈ ಭಾಗದ ಪ್ರಮುಖ ವಾಣಿಜ್ಯ ಕೇಂದ್ರ. ಇಲ್ಲಿ ಪ್ರತಿ ಬುಧವಾರ ನಡೆಯುವ ಸಂತೆಗೆ ದಶಕಗಳ ಇತಿಹಾಸವಿದೆ. ನಿಡಘಟ್ಟ ವ್ಯಾಪ್ತಿಯ 20ಕ್ಕೂ ಹೆಚ್ಚು ಹಳ್ಳಿಗಳ ಜನರು ಈ ಸಂತೆಗೆ ಆಗಮಿಸಿ ದವಸ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ದಿನಬಳಕೆಯ ವಸ್ತುಗಳನ್ನು ಖರೀದಿಸುವುದು ಇಲ್ಲಿನ ವಿಶೇಷ.
 
ಅದರಲ್ಲೂ ಇಲ್ಲಿ ನಡೆಯುವ ಬೃಹತ್ ತೆಂಗಿನಕಾಯಿ ಸಂತೆ ಇಡೀ ರಾಜ್ಯದಲ್ಲಿಯೇ ಪ್ರಖ್ಯಾತಿ ಹೊಂದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಇತರೆ ವಾಣಿಜ್ಯ ನಗರಗಳಿಂದ ವ್ಯಾಪಾರಸ್ಥರು ನಿಡಘಟ್ಟ ಸಂತೆಗೆ ತೆಂಗಿನ ಕಾಯಿ ಖರೀದಿಸಲೆಂದೇ ಬರುತ್ತಾರೆ. ಪ್ರತಿ ವಾರದ ಸಂತೆಯಲ್ಲಿ ಲಕ್ಷಾಂತರ ರೂಪಾಯಿ ತೆಂಗಿನಕಾಯಿ ವಹಿವಾಟು ಇಲ್ಲಿ ನಡೆಯುತ್ತದೆ.

ಸಮಸ್ಯೆಗಳ ಸಾಲು ಸಾಲು: ಸ್ಥಳೀಯ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಈ ಸಂತೆಯ ಆವರಣದಲ್ಲಿ 14ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರುಕಟ್ಟೆ (ಶೆಲ್ಟರ್) ಪ್ರಾಂಗಣವೊಂದನ್ನು ಕಟ್ಟಿಸಿದೆ ಹೊರತು ಅಗತ್ಯವಾದ ಕುಡಿಯುವ ನೀರು ಸೇರಿದಂತೆ ಶೌಚಾಲಯ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಿಲ್ಲ. ಕನಿಷ್ಠ ಕೆಟ್ಟಿರುವ ಬೋರ್‌ವೆಲ್ ಕೈಪಂಪ್‌ನ ದುರಸ್ತಿಗೂ ಮುಂದಾಗಿಲ್ಲ. ಇಡೀ ಸಂತೆಯ ಪ್ರಾಂಗಣ ಇಲ್ಲಿನ ಸ್ಥಳೀಯರ ಕಸದ ತೊಟ್ಟಿಯಾಗಿ ಪರಿಣಮಿ ಸಿದ್ದು, ಸಂತೆಯ ಶುಚಿತ್ವ ನೈರ್ಮಲ್ಯ ನಿರ್ವಹಣೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಎಡವಿದೆ. 

ಇದೀಗ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಸ್ಥಳೀಯರ ಹುಲ್ಲು, ಕಟ್ಟಿಗೆ ಇನ್ನಿತರ ವಸ್ತುಗಳ ಸಂಗ್ರಹಾಗಾರ, ಇನ್ನುಳಿದಂತೆ ಅಲೆಮಾರಿಗಳ ಆಶ್ರಯ ತಾಣವಾಗಿದೆ. ಸಂತೆಯ ಆವರಣದಿಂದ ಮಳೆನೀರು ಸಂಗ್ರಹಗೊಳ್ಳುವ ಕಾರಣ ಸಂತೆ ಆವರಣ ಸದಾ ಕೆಸರುಮಯ.

ಈ ಕೊಳಕು ಕೆಸರಿನ ಮಧ್ಯೆ ವರ್ತಕರು ತಮ್ಮ ವಸ್ತುಗಳನ್ನು ಮಾರಾಟ ಮಾಡಬೇಕಾದ ದಯಾನೀಯ ಸ್ಥಿತಿ. ಗ್ರಾಹಕರ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ವಾರದ ಸಂತೆಗೆ ದೂರದೂರುಗಳಿಂದ ಆಗಮಿಸುವ ವರ್ತಕರಿಗೆ ಕನಿಷ್ಠ ನೆರಳು ಸೌಲಭ್ಯ ಕಲ್ಪಿಸಿಲ್ಲ. ಗೋದಾಮಿನ ಸೌಲಭ್ಯವಿಲ್ಲ. ಹೀಗಾಗಿ ವರ್ತಕರು ಪ್ರತಿಬಾರಿ ಸರಕು ಸಾಗಣೆ ವಾಹನಗಳಿಗೆ ದುಬಾರಿ ಬಾಡಿಗೆ ತೆತ್ತಬೇಕಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಎಪಿಎಂಸಿ ಸಂತೆಯಿಂದ ದೊರಕುವ ಸುಂಕ ಇನ್ನಿತರ ಆದಾಯ ವಸೂಲಿಗೆ ವಹಿಸುವ ಆಸಕ್ತಿಯನ್ನು ಸಂತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಹಿಸುತ್ತಿಲ್ಲ ಏಕೆ? ಎಂಬುದು ಸ್ಥಳೀಯರ ಪ್ರಶ್ನೆ.

ಆಸಕ್ತಿ ಇಲ್ಲ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಎಪಿಎಂಸಿ ಸಂತೆಗಳ ಅಭಿವೃದ್ಧಿಗೆ ಈಗಾಗಲೇ ಇಲಾಖೆಗೆ ಎರಡು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಮಾರುಕಟ್ಟೆ ಸಚಿವರನ್ನು ಭೇಟಿ ಮಾಡಿ ವಿನಂತಿಸಿದ್ದೇವೆ. ಆದರೆ ಇಲಾಖೆಗೆ ಗ್ರಾಮೀಣ ಸಂತೆಗಳನ್ನು ಅಭಿವೃದ್ಧಿಪಡಿಸುವ ಆಸಕ್ತಿ ಇಲ್ಲ. ನಾವಾದರೂ ಏನು ಮಾಡಲು ಸಾಧ್ಯ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ಕೊತ್ತನಹಳ್ಳಿ ಶಂಕರ್.

ದಶಕಗಳ ಇತಿಹಾಸ ಹೊಂದಿರುವ ನಿಡಘಟ್ಟ ಸಂತೆಯ ಸಮಸ್ಯೆಗಳ ಚಿಂತೆಯಿಂದ ಮುಕ್ತಗೊಳಿಸಲು ಸ್ಥಳೀಯ ಕ್ಷೇತ್ರ ಶಾಸಕರು ಇತ್ತ ಚಿತ್ತಹರಿಸಬೇಕಿದೆ. ತಮ್ಮ ಶಾಸಕ ನಿಧಿಯಿಂದಾದರೂ ಹಣ ಬಿಡುಗಡೆಗೆ ಮುಂದಾಗಬೇಕೆಂಬುದು ಇಲ್ಲಿನ ಸ್ಥಳೀಯರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT