ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಗೆಡಿಸಿದ ಜಾಗೃತ ಮುಸ್ಲಿಮರು

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಜಮ್‌ಘಡ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಕುಸಿಯುತ್ತಿದೆ ಎಂಬುದು ಕೇವಲ ಆ ಸಮುದಾಯದ ಆತಂಕ ಅಲ್ಲ, ಬೇರೆ ರಾಜ್ಯಗಳ ಚುನಾವಣಾ ದಾಖಲೆಯನ್ನು ತಿರುವಿಹಾಕಿದರೆ ಇದಕ್ಕೆ ಆಧಾರವೂ ಸಿಗುತ್ತವೆ. ಬಾಬ್ರಿಮಸೀದಿ ಧ್ವಂಸದ ನಂತರ ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡ ರಾಜಕೀಯ ಇದಕ್ಕೆ ಕಾರಣ ಎನ್ನುವವರು ಇದ್ದಾರೆ.
 
ಆದರೆ ಇಂತಹ ಧ್ರುವೀಕರಣಕ್ಕೆ ಚಾಲನೆ ನೀಡಿದ್ದ ಉತ್ತರಪ್ರದೇಶದಲ್ಲಿ ಮಾತ್ರ ಕಳೆದ ಹತ್ತುವರ್ಷಗಳ ಅವಧಿಯಲ್ಲಿ ಮುಸ್ಲಿಮ್ ಶಾಸಕರ ಸಂಖ್ಯೆ ಏರುತ್ತಾ ಹೋಗಿ 56ಕ್ಕೆ ಮುಟ್ಟಿದೆ. ಹಿಂದೆಂದೂ ರಾಜ್ಯವಿಧಾನಸಭೆಗೆ ಇಷ್ಟೊಂದು ಸಂಖ್ಯೆಯ ಮುಸ್ಲಿಮರು ಆಯ್ಕೆಯಾಗಿರಲಿಲ್ಲ.

ಇದಕ್ಕೆ ಕಾರಣ ಈ ರಾಜ್ಯದಲ್ಲಿ ಶೇಕಡಾ 18ರಷ್ಟಿರುವ ಮುಸ್ಲಿಮ್ ಜನಸಂಖ್ಯೆಯೇ? ಹತ್ತು ಜಿಲ್ಲೆಗಳಲ್ಲಿ ಶೇಕಡಾ 30ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಕನಿಷ್ಠ 130 ವಿಧಾನಸಭಾ ಸ್ಥಾನಗಳಲ್ಲಿ ಮುಸ್ಲಿಮರು ನಿರ್ಣಾಯಕ ಸ್ಥಾನದಲ್ಲಿರುವುದೇ?  ಮತಗಳನ್ನು ಹಂಚಿಹೋಗಲು ಬಿಡದೆ ಒಂದೇ ಗುಂಪಾಗಿ ಮತಹಾಕುವ ಮುಸ್ಲಿಮರ ಜಾಣತನವೇ? ಇಲ್ಲವೇ ಈ ರಾಜ್ಯದ ಮುಸ್ಲಿಮ್ ಸಮುದಾಯ ಬೆಳೆಸಿಕೊಂಡಿರವ ರಾಜಕೀಯ ಜಾಗೃತಿಯೇ? -ಇವೆಲ್ಲವೂ ಕಾರಣ ಇದ್ದರೂ ಇರಬಹುದು.

ಇದಕ್ಕಿಂತಲೂ ಮುಖ್ಯವಾಗಿ 10-20ವರ್ಷಗಳ ಹಿಂದೆ ಈ ರಾಜ್ಯದಲ್ಲಿ ಹಿಂದು-ಮುಸ್ಲಿಮರ ನಡುವೆ ಇದ್ದ ವೈಷಮ್ಯ ಈಗ ಕಾಣದಿರುವುದು ಕೂಡಾ ಕಾರಣವಾಗಿರಬಹುದು.

2002ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಇದೇ ಅಜಮ್‌ಘಡದಲ್ಲಿ ಮುಸ್ಲಿಮರು ಹಿಂದೂಗಳ ಬಗ್ಗೆ ಆಡಿದ್ದನ್ನಾಗಲಿ ಇಲ್ಲವೇ ಅಯೋಧ್ಯೆಯಲ್ಲಿ ಹಿಂದೂಗಳು ಮುಸ್ಲಿಮರ ಬಗ್ಗೆ ಹೇಳಿದ್ದನ್ನಾಗಲಿ ನಾನು ಬರೆಯುವಂತಿರಲಿಲ್ಲ. ಎರಡೂ ಕೋಮಿನ ಜನ ಅಷ್ಟೊಂದು ಭೀಕರವಾದ ದ್ವೇಷಮಯ ವಾತಾವರಣದಲ್ಲಿ ಬದುಕುತ್ತಿದ್ದರು. ಅಜಮ್‌ಘಡದ ಮಣ್ಣಿನ ಮಕ್ಕಳಾದ ಚಿಂತಕ ರಾಹುಲ್ ಸಾಂಕೃತಾಯನ ಮತ್ತು ಕವಿ ಕೈಫಿ ಅಜ್ಮಿಯವರ ಬಗ್ಗೆ ಆ ಕಾಲದಲ್ಲಿ ಮಾತನಾಡುವವರೇ ಇರಲಿಲ್ಲ. ಮುಂಬೈ ಭೂಗತ ಪಾತಕಿಗಳಾದ ಹಾಜಿ ಮಸ್ತಾನ್, ಅಬುಸಲೇಮ್ ನಮ್ಮೂರಿನವರೆಂದು ಮುಸ್ಲಿಮ್ ಯುವಕರು ಮತ್ತು ಉತ್ತರಪ್ರದೇಶದ ಮೊದಲ ಗೂಂಡಾ ರಾಜಕಾರಣಿಗಳಾದ ರಮಾಕಾಂತ ಮತ್ತು ಉಮಾಕಾಂತಯಾದವ್ ಬಗ್ಗೆ ಹಿಂದೂ ಯುವಕರು ಅಭಿಮಾನದಿಂದ ಮಾತನಾಡುವುದು ಕೇಳಿ ಅಚ್ಚರಿಪಟ್ಟಿದ್ದೆ.

ಆ ದಿನಗಳಲ್ಲಿ ಅಯೋಧ್ಯೆಯಲ್ಲಿಯೂ ಹಣೆಗೆ ತಿಲಕಹಚ್ಚಿಕೊಂಡು ಎದೆಬಡಿದುಕೊಳ್ಳುತ್ತಾ `ಜೈ ಸಿಯಾ ರಾಮ್~ ಎಂದು ಕಿರುಚಾಡುತ್ತಿದ್ದ ಹಿಂದೂ ಯುವಕರಿದ್ದರು. ಈಗ ಎರಡೂ ಕಡೆಗಳಲ್ಲಿ ಇಂತಹ `ಉಗ್ರಗಾಮಿ~ಗಳ ಸಂಖ್ಯೆ ಕಡಿಮೆಯಾಗಿದೆ. ಎರಡೂ ಕೋಮಿನ ಜನರಲ್ಲಿ ರಾಜಕಾರಣಿಗಳ ಬಗ್ಗೆ ಸಾರ್ವತ್ರಿಕವಾದ ತಿರಸ್ಕಾರ ಕಾಣುತ್ತಿದೆ. ರಾಮಮಂದಿರ ನಿರ್ಮಾಣದ ಬಿಜೆಪಿ ಭರವಸೆಯ ಹಿಂದೆ ಇದ್ದದ್ದು ಶ್ರಿರಾಮನ ಮೇಲಿನ ಭಕ್ತಿ ಅಲ್ಲ ಎನ್ನುವುದು ಹಿಂದೂಗಳಿಗೂ ಗೊತ್ತಾಗಿದೆ, ಸಾಚಾರ್ ವರದಿ ಜಾರಿಯ ನಂತರ ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಬಣ್ಣ ಏನೆಂದು ಮುಸ್ಲಿಮರಿಗೂ ಅರಿವಾಗಿದೆ.

ಈ ಕಾರಣಗಳಿಂದಾಗಿಯೇ ಚುನಾವಣಾ ಪೂರ್ವದಲ್ಲಿ ಅವಸರದಿಂದ ಯುಪಿಎ ಸರ್ಕಾರ ಘೋಷಿಸಿದ್ದ ಮುಸ್ಲಿಮ್ ಮೀಸಲಾತಿ ಆ ಧರ್ಮದ ಯಾರನ್ನೂ ಕುಣಿದುಕುಪ್ಪಳಿಸುವಂತ ಮಾಡಿಲ್ಲ. ಸಾಚಾರ್ ವರದಿ ಮತ್ತು ರಂಗನಾಥ್ ಮಿಶ್ರಾ ವರದಿಗಳನ್ನು ಜಾರಿಗೆ ತರಬೇಕೆಂಬ ಸಮಾಜವಾದಿ ಪಕ್ಷದ ಒತ್ತಾಯವನ್ನು ಅದರ ಮುಖಬೆಲೆಯಲ್ಲಿಯೇ ಸ್ವೀಕರಿಸುವ ಸ್ಥಿತಿಯಲ್ಲಿಯೂ ಅವರಿಲ್ಲ. ಬಿಜೆಪಿಯ  ಪ್ರಮುಖ ಪ್ರಚಾರಕಿ ಉಮಾ ಭಾರತಿ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡದೆ `ಮುಸ್ಲಿಮರನ್ನೂ ಒಳಗೊಂಡ ರಾಮರಾಜ್ಯ~ದ ಬಗ್ಗೆ ಮಾತನಾಡಿದ ಮಾತ್ರಕ್ಕೆ ಬಾಬ್ರಿಮಸೀದಿ ಧ್ವಂಸಪ್ರಕರಣದಲ್ಲಿನ ಅವರ ಮೇಲಿನ ಆರೋಪವನ್ನು ಮುಸ್ಲಿಮರು ಮರೆತುಬಿಡುತ್ತಾರೆ ಎಂದು ನಿರೀಕ್ಷಿಸುವುದೂ ಸಾಧ್ಯ ಇಲ್ಲ.

ರಾಜಕೀಯ ಪಕ್ಷಗಳ ಬಗೆಗಿನ `ಜ್ಞಾನೋದಯ~ದಿಂದಾಗಿಯೋ ಏನೋ, ಎರಡೂ ಕೋಮಿನ ನಡುವೆ ಹತ್ತುವರ್ಷಗಳ ಹಿಂದಿನ ಕಹಿ ಈಗ ಇಲ್ಲ. ಇದಕ್ಕೆ ಸ್ವಲ್ಪ ಮಟ್ಟಿಗೆ ಅಟಲಬಿಹಾರಿ ವಾಜಪೇಯಿ ಮತ್ತು ಮಾಯಾವತಿಯವರ ರಾಜಕೀಯ ನಾಯಕತ್ವ ಕಾರಣ ಇರಬಹುದು. 2004 ಲೋಕಸಭಾ ಚುನಾವಣೆಯ ಕಾಲದಲ್ಲಿ ಮುಸ್ಲಿಮ್ ಬುದ್ದಿಜೀವಿ-ಉಲೇಮಾ ಬಳಗ ಬಿಜೆಪಿ ಪರ ರಥಯಾತ್ರೆ ಹೊರಟಿದ್ದರು. ದೆಹಲಿಯ ಜುಮ್ಮಾ ಮಸೀದಿಯ ಸೈಯ್ಯದ್‌ಬುಖಾರಿ ಬಹಿರಂಗವಾಗಿ ವಾಜಪೇಯಿ ಗುಣಗಾನ ಮಾಡಿದ್ದರು.

ಅದೇ ವೇಳೆ ಅನಿವಾರ್ಯವಾಗಿ ಕಾಂಗ್ರೆಸ್ ಬಿಟ್ಟು ಸಮಾಜವಾದಿಪಕ್ಷದ ಕಡೆ ಹೊರಟಿದ್ದ ಮುಸ್ಲಿಮರು ಕೂಡಾ ಭ್ರಮನಿರಸನಗೊಂಡಿದ್ದರು. ಅವರಿಗೆ ಪರ್ಯಾಯವಾಗಿ ಮಾಯಾವತಿ ನಾಯಕತ್ವ ಕಂಡಿತ್ತು. ಮುಸ್ಲಿಮ್ ಮತದಾರರ ಬದಲಾದ ಮನೋಭಾವ ಮತ್ತು ಅದಕ್ಕೆ ಹಿಂದೂ ಮತದಾರರು ವ್ಯಕ್ತಪಡಿಸಿದ್ದ ಪ್ರತಿಕ್ರಿಯೆ ಕಳೆದ ಎರಡು ಲೋಕಸಭಾ ಚುನಾವಣೆ ಮತ್ತು ಮೂರು ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರತಿಫಲನಗೊಂಡಿರುವುದನ್ನು ಕಾಣಬಹುದು. ಬಾಬ್ರಿಮಸೀದಿ ಧ್ವಂಸದ ನಂತರ 25ಕ್ಕೆ ಕುಸಿದಿದ್ದ ಮುಸ್ಲಿಮ್ ಶಾಸಕರ ಸಂಖ್ಯೆ 56ಕ್ಕೆ ಏರಿರುವುದೇ ಇದಕ್ಕೆ ನಿದರ್ಶನ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮುಸ್ಲಿಮರು (29) ಆಯ್ಕೆಯಾಗಿದ್ದು ಕೂಡಾ ಬಿಎಸ್‌ಪಿಯಿಂದ.

ಮುಸ್ಲಿಮ್ ಶಾಸಕರ ಸಂಖ್ಯೆ ಹೆಚ್ಚಳಕ್ಕೆ ಅವರು ಒಂದು ಗುಂಪಾಗಿ ಮತಹಾಕುತ್ತಾರೆ ಎನ್ನುವುದು ಕೂಡಾ ಸರಿಯಾದ ಕಾರಣ ಅಲ್ಲ. ಹಾಗಿದ್ದರೆ 1993ರಲ್ಲಿ ಮುಸ್ಲಿಮ್ ಶಾಸಕರ ಸಂಖ್ಯೆ 25ಕ್ಕೆ ಹೇಗೆ ಕುಸಿಯಿತು? ಬಾಬ್ರಿಮಸೀದಿ ಧ್ವಂಸದ ನಂತರ ಭೀತಿಗೀಡಾಗಿದ್ದ ಮುಸ್ಲಿಮರು ಗುಂಪಾಗಿ ಮತಹಾಕಿರುವ ಸಾಧ್ಯತೆ ಆಗಲೂ ಹೆಚ್ಚಿತ್ತಲ್ಲವೇ? ಇದು ಒಂದು ಮಿಥ್ಯೆ ಎನ್ನುವುದನ್ನು  ಉತ್ತರಪ್ರದೇಶದಲ್ಲಿ ಕಳೆದ ಎರಡು ದಶಕಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಸಾರಿಹೇಳುತ್ತದೆ. 

ಮುಸ್ಲಿಮರು ಕಾಂಗ್ರೆಸ್ ಜತೆಯಲ್ಲಿರುವ ವರೆಗಷ್ಟೇ ಇದು ಸತ್ಯವಾಗಿತ್ತು. ಬಾಬ್ರಿಮಸೀದಿ ಧ್ವಂಸದ ನಂತರ ಕಾಂಗ್ರೆಸ್ ಕೈಬಿಟ್ಟು ಸಮಾಜವಾದಿ ಪಕ್ಷದ ಹಿಂದೆ ಹೋದ ಇಲ್ಲಿನ ಮುಸ್ಲಿಮರು ನಿಧಾನವಾಗಿ ಅಲ್ಲಿಂದ ಹೊರಬಂದು ಒಂದಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು, ಇನ್ನೊಂದಷ್ಟು ಮಂದಿ ಬಿಎಸ್‌ಪಿಯನ್ನು ಬೆಂಬಲಿಸುತ್ತಿದ್ದಾರೆ. ಕಳೆದಲೋಕಸಭಾ ಚುನಾವಣೆಯಲ್ಲಿ ಮುಲಾಯಂಸಿಂಗ್ ಯಾದವ್ ಬಾಬ್ರಿಮಸೀದಿ ಧ್ವಂಸದ ಪ್ರಮುಖ ಆರೋಪಿ ಕಲ್ಯಾಣ್‌ಸಿಂಗ್ ಜತೆಗೂಡಿದ ನಂತರ ಮುಸ್ಲಿಮರು ಅವರಿಂದಲೂ ದೂರವಾಗತೊಡಗಿದ್ದರು.

ಇದರಿಂದಾಗಿ `ಯಾವ ಪಕ್ಷವೂ ಅಸ್ಪೃಶ್ಯ ಅಲ್ಲ~ ಎನ್ನುವ ಭಾವನೆ ಹಿರಿಯ ಮುಸ್ಲಿಮರಲ್ಲಿದೆ. ಇದನ್ನೇ ಮುಸ್ಲಿಮ್ ಯುವಕರು `ಸಬ್ ನೇತಾ ಚೋರ್ ಹೈ~ ಎಂದು ಇನ್ನೊಂದು ರೀತಿಯಲ್ಲಿ ಹೇಳುತ್ತಾರೆ. ಪ್ರಮುಖ ರಾಜಕೀಯ ಪಕ್ಷಗಳ ಬಗ್ಗೆ ಮುಸ್ಲಿಮರ ಒಂದು ವರ್ಗದಲ್ಲಿ ಬೆಳೆಯುತ್ತಿರುವ ಅಸಮಾಧಾನವನ್ನು ಬಳಸಿಕೊಳ್ಳಲೆಂಬಂತೆ  ಮುಸ್ಲಿಮ್ ಕೇಂದ್ರಿತ ಪ್ರಾದೇಶಿಕ ಪಕ್ಷಗಳು ಈ ಬಾರಿಯ ಚುನಾವಣಾ ಕಣದಲ್ಲಿ ಕಾಣಿಸಿಕೊಂಡಿವೆ.

ಇವುಗಳಲ್ಲಿ ಮುಖ್ಯವಾಗಿ ಗೋರಖ್‌ಪುರದ ವೈದ್ಯ ಮೊಹಮ್ಮದ್ ಆಯುಬ್ ಸ್ಥಾಪಿಸಿರುವ `ಪೀಸ್ ಪಕ್ಷ~,  ಎಸ್‌ಕ್ಯುಆರ್ ಇಲ್ಯಾಸಿ ಅವರ `ವೆಲ್‌ಫೇರ್ ಪಕ್ಷ~, ಬಿಎಸ್‌ಪಿ ತೊರೆದುಬಂದ ಇಲ್ಯಾಸ್ ಅಜ್ಮಿ ಅವರ `ರಾಷ್ಟ್ರೀಯ ಇಂಕ್ವಿಲಾಬ್ ಪಕ್ಷ~ ಮತ್ತು ಕೋಟ್ಯಧಿಪತಿ ಅಜ್ಮಲ್ ಸೋದರರ `ಅಖಿಲ ಭಾರತ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ~ (ಎಐಯುಡಿಎಫ್) ಮುಸ್ಲಿಮ್ ಮತಗಳ ಮೇಲೆ ಕಣ್ಣಿಟ್ಟೇ ಚುನಾವಣಾ ಕಣಕ್ಕಿಳಿದಿವೆ.  ಕಾಂಗ್ರೆಸ್ ಪಕ್ಷದಿಂದ ಹೊರಬಂದ ದಲಿತರು ಬಿಎಸ್‌ಪಿಯನ್ನು ಕಟ್ಟಿಬೆಳೆಸಿ ಅಧಿಕಾರಕ್ಕೆ ತಂದ ಹಾಗೆ ಮುಸ್ಲಿಮರೂ ಉತ್ತರಪ್ರದೇಶದಲ್ಲಿ ಸ್ವಂತ ಪಕ್ಷವನ್ನು ಅಧಿಕಾರಕ್ಕೆ ತರಬಹುದು ಎನ್ನುವ ಪ್ರಚಾರ ಈ ಪಕ್ಷಗಳಿಂದ ಭರದಿಂದ ನಡೆದಿದೆ.  ರಾಜಕೀಯವಾಗಿ ದಲಿತರಿಗಿಂತಲೂ ಹೆಚ್ಚು ಜಾಗೃತರಾಗಿರುವ ಮುಸ್ಲಿಮರು ಇಂತಹ ಬೋನಿನಲ್ಲಿ ಬೀಳಬಹುದೇ?

ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಮುಸ್ಲಿಮ್ ಶಾಸಕರು

1977   49
1980   47  
1985   49
1989   38  
1993   25
1996   33  
2002   47
2007   56
 

ಕಳೆದ ವಿಧಾನಸಭೆಯಲ್ಲಿದ್ದ ಮುಸ್ಲಿಮ್ ಶಾಸಕರು

 ಸಮಾಜವಾದಿ ಪಕ್ಷ   21
 ಬಿಎಸ್‌ಪಿ     29 ಕಾಂಗ್ರೆಸ್   0
 ಆರ್‌ಎಲ್‌ಡಿ  3 ಪಕ್ಷೇತರ       3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT