ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ವಾಹನ ಸಂಚಾರ ಅಸ್ತವ್ಯಸ್ತ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ನಿಧಾನಗತಿಯಲ್ಲಿ ನಡೆಯುತ್ತಿರುವ `ನಮ್ಮ ಮೆಟ್ರೊ~ ಕಾಮಗಾರಿ, ಇನ್ನೊಂದೆಡೆ ಸದಾ ಜನಜಂಗುಳಿಯಿಂದಿರುವ ಮಾರುಕಟ್ಟೆ, ನಿತ್ಯ ಜಾತ್ರೆಯಿರಬಹುದು ಎಂದೆನಿಸುವ ಬನಶಂಕರಿ ದೇವಾಲಯ... ಹೀಗೆ ಕನಪುರ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರತಿ ನಿತ್ಯ ಜನ ಕಿರಿಕಿರಿ ಅನುಭವಿಸುವುದಕ್ಕೆ ಇವಿಷ್ಟು ಸಾಕು...

ರಸ್ತೆಯ ಎರಡು ಬದಿಯ ಅಂಚಿನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಹೂವು, ಹಣ್ಣು ತರಕಾರಿ ಮಾರಾಟಗಾರರು, ಮಧ್ಯ ಭಾಗದಲ್ಲಿ ತೆವಳುತ್ತಾ ಸಾಗಿರುವ ಮೆಟ್ರೊ ಕಾಮಗಾರಿ, ಈ ಮಧ್ಯೆ ನುಸುಳುವ ಪಾದಚಾರಿಗಳು, ಇವೆಲ್ಲದರ ನಡುವೆ ಇರುವ ಇಕ್ಕಟ್ಟಾದ ಜಾಗದಲ್ಲಿ ವಾಹನ ಓಡಿಸಬೇಕಾದ ಅನಿವಾರ್ಯತೆ ವಾಹನ ಸವಾರರದ್ದು. ಇನ್ನು, ಬಸ್ಸು ಅಥವಾ ನಾಲ್ಕು ಚಕ್ರದ ವಾಹನಗಳು ಬಂದರೆ ಉಳಿದವರಿಗೆ ಸಂಚರಿಸಲು ಜಾಗವೇ ಇರದು.

ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ದಾಂಗುಡಿಯಿಡುವ ಭಕ್ತಸಾಗರ ಮತ್ತು ಬೀದಿ ಬದಿಯ ಮಾರಾಟಗಾರರು ಕೂಡ ಅಸ್ತವ್ಯಸ್ತದ ಒಂದು ಭಾಗವೇ ಆಗಿ ಹೋಗಿದ್ದಾರೆ.

ಪಾದಚಾರಿ ಸ್ಥಿತಿ ದೇವರಿಗೆ ಪ್ರೀತಿ!
ವಾಹನ ನಿಲುಗಡೆ, ಬಸ್ಸಿಗಾಗಿ ಕಾಯುವ ಪ್ರಯಾಣಿಕರ ನಿಮಿತ್ತ ಸಂಚಾರ ನಿಯಮಗಳನ್ನು ಸರಿಯಾಗಿ ಅನುಸರಿಸಲು ಸಾಧ್ಯವೇ ಇರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ರಸ್ತೆ ವಿಭಜಕಗಳಿಗೇ ಸದ್ಯದ ಮಟ್ಟಿಗೆ ಸ್ಥಳವಿಲ್ಲ.
 
ಓಡಾಡುವ ರಸ್ತೆ ಹೊಂಡ ದಿಣ್ಣೆಗಳಿಂದ ಕೂಡಿವೆ. ಈ ಮಾರ್ಗದಲ್ಲಿ ಚಲಿಸುವ ವಾಹನ ಸವಾರರೂ ಪ್ರತಿ ದಿನ ನರಕಯಾತನೆ ಅನುಭವಿಸುವಂತಾಗಿದೆ. ನಾಲ್ಕು ರಸ್ತೆಗಳು ಕೂಡುವ ಈ ಭಾಗದಲ್ಲಿ ವಾಹನಗಳ ಭರಾಟೆ ಹೆಚ್ಚಿರುವುದರಿಂದ ಪಾದಚಾರಿಗಳ ಸ್ಥಿತಿ ದೇವರಿಗೆ ಪ್ರೀತಿ.

ಈ ಭಾಗದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವು ಸಾರ್ವಜನಿಕ ಬಳಕೆಗೆ ಮುಕ್ತವಾಗದೇ ಇರುವುದರಿಂದ ಸಂಚಾರ ಅಸ್ತವ್ಯಸ್ತಗೊಳ್ಳುತ್ತಾ, ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.

ಕೇಂದ್ರ ಸರ್ಕಾರದ `ನರ್ಮ್~ ಯೋಜನೆಯಡಿ 32 ಕೋಟಿ ರೂಪಾಯಿ ವೆಚ್ಚದಲ್ಲಿ ಬನಶಂಕರಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಆದರೆ ಉದ್ಘಾಟನೆಯ ಭಾಗ್ಯ ಇನ್ನೂ ಕಂಡಿಲ್ಲ!

ನಿಲ್ದಾಣದ ಕುರಿತು: ಒಂದೂವರೆ ಎಕರೆ ಜಾಗದಲ್ಲಿರುವ ಬಸ್ಸು ನಿಲ್ದಾಣವು ಮೂರು ಅಂಕಗಳನ್ನು ಹೊಂದಿದೆ. ಕೆಳ ಮಹಡಿಯಲ್ಲಿ ಇರುವ ಕಾರು ನಿಲುಗಡೆ ಸ್ಥಳವು ಸುಮಾರು 200 ಕಾರುಗಳನ್ನು ನಿಲ್ಲಿಸಲು ಶಕ್ತವಾಗಿದೆ.
ಒಂದನೇ ಮಹಡಿಯಲ್ಲಿ ದೈನಿಕ ಮತ್ತು ಮಾಸಿಕ ಪಾಸ್ ಕೌಂಟರ್‌ಗಳು, ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯ ಕೊಠಡಿಗಳಿವೆ. ಉಳಿದ 2 ಮತ್ತು 3ನೇ ಮಹಡಿಯು ಸಾರಿಗೆ ಸಿಬ್ಬಂದಿಗಳಿಗೆ ಮೀಸಲಾಗಿದೆ.

ನಗರದ ಕೇಂದ್ರ ಭಾಗದಲ್ಲಿರುವ ಬನಶಂಕರಿ ನಿಲ್ದಾಣದಿಂದ ಪ್ರತಿ ದಿನ 220 ಶೆಡ್ಯೂಲ್‌ಗಳಲ್ಲಿ 1,600 ಬಸ್ಸುಗಳು ನಗರದ ವಿವಿಧ ಭಾಗಗಳಿಗೆ ತೆರಳುತ್ತವೆ. ದೊಡ್ಡ ಪ್ರಮಾಣದಲ್ಲಿ ಜನ ಸಂಚಾರವಿರುವ ಪ್ರದೇಶಕ್ಕೆ ಅವಶ್ಯವಿರುವ ಬಸ್ಸು ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳೇ ಕಳೆದಿವೆ.

ಆದರೆ ಜನಪ್ರತಿನಿಧಿಗಳು ಇದನ್ನು ಉದ್ಘಾಟಿಸಲು ಮೀನ ಮೇಷ ಎಣಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭುದಾಸ್‌ಅವರು, `ಬನಶಂಕರಿ ವಾರ್ಡ್‌ನ ಉಪ ಚುನಾವಣೆ ಮತ್ತು ರಾಜಕೀಯ ಬಿಕ್ಕಟ್ಟು ಎದುರಾಗಿದ್ದರಿಂದ ಬಸ್ ನಿಲ್ದಾಣ ಉದ್ಘಾಟನೆ ವಿಳಂಬವಾಯಿತು. ನಗರಾಭಿವೃದ್ಧಿ ಸಚಿವಾಲಯಕ್ಕೆ ಈ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ. ನಿಲ್ದಾಣವ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ~ ಎಂದು ತಿಳಿಸಿದರು.

ಸಮಸ್ಯೆಯ ಬಗ್ಗೆ ಜನಾಭಿಪ್ರಾಯ

ಸದಾ ಜನಜಂಗುಳಿಯಿರುವ ಈ ಪ್ರದೇಶಕ್ಕೆ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಎಂದಾಗ ಸಂಚಾರ ವ್ಯವಸ್ಥೆಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಬಗೆಹರಿಯಬಹುದು ಎಂದುಕೊಂಡೆವು. ಆದರೆ ಕಾಮಗಾರಿ ಪೂರ್ಣಗೊಂಡರೂ ಅದು ಜನರ ಬಳಕೆಗೆ ಮುಕ್ತವಾಗಿಲ್ಲ. 
 - ಅಂಜನಪ್ಪ (ಹೂವಿನ ವ್ಯಾಪಾರಿ)

ಅತಿಯಾದ ಜನಸಂಖ್ಯೆ ಇರುವುದರಿಂದ ಈ ಭಾಗದಲ್ಲಿ ವಾಹನ ಸವಾರಿ ನಡೆಸುವುದು ಬಲು ಕಷ್ಟ. ಇದಕ್ಕೆ ಪೂರಕವಾಗಿ `ನಮ್ಮ ಮೆಟ್ರೊ~ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ಇನ್ನಷ್ಟು ತೊಂದರೆ ಪಡುವಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಸಾರ್ವಜನಿಕರ ಯೋಗ ಕ್ಷೇಮವನ್ನು ಕಡೆಗಣಿಸಿ ರಾಜಕೀಯ ಜಂಜಾಟದಲ್ಲಿ ಮುಳುಗಿರುವುದು ವಿಪರ್ಯಾಸ. 
 -ರಾಜೇಶ್ (ಬೈಕ್ ಸವಾರ)

ಯಾವುದೇ ಸಂಚಾರ ನಿಯಮಗಳನ್ನು ಅನುಸರಿಸಲು ಅವಕಾಶವಿಲ್ಲದಷ್ಟು ಜನ ಮತ್ತು ವಾಹನಗಳು ಒಟ್ಟಿಗೆ ನುಗ್ಗುವುದರಿಂದ ಅಪಘಾತಗಳಾಗದೇ ಇರುವುದೇ ದೊಡ್ಡ ವಿಷಯ. ಆದಷ್ಟು ಬೇಗನೇ ನಿಲ್ದಾಣ ಉದ್ಘಾಟನೆಯಾಗಬೇಕು. ಇದರೊಂದಿಗೆ ಮೆಟ್ರೊ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಂಚಾರ ಸಮಸ್ಯೆಯನ್ನು ಬಗೆಹರಿಸಲು ಬಿಎಂಟಿಸಿ ಚಿಂತನೆ ನಡೆಸಬೇಕು. 
 -ರವಿ ( ವಿದ್ಯಾರ್ಥಿ )

ಕಾಮಗಾರಿ ಪೂರ್ಣವಾದ ನಂತರವೂ ಉದ್ಘಾಟನೆಗಾಗಿ ಜನಪ್ರತಿನಿಧಿಗಳನ್ನು ಕಾಯುವುದರಲ್ಲಿ ಅರ್ಥವಿಲ್ಲ. ನಿಲ್ದಾಣದಿಂದ ಜನರು ರಸ್ತೆಯಲ್ಲಿ ನಿಲ್ಲುವುದು ತಪ್ಪುತ್ತದೆ. ಇದರಿಂದ ವಾಹನ ಸವಾರರ ದಾರಿಯೂ ಸಲೀಸಾಗುತ್ತದೆ. ಆದ್ದರಿಂದ ಸಾರಿಗೆ ಇಲಾಖೆ ಶೀಘ್ರವೇ ಉದ್ಘಾಟನೆ ಮಾಡುವತ್ತ ಚಿಂತಿಸಬೇಕು. 
 -ಹೇಮಂತ್ ( ಇನ್ಫೋಸಿಸ್ ಉದ್ಯೋಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT