ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಗೆಡಿಸಿದ ಮಲಪ್ರಭೆ; ಓಗೊಡದ ಜನಪ್ರತಿನಿಧಿಗಳು

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ): `ಮನೆಯ ಒಲೆಯಲ್ಲಿ ನೀರು ನಿಂತಿದೆ. ಬೆಳಿಗ್ಗೆಯಿಂದ ಅಡುಗೆ ಮಾಡಿಲ್ಲ. ಮನೆಯಲ್ಲಿನ ನೀರು ಹೊರಗೆ ಹಾಕುವುದೇ ಕೆಲಸವಾಗಿದೆ. ಸಾಲಿಗೆ ಹೋಗಿದ್ದ ಮಗಳು ಬಿಸಿಯೂಟದ ಅನ್ನ ತಂದಿದ್ದಾಳೆ. ಅದನ್ನೇ ಊಟ ಮಾಡಿದ್ದೇವೆ.

ರಾತ್ರಿ ನೀರು ಹೆಚ್ಚಾದ್ರ ಏನು ಮಾಡಬೇಕು ಎನ್ನುವುದೇ ಚಿಂತೆಯಾಗಿದೆ~ಹೀಗೆಂದು ರಾಮದುರ್ಗ ಪಟ್ಟಣದ ಕಿಲಬನೂರಿನ ತುಳಸವ್ವ ತಳವಾರ ತನ್ನ ಅಳಲನ್ನು `ಪ್ರಜಾವಾಣಿ~ ಪ್ರತಿನಿಧಿಯ ಮುಂದೆ ತೋಡಿಕೊಂಡರು.

`ಸಂಜೆ ಮುಂದ ನೀರು ಅಂಗಳದಾಗ ಇತ್ತು. ಕಡಿಮೆಯಾಗಬಹುದು ಎಂದು ಮಲಗಿಕೊಂಡಿದ್ದೆವು.ಮಧ್ಯರಾತ್ರಿ ವೇಳೆಗೆ ನೀರು ಮನ್ಯಾಗ ನುಗ್ಗಿಬಿಟ್ಟಿತು. ಆವಾಗಿಂದ ನಿದ್ದಿನ ಮಾಡಿಲ್ಲ~ ಎಂದು ಅವರು ಹೇಳಿದರು.

`ಮನ್ಯಾಗ ನೀರು ಬಂದಿದೆ. ಆದರೆ ಇಲ್ಲಿಯವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಬದುಕಿದ್ದೀರಾ? ಸತ್ತಿದ್ದೀರಾ? ಎಂದು ಕೇಳಿಲ್ಲ. ಬೇರೆ ಕಡೆಗೆ ಮನೆ ಕಟ್ಟಿಸಿಕೊಡತಿನಿ ಅಂತ ಆರು ವರ್ಷದ ಹಿಂದೆ ಪ್ರವಾಹ ಬಂದು ಮನ್ಯಾಗ ನೀರು ಬಂದಾಗ ಹೇಳಿದ್ದರು. ನಂತರ ಏನಾಗೈತಿ ಅಂತ ಗೊತ್ತಿಲ್ಲ~ ಎಂದು ಯಲ್ಲಪ್ಪ ತಳವಾರ ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟರು.

`ರಾತ್ರಿಯೀಡಿ ದನಗಳು ನೀರಿನ್ಯಾಗ ನಿಂತಿದ್ದವು. ಅವುಗಳಿಗೆ ತಂಪೇರಿ ಏನಾದರೂ ಆಗಬಾರದು ಎಂದು ಈಗಷ್ಟೇ ಹೊರಗಡೆ ಕಟ್ಟಿ ಬಂದಿದ್ದೇನೆ~ ಎಂದು ಅವರು ಹೇಳಿದರು.
 
`ನಮ್ಮ ಮನ್ಯಾಗ ನದಿ ನೀರು ಬಂದೈತಿ. ಮುಂಜಾನೆ ಅಡುಗೆ ಮಾಡಿಲ್ಲ ಎಂದು ಶಿಕ್ಷಕರಿಗೆ ಹೇಳಿದೆ. ಬಿಸಿಯೂಟದ ಅನ್ನ ತೆಗೆದುಕೊಂಡು ಹೋಗುವಂತೆ ಕಟ್ಟಿ ಕೊಟ್ಟಿದ್ದಾರೆ. ಎಲ್ಲರೂ ಮಧ್ಯಾಹ್ನ ಅದನ್ನೇ ಊಟ ಮಾಡಿದ್ದೇವೆ~ ಎಂದು 9ನೆಯ ತರಗತಿ ಓದುತ್ತಿರುವ ಅಶ್ವಿನಿ ತಳವಾರ ತಿಳಿಸಿದರು.

ಇದು ಒಂದು ಮನೆಯ ಕಥೆಯಲ್ಲ. ರಾಮದುರ್ಗ ಪಟ್ಟಣದ ಕಿಲಬನೂರ, ಬಣಕಾರ ಪೇಟೆ, ಕಾಗಿ ಓಣಿ, ಪಡಕೋಟಗಲ್ಲಿ 30ಕ್ಕೂ ಹೆಚ್ಚು ಮನೆಗಳಲ್ಲಿ ಇದೇ ಸ್ಥಿತಿ ಇದೆ. ಪಟ್ಟಣದ ಕಿಲಬನೂರ, ಪಡಕೋಟಗಲ್ಲಿ ಸೇರಿದಂತೆ ಹಲವು ಪ್ರದೇಶಗಳ ನೂರಾರು ಮನೆಗಳ ಬಾಗಿಲಿನಂಚಿಗೆ ನೀರು ಬಂದಿದೆ.

ಅದು ಮನೆಯೊಳಗೆ ಬರದಂತೆ ತಡೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ಮನೆ ಮುಂದೆ ಇರುವ ಕಟ್ಟೆಗೆ ಹಲಗೆಗಳನ್ನು ಅಡ್ಡಕಟ್ಟಿ, ಅವುಗಳನ್ನು ಮಣ್ಣಿನಿಂದ ಮೆತ್ತಿ ನೀರು ಒಳ ಬರದಂತೆ ತಡೆದಿದ್ದಾರೆ. ಬೆಳಿಗ್ಗೆಯಿಂದ ಮಣ್ಣು ಕಿತ್ತಿ ಹೋದಂತೆಲ್ಲ ಮಣ್ಣನ್ನು ಮೆತ್ತುತ್ತಾ ಕುಳಿತಿದ್ದಾರೆ.

`ಸಾಹೇಬ್ರ ನೀರು ಇನ್ನು ಹೆಚ್ಚಾಗತೈತೇನ್ರಿ. ನಮ್ಮ ಮನಿತನ ನೀರು ಬರುತ್ತಾ. ಆರು ವರ್ಷದ ಹಿಂದೆ ನೀರು ನಮ್ಮ ಮನೆಗೂ ನುಗ್ಗಿತ್ತು. ಈಗಲೂ ಬರುತ್ತೇನ್ರಿ~ ಎಂಬ ಆತಂಕವನ್ನು ಹಲವಾರು ಜನರು ವ್ಯಕ್ತಪಡಿಸಿದರು. 
ನದಿ ದಡದ ಮೇಲಿರುವ ಜನರಿಗೆ ಪ್ರವಾಹ ಬಂದಿರುವ ಬಗೆಗೆ ಎಚ್ಚರಿಕೆ ನೀಡುವ ಕೆಲಸವಾಗಲೀ, ಅಣೆಕಟ್ಟೆಯಿಂದ ಬಿಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದ್ದರೂ  ನೀರಿನ ಪ್ರಮಾಣ ಹೆಚ್ಚಾಗಲ್ಲ ಎಂದು ಜನರಿಗೆ ತಿಳಿಸುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡದಿರುವುದು ಕಂಡು ಬಂತು.

`ಮೊದಲೇ ತಾಲ್ಲೂಕಿನ್ಯಾಗ ಸರಿಯಾಗಿ ಮಳೆ ಇಲ್ಲ. ನದಿ ದಂಡಿಗೆ ಇದ್ದವರು ಅದರ ನೀರನ್ನ ಹರಿಸಿಕೊಂಡು ಗೋವಿನ ಜೋಳ ಮತ್ತಿತರ ಬೆಳೆ ಬೆಳೆದಿದ್ದೆವು. ಇನ್ನೇನು ಕೈಗೆ ಬರುತ್ತೆ ಅಂದುಕೊಂಡಿದ್ದಾಗ ಪ್ರವಾಹ ಬಂದು ಕೊಚ್ಚಿಕೊಂಡು ಹೋಯಿತು. ಒಟ್ಟಿನ್ಯಾಗ ನಮಗ ಕಷ್ಟ ತಪ್ಪಿದ್ದಲ್ಲ~ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT