ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆಗೆಡಿಸಿರುವ ತೆರವಿನ ತೂಗುಗತ್ತಿ!

Last Updated 27 ಸೆಪ್ಟೆಂಬರ್ 2013, 4:57 IST
ಅಕ್ಷರ ಗಾತ್ರ

ಕೊಪ್ಪ: ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ ಒತ್ತುವರಿದಾರರ ಮೇಲೆ ತೂಗುಗತ್ತಿಯಾಗಿ ಪರಿಣಮಿಸಿದ್ದು, ನಿದ್ದೆಗೆಡಿಸಿದೆ.
ಒಟ್ಟು 1,25,311.08 ಎಕರೆ ಭೌಗೋಳಿಕ ವಿಸ್ತೀರ್ಣ ಹೊಂದಿರುವ ತಾಲ್ಲೂಕಿನ ಕಸಬಾ ಹೋಬಳಿಯ 19,594.24 ಎಕರೆ ಸರ್ಕಾರಿ ಭೂಮಿ­ಯಲ್ಲಿ 4470.37 ಎಕರೆ ಒತ್ತುವರಿ­ಯಾಗಿದೆ. ಹರಿಹರಪುರ ಹೋಬಳಿಯ 12,519.12 ಎಕರೆ­ಯಲ್ಲಿ  566.37 ಎಕರೆ, ಮೇಗುಂದ ಹೋಬಳಿಯ 19046.14 ಎಕರೆಯಲ್ಲಿ 6630.16 ಎಕರೆ ಒತ್ತುವರಿಯಾಗಿದೆ.

ತಾಲ್ಲೂಕಿನ ಒಟ್ಟು 18612.72 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 5914.04 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. 1502 ಹೆಕ್ಟೇರ್ ಮೀಸಲು ಅರಣ್ಯ, 8575.47 ಹೆಕ್ಟೇರ್ ಘೋಷಿತ ಅರಣ್ಯ, 8535.­25 ಹೆಕ್ಟೇರ್ ವರ್ಗೀೀಕರಿಸದ ಅರಣ್ಯ ಭೂಮಿ ತಾಲ್ಲೂಕು ವ್ಯಾಪ್ತಿಯಲ್ಲಿದ್ದು, ಕೊಪ್ಪ ಅರಣ್ಯ ವಿಭಾಗದಲ್ಲಿ 981 ಪ್ರಕರಣಗಳಲ್ಲಿ 5914 ಎಕರೆ ಒತ್ತುವರಿ­ಯಾಗಿದ್ದರೆ ಇದರಲ್ಲಿ 5 ಎಕರೆ ಒಳಗಿನ ಒತ್ತುವರಿ 747 ಪ್ರಕರಣದಲ್ಲಿ 1780.96 ಹೆಕ್ಟೇರ್ ಎಂದು ಗುರುತಿಸ­ಲಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ 396 ಪ್ರಕರಣದಲ್ಲಿ 2845.36 ಎಕರೆ ತೆರವಿಗೆ ಆದೇಶಿಸಲಾಗಿದೆ.

ಆಗಿರುವ ಒತ್ತುವರಿಯಲ್ಲಿ ಕಾಫಿ ತೋಟದ ಮಾಲೀಕರ ಒತ್ತುವರಿ ಅಧಿಕ ಪ್ರಮಾಣದಲ್ಲಿದ್ದು, ಅಕ್ರಮ ಸಕ್ರಮೀ­ಕರಣಕ್ಕೆ ಮನವಿ ಸಲ್ಲಿಸಿದ್ದ ರೈತರ ಭೂಮಿಗಳನ್ನು ಒತ್ತುವರಿ ಎಂದು ಪರಿಗಣಿಸಿರುವುದು, ಹಿಂದಿನ ಜಿಲ್ಲಾಧಿ­ಕಾರಿ ಗೋಪಾಲಕೃಷ್ಣೇಗೌಡರು ಗೋ­ಮಾಳ, ಸೊಪ್ಪಿನಬೆಟ್ಟ ಗ್ರಾಮ­ಠಾಣ ಸೇರಿದಂತೆ 1.36 ಲಕ್ಷ ಎಕರೆ ಕಂದಾಯ ಭೂಮಿ ಅರಣ್ಯ ಮೀಸಲು ಎಂದು ಮಾಡಿರುವ ಆದೇಶ ತಾಲ್ಲೂಕಿನ ಬಹುತೇಕ ಕೃಷಿಕರ ಬದುಕನ್ನು ತ್ರಿಶಂಕು ಸ್ಥಿತಿಗೆ ತಂದು ನಿಲ್ಲಿಸಿದೆ. ಸರ್ಕಾರದ ನೀತಿ-ನಿಬಂಧನೆಗಳನ್ನು ಗಾಳಿಗೆ ತೂರಿ ಸಾಮೂ­ಹಿಕವಾಗಿ ಒತ್ತುವರಿ ನಡೆ­ದಿದ್ದು, ನ್ಯಾಯಾಲಯ ನೀಡಿ­ರುವ ಒತ್ತು­ವರಿ ತೆರವಿನ ಆದೇಶ ಬ್ರಹ್ಮಾಂಡ ಸಮಸ್ಯೆಯಾಗಿ ಪರಿಣ­ಮಿಸಿದೆ.

ತಾಲ್ಲೂಕಿನ ಅತಿವೃಷ್ಟಿ, ಅನಾ­ವೃಷ್ಟಿಗೆ ಒತ್ತುವರಿಯಿಂದ ­ನಾಶ­­­ವಾಗಿ­ರುವ ಪ್ರಾಕೃತಿಕ ಸಂಪತ್ತು ಕಾರಣ ಎನ್ನಲಾಗುತ್ತಿದ್ದು, ಜನಸಂಖ್ಯಾ ಸ್ಫೋಟ ಹಾಗೂ ನಿರುದ್ಯೋಗ ಸಮಸ್ಯೆಯೂ ಒತ್ತುವರಿಗೆ ಪ್ರೇರಣೆ ನೀಡಿದೆ. ಕಂದಾಯ ಭೂಮಿ, ಸರ್ಕಾರಿ ಭೂಮಿ. ರಕ್ಷಿತ ಅರಣ್ಯ, ಮೀಸಲು ಅರಣ್ಯ, ಸೊಪ್ಪಿನ ಬೆಟ್ಟ, ಗೋಮಾಳ. ಗ್ರಾಮಠಾಣ ಸೇರಿದಂತೆ ಎಲ್ಲಾ ರೀತಿಯ ಭೂ ಒತ್ತುವರಿ ನಡೆದಿದೆ. ಜಲ­ಮೂಲಗಳು, ವನ್ಯಜೀವಿಗಳ ಆಶ್ರಯ ತಾಣಗಳು ಒತ್ತುವರಿಯ ಕಬಂಧ­ಬಾಹುವಿಗೆ ಸಿಲುಕಿ ನಲುಗಿದೆ. ವನ್ಯಜೀವಿ­ಗಳು ತಮ್ಮ ಮೂಲ ನೆಲೆ ಕಳೆದುಕೊಂಡು ಜನವಸತಿ ಹಾಗೂ ಕೃಷಿ ಭೂಮಿಯ ಮೇಲೆ ದಾಳಿ ಮಾಡು­ತ್ತಿದ್ದು, ಮಾನವ ದೂರಗಾಮಿ ಪರಿಣಾ­ಮದ ಅರಿವಿಲ್ಲದೆ ಮಾಡಿದ ಅಪರಾಧ­ಗಳಿಂದ ಸಂಕಟ ಎದುರಿಸು­ವಂತಾಗಿದೆ.

ತಾಲ್ಲೂಕಿನಲ್ಲಿದ್ದ ಬಹುತೇಕ ಕೂಡು ಕುಟುಂಬಗಳು ಇಂದು ಕಣ್ಮರೆಯಾಗಿವೆ. ಪ್ರತಿ ಕುಟುಂಬಗಳು ಛಿದ್ರಗೊಂಡು ಪ್ರತ್ಯೇಕ ನೆಲೆ ಕಂಡುಕೊಳ್ಳಲು ಭೂ ಒತ್ತುವರಿ ಅನಿವಾರ್ಯತೆ ಸೃಷ್ಟಿಸಿದೆ. ಕೃಷಿ ಕಾರ್ಮಿಕರು ಬದುಕಿಗಾಗಿ ಸರ್ಕಾರಿ ಖಾಲಿ ಜಾಗದಲ್ಲಿ ಮಾಡಿದ ಕೃಷಿ (ಬಗರ್‌ಹುಕುಂ) ಭೂಮಿ ಸೇರಿದಂತೆ ಹಲವು ಮಾದರಿಯ ಒತ್ತುವರಿಗಳನ್ನು ಸಕ್ರಮ­ಗೊಳಿಸುವ ಸರ್ಕಾರಗಳ ಘೋಷಣೆ ಒತ್ತುವರಿಯ ವೇಗವನ್ನು ವರ್ಧಿಸಿವೆ. ಒಟ್ಟಾರೆ ತಾಲ್ಲೂಕಿನಲ್ಲಿ 51,160.10 ಎಕರೆ ಸರ್ಕಾರಿ ಭೂಮಿ­ಯಲ್ಲಿ 11,968.11 ಎಕರೆ ಒತ್ತುವರಿ­ಯಾಗಿದೆ ಎಂದು ಕಂದಾಯ ಇಲಾಖೆ ದಾಖಲೆಗಳೇ ಹೇಳುತ್ತವೆ.

ಒತ್ತುವರಿಯಿಂದ ಆಗಿರುವ ಅರಣ್ಯ ನಾಶದಿಂದ ಜಲ ಮೂಲಗಳು ಬತ್ತುತ್ತಿವೆ. ಒಣಗಿಹೋದ ಕೆರೆಗಳು, ಅಡಿಕೆ ತೋಟಗಳಾಗಿ ಪರಿವರ್ತನೆ­ಗೊಂಡು ಮಳೆ ಮಾರುತಗಳನ್ನು ತಡೆದು ಸಮೃದ್ಧ ಮಳೆ ಸುರಿಸುತ್ತಿದ್ದ ತಾಲ್ಲೂಕಿನ ಪರ್ವತ ಶ್ರೇಣಿಗಳು, ಗಿರಿ ಬೆಟ್ಟಗಳು ಒತ್ತುವರಿದಾರರ ದುರಾಸೆಗೆ ಬಲಿಯಾಗಿ ಕಾಫಿ ಎಸ್ಟೇಟುಗಳಾಗಿ, ಬೋಳು ಗುಡ್ಡಗಳಾಗಿ ರಾಪಾಂತರ­ಗೊಂಡಿವೆ. ಬೆಲೆಬಾಳುವ ಶ್ರೀಗಂಧ, ತೇಗ, ಮರಗಳು ವಿರಳವಾ­ಗುತ್ತಿದ್ದು ಸಹಜ ಅರಣ್ಯದ ಬದಲು ಅರಣ್ಯೀ­ಕರಣದ ಹೆಸರಿ­ನಲ್ಲಿ ಸೃಷ್ಟಿಯಾಗಿ­ರುವ ಅಕೇಶಿ­ಯಾ ಕಾಡು ವಿಸ್ತಾರ­ಗೊಳ್ಳು­ತ್ತಿವೆ.  ಜನಜೀವನಕ್ಕೆ ಅನಿ­ವಾರ್ಯ ಎನ್ನಿಸು­ವಂತೆ ಒತ್ತುವರಿ ನಡೆದಿ­ರುವುದು ಸಮಸ್ಯೆಗೆ ಕಾರಣ­ವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT