ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಿ ದುರುಪಯೋಗ ಆರೋಪದಲ್ಲಿ ಹುರುಳಿಲ್ಲ: ಸಿದ್ದೇಶ್ವರ

Last Updated 13 ಫೆಬ್ರುವರಿ 2011, 8:30 IST
ಅಕ್ಷರ ಗಾತ್ರ

ದಾವಣಗೆರೆ: ಸಂಸದರ ನಿಧಿಯನ್ನು ತಾವು ದುರ್ಬಳಕೆ ಮಾಡಿಕೊಂಡಿರುವುದಾಗಿ ಮಾಡಲಾಗಿರುವ ಆರೋಪವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಲ್ಲಗಳೆದಿದ್ದಾರೆ.ಇದಕ್ಕೆ ಸಮರ್ಥನೆಯಾಗಿ ಅವರು, ಲೋಕಸಭಾ ಸಚಿವಾಲಯದ ಹಕ್ಕುಬಾಧ್ಯತಾ ಸಮಿತಿಯ ನಿರ್ದೇಶಕ ರವೀಂದ್ರ ಗರಿಮೆಲ್ಲಾ ಅವರು ಫೆ. 10ರಂದು ತಮಗೆ ಕಳುಹಿಸಿದ ಪತ್ರವನ್ನು ‘ಪ್ರಜಾವಾಣಿ’ಗೆ ಬಿಡುಗಡೆ ಮಾಡಿದ್ದಾರೆ.

‘ಸಂಸದರು ಪ್ರದೇಶಾಭಿವೃದ್ಧಿ ನಿಧಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶ ಕಂಡುಬಂದಿಲ್ಲ. ಸಂಸದ ಸಿದ್ದೇಶ್ವರ ಅವರು 2010 ಡಿ. 13ರಂದು ಹಕ್ಕುಬಾಧ್ಯತಾ ಸಮಿತಿಗೆ ನೀಡಿದ ಉತ್ತರದಲ್ಲಿಯೂ ಆರೋಪ ನಿರಾಧಾರ ಎನ್ನುವುದನ್ನು  ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿದ್ದೇವೆ’ ಎಂದು ರವೀಂದ್ರ ಗರಿಮೆಲ್ಲಾ ಅವರು ಫೆ. 10ರಂದು ಸಂಸದ ಸಿದ್ದೇಶ್ವರ ಅವರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಂಸದ ಜಿ.ಎಂ. ಸಿದ್ದೇಶ್ವರ, ‘ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಸುವ ಅಧಿಕಾರ ಸಂಸದರಿಗೆ ಇರುವುದಿಲ್ಲ. ಅದು ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗೆ ಸೇರಿದ್ದು, ನಿಯಮಗಳಿಗೆ ಅನುಸಾರವಾಗಿ ಬಳಸುವುದು ಅವರ ಕರ್ತವ್ಯ. ಬಸ್‌ಶೆಲ್ಟರ್ ನಿರ್ಮಾಣದ ಕಾಮಗಾರಿ ಅನುಷ್ಠಾನದ ಕ್ರಮದಲ್ಲಿ ಲೋಪ ಆಗಿರಬಹುದು ಅಷ್ಟೇ. ಆದರೆ, ನಿಧಿ ದುರ್ಬಳಕೆ ಆಗಿಲ್ಲ. ಎಲ್ಲ ಶೆಲ್ಟರ್‌ಗಳು ಗುಣಮಟ್ಟದಲ್ಲಿ ನಿರ್ಮಾಣವಾಗಿದ್ದು, ಜನರು ಬಳಸುತ್ತಿದ್ದಾರೆ. ಕೆಲವರು ರಾಜಕೀಯ ಕಾರಣಗಳಿಗಾಗಿ ವಿಷಯವನ್ನು ಬಳಸಿಕೊಂಡರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಎಂ. ಸಿದ್ದೇಶ್ವರ ಅವರು 2004-09ರ ಅವಧಿಯಲ್ಲಿ ದಾವಣಗೆರೆ ಸಂಸದರಾಗಿದ್ದಾಗ ನಗರದ ವಿವಿಧೆಡೆ ಶ್ರೀಶೈಲ ಎಜುಕೇಶನ್ ಟ್ರಸ್ಟ್ ಮೂಲಕ 47 ಬಸ್‌ಶೆಲ್ಟರ್‌ಗಳನ್ನು ನಿರ್ಮಿಸಲಾಗಿತ್ತು. ಶ್ರೀಶೈಲ ವಿದ್ಯಾಸಂಸ್ಥೆಗೆ ಸಂಸದರು ಅಧ್ಯಕ್ಷರಾಗಿದ್ದು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ. ತಿಪ್ಪೇಸ್ವಾಮಿ, ಲೋಕಸಭಾ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು.

ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಉಪ ಕಾರ್ಯದರ್ಶಿ ಧರ್ಮಪಾಲ್ ಅವರು ಕಳೆದ ವರ್ಷ ನಗರಕ್ಕೆ ಭೇಟಿ ನೀಡಿ ಆರೋಪದ ಬಗ್ಗೆ ವಿಚಾರಣೆ ನಡೆಸಿ 2010ರ ಜುಲೈ 19ರಂದು ಲೋಕಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಅದರಲ್ಲಿ ಜಿಲ್ಲಾಡಳಿತವು ಕಾಮಗಾರಿ ಅನುಷ್ಠಾನದ ಕ್ರಮದಲ್ಲಿ ಲೋಪ ಎಸಗಿದೆ ಎಂದು ತಿಳಿಸಿದ್ದರು.

ವರದಿಯನ್ನು ಆಧರಿಸಿ ಕೇಂದ್ರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಉಪ ಮಹಾ ನಿರ್ದೇಶಕ ಡಾ.ರವೀಂದ್ರ ಸಿಂಗ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ನಿಧಿ ದುರುಪಯೋಗದಲ್ಲಿ ಸಂಸದರ ಪಾತ್ರದ ಬಗ್ಗೆ ಪ್ರಶ್ನಿಸಿದ್ದ ಎಂ.ಜಿ. ತಿಪ್ಪೇಸ್ವಾಮಿ ಅವರ ಪತ್ರ ಹಾಗೂ ಧರ್ಮಪಾಲ್ ಅವರ ವಿಚಾರಣಾ ವರದಿಯನ್ನು ‘ಸಂಸದರ ಪ್ರದೇಶಾಭಿವೃದ್ಧಿ ಯೋಜನಾ ಸಮಿತಿ’ಯ ಅಧಿಕಾರಿ ಟಿ.ಆರ್. ನಾರಿಯಲ್ ಅವರು ಲೋಕಸಭಾ ಸಚಿವಾಲಯದ ಹಕ್ಕುಬಾಧ್ಯತಾ ಸಮಿತಿಗೆ ಕಳುಹಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT