ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಕ್ಕಳು ಎಷ್ಟು ಹೊತ್ತು ನಿದ್ರೆ ಮಾಡುತ್ತಾರೆ?

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಳ್ಳಂಬೆಳಿಗ್ಗೆ ಅಮ್ಮನ ಕೂಗಿಗೆ, ಒಲ್ಲದ ಮನಸ್ಸಿನಿಂದ ಏಳುವ ಪುಟಾಣಿಗಳು ಹಲ್ಲುಜ್ಜುವುದರಿಂದ ಹಿಡಿದು ಶಾಲೆಯ ಬಸ್ ಏರುವ ತನಕ ಅಕ್ಷರಶಃ ನಿದ್ದೆಯ ಮಂಪರಿನಲ್ಲಿಯೇ ಇರುತ್ತವೆ. ತರಗತಿಯಲ್ಲಿ ತೂಕಡಿಸುತ್ತಲೇ ಪಾಠ ಕೇಳುತ್ತವೆ. ಬೆಳೆಯುವ ಮಕ್ಕಳ ಇಂಥ ಸ್ಥಿತಿಗೆ ಕಾರಣ ನಿದ್ರೆಯ ಕೊರತೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲ; ಅವರ ಕಲಿಕೆಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ಪೋಷಕರೇ ಇಲ್ಲಿ ಕೇಳಿ. ನಿಮ್ಮ ಮಕ್ಕಳು ಎಷ್ಟು ಹೊತ್ತು ನಿದ್ದೆ ಮಾಡುತ್ತವೆ?  ಮತ್ತು ಅವರಿಗೆ ಎಷ್ಟು ಗಂಟೆಗಳ ನಿದ್ರೆಯ ಅಗತ್ಯವಿದೆ ಎನ್ನುವುದನ್ನು ಎಂದಾದರೂ ಆಲೋಚಿಸಿದ್ದೀರಾ?
ಹೌದು, ಚಿಕ್ಕ ಮಕ್ಕಳು, ವಾರಾಂತ್ಯವನ್ನೂ ಬಿಡದೇ, ಪ್ರತಿದಿನ ಬೆಳಿಗ್ಗೆ ತಮ್ಮ ಹೆತ್ತವರನ್ನು ಎಬ್ಬಿಸುವುದು ಅನೇಕ ಮನೆಗಳಲ್ಲಿ ಕಂಡುಬರುವ ದೃಶ್ಯ. ಆದರೆ ಮಕ್ಕಳು ಯಾವಾಗ ಯೌವನಾವಸ್ಥೆಗೆ ಬರುತ್ತಾರೋ ಆವಾಗ ಈ ದೃಶ್ಯ ಕೊಂಚ ಬದಲಾಗುತ್ತದೆ! ಸೂರ್ಯ ನಡುನೆತ್ತಿಗೆ ಬರುವ ತನಕವೂ ಹೊದ್ದು ಮಲಗುವ ಮಕ್ಕಳನ್ನು ಪೋಷಕರು ಬಡಿದು ಎಚ್ಚರಿಸಬೇಕಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಾದರೆ ಅವರನ್ನು ಬೆಳ್ಳಂಬೆಳಿಗ್ಗೆ ಎಬ್ಬಿಸಿ ಶಾಲೆಗೆ ಕಳಿಸುವುದು ಅಮ್ಮಂದಿರಿಗೆ ಹರಸಾಹಸದ ಕೆಲಸವೇ ಸರಿ.

ನಿದ್ರೆಯ ಕೊರತೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳು ಗಂಭೀರ. ಸಾಕಷ್ಟು ನಿದ್ರೆ ಮಾಡದ ಮಕ್ಕಳಲ್ಲಿ ಅಭ್ಯಾಸದಲ್ಲಿ ಹಿನ್ನಡೆ, ಖಿನ್ನತೆ ಇವೇ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

ಹಾಗಾದರೆ ಈ ಸಮಸ್ಯೆಗೆ ಪರಿಹಾರವಾದರೂ ಏನು? ಇಲ್ಲಿ ನಾನೊಂದು ಸಲಹೆ ಕೊಡುತ್ತೇನೆ. ಒಂದು ಅಥವಾ ಎರಡು ವಾರಗಳ ಕಾಲ ನೀವು ಇದನ್ನು ಪಾಲಿಸಿರಿ. ಅಂದರೆ ಶಾಲೆಗೆ ರಜೆ ಶುರುವಾಗುವ ಮುನ್ನ ಹಾಗೂ ಶಾಲೆ ಪುನರಾರಂಭಗೊಂಡ ಬಳಿಕ ನೀವು ಈ ವಿಧಾನವನ್ನು ಅನುಸರಿಸಬೇಕು. ಇದು ತುಂಬಾ ಸರಳವಾಗಿದ್ದು, ನೀವು ಮಾಡಬೇಕಾಗಿರುವುದು ಇಷ್ಟೆ. ನಿಮ್ಮ ಮಕ್ಕಳಿಗಾಗಿ 3 ಕಾಲಂನ ನಿದ್ರಾ ದಿನಚರಿಯನ್ನು ಶುರುಮಾಡಿ. ಅಥವಾ ಅವರಿಗೇ ಇದನ್ನು ಮಾಡಲು ಹೇಳಿ. ಶಾಲಾ ದಿನಗಳಲ್ಲಿ, ವಾರಾಂತ್ಯದಲ್ಲಿ ಅಥವಾ ರಜಾಕಾಲದಲ್ಲಿ  ಮಕ್ಕಳು ಎಷ್ಟು ಹೊತ್ತಿಗೆ ನಿದ್ರೆ ಮಾಡುತ್ತಾರೆ ಎಂಬುದನ್ನು ಒಂದು ಕಾಲಂನಲ್ಲಿ ಬರೆದಿಟ್ಟುಕೊಳ್ಳಿ. ಮಲಗಿದ ತಕ್ಷಣ ನಿದ್ರೆ ಹತ್ತಲು ಎಷ್ಟು ಸಮಯ ಹಿಡಿಯುತ್ತದೆ ಎನ್ನುವುದನ್ನು ಎರಡನೆಯ ಕಾಲಂನಲ್ಲಿ ಬರೆದಿಟ್ಟುಕೊಳ್ಳಿ. ಮೂರನೆಯ ಕಾಲಂನಲ್ಲಿ ಬೆಳಿಗ್ಗೆ ಏಳುವ ಸಮಯವನ್ನು ನಮೂದಿಸಿ. ಅಂದರೆ ಮಕ್ಕಳು ತಾವಾಗಿಯೇ ಎಚ್ಚರವಾಗುತ್ತಾರೋ ಅಥವಾ ಅಲರಾಂ ಸಹಾಯ ಬೇಕೋ ಇತ್ಯಾದಿ ವಿವರಗಳು ಇದರಲ್ಲಿ ಇರಲಿ.

ಈ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹದಿಹರೆಯದ ಮಕ್ಕಳು ಬೆಳಿಗ್ಗೆ ಏಳುವುದಕ್ಕೆ, ಸ್ನಾನ ಮಾಡುವುದಕ್ಕೆ, ತಿಂಡಿತಿನ್ನುವುದಕ್ಕೆ ಹಾಗೂ ಶಾಲೆಗೆ ಸಿದ್ಧರಾಗುವುದಕ್ಕೆ ಯಾಕೆ ಕಷ್ಟಪಡುತ್ತಾರೆ ಎನ್ನುವುದು ಅವರ ಹೆತ್ತವರಿಗೆ ಬಹುಶಃ ಅರ್ಥವಾಗಬಹುದೇನೋ!

ನ್ಯಾಶನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ದಿನದ 24 ಗಂಟೆಯಲ್ಲಿ ನವಜಾತ ಶಿಶುವಿಗೆ  12 ರಿಂದ 18 ತಾಸು ನಿದ್ರೆ ಬೇಕಾಗುತ್ತದೆ. ಇನ್ನು ಒಂದರಿಂದ ಮೂರುವರ್ಷದ ಮಕ್ಕಳಿಗೆ 12 ರಿಂದ 14 ತಾಸು ನಿದ್ರೆ ಸಾಕಾಗಾಗುತ್ತದೆ. ನರ್ಸರಿಗೆ ಹೋಗುವ  ಮಕ್ಕಳಿಗೆ  (3-5 ವರ್ಷ) 11 ರಿಂದ 13 ತಾಸು ನಿದ್ರೆಯ ಅಗತ್ಯವಿದೆ. ಶಾಲೆಗೆ ಹೋಗುವ ಮಕ್ಕಳಿಗೆ 10 ರಿಂದ 11 ತಾಸು ನಿದ್ರೆ ಬೇಕೇ ಬೇಕು. 9 ಹಾಗೂ 10 ವರ್ಷದ ಮಕ್ಕಳಿಗೆ ಕೇವಲ 8 ತಾಸುಗಳ ನಿದ್ರೆ ಸಾಕಾಗುತ್ತದೆ.

ಹದಿಹರೆಯದ ಮಕ್ಕಳಿಗೆ ವಯಸ್ಕರಿಗಿಂತಲೂ ಹೆಚ್ಚಿನ ಅವಧಿಯ ನಿದ್ರೆ ಅಗತ್ಯವಿದೆ. ಹದಿಹರೆಯದ ಮಕ್ಕಳು ರಾತ್ರಿ 11 ಗಂಟೆ ಅಥವಾ ಅದಕ್ಕಿಂತಲೂ ತಡವಾಗಿ ನಿದ್ರೆ ಮಾಡುತ್ತಾರೆ ಎನ್ನುವುದನ್ನು  ನಿದ್ರೆಗೆ ಸಂಬಂಧಿಸಿದ ಅಧ್ಯಯನಗಳು ಪದೇ ಪದೇ ಹೇಳುತ್ತ ಬಂದಿವೆ. ಇನ್ನು ಇವರಲ್ಲಿ ಬಹುತೇಕರು ಬೆಳಿಗ್ಗೆ 6 ಅಥವಾ ಅದಕ್ಕಿಂತಲೂ ಮೊದಲು ಏಳಬೇಕಾಗಿ ಬರಬಹುದು. ಯಾಕೆಂದರೆ ಸಾಮಾನ್ಯವಾಗಿ ಶಾಲೆ ಶುರುವಾಗುವ ಸಮಯ ಬೆಳಿಗ್ಗೆ 7-30 ಅಥವಾ 8 ಗಂಟೆಗೆ. ಹಾಗಾಗಿ ಸಾಕಷ್ಟು ನಿದ್ರೆ ಆಗಿರದ ಕಾರಣ ಅನೇಕ ಮಕ್ಕಳು ಶಾಲೆಯಲ್ಲಿ ತೂಕಡಿಸುತ್ತ ಇರುತ್ತವೆ. ಇನ್ನು ಎಚ್ಚರದ ಸ್ಥಿತಿಯಲ್ಲಿದ್ದರೂ, ಅವರಲ್ಲಿ ಪಾಠವನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ. ಸಮೀಕ್ಷೆಯೊಂದು ಹೇಳುವ ಪ್ರಕಾರ, ಶೇ 90ಕ್ಕಿಂತಲೂ ಹೆಚ್ಚಿನ ಮಕ್ಕಳು ರಾತ್ರಿ 9 ತಾಸುಗಳಿಗಿಂತಲೂ ಕಡಿಮೆ ಅವಧಿ ನಿದ್ರೆ ಮಾಡುತ್ತವೆ. ಶೇ 10 ರಷ್ಟು ಮಕ್ಕಳು 6 ಗಂಟೆ ಕೂಡ ನಿದ್ರೆ ಮಾಡುವುದಿಲ್ಲ.

ಕಂಪ್ಯೂಟರ್, ಐಪಾಡ್ ಎಷ್ಟು ಕಾರಣ?
ಈಗ ಕಂಪ್ಯೂಟರ್, ಸ್ಮಾರ್ಟ್ ಫೋನ್ ಹಾಗೂ ಐಪಾಡ್‌ಗಳಂಥ ಆಧುನಿಕ ಸಾಧನಗಳು ಮಕ್ಕಳನ್ನು ಆಕರ್ಷಿಸಿ, ಅವು ರಾತ್ರಿ ತಡವಾಗಿ ಮಲಗುವುದಕ್ಕೆ ಕಾರಣವಾಗುತ್ತಿವೆ ಎಂದು ದೂಷಿಸಬಹುದು. ಆದರೆ 1998ರಲ್ಲಿ ನಡೆದ ಅಧ್ಯಯನವೊಂದು ಹೇಳುವ ಪ್ರಕಾರ, ಆಗಲೂ ಹದಿಹರೆಯದ ಮಕ್ಕಳು ನಿದ್ರಾಹೀನತೆಯಿಂದ ಬಳಲುತ್ತಿದ್ದವಂತೆ. ಬ್ರೌನ್ ವಿಶ್ವವಿದ್ಯಾಲಯದ ಇಬ್ಬರು ತಜ್ಞರು ಈ ಸಂಬಂಧ ಅಧ್ಯಯನವೊಂದನ್ನು ನಡೆಸಿದ್ದರು. ಇದಕ್ಕಾಗಿ ಸುಮಾರು 3,000 ಕ್ಕೂ ಅಧಿಕ ಹದಿಹರೆಯದ ಮಕ್ಕಳನ್ನು ಆಯ್ದುಕೊಳ್ಳಲಾಗಿತ್ತು. ಶಾಲೆಯಲ್ಲಿ ಕಳಪೆ ಸಾಧನೆ ಮಾಡುವುದಕ್ಕೆ ನಿದ್ರೆಯ ಕೊರತೆಯೂ ಒಂದು ಎನ್ನುವುದು ಇದರಿಂದ ಗೊತ್ತಾಯಿತು.  ಇತರ ಮಕ್ಕಳಿಗೆ ಹೋಲಿಸಿದರೆ ಓದಿನಲ್ಲಿ ಹಿಂದಿರುವ ಈ ಮಕ್ಕಳ ನಿದ್ದೆಯ ಅವಧಿಯು ಸಾರಸರಿ ಶೇ 25 ರಷ್ಟು ಕಡಿಮೆ ಇತ್ತು. ಅಲ್ಲದೇ ಅವರು ಇತರ ಮಕ್ಕಳಿಗಿಂತ  40 ನಿಮಿಷ ತಡವಾಗಿ ಮಲಗುತ್ತಿದ್ದರು. ಇನ್ನೊಂದು ಅಧ್ಯಯನದಲ್ಲಿ 40 ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೊಳಪಡಿಸಲಾಗಿತ್ತು. ಇವರಲ್ಲಿ ಅರ್ಧಕ್ಕರ್ಧ ವಿದ್ಯಾರ್ಥಿಗಳು ಬೆಳಿಗ್ಗೆ 7.20 ಕ್ಕೆ ತರಗತಿಗೆ ತೆರಳುವವರಾಗಿದ್ದರು. ಆದರೆ ಅವರಿನ್ನೂ ನಿದ್ದೆಯ ಗುಂಗಿನಲ್ಲಿಯೇ ಇರುತ್ತಿದ್ದರು. `ಈ ಸಮಸ್ಯೆಗಳನ್ನು ಮನಗಂಡು ಕೆಲವೊಂದು ಶಿಕ್ಷಣ ಸಂಸ್ಥೆಗಳು ಪ್ರೌಢಶಾಲಾ ಅವಧಿಯನ್ನು ತುಸು ತಡವಾಗಿ ಶುರುಮಾಡಲು ಆರಂಭಿಸಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗಿವೆ. ಇದರಿಂದಾಗಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ~ ಎನ್ನುತ್ತಾರೆ  ಬ್ರೌನ್ ವಿಶ್ವವಿದ್ಯಾಲಯದ ನಿದ್ರಾ ತಜ್ಞೆ  ಮೇರಿ ಎ ಕಾರ್‌ಸ್ಕಡನ್.

ಹದಿಹರೆಯದವರ ನಿದ್ರಾ ಸಮಸ್ಯೆಗೆ ಇಲ್ಲಿವೆ ಕೆಲವೊಂದು ಪರಿಹಾರಗಳು:
ಶಾಲಾ ಅವಧಿ ತಡವಾಗಿ ಶುರುವಾಗಬೇಕು.
ವಿದ್ಯಾರ್ಥಿಗಳಿಗೆ ಸಾಯಂಕಾಲದ ಹೊತ್ತು ನಡೆಸುವ ಪಠ್ಯೇತರ ಚಟುವಟಿಕೆಗಳು ಸೀಮಿತವಾಗಿರಬೇಕು.
ಶಾಲಾ ಪಠ್ಯದಲ್ಲಿ ನಿದ್ರೆಯ ಮಹತ್ವವನ್ನು ತಿಳಿಸಿಕೊಡುವ ವಿಷಯ ಕೂಡ ಅಡಕವಾಗಿರಬೇಕು.
ಪೋಷಕರು ತಮ್ಮ ಮಕ್ಕಳು ಮಲಗುವುದಕ್ಕೆ ಸೂಕ್ತ ಸಮಯವನ್ನು ನಿಗದಿಪಡಿಸಬೇಕು.
 ಮಕ್ಕಳು ಸಂಜೆ ವೇಳೆ ಪ್ರಖರವಾದ ಬೆಳಕಿನಿಂದ ಆದಷ್ಟು ದೂರ ಇರುವಂತೆ ನೋಡಿಕೊಳ್ಳಬೇಕು.

(ನ್ಯೂಯಾರ್ಕ್ ಟೈಮ್ಸ)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT