ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಪಯಣದ ಲಹರಿ...

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದಿನವೂ ನನ್ನ ಪ್ರಯಾಣದ ಅವಧಿ ಮುಕ್ಕಾಲು ಗಂಟೆ ಮತ್ತು ಹತ್ತು ನಿಮಿಷ.  ನಾನು ಬೆಳಗ್ಗೆ ಎಂಟಕ್ಕೆ ತರಾತುರಿಯಿಂದ ಹೊರಡುತ್ತೇನೆ. ಯಲಹಂಕದ ಬ್ಯಾಟರಾಯನಪುರದಿಂದ ಮೆಜೆಸ್ಟಿಕ್ ಬಸ್ ಹತ್ತಬೇಕು. ಶಿವಾನಂದ ಸ್ಟಾಪ್ ತಲುಪಲು ಬರೋಬರಿ ಮುಕ್ಕಾಲು ಗಂಟೆ ಬೇಕು. ತಲುಪಬೇಕಾದ ಸ್ಥಳ ಭಾರತೀಯ ವಿದ್ಯಾ ಭವನ. ಹಿಂದೆಲ್ಲಾ ಕೇವಲ ಅರ್ಧ ಗಂಟೆಗೆ ಮೆಜೆಸ್ಟಿಕ್ ತಲುಪುತ್ತಿದ್ದೆ. ಈಗ ಅದೇ ಹಾದಿ.
 
ಅದೇ ದೂರ. ಆದರೆ ತಲುಪಲು ಬೇಕಾದ ಸಮಯಾವಕಾಶ ಮಾತ್ರ ಹೆಚ್ಚು. ದೊರೆಯುವ ಲೋಕಾನುಭವವೂ ಹೆಚ್ಚು. ಮನೆಯಿಂದ ಹೊರಟೊಡನೆ ಮೊದಲ ಆತಂಕ ಕೂರಲು ಸೀಟ್ ಸಿಗುವುದೇ ಎಂಬಲ್ಲಿಂದ ಆರಂಭವಾಗುತ್ತದೆ. ಸೀಟು ಸಿಗಲಿ, ಸಿಗದಿರಲಿ, ಇಂದಾದರೂ ಟ್ರಾಫಿಕ್ ಜಾಂ ಆಗದಿರಲಿ ಎಂಬ ಮೌನ ಪ್ರಾರ್ಥನೆಯೊಂದನ್ನು ಮನಸ್ಸಿನಲ್ಲಿಯೇ ಜಪಿಸುತ್ತೇವೆ.

ಬಸ್ ಹತ್ತಿದ ನಂತರ ರಶ್ ಇದ್ದರೆ ಅಂದು ಫುಟ್‌ಬೋರ್ಡ್ ಸವಾರಿ ಗ್ಯಾರಂಟಿ. ಈ ಮಧ್ಯೆ ಬಸ್‌ನ ಬಾಗಿಲು ಹಾಕಲು ಡ್ರೈವರ್ ಜಾಗವಿಲ್ಲದ ಜಾಗದಲ್ಲಿ ಒಳಗೆ ಹೋಗಿಯೆಂಬ ಕೂಗು. ಒಂದೇ ಕೈಯಿಂದ ನೇತಾಡುವ ಹಿಡಿ ಹಿಡಿದು, ಬದುಕಿನ ಸರ್ಕಸ್‌ನ ಅನುಭವ. ಹೇಗೋ ಒಂದೆಡೆ ಜಾಗ ಮಾಡಿಕೊಂಡು ನಿಂತರೆ ಎಲ್ಲರನ್ನೂ ತಳ್ಳುತ್ತಾ ಬರುವ ಕಂಡಕ್ಟರ್, `ಪಾಸ್ ತೋರ‌್ಸಿ, ಟಿಕೆಟ್ ತೊಗೊಳ್ಳಿ~ ಎನ್ನುತ್ತ ಹೆಬ್ಬಾವಿನಂತೆ ನುಸುಳುತ್ತಾ ತೆವಳುತ್ತಾರೆ.

ಇವರಿಗೆ ಜೋಳಿಗೆಯಂಥ ಚೀಲದಿಂದ ಪರ್ಸ್‌ನಲ್ಲಿ ಜೋಪಾನವಾಗಿಟ್ಟ ಪಾಸ್ ತೋರಿಸಬೇಕು. ಅಲ್ಲಿಗೆ ಸಮರದ ಇನ್ನೊಂದು ಹಂತ ಮುಗಿದಂತೆ. ನಂತರ ಸ್ಟಾಪ್ ಬರುವ ತನಕ ಒಂದೇ ಚಿಂತೆ, ಬಸ್ ಸರಿಯಾದ ಸಮಯಕ್ಕೆ ತಲುಪಲಿ ಅಂತ.
ದಿನನಿತ್ಯವೂ ಹೊಸ ಅನುಭವ, ಹೊಸ ಜನ, ಕೆಲಸಕ್ಕೆ ಹೋಗುವ ನೌಕರರು, ಇಯರ್ ಫೋನ್‌ನಲ್ಲಿ ಎಫ್‌ಎಮ್ ಕೇಳುವ ಕಾಲೇಜ್ ಹುಡುಗ- ಹುಡುಗಿಯರು, ಕೆ.ಜಿಗಟ್ಟಲೆ ಭಾರ ಹೊತ್ತು ಬರುವ ಶಾಲಾ ಮಕ್ಕಳು, ಯಾವುದೋ ದುಗುಡದಲ್ಲಿರುವ ವೃದ್ಧರು, ಮೊಬೈಲ್‌ನಿಂದ ಮೌನಕ್ಕೆ ಜಾರಿದ ಇತರ ಪ್ರಯಾಣಿಕರು. ಹೀಗೆ ಒಬ್ಬೊಬ್ಬರದ್ದು ಒಂದೊಂದು ಮುಖ.

ಯಾವತ್ತಾದರೂ ಕಿಟಕಿ ಪಕ್ಕದ ಸೀಟ್ ಸಿಕ್ಕರೆ ಅದು ಅದೃಷ್ಟದ ದಿನ. ಮೊದಲೇ ಮುಚ್ಚಿದ ಕಿಟಕಿಯನ್ನು ತೆಗೆದು ತಂಪಾದ ಗಾಳಿಗೆ ಮುಖವೊಡ್ಡುವುದು. ಮನಸನ್ನು ಹಾದಿಗುಂಟ ಹರಿಯಬಿಡುವುದು. ಹಾಗೇ ದಾರಿಯಲ್ಲಿ ಸಿಗುವ ನನ್ನ ಶಾಲೆ ಹಳೆಯ ದಿನಗಳನ್ನು ನೆನಪಿಸುತ್ತವೆ. ಇಂದಿಗೂ ಆ ಶಾಲೆಯ ಮಕ್ಕಳನ್ನು ನೋಡಿದಾಗ ಮತ್ತೆ ನಾನೂ ಶಾಲೆಗೆ  ಹೋಗುವಂತಾದರೆ? ಊಟದ ಸಮಯಕ್ಕೆ ಅಮ್ಮ ಬುತ್ತಿ ತರುತ್ತಿದ್ದು, ಫ್ರೆಂಡ್ಸ್ ಜೊತೆ ಒಂದೇ ಬೆಂಚ್‌ನಲ್ಲಿ ಕುಳಿತು ಊಟ ಮಾಡುತ್ತಿದು, ಬೇಸಿಗೆಯಲ್ಲೂ ಬಿಡದ ಪಿ.ಟಿ ಕ್ಲಾಸ್‌ಗಳು, ಬೆವರು ಸುರಿಯುತ್ತಿದ್ದರೂ ನಿಲ್ಲದ ಕುಂಟೋಬಿಲ್ಲೆ ಆಟ ಹೀಗೆ ಒಂದೆ ಎರಡೆ, ಅಂತ್ಯವಿಲ್ಲದ ನೆನಪಿಗೆ ಕೊನೆಯೆಲ್ಲಿ?

ಮನದಲ್ಲಿ ಇಂಥ ಲಹರಿ ಏಳುವ ಹೊತ್ತಿಗೆ ಮೇಖ್ರಿ  ಸರ್ಕಲ್ ಸ್ಟಾಪ್ ಬರುತ್ತದೆ. ಬಸ್‌ನಲ್ಲಿ ಜನ ಕಡಿಮೆಯಾದರೂ ತುಂಬಿದಂತೆಯೇ ಇರುತ್ತದೆ. ಜನ ಹತ್ತುವುದು ತಪ್ಪಲ್ಲ. ಈ ಕಡೆಯಿಂದ ಡ್ರೈವರ್ ರಶ್ ತಪ್ಪಿಸಲು `ಹಿಂದೆ ಖಾಲಿ ಬಸ್ ಇದೆ, ಅದರಲ್ಲಿ ಬನ್ನಿ~ ಎನ್ನುತ್ತ ಹೊರಟೇ ಬಿಡುತ್ತಾನೆ. ಬಸ್‌ನಲ್ಲಿದ್ದರೆ ಖುಷಿ. ಆಚೆ ಇದ್ದರೆ... ಗೊಣಗಾಟ. ಮನುಜನ ಮನಸಿನ ಲೋಕವೇ ವಿಚಿತ್ರ.

ಗುಟ್ಹಳ್ಳಿ  ಸ್ಟಾಪ್. ಕಾವೇರಿ ಚಿತ್ರಮಂದಿರದಲ್ಲಿ ಯಾವ ಸಿನಿಮಾ ಎಂಬ ಕುತೂಹಲ. ವಿಂಡ್ಸರ್ ತಿರುವಿನಲ್ಲಿ ಗಾಲ್ಫ್ ಮೈದಾನದ ಹಸಿರು ನೋಟ. ಅಲ್ಲೇ ಗಾಲ್ಫ್ ಆಟವನ್ನು ನೋಡಿ ಆನಂದಿಸುವ ಮಂದಿ. ಇವರಿಗೆಲ್ಲ ಬದುಕು ಇಷ್ಟು ಸರಾಗವೇ ಎಂಬ ಭಾವ. ಅವರ ನಿರಾಳತೆ, ಕ್ರೀಡೆಯಲ್ಲಿ ಮೈಮರೆಯುವ ಮನೋಭಾವ ಎಲ್ಲವೂ ಅಚ್ಚರಿ ಮೂಡಿಸುತ್ತದೆ.

ಈ ಯೋಚನಾ ಲಹರಿಗೆ ಬ್ರೇಕ್ ಹಾಕುವಂತೆ ಕುಮಾರ ಕೃಪಾ ಸ್ಟಾಪ್. ಕಾರಲ್ಲಿರಲಿ, ಕಾಲ್ನಡಿಗೆಯಲ್ಲೇ ಇರಲಿ, ಬಸ್ ಕಿಟಕಿಯಿಂದ ಇಣುಕುತ್ತಿರಲಿ, ಎಲ್ಲರಿಗೂ ಒಂದೇ ಬಗೆಯ ನಗೆಮೊಗದ ಸುಂದರಿಯರು ಹಾಜರ್. ಸಾಲು ಸಾಲು ಜೋಡಿಸಲಾದ ಆರ್ಕಿಡ್, ಗುಲಾಬಿ, ಆಸ್ಟ್ರ, ಕಾರ್ನೇಷನ್ ಹೂಗಳು ಶುಭೋದಯ ಹೇಳಿ, ನಕ್ಕು `ಹ್ಯಾವ್ ಅ ನೈಸ್ ಡೇ~ ಎಂದು ಹಾರೈಸುತ್ತವೆ.

ದಿನವೂ ನಾನು ಪ್ರಯಾಣಿಸುವ ಹಾದಿ ಅದೇ. ಅಂದಿನ ಯುದ್ಧಕ್ಕೆ ಯೋಧನೊಬ್ಬನು ಸಜ್ಜಾಗುವಂತೆ ಹೊರಡುತ್ತೇನೆ. ನನ್ನಂತೆಯೇ ಇತರರು ಜೀವನದ ಪ್ರಶ್ನೆ ಎದುರಿಸಲು ಸಜ್ಜಾಗುತ್ತಾರೆ ಎಂದೆನಿಸುತ್ತದೆ. ಏನೇ ಇರಲಿ, ಒಟ್ಟು ಏಳು ವರ್ಷ ನಿರಂತರವಾಗಿ ಬಸ್ ಪ್ರಯಾಣ ಮಾಡುತ್ತಿರುವ ನಾನು ಮೆಟ್ರೊ ನಗರಿಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇನೆ. ಆದರೆ ಪ್ರತಿಸಲ ನೆನಪುಗಳ ಚಕ್ರ ಬೇರೆಯದೇ ದಾರಿಯಲ್ಲಿ ಸಾಗುತ್ತದೆ. 

ಸಂಜೆಯ ಸೂರ್ಯ ಟಾಟಾ ಹೇಳುತ್ತಿದಂತೆ ಮನೆಗೆ ಮರಳುವ ಧಾವಂತ. ಏನೇ ಆದರೂ ಮುಂಜಾನೆಯ ಬಸ್ ಪ್ರಯಾಣ ಕಾಣದಂತೆ ಜೀವನದ ಪಾಠ ಕಲಿಸುತ್ತದೆ. ಸಂಜೆ ಮನೆಗೆ ಮರಳಿದ ನಂತರ `ಇಟ್ ವಾಸ್ ಎ ನೈಸ್ ಜರ್ನಿ~ ಎಂಬ ತೃಪ್ತ ಭಾವ ಮೂಡುತ್ತದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT