ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ 10 ಸಾವಿರ ಕ್ಯೂಸೆಕ್ ನೀರು

ಇಂದು ಕೆಆರ್‌ಎಸ್‌ಗೆ ಮುತ್ತಿಗೆ - ನಿಷೇಧಾಜ್ಞೆ ್ಝ ಎರಡು ದಿನ ಶಾಲಾ-ಕಾಲೇಜಿಗೆ ರಜೆ
Last Updated 6 ಡಿಸೆಂಬರ್ 2012, 5:48 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತಮಿಳುನಾಡಿಗೆ ತಾತ್ಕಾಲಿಕವಾಗಿ ನಿತ್ಯ 10,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಬುಧವಾರ ನಿರ್ದೇಶನ ನೀಡಿದೆ.ಅಲ್ಲದೇ, ಒಂದೆರಡು ದಿನಗಳಲ್ಲಿ ಸಭೆ ಸೇರಿ ಉಭಯ ರಾಜ್ಯಗಳಿಗೆ ಅಗತ್ಯವಿರುವ ನೀರಿನ ಪ್ರಮಾಣವನ್ನು ನಿರ್ಧರಿಸುವಂತೆ ಕಾವೇರಿ ನಿರ್ವಹಣಾ ಸಮಿತಿಗೆ (ಸಿಎಂಸಿ) ಸೂಚಿಸಿದೆ. ಸಿಎಂಸಿ ವರದಿ ಸಲ್ಲಿಸುವ ವರೆಗೆ ಈ ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ನ್ಯಾಯಮೂರ್ತಿ ಡಿ.ಕೆ. ಜೈನ್ ಹಾಗೂ ಮದನ್ ಬಿ. ಲೋಕುರ್ ಅವರನ್ನು ಒಳಗೊಂಡ ಪೀಠ ಹೇಳಿದೆ.

ನೀರಿನ ಕೊರತೆಯಿಂದ `ಸಾಂಬಾ' ಬೆಳೆ ಒಣಗುತ್ತಿದೆ. ಹಾಗಾಗಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು, ಮಧ್ಯಂತರ ಅರ್ಜಿಯಲ್ಲಿ ಕೋರ್ಟ್‌ನ ಮೊರೆ ಹೋಗಿತ್ತು.`ತಮಿಳುನಾಡಿಗೆ ನೀರು ಬಿಡುವ ವಿಷಯವನ್ನು ಮತ್ತೆ ಸಿಎಂಸಿ ಮುಂದೆ ಇಡಬೇಕು' ಎಂದು ಕರ್ನಾಟಕದ ಪರ ವಕೀಲ ಫಾಲಿ ಎಸ್. ನಾರಿಮನ್ ಅವರು ನ್ಯಾಯಾಲಯ ಮುಂದೆ ವಾದ ಮಂಡಿಸಿದ ಬೆನ್ನಲ್ಲಿಯೇ ಈ ಆದೇಶ ಹೊರ ಬಿದ್ದಿದೆ.

`ಡಿಸೆಂಬರ್ ತಿಂಗಳಲ್ಲಿ ಎರಡು ರಾಜ್ಯಗಳಿಗೂ ಅಗತ್ಯವಿರುವ ನೀರಿನ ಪ್ರಮಾಣ ಎಷ್ಟು ಎಂಬುದನ್ನು ನಿರ್ಧರಿಸಲು ಗುರುವಾರ ಅಥವಾ ಶುಕ್ರವಾರ ಸಭೆ ಸೇರಬೇಕು' ಎಂದು ಸಿಎಂಸಿಗೆ ಸೂಚಿಸಿದ ಕೋರ್ಟ್, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ (ಡಿ.10) ನಿಗದಿಪಡಿಸಿದೆ.`ಉಭಯ ರಾಜ್ಯಗಳಲ್ಲಿ ನೀರಿಲ್ಲದೆ ಒಣಗುತ್ತಿವೆ ಎನ್ನಲಾದ ಬೆಳೆಗಳನ್ನು ರಕ್ಷಿಸುವುದು ಸದ್ಯದ ಆದ್ಯತೆಯಾಗಿದೆ. ಇತರ ವಿಷಯಗಳನ್ನು ನಂತರದಲ್ಲಿ ನಿರ್ಧರಿಸಲಾಗುತ್ತದೆ. ಎರಡೂ ರಾಜ್ಯಗಳ ಅಗತ್ಯವನ್ನು ಮನಗಂಡು ಕಾರ್ಯಸಾಧು ಮಾರ್ಗೊಪಾಯಗಳನ್ನು ಕಂಡುಕೊಳ್ಳಬೇಕಿದೆ' ಎಂದು ಪೀಠ ತಿಳಿಸಿದೆ.

ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಯಾಕೆ ಪ್ರಕಟಿಸಿಲ್ಲ ಎಂದೂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮಂಡ್ಯದಲ್ಲಿ ಪ್ರತಿಭಟನೆ ಆರಂಭ 

ಮಂಡ್ಯ: ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿ ಡಿ. 6 ರಂದು (ಗುರುವಾರ) ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರ್ಧರಿಸಿದ್ದರೆ, ನೀರು ಬಿಡದಂತೆ ಆಗ್ರಹಿಸಿ ಬುಧವಾರ ಸಂಜೆಯಿಂದಲೇ ಜಿಲ್ಲೆಯಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ.

ಬುಧವಾರದಿಂದಲೇ ತಮಿಳುನಾಡಿಗೆ ಐದು ದಿನಗಳ ಕಾಲ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ನೀರು ಬಿಡದಿರುವ ನಿರ್ಧಾರಕ್ಕೆ ಬರಬೇಕು. ಡಿ.6ರಂದು ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ. ಮಾದೇಗೌಡ ತಿಳಿಸಿದರು.


ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಮುತ್ತಿಗೆ ಕಾರ್ಯಕ್ರಮದಲ್ಲಿ ಕಾವೇರಿ ಜಲಾನಯನ ಪ್ರದೇಶದ ಪ್ರತಿಯೊಬ್ಬ ರೈತರೂ ಪಾಲ್ಗೊಳ್ಳಬೇಕು. ಪ್ರತಿ ಕುಟುಂಬದಿಂದ ಒಬ್ಬರು ಅಣೆಕಟ್ಟೆಯ ಬಳಿ ನಡೆಯಲಿರುವ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ನೀರಿನ ಮೇಲಿನ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದರು.

ನಿರ್ಣಯಕ್ಕೆ ಆಗ್ರಹ
ಈಗಿನ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ಜಿಲ್ಲೆಯಲ್ಲಿ ರೈತರ ಸ್ಥಿತಿ ಗಂಭೀರವಾಗಲಿದೆ. ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ನೀರು ಬಿಡದಿರುವ ನಿರ್ಣಯ ಕೈಗೊಳ್ಳಬೇಕು. ಆ ಮೂಲಕ ಜನರಿಗೆ ಸರ್ಕಾರದ ನಿಲುವು ಪ್ರಕಟಿಸಬೇಕು ಎಂದರು.

ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿ ಮಂಡ್ಯ, ಗೆಜ್ಜಲಗೆರೆ ಹಾಗೂ ಶ್ರೀರಂಗಪಟ್ಟಣದಲ್ಲಿ ಬೆಂಗಳೂರು-ಮೈಸೂರು ರಸ್ತೆ ತಡೆ ನಡೆದು ಪ್ರತಿಭಟನೆ ನಡೆಸಲಾಯಿತು. ನೀರು ಬಿಟ್ಟರೆ ಹೋರಾಟವನ್ನು ತೀವ್ರಗೊಳಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. 

ಎರಡು ದಿನ ಶಾಲಾ-ಕಾಲೇಜಿಗೆ ರಜೆ
ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಹೊರಬಿದ್ದಿರುವ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ರೈತ ಹಿತರಕ್ಷಣಾ ಸಮಿತಿ ಹೋರಾಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿ.6 ಮತ್ತು 7 ರಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಷೇಧಾಜ್ಞೆ
ಕೆಆರ್‌ಎಸ್ ಜಲಾಶಯದ ಒಂದು ಕಿ.ಮೀ. ಸುತ್ತ-ಮುತ್ತ ಡಿ.10ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪಾಂಡವಪುರ ವಿಭಾಗಾಧಿಕಾರಿ ಆರ್. ಲತಾ  ಆದೇಶ ಹೊರಡಿಸಿದ್ದಾರೆ.ಬೃಂದಾವನ ಉದ್ಯಾನ ಪ್ರವೇಶಕ್ಕೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮುಂದಿನ ಆದೇಶದವರೆಗೂ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್
ಮಂಡ್ಯ: ಕಾವೇರಿ ನೀರಿನ ಉಳಿವಿಗೆ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.
ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ವಿವಿಧ ತುಕಡಿಗಳನ್ನು ಕೆಆರ್‌ಎಸ್ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಿಯೋಜಿಸಲಾಗುವುದು. ನಾಳೆ ಬೆಳಿಗ್ಗೆ ವೇಳೆಗೆ ವಿವಿಧೆಡೆಯಿಂದ ತುಕಡಿಗಳು ಜಿಲ್ಲೆಗೆ ಆಗಮಿಸಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಕೌಶಲೇಂದ್ರಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.

ನೀರು ಬಿಟ್ಟರೆ ಸಂಘರ್ಷ: ವಿಷಯ ಪ್ರಸ್ತಾಪಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ಈಗ ಸುಪ್ರೀಂಕೋರ್ಟ್ ನೀಡಿರುವ ಆದೇಶ ರಾಜ್ಯದ ಪಾಲಿಗೆ ಆಘಾತಕಾರಿ ಮತ್ತು ಅಪಾಯಕಾರಿಯಾದುದು. ಯಾರೂ ಇಂತಹ ಆದೇಶವನ್ನು ನಿರೀಕ್ಷಿಸಿರಲಿಲ್ಲ. ಈ ಆದೇಶವನ್ನು ಪಾಲಿಸಲು ಮುಂದಾಗಿ ಸರ್ಕಾರ ನೀರು ಬಿಡುಗಡೆಗೆ ಮುಂದಾದರೆ ರಾಜ್ಯದ ಜನರು ಸಂಘರ್ಷದ ಹಾದಿ ತುಳಿಯುವ ಅಪಾಯ     ವಿದೆ' ಎಂದು ಎಚ್ಚರಿಸಿದರು.
ಕಾವೇರಿ ಕಣಿವೆಯ ಎಲ್ಲ ಜಲಾಶಯಗಳಲ್ಲೂ ಸೇರಿದಂತೆ ಒಟ್ಟು 34 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದೆ. ಈ ನೀರು ಮುಂಗಾರು ಬೆಳೆಗೂ ಸಾಲದು. ಕುಡಿಯುವ ನೀರು ಪೂರೈಕೆಗೂ ಸಾಕಾಗುವುದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸಿದರೆ ಐದು ಟಿಎಂಸಿ ಅಡಿ ನೀರು ಹರಿಯುತ್ತದೆ. ರಾಜ್ಯವೇ ಸಂಕಷ್ಟದಲ್ಲಿ ರುವಾಗ ತಮಿಳುನಾಡಿಗೆ ನೀರು ಹರಿಸಿ ಇಲ್ಲಿನ ರೈತರನ್ನು ಸಾವಿನ ದವಡೆಗೆ ನೂಕುವಂತಹ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು ಎಂದರು. `ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ, ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ಮುಂದಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಅಣೆಕಟ್ಟೆಗಳಿಂದ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ನ್ಯಾಯಾಲಯಕ್ಕೆ ತಿಳಿಸಬೇಕು' ಎಂದು ಆಗ್ರಹಿಸಿದರು.

ನಿರ್ಣಯಕ್ಕೆ ಒತ್ತಾಯ: `ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇಲ್ಲ. ನೀರು ಬಿಡುಗಡೆ ಸಾಧ್ಯವಿಲ್ಲ ಎಂಬ ಒಂದು ಸಾಲಿನ ನಿರ್ಣಯವನ್ನು ಸದನದಲ್ಲೇ ಒಕ್ಕೊರಲಿನಿಂದ ಕೈಗೊಳ್ಳಬೇಕು' ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಡಾ.ಎಚ್.ಸಿ.ಮಹದೇವಪ್ಪ, ಕೆ.ಬಿ.ಚಂದ್ರಶೇಖರ್, ನೆ.ಲ.ನರೇಂದ್ರಬಾಬು, ಜೆಡಿಎಸ್‌ನ ರಮೇಶ್ ಬಂಡಿಸಿದ್ದೇಗೌಡ, ಸಿ.ಎಸ್.ಪುಟ್ಟೇಗೌಡ, ಶಿವಲಿಂಗೇಗೌಡ, ಸಾ.ರಾ.ಮಹೇಶ್, ಪಕ್ಷೇತರ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಮತ್ತಿತರರು ನೀರು ಬಿಡುಗಡೆ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.

ಕೋರ್ಟ್ ಹೇಳಿದ್ದೇನು?
* ಇಂದು ಅಥವಾ ನಾಳೆ ಸಿಎಂಸಿ ಸಭೆ ಸೇರಬೇಕು
*ಅಲ್ಲಿ ಉಭಯ ರಾಜ್ಯಗಳ ನೀರಿನ ಅಗತ್ಯ ನಿರ್ಧರಿಸಬೇಕು
* ಮುಂದಿನ ವಿಚಾರಣೆ ಡಿ. 10ರಂದು
*ಒಣಗುತ್ತಿರುವ ಬೆಳೆ ರಕ್ಷಣೆಗೆ ಆದ್ಯತೆ

ಹರಿಯುವ ನೀರೆಷ್ಟು?
411574 ಕ್ಯೂಸೆಕ್ ನೀರು 24 ತಾಸು ಹರಿದರೆ 1 ಟಿಎಂಸಿ ಆಗುತ್ತದೆ.
410000 ಕ್ಯೂಸೆಕ್ ನೀರು 24 ತಾಸು ಹರಿದರೆ 0.864 ಟಿಎಂಸಿ ಆಗುತ್ತದೆ

ಪ್ಯಾಕೇಜ್‌ನಲ್ಲಿ ಏನೇನಿದೆ?
* ಕೊಳವೆ ಬಾವಿಯಿಂದ ನೀರೆತ್ತಲು ರೈತರ ಪಂಪ್‌ಸೆಟ್‌ಗಳಿಗೆ 2013ರ ಫೆಬ್ರುವರಿ ಅಂತ್ಯದ ವರೆಗೆ ನಿತ್ಯವೂ 12 ತಾಸು  3 ಫೇಸ್ ವಿದ್ಯುತ್
* ಪ್ರತಿ ಎಕರೆಗೆ 600 ರೂಪಾಯಿ ಡೀಸೆಲ್ ಸಬ್ಸಿಡಿ
 *ಕಾವೇರಿ ಪಾತ್ರದ ರೈತರಿಗೆ ಸರ್ಕಾರಿ ಖರ್ಚಿನಲ್ಲಿ ಬೆಳೆ ವಿಮೆ

ಕರುಣಾನಿಧಿ ಸಲಹೆ
ಚೆನ್ನೈ (ಪಿಟಿಐ): `ಉಭಯ ರಾಜ್ಯಗಳು ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ನಿರ್ಧಾರಕ್ಕೆ ಬದ್ಧವಾಗಿರಬೇಕು. ಸರಿಯಾದ ಕಾರಣವಿಲ್ಲದೇ ಯಾರೂ ಸಿಆರ್‌ಎ ನಿರ್ಧಾರವನ್ನು ಉಲ್ಲಂಘಿಸುವಂತಿಲ್ಲ' ಎಂದು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಹೇಳಿದರು.

ಸ್ವಲ್ಪ ಸಮಾಧಾನ: ಜಯಾ
ಚೆನ್ನೈ: `ತೀರ್ಪು ಸ್ವಲ್ಪ ಸಮಾಧಾನ ತಂದಿದೆ. ಆದರೆ ಸಾಂಬಾ ಬೆಳೆಗೆ ಇಷ್ಟು ಕಡಿಮೆ ನೀರು ಸಾಲದು' ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ರೈತರಿಗಾಗಿ ಅವರು 10 ಅಂಶಗಳನ್ನು ಒಳಗೊಂಡ, 70 ಕೋಟಿ ರೂಪಾಯಿ ಮೊತ್ತದ ಬೆಳೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT