ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಿ ಕಳ್ಳರ ಬಂಧನಕ್ಕೆ ಆಗ್ರಹಿಸಿ ಅನಗವಾಡಿ ಬಂದ್

Last Updated 7 ಡಿಸೆಂಬರ್ 2013, 9:17 IST
ಅಕ್ಷರ ಗಾತ್ರ

ಬೀಳಗಿ: ತಾಲ್ಲೂಕಿನ ಅನಗವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಲ್ಮೇಶ್ವರ ದೇವಸ್ಥಾನದ ಶಿಖರವನ್ನು ಕಳವು ಮಾಡಿಕೊಂಡು ಹೋದ ಕಳ್ಳರನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ಕಾರ್ಯಕರ್ತರು  ಹಾಗೂ ಅನಗವಾಡಿ ಗ್ರಾಮಸ್ಥರು ವ್ಯಾಪಾರ, ವಹಿವಾಟುಗಳನ್ನು ನಿಲ್ಲಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಧರಣಿ ನಡೆಸುವುದರೊಂದಿಗೆ ಪ್ರತಿಭಟನೆಗೆ ಕುಳಿತರು.

ಐದಾರು ತಿಂಗಳುಗಳ ಹಿಂದೆ ಇದೇ ಪುರಾತನ ಕಲ್ಮೇಶ್ವರ ದೇವಸ್ಥಾನದ ಕಲ್ಮೇಶ್ವರ ಪವಿತ್ರ ಲಿಂಗವನ್ನು ನಿಧಿ ಆಸೆಗಾಗಿ ಕಿತ್ತಿ ಹಾಕಿದ ನೆನಪು ಜನ ಮಾನಸದಿಂದ ಮಾಸುವುದರೊಳಗೆ ಮತ್ತೆ ಅದೇ ದೇವಸ್ಥಾನದ ಗೋಪುರದ ಕಲ್ಲುಗಳನ್ನು ಕಿತ್ತಿ ಹಾಕಿ ಇಡೀ ಶಿಖರವನ್ನು ಹೊತ್ತೊಯ್ದುದು ಗ್ರಾಮಸ್ಥರನ್ನು ಆತಂಕದಲ್ಲಿ ದೂಡಿದೆ ಎಂದು ಮಾತನಾಡಿದ ಮುಖಂಡರು ಮತ್ತೆ ಮತ್ತೆ ಹೀಗಾಗುತ್ತಿರುವುದು ಹಿಂದೂಗಳ ಭಾವನೆಗಳನ್ನು ಕೆರಳಿಸು­ವಂತ­ಹುದು ಎಂದು ಕಿಡಿ ಕಾರಿದರು.

ಹೊಸ ಪುನರ್ವಸತಿ ಕೇಂದ್ರದಲ್ಲಿಯ ದೇವಾಲಯಗಳಲ್ಲಿಯ ಅಭರಣಗಳು, ಬೆಳ್ಳಿಯ ಪಾದುಕೆಗಳು, ಬೆಳ್ಳಿಯ ತೊಟ್ಟಿಲುಗಳು ಕಳವಾಗುತ್ತಿರುವುದು ಕೂಡಾ ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ ಮುಖಂಡರು, ಇಂಥ ಕೃತ್ಯಗಳು ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರ ಸೀಮಿತಗೊಂಡಿದ್ದು ಚರ್ಚ್ ಹಾಗೂ ಮಸೀದಿಗಳಲ್ಲಿ ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಹೇಯ ಕೃತ್ಯವನ್ನು ಯಾರೇ ಮಾಡಿರಲಿ ಅಂಥ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ದುಷ್ಕರ್ಮಿಗಳನ್ನು ಬಂಧಿಸುವ ವರೆಗೆ ಇಲ್ಲಿನ ದೇವಾಲಯ­ಗಳಿಗೆ ಸೂಕ್ತ ರಕ್ಷಣೆ ನೀಡಬೇಕು, ಪುರಾತನ ದೇವಾಲಯವಾಗಿರುವ ಕಲ್ಮೇಶ್ವರ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆಗೆ ವಹಿಸಿ ಅಭಿವೃದ್ಧಿ ಕೈಗೊಳ್ಳಲು ಸೂಚಿಸಬೇಕೆಂದು ಸ್ಥಳಕ್ಕೆ ಬಂದ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಫಕೀರಯ್ಯ ಸ್ವಾಮೀಜಿ ಮಠಪತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭಾರತಿ ಮುತ್ತಲಗೇರಿ, ಪುಂಡಲೀಕ ದಳವಾಯಿ, ಸುರೇಶ ಜಿಡ್ಡಿಮನಿ, ಮುತ್ತಣ್ಣ ಅಂಗಡಿ, ರವಿ ಕುಂಚನೂರ, ಪ್ರೊ.ಎಸ್ ಕೆ ಮುತ್ತಗಿ, ಗೂಳಪ್ಪ ಬಿದರಿ, ಈರಣ್ಣ ತೋಟದ, ಸಂಜು ಗೌಡರ, ಶ್ರೀಶೈಲ ಹೂಣದ, ರಮೇಶ ಮೇಟಿ, ಅಡಿವೆಪ್ಪ ಮಂತ್ರಿ, ಎಂಎಸ್ ಹಿರೇಮಠ ಮುಂದಾಳತ್ವ­ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT