ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯನೂತನ ಪ್ರಯೋಗಶಾಲೆ

Last Updated 1 ಅಕ್ಟೋಬರ್ 2018, 19:41 IST
ಅಕ್ಷರ ಗಾತ್ರ

ಗಾಂಧೀಜಿ ಅಂದರೆ ಯಾರೊಬ್ಬರೂ ಮರೆಯಲಾಗದ, ಅದರಿಂದ ವಿಮೋಚನೆ ಎಂಬುದೇ ಇಲ್ಲದ ಒಂದು ಭಾವ. ವಿಶ್ವಬ್ಯಾಂಕ್‌ನಲ್ಲೋ ಯೋಜನಾ ಆಯೋಗದಲ್ಲೋ ಕೆಲಸ ಮಾಡಬೇಕು ಎಂದು ಜೊಲ್ಲು ಸುರಿಸುವ ಅತಿ ಆಧುನಿಕ ಮನಸ್ಸಿನ ಬುದ್ಧಿಜೀವಿಗಳು ಕೂಡ ಗಾಂಧಿ ಹಾಗೂ ಅವರ ಸಿದ್ಧಾಂತಗಳನ್ನು ತಲೆಯೊಳಗೆ ಹಾಕಿಕೊಂಡವರೇ. ಗಾಂಧಿ ಒಂದು ರೀತಿಯಲ್ಲಿ ಸದಾ ಕಾಲ ಕಾಡುವ ಶಕ್ತಿ, ಕಾರ್ಯಪ್ರಜ್ಞೆಯ ಜೊತೆಗೆ ತನ್ನತನ ದಕ್ಕಿಸಿಕೊಡುವ ಭಾವ, ಭಾರತದ ಅಷ್ಟೂ ಬೌದ್ಧಿಕ ತಲೆಮಾರುಗಳಿಗೆ ನೈತಿಕತೆಯ ಅತ್ತೆ ಇದ್ದಂತೆ.

ನೆಹರೂ ಅವರನ್ನು ಕೊಡವಿಕೊಂಡು ಹೋಗುವುದು ಸುಲಭ, ವಿನೋಬಾ ಭಾವೆ ಸ್ಮರಣೀಯರಾಗುವ ಸಿದ್ಧತೆಯಲ್ಲೇ ಇದ್ದಂಥವರು. ಆದರೆ ಗಾಂಧಿ ಅಷ್ಟು ಸರಳವಾಗಿ ದಕ್ಕುವುದಿಲ್ಲ. ಸುಪ್ತಪ್ರಜ್ಞೆಯಲ್ಲಿ ಸ್ಪ್ಯಾನರ್ ಹಾಕಿ ಅವರ ಚಿಂತನೆಗಳು ಅಲ್ಲಾಡಿಸುತ್ತಿರುತ್ತವೆ. ಅವರು ಪ್ರಸ್ತಾಪಿಸಿದ ಅಥವಾ ಅವರ ಚಿಂತನೆಗಳು ಮೂಡಿಸಿದ ಯಾವುದೋ ಪ್ರಶ್ನೆ ಕೊರೆಯುತ್ತಿರುತ್ತವೆ. ಹೀಗೆ ಅವರು ಎರಡು ರೀತಿಯಲ್ಲಿ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಯಾವುದೋ ವಿಚಾರ ಸಂಕಿರಣದ ಮಧ್ಯೆ, ಟೀವಿ ವಾಹಿನಿಯ ಚರ್ಚೆಯ ನಡುವೆ ಅಥವಾ ಏನನ್ನೋ ಯೋಚಿಸುತ್ತಾ ಸುಮ್ಮನೆ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ, ‘ಗಾಂಧಿ ಈ ವಿಷಯವಾಗಿ ಏನು ಚಿಂತಿಸಬಹುದಿತ್ತು’ ಎನಿಸುತ್ತದೆ. ಇದೊಂದು ವಿಧದಲ್ಲಿ ತನಗೆ ತಾನೇ ಬೌದ್ಧಿಕ ಗೂಗ್ಲಿಗಳನ್ನು ಹಾಕಿಕೊಂಡಂತೆ. ಸತ್ಯದ ಜೊತೆ ಪ್ರಯೋಗಕ್ಕಿಳಿದಂತೆ; ಅವನು ಎಷ್ಟೇ ಕಡು ಪ್ರಯೋಗಶೀಲ ಆಗಿರಬಹುದು. ಯಾವುದೋ ಹಳೆಯ ಸಂಗೀತದ ತುಣುಕು ಕಾಡುವಂತೆ ಅಥವಾ ಇಷ್ಟದ ಪರಿಮಳ ಮುದಕೊಡುವಂತೆಯೇ ಈ ನಮ್ಮ ಗಾಂಧಿ.

ಗಾಂಧೀ ಪ್ರಭೆ ಇರುವುದು ಅವರೊಬ್ಬ ಸಿದ್ಧಾಂತಿ ಎಂಬುದರಲ್ಲಿ ಅಲ್ಲ. ಅವರ ಪ್ರಶ್ನೆಬೋಧೆಗಳಲ್ಲಿ ಅಲ್ಲ. ನುಸಿಗುಳಿಗೆಗಳ ಮಧ್ಯೆ ಮ್ಯೂಸಿಯಂನಲ್ಲಿ ಸಂರಕ್ಷಿಸಿ ಇಟ್ಟ ಚಿಂತನೆಗಳಲ್ಲೂ ಅಲ್ಲ. ಯಾವತ್ತೂ ಗಾಂಧಿ ಒಂದು ಪ್ರಕ್ರಿಯೆ, ಒಂದು ಪ್ರಯೋಗ, ರಂಗದ ಒಂದು ತುಣುಕು, ಶಾಶ್ವತ ಚರ್ಚೆಯ ಒಂದು ಭಾಗ. ಯಾವುದೇ ಪ್ರಶ್ನಾವಳಿಗಳಿಗೆ– ಅದು ಲೈಂಗಿಕತೆ ಹಾಗೂ ಕಾಮಾತುರದ ಕುರಿತು ಆಗಿರಲಿ, ಕೆಲಸ ಹಾಗೂ ಜೀವನೋಪಾಯದ ಬಗೆಗೆ ಆಗಿರಲಿ– ಬೌದ್ಧಿಕವಾಗಿ ಗಾಂಧಿಯನ್ನು ತಳುಕು ಹಾಕಿಬಿಡಬಹುದಾದ ಗುಣವಿದೆ. ಗಾಂಧಿ ಒಂದು ಪ್ರಭುತ್ವ ಅಲ್ಲ; ನೈತಿಕತೆ ಹಾಗೂ ರಾಜಕೀಯದ ನಡುವೆ ಹೊಸ ಸಂಬಂಧಗಳನ್ನು ಕಲ್ಪಿಸುವ ಶಾಶ್ವತ ಪ್ರಕ್ರಿಯೆ.

ಗಾಂಧಿ ಹೊಸ ಪ್ರಶ್ನಾವಳಿಗಳಿಗೆ ಪಠ್ಯವಾಗುತ್ತಾರೆ, ಪ್ರಸಂಗವಾಗುತ್ತಾರೆ, ನೆಪವಾಗುತ್ತಾರೆ (ಟೆಕ್ಸ್ಟ್, ಕಂಟೆಕ್ಸ್ಟ್, ಪ್ರಿಟೆಕ್ಸ್ಟ್). ಗಾಂಧಿಗೂ ಅವರದ್ದೇ ಆದ ದೇಹಮೋಹವಿತ್ತು. ಆ ದೇಹವನ್ನೇ ಅವರು ತಮ್ಮ ಪ್ರಯೋಗಗಳಿಗೆಲ್ಲಾ ಟೆಸ್ಟ್ ಟ್ಯೂಬ್ ಆಗಿಸಿಕೊಂಡರು. ಸ್ವಚ್ಛತೆ, ನೈತಿಕತೆ, ರಾಜಕೀಯ ಇವೆಲ್ಲಕ್ಕೆ ಸಂಬಂಧಿಸಿದ ಪ್ರಯೋಗಗಳಿಗೆ ಅವರ ದೇಹವೇ ಪ್ರನಾಳ. ದೇಹ ಹಾಗೂ ದೈಹಿಕ ವಿವೇಚನೆಗೆ ಸಂಬಂಧಿಸಿದ ಹೊಸ ಸಂಬಂಧಗಳನ್ನು ಕಂಡುಕೊಂಡವರು ಅವರು. ಗಾಂಧಿ ಈಗ ಹೊಸ ಪ್ರಶ್ನಾವಳಿಯೇ ಆಗಿಬಿಟ್ಟಿದ್ದಾರೆ. ಜೈವಿಕ ತಂತ್ರಜ್ಞಾನ, ದೀರ್ಘಾಯಸ್ಸು, ಬದಲಾದ ಮಾನವಹಿತಾಸಕ್ತಿ ಬದುಕನ್ನು ದೂಡುತ್ತಿರುವ ಈ ಹೊತ್ತಲ್ಲಿ ದೇಹದ ಪಾತ್ರವೇನು ಎಂಬುದು ಮೊದಲನೇ ಪ್ರಶ್ನೆ. ತಂತ್ರಜ್ಞಪ್ರಭುತ್ವದ ಈ ದಿನಮಾನದಲ್ಲಿ ಸತ್ಯಾಗ್ರಹಿಯೊಬ್ಬ ತನ್ನನ್ನು ತಾನು ಮರುಶೋಧನೆಗೆ ಒಳಪಡಿಸಿಕೊಳ್ಳುವುದು ಹೇಗೆ ಎಂಬುದು ಇನ್ನೊಂದು ಪ್ರಶ್ನೆ. ದೇಹ ಈಗಲೂ ನೈತಿಕತೆ, ಪ್ರತಿಭಟನೆಯ ನಿವೇಶನವೇ ಎನ್ನುವುದು ಮತ್ತೊಂದು ಪ್ರಶ್ನೆ. ನಡಿಗೆ ಅಥವಾ ವಾಕಿಂಗ್‌ನ ಈ ಹೊತ್ತಿನ ತತ್ತ್ವವಾದರೂ ಏನು ಎನ್ನುವುದು ಮಗದೊಂದು ಪ್ರಶ್ನೆ.

ನ್ಶೆತಿಕತೆಯನ್ನೂ ಮೀರಿ ಈ ಪರಿಸ್ಥಿತಿ ಸಂಕೇತ ವಿಜ್ಞಾನವನ್ನು ಪ್ರಶ್ನಿಸುತ್ತದೆ. ಸಂಕೇತದ ಶಕ್ತಿ, ಅದರ ಕ್ರಿಯಾಶೀಲ ಬಳಕೆ ಕುರಿತ ಪ್ರಶ್ನೆ ಇದು. ಚಿಟಿಕೆ ಉಪ್ಪನ್ನು ಎತ್ತಿಹಿಡಿದು ಗಾಂಧಿ ಒಂದು ಸಾಮ್ರಾಜ್ಯವನ್ನೇ ಕೆಳಗಿಳಿಸಿದರು. ಬದುಕು, ಜೀವನೋಪಾಯ, ಜೀವನ ವಿಧಾನ, ಜೀವನಾನುಕೂಲ, ಜೀವನ ಚಕ್ರ, ಜೀವನ ವ್ಯವಸ್ಥೆ, ಜೀವನಶೈಲಿ ಎಲ್ಲವುಗಳ ನಡುವೆ ಒಂದು ಕ್ರಮಬದ್ಧ ನೇಯ್ಗೆಯನ್ನು ಖಾದಿ ಹಾಕಿತು. ಸಾಮಾನ್ಯರಲ್ಲಿ ಶೋಧ ಹಾಗೂ ಸಂರಕ್ಷಣೆಯ ಪ್ರಜ್ಞೆಯನ್ನು ಅದು ಸೃಷ್ಟಿಸಿತು. ಇವತ್ತು ಉಪ್ಪು ಹಾಗೂ ಖಾದಿಯಂಥ ಸಂಕೇತಗಳಿಗೆ ಯಾವುದು ಪರ್ಯಾಯ ಎಂಬ ಪ್ರಶ್ನೆ ಕೇಳಿಕೊಳ್ಳುವ ಒತ್ತಡವನ್ನು ಗಾಂಧಿ ನಮ್ಮ ಮೇಲೆ ಹಾಕುತ್ತಿದ್ದಾರೆ. ಖಾದಿ ಹಾಗೂ ಉಪ್ಪನ್ನು ಆರಾಧಿಸುತ್ತಾ ಕುಳಿತುಕೊಳ್ಳಿ ಎಂದು ಅವರು ಹೇಳುತ್ತಿಲ್ಲ. ಅದಕ್ಕೆ ಸೃಜನಶೀಲ ಪರ್ಯಾಯಗಳನ್ನು ಕಂಡುಕೊಳ್ಳಿ ಎನ್ನುತ್ತಿದ್ದಾರೆ.

ಗಾಂಧೀಜಿ ಇವತ್ತು ನೈತಿಕತೆಯ ಬತ್ತಾಸು. ಕೆಲವು ವರ್ಷಗಳ ಹಿಂದೆ ದಲೈ ಲಾಮಾ, ‘ಜಾರ್ಜ್ ಬುಷ್ ವರ್ತನೆಯು ಅವರೊಳಗಿನ ಮುಸ್ಲಿಮನನ್ನು ಹೊರಗೆ ತಂದಿತು’ ಎಂದು ವಿಶ್ಲೇಷಿಸಿದ್ದರು. ಅದೇ ರೀತಿ, ಆಧುನಿಕ ಮಾಹಿತಿ ತಂತ್ರಜ್ಞಾನ, ನ್ಯಾನೋಟೆಕ್, ಜೈವಿಕ ತಂತ್ರಜ್ಞಾನ, ಸೈಬರ್‌ನೆಟಿಕ್ಸ್ ಇವೆಲ್ಲವುಗಳಿಂದಾಗಿರುವ ಹೊಸ ರೀತಿಯ ಒದ್ದಾಟ, ಪ್ರತಿರೋಧ, ಸಮಗ್ರತೆಯ ಮೋಹ– ಎಲ್ಲಕ್ಕೂ ಯಾವ ಬಗೆಯ ಗಾಂಧಿಯ ಅವಶ್ಯಕತೆ ಇದೆ ಎಂಬ ಪ್ರಶ್ನೆ ಮೂಡುತ್ತದೆ. ಸಿಲಿಕಾನ್ ವ್ಯಾಲಿಯಲ್ಲಿ ಮರುಶೋಧಿಸಲಾದ ಗಾಂಧಿ ಬೇರೆ ರೀತಿಯೇ ಇರಬೇಕು. ಬ್ರೆಜಿಲ್ ಅಥವಾ ಕಾಂಬೋಡಿಯಾದಲ್ಲಿ ಹೋರಾಡುವ ಗಾಂಧಿಯನ್‌ನ ಹೊಸ ಕತೆ ಹೇಗಿದ್ದೀತು? ಬದುಕಿನ ಕೃತಿಯಿಂದ ಪ್ರಯೋಗಶೀಲತೆಯನ್ನು ಪಡೆದುಕೊಳ್ಳುವ ಗಾಂಧಿ, ಬದುಕೆನ್ನುವ ಕೃತಿಗೆ, ಜೀವನಕ್ಕೆ ಅದನ್ನು ಅನ್ವಯಿಸುತ್ತಾರೆ.
ಗ್ರಾಮದಲ್ಲಿ ಕಾಸ್ಮೊಪಾಲಿಟನ್‌ ಭವಿಷ್ಯ ಕಂಡಿದ್ದ ಗಾಂಧೀಜಿಯವರಲ್ಲಿ ಮಧ್ಯಮವರ್ಗಕ್ಕೆ ಇಲ್ಲದೇ ಇದ್ದಂಥ ಸಾಂಸ್ಕೃತಿಕ ಆತ್ಮವಿಶ್ವಾಸವಿತ್ತು. ಜಾಗತೀಕರಣ ಹೊಸ ಸ್ವರೂಪದ ಸಾಂಸ್ಕೃತಿಕ ತಲ್ಲಣಗಳನ್ನು, ಅಸ್ತಿತ್ವವಾದದ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆಂದೂ, ಆ ಸಮಸ್ಯೆಗಳನ್ನು ವಿಸ್ತೃತವಾಗಿ ಅರಿಯಬೇಕೆಂದೂ ಅವರು ನಂಬಿದ್ದರು.

ಚೀನಾ ದೇಶವು ಸಮಸ್ಯೆಗಳನ್ನು ನಿಭಾಯಿಸುತ್ತಿರುವ ರೀತಿಯ ಎದುರು ಪ್ರತಿನಿತ್ಯದ ಕಾರ್ಯಕ್ರಮಗಳ ಮೂಲಕ ಮಂಡಿಗಳನ್ನು ದುರ್ಬಲ ಮಾಡಿಕೊಳ್ಳದೆ ಗಟ್ಟಿಯಾಗಿ ನಿಲ್ಲುವುದು ಹೇಗೆ ಎಂಬ ಸವಾಲು ಭಾರತದ ಎದುರಲ್ಲಿದೆ. ನಾಗರಿಕತೆಯ ದೃಷ್ಟಿಯಿಂದ, ಐಹಿಕವಾಗಿ ಹಾಗೂ ಒಂದು ರಾಷ್ಟ್ರವಾಗಿ ಚೀನಾವನ್ನು ಗಾಂಧೀ ಶೈಲಿಯಲ್ಲಿ ಎದುರಿಸುವ ನೈತಿಕ ಮಾನದಂಡ ಯಾವುದೆಂಬುದು ಪ್ರಶ್ನೆ. ಚೀನಾ ಭದ್ರತೆಯ ಆತಂಕವನ್ನೇನೂ ಒಡ್ಡಿಲ್ಲ. ಆದರೆ ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಅದು ನಮ್ಮ ಸಾಂಸ್ಕೃತಿಕ ಆತ್ಮವಿಶ್ವಾಸಕ್ಕೆ, ಶಾಂತಿ ಸಿದ್ಧಾಂತಗಳಿಗೆ, ನೈತಿಕತೆಗೆ, ಸಮಸ್ಯೆ ಬಗೆಹರಿಸುವ ಮಾರ್ಗಗಳಿಗೆ ಸವಾಲೆಸೆದಿದೆ. ಸ್ವಯಂಶೋಧದ ಮೂಲಕ ಹೊಸ ಪ್ರತಿಕ್ರಿಯೆಗಳನ್ನು ಕಂಡುಕೊಳ್ಳುವಂಥ ಚಿಂತನೆಗಳನ್ನಂತೂ ಗಾಂಧಿ ನಮಗೆ ಒದಗಿಸಿದ್ದಾರೆ.

ಕೊನೆಯದಾಗಿ, ಗಾಂಧಿ ಒಬ್ಬ ವ್ಯಕ್ತಿಯಷ್ಟೇ ಅಲ್ಲ; ಚಿಂತನೆಗಳ ಜಾಲ. ಊಹೆಗಳ ಗಾಳಿಮಾತು, ಸಿದ್ಧಾಂತಗಳನ್ನು ಚಿಂತಿಸುವ ಹಾಗೂ ಬದುಕುವ ಹೊಸ ಮಾರ್ಗ. ಚಿಂತನೆಗಳ ಜಗತ್ತಿನಲ್ಲಿ ದೇಶ ಹೊಸ ಸವಾಲುಗಳನ್ನು ಎದುರಿಸುತ್ತಿರುವ, ಏನು ಮಾಡಬೇಕು ಎಂಬ ಗೊಂದಲಕ್ಕೆ ಈಡಾಗಿರುವ ಸಂದರ್ಭದಲ್ಲಿ ಗಾಂಧಿ ಒಂದು ಮಾದರಿಯಂತೆ ಕಾಣುತ್ತಾರೆ. ಅವರ ಕ್ರಿಯಾಶೀಲತೆ ಹಾಗೂ ಪ್ರತಿರೋಧ ಶಕ್ತಿಯ ತುಣುಕು ಈಗಲೂ ನಮಗೆ ಉಳಿದಿದೆ. ಅದಕ್ಕೆ ನಾವು ಆಭಾರಿಯಾಗಬೇಕು. ಅದು ನಮ್ಮ ಹೊಣೆಗಾರಿಕೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT