ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಿತ್ಯ ತಲ್ಲಣಗಳ ನಡುವೆ ಕಲಾವಿದರ ಬದುಕು'

Last Updated 7 ಏಪ್ರಿಲ್ 2013, 20:22 IST
ಅಕ್ಷರ ಗಾತ್ರ

ಬೆಂಗಳೂರು:  `ಕಲಾವಿದರು ಅಂತ ರ್ಮುಖಿಗಳು. ಕಲಾವಿದರ ಬದುಕು ನಿತ್ಯ ತಲ್ಲಣಗಳ ನಡುವೆ ಸಾಗುತ್ತಿದೆ' ಎಂದು ಲೇಖಕಿ ವಿಜಯಾ ಹೇಳಿದರು. ಬೆಂಗಳೂರು ಆರ್ಟ್ ಫೌಂಡೇಶನ್ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ `ಕಲಾಧ್ಯಾನ್' ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಕಲಾವಿದರಿಗೆ ಈ ನಾಡಿನಲ್ಲಿ ಅಸ್ತಿತ್ವವೇ ಇಲ್ಲದಂತಾಗಿದೆ. ದಿನ ನಿತ್ಯ ಇರುವ ಕೊರತೆಗಳನ್ನು ವಿರೋಧಿಸಬೇಕಾ ಅಥವಾ ಹೊಸದನ್ನು ಸೃಷ್ಟಿಸುವ ಕಡೆಗೆ ಗಮನ ಹರಿಸಬೇಕಾ ಎಂಬ ನಿತ್ಯ ತಲ್ಲಣಗಳ ನಡುವೆ ಕಲಾವಿದರ ಬದುಕು ಸಾಗುತ್ತಿದೆ' ಎಂದರು.

`ಎಲೆ ಮರೆ ಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಕಾರ್ಯವಾಗಬೇಕು. ಯಾವುದೇ ಕಾರ್ಯಕ್ರಮ ಅಥವಾ ಸನ್ಮಾನ ಕಾರ್ಯಕ್ರಮಗಳು ನಡೆದಾಗ ಮಾತ್ರ ಕಲಾವಿದರು ಬೆಳಕಿಗೆ ಬರುತ್ತಾರೆ. ಕಲಾವಿದರನ್ನು ಕಲಾವಿದರೇ ಸನ್ಮಾನ ಮಾಡುವ ಅಪರೂಪದ ಸಮಾರಂಭವಾಗಿದೆ' ಎಂದರು.

`ಕಲಾಧ್ಯಾನ್' ಪುರಸ್ಕಾರಕ್ಕೆ ಪಾತ್ರರಾದ ಜೆ.ಎಂ.ಎಸ್.ಮಣಿ ಮತ್ತು ಕೆ.ಕೆ.ಮಕಾಳಿ ಅವರ ಬಗ್ಗೆ ಮಾತನಾಡಿದ ವಿಜಯಾ ಅವರು, `ನೃತ್ಯ ಮತ್ತು ಸಂಗೀತ ಕಲೆಯಲ್ಲಿ ಗುರು ಪರಂಪರೆಯಿದೆ. ಅದನ್ನು ಚಿತ್ರಕಲೆಗೂ ತಂದವರು ಕಲಾವಿದ ಮಣಿ. ಏಕೆಂದರೆ, ಗುರು ಹಡಪದ್ ಅವರ ಕೆನ್ ಶಾಲೆಯನ್ನು ಬೆಳೆಸಲು ತಮ್ಮ ತನು ಮನ ಧನವನ್ನು ಅರ್ಪಿಸಿ ಶ್ರಮಿಸಿದವರು. ಬಂಡೆಗಳ ಚಿತ್ರಗಳಲ್ಲಿ ಭಾವಗಳನ್ನು ಮೆತ್ತಿದಂತೆ ಬರೆಯುವ ಅಪರೂಪದ ಕಲಾವಿದರು' ಎಂದರು.

`ಮಕಾಳಿ ಅವರಿಗೆ ಚಿಕ್ಕಂದಿನಲ್ಲಿಯೇ ಚಿತ್ರಗಳನ್ನು ಬರೆಯುವ ಕಲೆಯು ಕರಗತವಾಗಿತ್ತು. ಚಿಕ್ಕವರಿರುವಾಗ ತಮಾಷೆ ಮಾಡುತ್ತ ನಗುತ್ತಿದ್ದೆವು. ಆ ಹುಡುಗ ಇಂದು ಕಲಾವಿದನಾಗಿ ಈ ಮಟ್ಟಕ್ಕೆ ಬೆಳೆದಿರುವುದು ಸಂತಸ ತಂದಿದೆ' ಎಂದು ಹೇಳಿದರು.

ವಾರ್ತಾ ಇಲಾಖೆಯ ನಿರ್ದೇಶಕ ವಿಶು ಕುಮಾರ್ ಮಾತನಾಡಿ, `ಇಂದು ಕಲೆಗೆ ಸಮನ್ವಯತೆ ಮುಖ್ಯವಾಗಿದೆ. ಸಮನ್ವಯತೆ ಇದ್ದರೆ ಮಾತ್ರ ಚೈತನ್ಯವು ತನ್ನಿಂದ ತಾನೇ ಬರುತ್ತದೆ. ಭರವಸೆಯ ಕಲಾವಿದರು ಬೆಳೆದು ರಾಜ್ಯಕ್ಕೆ ಅಪರೂಪದ ಕೊಡುಗೆಗಳನ್ನು ನೀಡಲಿ' ಎಂದು ಹಾರೈಸಿದರು.

ಕಲಾವಿದರಾದ ಜೆ.ಎಂ.ಎಸ್.ಮಣಿ ಮತ್ತು ಕೆ.ಕೆ.ಮಕಾಳಿ ಅವರಿಗೆ `ಕಲಾಧ್ಯಾನ್' ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT