ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗಿಲ್ಲದ ಕಾನೂನು ನಮಗೇಕೆ?

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಒಂದು ಗಂಡು-, ಹೆಣ್ಣು ಒಟ್ಟಿಗೆ ಇದ್ದರೆ ಅಥವಾ ಅವರು ಒಳ್ಳೆಯ ಸ್ನೇಹಿತರಾಗಿ­ದ್ದರೆ ಅವರ ನಡುವೆ ಸಂಬಂಧ ಕಲ್ಪಿಸುತ್ತೀರಾ? ಒಂದು ಗಂಡಿಗೆ ಒಂದು ಹೆಣ್ಣನ್ನು ನೋಡಿದಾಗ ಅಥವಾ ಹೆಣ್ಣಿಗೆ ಗಂಡನ್ನು ನೋಡಿದ ತಕ್ಷಣ ಕೇವಲ ಕೆಟ್ಟ ಕಲ್ಪನೆ ಅಥವಾ ಅವರ ಮೇಲೆ ಬೇರೆ ತೆರನಾದ ಆಸೆ ಬರು­ತ್ತವೆಯೇ, ಇಲ್ಲವಲ್ಲ...? ಹಾಗಿದ್ದರೆ ಸಲಿಂಗ­ಕಾಮಿ­ಗಳು ಎಂದಾಕ್ಷಣ ಅವರನ್ನು ಹೆಣ್ಣುಮಕ್ಕಳೂ ಸೇರಿದಂತೆ ಎಲ್ಲರೂ ತುಚ್ಛವಾಗಿ ಕಾಣುವುದು ಯಾಕೆ?

ಗಂಡು- ಹೆಣ್ಣಿನ ನಡುವೆ  ಕೇವಲ ಗೆಳೆತನದ ಅಥವಾ ಒಳ್ಳೆಯ ಸ್ನೇಹದ ಸಂಬಂಧವೂ ಇರುವ ಹಾಗೆ, ನಮ್ಮಲ್ಲಿ ಹೆಣ್ಣು- ಹೆಣ್ಣಿನ ನಡುವೆ ಇರುತ್ತದೆ ಅಷ್ಟೇ. ಇದನ್ನು ಅರ್ಥ ಮಾಡಿಕೊಳ್ಳುವ ಬದಲು ನಮ್ಮನ್ನು ಬೇರೆಯ ರೀತಿ ನೋಡುವುದು ಸರಿಯೇ?

ವಯಸ್ಸಿಗೆ ಬಂದ ಹೆಣ್ಣಿಗೆ ಗಂಡಿನ ಜೊತೆ ಹಾಗೂ ಗಂಡಿಗೆ ಹೆಣ್ಣಿನ ಜೊತೆ ಮದುವೆ ಮಾಡಿ­ಕೊಳ್ಳುವ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡ­ಗುವ ಹಂಬಲ ಸಹಜ. ಇದನ್ನು ನಿಸರ್ಗ ಕ್ರಿಯೆ ಎನ್ನುತ್ತಾರೆ. ನನ್ನಂಥ ಸಲಿಂಗಕಾಮಿಗಳು ಹೆಣ್ಣಾಗಿ­ದ್ದರೂ ಗಂಡಿನ ಬದಲು ಹೆಣ್ಣನ್ನು ನೋಡಿದಾಗ ಅದೇ ಆಸೆ ಹುಟ್ಟುತ್ತದೆ.


ಅದು ನನಗೆ ನಿಸರ್ಗದತ್ತ­ವಾಗಿ ಬಂದದ್ದು. ಅದರಲ್ಲಿ ತಪ್ಪೇನಿದೆ? ಚಿಕ್ಕ ವಯಸ್ಸಿನಿಂದಲೂ ನನಗೆ ಇನ್ನೊಂದು ಹೆಣ್ಣನ್ನೇ ಮದುವೆಯಾಗಬೇಕು ಎಂಬ ಆಸೆ ಇತ್ತು. ಅದ್ಯಾಕೆ ಬಂತು, ಹೇಗೆ ಬಂತು ಗೊತ್ತಿಲ್ಲ. ಯಾರ ಬಲವಂತ­ದಿಂದಾಗಲೀ, ಯಾವುದೇ ಸನ್ನಿವೇಶದಿಂದಾಗಲೀ ಅಥವಾ ನನ್ನ ಕುಟುಂಬದಲ್ಲಿ ಯಾರೋ ಸಲಿಂಗ­ಕಾಮಿ­ಗಳು ಇದ್ದದ್ದರಿಂದಲೋ ಬಂದಿದ್ದಲ್ಲ ಅದು. ಒಟ್ಟಿನಲ್ಲಿ ಬಂತು ಅಷ್ಟೇ. ಅಂದ ಮಾತ್ರಕ್ಕೆ ಇನ್ನೊಂದು ಹೆಣ್ಣನ್ನು ಬಲವಂತದಿಂದ ಇದೇ ಕಾಯಕಕ್ಕೆ ಬರುವಂತೆ ಒತ್ತಾಯ ಮಾಡು­ತ್ತೇನೆ ಅಥವಾ ಎಲ್ಲ ಹೆಣ್ಣಿನ ಜೊತೆಯೂ ಲೈಂಗಿಕ ಕ್ರಿಯೆ­ಯಲ್ಲಿ ತೊಡಗಲು ಬಲವಂತ ಮಾಡುತ್ತೇನೆ ಎಂದೇನೂ ಅಲ್ಲ. ಅಲ್ಲಿ ಗಂಡು- -ಹೆಣ್ಣು, ಇಲ್ಲಿ ಹೆಣ್ಣು -ಹೆಣ್ಣು ಅಷ್ಟೇ. ಎಲ್ಲವೂ ನಿಸರ್ಗದತ್ತ­ವಾದದ್ದೇ. ಹಾಗಿದ್ದ ಮೇಲೆ ಇದು ನಿಸರ್ಗದ ವಿರುದ್ಧ ಎಂದು ಯಾವ ಆಧಾರದ ಮೇಲೆ ಸುಪ್ರೀಂಕೋರ್ಟ್ ಹೇಳಿ­ದೆಯೋ ಗೊತ್ತಿಲ್ಲ. ತುಂಬಾ ವಿಚಿತ್ರ ಎನಿಸುತ್ತಿದೆ.

ಯಾರನ್ನೂ ಬಲವಂತದಿಂದ ಮದುವೆ ಆಗು­ವಂತಿಲ್ಲ, ಬಲವಂತದಿಂದ ಲೈಂಗಿಕ ಕ್ರಿಯೆ­ಯಲ್ಲಿ ತೊಡಗು­ವಂತಿಲ್ಲ ಎನ್ನುವುದು ನಮ್ಮ ಕಾನೂನು. ಅದನ್ನೇ ನಾವೂ (ಸಲಿಂಗ­­ಕಾ­ಮಿಗಳು) ಮಾಡುತ್ತಿ­ದ್ದೇವೆ. ನಮ್ಮ ನಡುವೆಯೂ ಯಾವುದೂ ಬಲ­ವಂತ ಅಲ್ಲ. ಎಲ್ಲರೂ ಸ್ವಇಚ್ಛೆಯಿಂದಲೇ ಇದರಲ್ಲಿ ತೊಡಗಿ­ಕೊಂಡಿ­ರುವುದು. ನಾನು ಹಾಡು ಹೇಳುವ ಕಾರಣ ನನ್ನನ್ನು ಗಾಯಕಿ ಎನ್ನುತ್ತಾರೆ, ಕಣ್ಣು ಕಾಣ­ದಿದ್ದರೆ ಕುರುಡರು ಎನ್ನುತ್ತಾರೆ. ವಿಭಿನ್ನ ಲಿಂಗದವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅವರು ಪರ­ಲಿಂಗ ಕಾಮಿಗಳು. ಹಾಗೆಯೇ ಒಂದೇ ಲಿಂಗದವರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ­ದ್ದರೆ ಅವರು ಸಲಿಂಗಕಾಮಿಗಳು. ಪರಲಿಂಗಕಾಮ ಸಾಮಾನ್ಯ ಆಗಿರುವ ಕಾರಣ, ಅದು ಅಪರಾಧ ಅಲ್ಲ, ಆದರೆ ಸಲಿಂಗಕಾಮಿಗಳು ಅಲ್ಪಸಂಖ್ಯಾತರು ಎನ್ನುವ ಕಾರಣ ಮುಂದಿಟ್ಟುಕೊಂಡು ಅದನ್ನು ಅಪರಾಧ ಎಂದು ಪರಿಗಣಿಸುವುದು ಯಾವ ನ್ಯಾಯ?

ದೆಹಲಿ ಹೈಕೋರ್ಟ್ ತೀರ್ಪು ಬರುವ ಮೊದಲು ಕೂಡ 377ನೇ ಸೆಕ್ಷನ್ ಮುಂದಿಟ್ಟು­ಕೊಂಡು ನಮ್ಮ ಮೇಲೆ ಸಾಕಷ್ಟು ಬಾರಿ ದೌರ್ಜನ್ಯ ನಡೆದಿದೆ. ಎಲ್ಲರಿಗೂ ಬದುಕುವ ಹಕ್ಕಿದೆ. ಖಾಸಗಿ ಜೀವನದಲ್ಲಿ ಮಧ್ಯೆ ಪ್ರವೇಶ ಮಾಡುವಂತಿಲ್ಲ ಎಂಬ ಸಂವಿಧಾನದ ಅಂಶಗಳನ್ನು ಮುಂದಿಟ್ಟು­ಕೊಂಡು ಹೋರಾಟ ನಡೆಸುತ್ತಾ ಬಂದಿದ್ದೆವು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸಿಡಿಲು ಬಡಿದಂತಾಗಿದೆ.

ಮೊದಲೇ ಹೇಳಿದಂತೆ, ವಯಸ್ಸಿಗೆ ಬಂದ ಮೇಲೆ ನಾನು ಹೆಣ್ಣನ್ನೇ ಮದುವೆಯಾಗಬೇಕು ಎಂದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರು­ವಾಗಲೇ ಅಂದುಕೊಳ್ಳುತ್ತಿದ್ದೆ. ಆದರೆ ಮದುವೆ ವಯಸ್ಸಿಗೆ ಬಂದ ಮೇಲೆ ಮದುವೆ ಎಂಬ ಪದ ಕುರಿತೇ ಅಸಹ್ಯ ಹುಟ್ಟಲು ಆರಂಭ­ವಾಯಿತು. ಏಕೆಂದರೆ ನಾನು ಕೇವಲ ಸಲಿಂಗ­ಕಾಮಿಗಳ, ಹಿಜಡಾಗಳ ಪರ­ವಾಗಿ ಕೆಲಸ ಮಾಡು­ತ್ತಿಲ್ಲ. ಬದಲಿಗೆ ಶೋಷಣೆಗೆ ಒಳಗಾಗಿರುವ ಪ್ರತಿ­ಯೊಂದು ಮಹಿಳೆಯ ಪರ­ವಾಗಿ­ಯೂ ಹೋರಾ­ಟಕ್ಕೆ ಇಳಿದಿದ್ದೇನೆ. ಮಹಿಳೆ­ಯರಿಗೆ ಗಂಡಂದಿರು ಕೊಡುವ ಹಿಂಸೆಯನ್ನು ಕಣ್ಣಾರೆ ನೋಡಿದ್ದೇನೆ. ಗಂಡನ ಮನೆಯಲ್ಲಿನ ಹಿಂಸೆ ತಾಳದೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರ ಪಾಡು ಕೇಳಿದ್ದೇನೆ. ಇವೆಲ್ಲವುಗಳ ವಿರುದ್ಧ ಹೋರಾಟ ಮಾಡುತ್ತ ಬಂದ ನನಗೆ ಮದುವೆ ಬಗ್ಗೆ ನಂಬಿಕೆ ಹೊರಟು ಹೋಗಿದೆ.

ಅದು ಎಷ್ಟರಮಟ್ಟಿಗೆ ಎಂದರೆ ಗಂಡಿನ ಜೊತೆಯಷ್ಟೇ ಅಲ್ಲ... ಹೆಣ್ಣಿನ ಜೊತೆನೇ ಮದುವೆ­ಯಾಗಬೇಕು ಎಂಬ ವರ್ಷಗಳ ಆಸೆ ಕೂಡ ಈ ಅಸಹ್ಯ ವಾತಾವರಣದಿಂದ ಹೊರಟು ಹೋಯಿತು. ನಾನು ಹೀಗೆ ಹೇಳಿದರೆ ‘ಅಯ್ಯೋ ಮದುವೆ ಬಗ್ಗೆ ಹೀಗೆಲ್ಲ ಅಂದು­ಕೊಂಡಿದ್ದರೆ ಅದು ತಪ್ಪು. ನಾನು ಚೆನ್ನಾಗಿ­ದ್ದೇನಲ್ಲ’ ಎಂದು ತಕ್ಷಣ ಯಾರಿಂದಾದರೂ ಉತ್ತರ ಬಂದೀತು. ಆದರೆ ಅಂಥವರ ಬಗ್ಗೆ ನಾನು ಹೇಳು­ತ್ತಿಲ್ಲ. ಯಾಕೆಂದರೆ ನಮ್ಮಲ್ಲಿ ಅರ್ಧಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಬೀದಿಬದಿಗಳಲ್ಲಿ ವಾಸ ಮಾಡುವ­ವರು. ಅವರ ಪಾಡು ಏನು ಎಂಬುದನ್ನು ಕಣ್ಣಾರೆ ಕಂಡಾಕೆ ನಾನು.  ನಾನು ಗಂಡನ್ನಾಗಲೀ, ಹೆಣ್ಣ­ನ್ನಾಗಲೀ ವಿವಾಹವಾಗಿಲ್ಲ. ಆದರೂ ಚೆನ್ನಾಗಿಯೇ ಇದ್ದೇನೆ.

ನನ್ನ ಅಮ್ಮ ಕನಕಾಮೂರ್ತಿ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತೆ. ನಾನು ಅವರಿಂದಾಗಲೀ, ನನ್ನ ತಂದೆ­ಯಿಂದಾಗಲೀ ನನ್ನ ಸಲಿಂಗಕಾಮದ ಬಗ್ಗೆ ಏನನ್ನೂ ಮುಚ್ಚಿಟ್ಟಿಲ್ಲ. ನಾನು ಸಲಿಂಗಕಾಮಿ ಎನ್ನುವುದು ತಿಳಿದ ದಿನವೇ ಅದನ್ನು ಅವರ ಮುಂದೆ ವಿವರಿಸಿದ್ದೆ. ಮೊದಮೊದಲು ಇದನ್ನು ಒಪ್ಪಿ­ಕೊಳ್ಳಲು ಅವರಿಗೆ ಕಷ್ಟವಾಯಿತು. ಗಂಡಿನ ಜೊತೆ ಮದುವೆ ಮಾಡಲು ನೋಡಿದ್ದರು. ಆಮೇಲೆ ಅವರೂ ನನ್ನ ವಾದವನ್ನು ಒಪ್ಪಿ, ಸಲಿಂಗಕಾಮಕ್ಕೆ ಮನಪೂರ್ವಕವಾಗಿ ಒಪ್ಪಿಗೆ ನೀಡಿದ್ದಾರೆ. ‘ಯಾರ ಹಕ್ಕನ್ನು ಯಾರೂ ಕಸಿದು­ಕೊಳ್ಳು­ವಂತಿಲ್ಲ.  ಅದು ಮಗಳಾಗಲೀ, ಬೇರೆ ಯಾರೇ ಆಗಲಿ, ಅವರ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧರಿಸುವ ಹಕ್ಕು ಅವರಿಗೇ ಇದೆ’ ಎನ್ನುತ್ತಾರೆ ನನ್ನ ಪೋಷಕರು. ಹೆತ್ತ ಅಪ್ಪ-ಅಮ್ಮಂದಿರೇ ನನ್ನ ಜೀವನ­ವನ್ನು ನಾನು ಅಂದುಕೊಂಡ ಹಾಗೆ ಜೀವಿಸಲು ಬಿಟ್ಟಿದ್ದರೆ ನ್ಯಾಯಾಲಯ ಆ ಹಕ್ಕನ್ನು ಕಸಿದುಕೊಳ್ಳುವುದು ಎಂದರೆ ಏನರ್ಥ?

ಸಲಿಂಗಕಾಮಿ ಎಂದ ತಕ್ಷಣ ಅವಳೇನೂ ಪುರುಷ ದ್ವೇಷಿ ಆಗ­ಲಾ­ರಳು. ನನಗೂ ಸಾಕಷ್ಟು ಪುರುಷ ಸ್ನೇಹಿತ­ರಿದ್ದಾರೆ. ಅವರ ಜೊತೆಯೂ ಕೆಲಸ ಮಾಡು­ತ್ತಿದ್ದೇನೆ. ಹಾಗೆಯೇ ಮಹಿಳಾ ಸ್ನೇಹಿತರೂ ಸಾಕಷ್ಟು ಇದ್ದಾರೆ. ಅಂದ ಮಾತ್ರಕ್ಕೆ ಎಲ್ಲ ಮಹಿಳೆ­ಯರನ್ನೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳು­ತ್ತೇನೆ ಎಂದಾ­ಗಲೀ, ಎಲ್ಲರ ಮೇಲೂ ಆಕರ್ಷಣೆ ಇದೆಯೆಂದಾ­ಗಲೀ ಅರ್ಥವಲ್ಲ. ಸಾಮಾನ್ಯ ಜನರಂತೆ ನಾವು ಕೂಡ.

(ನಿರೂಪಣೆ: ಸುಚೇತನಾ ನಾಯ್ಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT