ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡ್ಡೋಡಿಯಲ್ಲಿ ಮುಗಿಲು ಮುಟ್ಟಿದ ಆಕ್ರೋಶ

ವಿದ್ಯುತ್ ಸ್ಥಾವರಕ್ಕೆ ಒಂದಿಂಚೂ ಜಾಗ ಬಿಡೆವು: ಸಹಸ್ರಾರು ಮಂದಿಯ ಒಕ್ಕೊರಲ ಪ್ರತಿಜ್ಞೆ
Last Updated 29 ಜುಲೈ 2013, 10:08 IST
ಅಕ್ಷರ ಗಾತ್ರ

ನಿಡ್ಡೋಡಿ (ಮೂಡುಬಿದಿರೆ): `ಉಷ್ಣವಿದ್ಯುತ್ ಸ್ಥಾವರ ನಮಗೆ ಬೇಡವೇ ಬೇಡ. ಫಲವತ್ತಾದ ಕೃಷಿ ಭೂಮಿಯ ಒಂದಿಂಚನ್ನೂ ಈ ಯೋಜನೆಗೆ ಬಿಟ್ಟುಕೊಡೆವು. ಕೊನೆಯ ಉಸಿರಿನವರೆಗೂ ಹೋರಾಟಕ್ಕೆ ಬದ್ಧ'

ಮಂಗಳೂರು ತಾಲ್ಲೂಕಿನ ಪುಟ್ಟ ಗ್ರಾಮ ನಿಡ್ಡೋಡಿಯಲ್ಲಿ ಭಾನುವಾರ ಸಹಸ್ರಾರು ಕಂಠಗಳಿಂದ ಮೊಳಗಿದ ಪ್ರತಿಜ್ಞೆ ಇದು.

ನಿಡ್ಡೋಡಿ ಪರಿಸರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 4 ಸಾವಿರ ಮೆಗಾವಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸುತ್ತಿರುವ ಸ್ಥಳೀಯ ಧ್ವನಿ ಎಷ್ಟು ಶಕ್ತಿಶಾಲಿಯದುದು ಎಂಬುದನ್ನು ಮಾತೃಭೂಮಿ ಸಂರಕ್ಷಣಾ ಸಮಿತಿಯು ನಿಡ್ಡೋಡಿಯಲ್ಲಿ ಭಾನುವಾರ ಹಮ್ಮಿಕೊಂಡ ಒಂದು ದಿನದ ಸಾಂಕೇತಿಕ ಉಪವಾಸ ತೋರಿಸಿಕೊಟ್ಟಿತು. ಪ್ರತಿಭಟನಾಕಾರರು ಅನ್ನನೀರು ತ್ಯಜಿಸಿದರೂ ಘೋಷಣೆಗಳ ಕಾವು ಬೆಳಿಗ್ಗೆಯಿಂದ ಸಂಜೆವರೆಗೂ ಇಳಿಯಲಿಲ್ಲ.

ಎಡೆಬಿಡದೆ ಸುರಿದ ಮಳೆಯ ನಡುವೆಯೂ ಬೆಳಿಗ್ಗೆಯಿಂದ ಸಂಜೆವರೆಗೂ ಅನ್ನನೀರು ತ್ಯಜಿಸಿ, ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಕೃಷಿಭೂಮಿ ಕಬಳಿಸಲು ಮುಂದಾದ ಸರ್ಕಾರಕ್ಕೆ ಸಾತ್ವಿಕ ಮಾರ್ಗದಲ್ಲೇ ಉತ್ತರ ನೀಡಿದ ಜನತೆ, ಈ ಯೋಜನೆ ಅನುಷ್ಠಾನದಲ್ಲಿ ಮುಂದಡಿ ಇಟ್ಟರೆ ಉಗ್ರ ಪ್ರತಿಭಟನೆಗೂ ಸಿದ್ಧ ಎಂಬ ಸಂದೇಶವನ್ನೂ ರವಾನಿಸಿದರು.

ಎಲ್ಲರ ಗಮನ ನಿಡ್ಡೋಡಿಯತ್ತ
ನಿಡ್ಡೋಡಿ ಪರಿಸರದ ಐದಾರು ಗ್ರಾಮಗಳ ಜನತೆ ಭಾನುವಾರ ಸೂರ್ಯೋದಯಕ್ಕೆ ಮುನ್ನವೇ ಉಪವಾಸ ಕುಳಿತರು. ಆಸುಪಾಸಿನ ಮುಚ್ಚೂರು, ಕೊಂಪದವು, ಬಡಗ ಎಡಪದವು, ತೆಂಕ ಎಡಪದವು, ಪುತ್ತಿಗೆ, ಪಾಲಡ್ಕ, ಕಿನ್ನಿಗೋಳಿ, ನೀರುಡೆ, ಬಡಗ ಮಿಜಾರು, ತೆಂಕಮಿಜಾರು ಮೊದಲಾದ ಗ್ರಾಮಗಳ ಜನತೆ ಹೊತ್ತೇರುವ ಮುನ್ನವೇ ತಂಡೋಪತಂಡವಾಗಿ ನಿಡ್ಡೋಡಿಯತ್ತ ಧಾವಿಸಿಬಂದರು.

ಕೆಲವು ಮಹಿಳೆಯರಂತೂ ಹಸುಗೂಸುಗಳನ್ನೂ ಎದೆಗವಚಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ದೊಡ್ಡವರು, ಮಕ್ಕಳು ಎಂಬ ಭೇದವಿಲ್ಲದೆ ಎಲ್ಲರ ಗಮನ ನಿಡ್ಡೋಡಿಯತ್ತ ನೆಟ್ಟಿತ್ತು. ಮಹಿಳೆಯರಂತೂ ಬಿಡು ಬೀಸಾಗಿ ಪ್ರತಿಭಟನೆಯತ್ತ ನಡೆದು ಬಂದರು. ವಾಹನ ಸೌಕರ್ಯ ಇಲ್ಲಿದಿದ್ದುದರಿಂದ ಕೆಲವರಂತೂ ಐದಾರು ಕಿ.ಮೀ. ದೂರ ನಡೆದುಕೊಂಡು ಬಂದೇ ಪ್ರತಿಭಟನೆಗೆ ಧ್ವನಿಗೂಡಿಸಿದರು. ಈ ಪರಿಸರದ ಬಹುತೇಕರು ಮನೆಗೆ ಬೀಗ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ರಸ್ತೆ ತಡೆಗೆ ಮುಂದಾದರು
ಮಾತೃ ಭೂಮಿ ಸಂರಕ್ಷಣಾ ಸಮಿತಿ ಶಾಂತಿಯುತ ಪ್ರತಿಭಟನೆಗೆ ನಿರ್ಧರಿಸಿತ್ತಾದರೂ, ಸ್ಥಳದಲ್ಲಿ ಜಮಾಯಿಸಿದ್ದ ಬಿಸಿ ರಕ್ತದ ಯುವಕರು ಈ ಮಾರ್ಗದಲ್ಲಿ ಸಾಗಿಬಂದ ವಾಹನಗಳನ್ನು ತಡೆಯಲು ಮುಂದಾದರು. ಆದರೆ ಸಮಿತಿಯ ಪ್ರಮುಖರು ಇದಕ್ಕೆ ಅವಕಾಶ ನೀಡಲಿಲ್ಲ. ವಾಹನಗಳ ಸುಗಮ ಸಂಚಾರಕ್ಕೆ ಸಮಿತಿಯ ಪ್ರಮುಖರೇ ಅವಕಾಶ ಮಾಡಿಕೊಟ್ಟರು.

ಅಂಗಡಿ ಬಂದ್: ನಿಡ್ಡೋಡಿಯ ಎಲ್ಲಾ ಅಂಗಡಿಗಳೂ ಶುಕ್ರವಾರ ಮುಚ್ಚಿದ್ದವು. ನಿಡ್ಡೋಡಿ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳೂ ಸಂಚಾರ ಸ್ಥಗಿತಗೊಳಿಸಿ ಸ್ಥಳೀಯರ ಹೋರಾಟಕ್ಕೆ ಬೆಂಬಲ ಸೂಚಿಸಿದವು. ಮೂಡುಬಿದಿರೆ-ಮೂಲ್ಕಿ ರಸ್ತೆಯಲ್ಲಿ ಕೆಲವು ಬಸ್‌ಗಳು ಸಂಚಾರವನ್ನು ನಿಲ್ಲಿಸಿದವು. 

ಅಧಿಕಾರಿಗಳು ಬೇಡ- ನಳಿನ್
ಪ್ರತಿಭಟನಾ ನಿರತರನ್ನು ಪೊಲೀಸರು ಬದಿಗೆ ತಳ್ಳಿ ತಹಶೀಲ್ದಾರ್ ಶಿವಕುಮಾರ್ ಅವರಿಗೆ ವೇದಿಕೆಗೆ ಬರಮಾಡಿಕೊಂಡಾಗ ಅಸಮಧಾನ ವ್ಯಕ್ತಪಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್ `ನಮಗೆ ಅಧಿಕಾರಿಗಳ ಅವಶ್ಯಕತೆ ಇಲ್ಲ' ಎಂದರು.
ಬಳಿಕ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಆಲ್ಪೋನ್ಸ್ ಡಿಸೋಜ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಅಭಯಚಂದ್ರ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಅಭಯಚಂದ್ರ ಜೈನ್, `ನಿಡ್ಡೋಡಿಯಲ್ಲಿ ಉಷ್ಣ ಸ್ಥಾವರ ಆಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳಿಸಿದ್ದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್' ಎಂದರು.  ಆಗ ಹೋರಾಟ ಸಮಿತಿ ಮುಖಂಡರೊಬ್ಬರು, `ಇಲ್ಲಿ ರಾಜಕೀಯ ಬೇಡ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

`ಈ ಯೋಜನೆ ಜಾರಿಗೊಳಿಸುವುದಕ್ಕೆ ಬಿಡುವುದಿಲ್ಲ' ಎಂದು ಸಚಿವರು ತಮ್ಮ ನಿಲುವನ್ನು ಪುನರುಚ್ಚರಿಸಿದರು. 

ಸಮಿತಿ ಅಧ್ಯಕ್ಷ ಆಲ್ಪೋನ್ಸ್ ಡಿಸೋಜ, ಗೌರವ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಪೂವಪ್ಪ ಗೌಡ,  ಸಂಚಾಲಕ ಕಿರಣ್ ಮಂಜನ್‌ಬೈಲ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ  ಭವ್ಯಾ ಗಂಗಾಧರ್, ಜಿ.ಪಂ. ಸದಸ್ಯರಾದ ಜನಾರ್ದನ ಗೌಡ, ಈಶ್ವರ ಕಟೀಲ್, ಪಂಚಾಯತ್ ಅಧ್ಯಕ್ಷ ಜೋಕಿಂ ಕೊರೆಯಾ, ಬಿಜೆಪಿ ಮುಖಂಡ ಉಮನಾಥ ಕೋಟ್ಯಾನ್, ಜಗದೀಶ ಅಧಿಕಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ರೈತ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟನೆಗಳು, ವಿವಿಧ ಜಾತಿಯ ಸಂಘಟನೆಗಳು, ಮಾನವ ಹಕ್ಕು ಸಂರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು. ವಿವಿಧ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಆ. 3ಕ್ಕೆ ಮೂಡುಬಿದಿರೆಯಲ್ಲಿ ಪ್ರತಿಭಟನೆ
ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ವಿರೋಧಿಸಿ ಆ 3ರಂದು ಬೆಳಿಗ್ಗೆ 10 ಗಂಟೆಗೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟ ಸಮಿತಿ  ತಿಳಿಸಿದೆ.

ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ 
ಪ್ರತಿಭಟನೆಯ ತೀವ್ರತೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡುವ ಸಲುವಾಗಿ ಸಮಿತಿಯವರು ಅಂಚೆ ಕಾರ್ಡ್ ಚಳವಳಿ ಹಮ್ಮಿಕೊಂಡರು. 5 ಸಾವಿರಕ್ಕೂ ಅಧಿಕ ಅಂಚೆ ಪತ್ರಗಳನ್ನು ಹಂಚಲಾಯಿತು. ಈ ಯೋಜನೆ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಮುಖ್ಯಮಂತ್ರಿಗೆ ಪತ್ರ ಬರೆದರು. ಅಕ್ಷರ ಬಾರದ ಅಜ್ಜ ಅಜ್ಜಿಯರೂ ತಮ್ಮ ಪಾಲಿನ ಪತ್ರವನ್ನು ಇತರರ ಬಳಿ ಬರೆಯಿಸಿದರು. ಸಹಿ ಮಾತ್ರ ಹಾಕಲು ಬರುವವರು ತಮ್ಮ ಆಕ್ರೋಶವನ್ನು ಇತರರ ಬಳಿ ಹೇಳಿ ಬರೆಯಿಸಿ ಸಹಿ ಮಾಡಿದರು.

                                                      ಹೋರಾಟದ ಕಿಡಿ ನುಡಿ
`ಹೋರಾಟ ಚರಿತ್ರೆಯಾಗಲಿ'
ನಿಡ್ಡೋಡಿಯ ಹೋರಾಟ ಚರಿತ್ರೆ ನಿರ್ಮಿಸಬೇಕು. ಪ್ರತಿಭಟನೆ ಮೂಲಕವೇ ಸಿಂಗೂರಿನಿಂದ ಟಾಟಾ ಕಂಪೆನಿಯ ಕೈಗಾರಿಕೆಯನ್ನು ಓಡಿಸಲಾಗಿದೆ. ಗದಗದ ರೈತರ ಪ್ರತಿಭಟನೆಗೆ ಮಣಿದು ಪೋಸ್ಕೊ ಕಂಪೆನಿ ಕಾಲ್ಕಿತ್ತಿದೆ. ಜನ ಒಟ್ಟಾದರೆ ಯಾವ ಸ್ಥಾವರವೂ ಸ್ಥಾಪನೆಯಾಗದು'
-ಮನೋಹರ ಶೆಟ್ಟಿ, ರೈತ ಸಂಘದ ಮುಖಂಡ.

`ಅನ್ನದ ಬಟ್ಟಲಿಗೆ ವಿಷ'
`ಅನ್ನದ ಬಟ್ಟಲಿಗೆ ವಿಷವಿಕ್ಕುವ ಉಷ್ಣಸ್ಥಾವರ ನಮಗೆ ಬೇಡ. ಮಾನವ ಶಕ್ತಿ ಒಟ್ಟಾಗಿ ಯೋಜನೆಯನ್ನು ಹಿಮ್ಮೆಟ್ಟಿಸಬೇಕು. ಜನರ ಹೋರಾಟದಿಂದಾಗಿ ತದಡಿಯಿಂದ ಈ ಯೋಜನೆಯನ್ನು ಕೈಬಿಟ್ಟಿದ್ದಾರೆ. ನಿಡ್ಡೋಡಿಯ್ಲ್ಲಲೂ ಅಂತಹದ್ದೇ ಹೋರಾಟ ಆಗಲಿ. ಕಂಪೆನಿಗಳು ಆಮಿಷವೊಡ್ಡಿ  ಸಂಘಟಕರನ್ನು ಒಡೆಯುವ  ಅಪಾಯದ ಬಗ್ಗೆ ಎಚ್ಚರವಿರಲಿ' 
-ಸೋಂದಾ ಭಾಸ್ಕರ್ ಭಟ್

`ನೆಲ ಜಲ ಸಂಸ್ಕೃತಿ ನಾಶ'
`ಬಹುರಾಷ್ಟ್ರೀಯ ಕಂಪೆನಿಗಳು ಕಾಲಿಟ್ಟರೆ ಇಲ್ಲಿನ ನೆಲ, ಜಲ, ಸಂಸ್ಕೃತಿ ನಾಶ ಖಚಿತ. ಎಂಆರ್‌ಪಿಎಲ್, ಯುಪಿಸಿಎಲ್ ಕಂಪೆನಿಯಿಂದ ಅನುಭವಿಸುತ್ತಿರುವ ಹಿಂಸೆ ಸಾಕು. ಹಿಂಸೆ ನಡೆಸಿ ಆರಂಭಶೂರತ್ವ ತೋರಿಸದೆ ಅಹಿಂಸಾತ್ಮಕವಾಗಿ ಹೋರಾಡಬೇಕು'
-ಕೇಮಾರು ಈಶ ವಿಠಲದಾಸ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT