ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಿಷದಲ್ಲಿ ಒಲಿಯುವ ತಾಯಿ

Last Updated 2 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

‘ಉನ್ಮೇಷ ನಿಮಿಷೋತ್ಪನ್ನ ವಿಪನ್ನ ಭುವನಾವಲಿ...’ (ಕಣ್ಮುಚ್ಚಿ ತೆರೆಯುವುದರ ಒಳಗೆ-ನಿಮಿಷ ಮಾತ್ರದಲ್ಲಿ- ವಿಪತ್ತನ್ನು ಕಳೆಯುತ್ತಾಳೆ).
ಇದು ಶ್ರೀರಂಗಪಟ್ಟಣದಿಂದ ಕೂಗಳತೆ ದೂರದಲ್ಲಿರುವ ನಿಮಿಷಾಂಬ ಅಮ್ಮನನ್ನು ಕುರಿತ  ಶ್ಲೋಕ. ಲಲಿತಾ ಸಹಸ್ರನಾಮದ 281ನೇ ಸಾಲಿನ ಈ ಶ್ಲೋಕ ನಿಮಿಷಾಂಬೆಯ ಮಹಿಮೆಯನ್ನು ಸಾರುತ್ತದೆ. ಬೇಡಿ ಬರುವ ಭಕ್ತರ ಇಷ್ಟಾರ್ಥಗಳು ಕ್ಷಣ ಮಾತ್ರದಲ್ಲಿ ಸಿದ್ಧಿಸುವಂತೆ ತಾಯಿ ನಿಮಿಷಾಂಬೆ ಕರುಣಿಸುತ್ತಾಳೆ ಎಂಬುದು ನಂಬಿಕೆ.

ನಿಮಿಷಾಂಬೆಯ ಶ್ರೀಚಕ್ರಕ್ಕೆ ದೈವೀಶಕ್ತಿದೆ. ಇದು ಭೂ ಪ್ರಸ್ತಾರದ ಕೃಷ್ಣ ಶಿಲೆಯಲ್ಲಿ ಕೆತ್ತಲ್ಪಟ್ಟಿದ್ದು, ‘ಅ’ ಕಾರದಿಂದ ‘ಕ್ಷ’ಕಾರದ ವರೆಗೆ ಅಪೂರ್ವ ಬೀಜಾಕ್ಷರಗಳಿಂದ ಕೂಡಿದೆ. ಜತೆಗೆ ಅಪರೂಪ ಎನ್ನುವಂತಹ ಸೂರ್ಯ, ಗಣಪತಿ, ಶಿವ, ವಿಷ್ಣು, ಅಂಬಿಕಾ ವಿಗ್ರಹಗಳನ್ನು ಇಲ್ಲಿ ಕೆತ್ತಲಾಗಿದೆ. ಇದಕ್ಕೆ ಹೆಚ್ಚು ಮಹತ್ವವಿದೆ ’ ಎನ್ನುತ್ತಾರೆ ದೇವಾಲಯದ ಅರ್ಚಕ ಮಹಾಬಲೇಶ್ವರ ಭಟ್ಟರು.

ಈ ದೇವಸ್ಥಾನ 1970ರ ನಂತರ ಹೆಚ್ಚು ಪ್ರವರ್ಧಮಾನಕ್ಕೆ ಬಂತು. ನಿಮಿಷಾಂಬ ದೇವಸ್ಥಾನ ಇದೀಗ ಹೊರನಾಡ ಭಕ್ತರನ್ನೂ ಸೆಳೆಯುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿಯಲ್ಲಿ  ದೇವಿಯ ಭಕ್ತರಿದ್ದಾರೆ. ಮಲೇಶಿಯಾ, ಸಿಂಗಪೂರ, ಕೆನಡಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಈ ಕ್ಷೇತ್ರಕ್ಕೆ ಬಂದು ತಾಯಿಯ ದರ್ಶನ ಪಡೆಯುತ್ತಾರೆ.

ಪ್ರತಿ ಹುಣ್ಣಿಮೆ ಹಾಗೂ ವೈಶಾಖ ಶುದ್ಧ ದಶಮಿ (ನಿಮಿಷಾಂಬ ಜಯಂತಿ)ಯಂದು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ. ದೇವಸ್ಥಾನದಲ್ಲಿ ನಿತ್ಯ ಅರ್ಚನೆ, ತ್ರಿಶತಿ, ಸಹಸ್ರನಾಮ, ಸಂಕಲ್ಪ, ಮಹಾ ಸಂಕಲ್ಪ, ಲಲಿತಾ ಅಷ್ಟೋತ್ತರ ಪೂಜೆಗಳು ನಡೆಯುತ್ತವೆ.

ದೇವಸ್ಥಾನಕ್ಕೆ ಬರಲು ಆಗದವರು  ಹಣ ಪಾವತಿಸಿದರೆ ಅವರ ಹೆಸರಿನಲ್ಲಿ ಪಂಚಾಮೃತ ಅಭಿಷೇಕ, ಪ್ರದೋಷ ಅಭಿಷೇಕ, ಸುವರ್ಣ ಪುಷ್ಪಾರ್ಚನೆ, ಏಕಾದಶ ರುದ್ರಾಭಿಷೇಕ, ದುರ್ಗಾಶಕ್ತಿ ಪಾರಾಯಣ ನಡೆಸಲಾಗುತ್ತದೆ. ಅಂಚೆ ಮೂಲಕ ಪ್ರಸಾದವನ್ನು ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಇದೆ. ಮುಂಗಡ ಅರ್ಚನೆ, ಅಭಿಷೇಕಗಳಿಗೆ ದೇವಾಲಯ ಅಡಳಿತಾಧಿಕಾರಿಯವರನ್ನು (ದೂ:08236-252640) ಸಂಪರ್ಕಿಸಬಹುದು.

ಶುಕ್ರವಾರ, ಭಾನುವಾರ ಹಾಗೂ ಮಂಗಳವಾರಗಳಂದು ಹೆಚ್ಚಿನ ಸಂಖ್ಯೆ ಭಕ್ತರು ಇಲ್ಲಿಗೆ ಬರುತ್ತಾರೆ. ನಿತ್ಯ ಮುಂಜಾನೆ 6ರಿಂದ ರಾತ್ರಿ 8.30ರವರೆಗೆ ದೇವಸ್ಥಾನ ತೆರೆದಿರುತ್ತದೆ. ಹುಣ್ಣಿಮೆ ಹಾಗೂ ಧನುರ್ಮಾಸದಲ್ಲಿ ಮುಂಜಾನೆ 4 ಗಂಟೆಗೆ ಹಾಗೂ ಮಾಘ ಹುಣ್ಣಿಮೆಯಂದು ಮುಂಜಾನೆ 12.30ಕ್ಕೆ ಪೂಜೆಗಳು ಆರಂಭವಾಗುತ್ತವೆ.

‘108 ಕಳಶಾಭಿಷೇಕ’ ನಿಮಿಷಾಂಬ ಜಯಂತಿಯಂದು ನಡೆಯುವ ವಿಶಿಷ್ಟ ಆಚರಣೆ. ದಸರಾ ಹಬ್ಬದ ಒಂಬತ್ತು ದಿನಗಳೂ ಇಲ್ಲಿ ವಿಶೇಷ ಪೂಜೆ ನಡೆಯುತ್ತವೆ. ಭಕ್ತರು ಮುಡಿಪು ಕಟ್ಟಿಕೊಂಡು ಸೀರೆ, ಕುಪ್ಪಸ ಹಾಗೂ ನಿಂಬೆ ಹಣ್ಣಿನ ಸಿಪ್ಪೆಯ ದೀಪ ಹಚ್ಚಿ ಸೇವೆ ಸಲ್ಲಿಸುತ್ತಾರೆ.

ನಿಮಿಷಾಂಬ ದೇವಸ್ಥಾನ  ಶ್ರೀರಂಗಪಟ್ಟಣದಿಂದ 2 ಕಿ.ಮೀ.ದೂರದಲ್ಲಿದೆ. ಮೈಸೂರಿನಿಂದ ನೇರ ಬಸ್ (ನಂ.316) ಸೌಕರ್ಯವಿದೆ. ಶ್ರೀರಂಗಪಟ್ಟಣದಿಂದ ಆಟೋಗಳ ಸೌಲಭ್ಯವಿದೆ. ಹುಣ್ಣಿಮೆ ದಿನ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 3.30ರ ವರೆಗೆ ಊಟದ ವ್ಯವಸ್ಥೆ ಇರುತ್ತದೆ. ಆದರೆ ಇತರ ದಿನಗಳಲ್ಲಿ ಊಟ ಹಾಗೂ ವಸತಿಗೆ ಶ್ರೀರಂಗಪಟ್ಟಣದಲ್ಲಿ ಹೋಟೆಲ್ ಹಾಗೂ ಲಾಡ್ಜ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT