ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಹೃದಯ ಪ್ರಶ್ನೋತ್ತರ

Last Updated 25 ಮೇ 2012, 19:30 IST
ಅಕ್ಷರ ಗಾತ್ರ

ಬಿ.ರಂಗಪ್ಪ - 65 ವರ್ಷ, ಭದ್ರಾವತಿ.
*ನಾನು ಸೆಪ್ಟೆಂಬರ್ 2010ರಲ್ಲಿ ಆಂಜಿಯೋಗ್ರಾಮ್ ಮಾಡಿಸಿಕೊಂಡಿದ್ದೇನೆ. ಅದರ ರಿಪೋರ್ಟ್ ಪ್ರಕಾರ ಯಾವುದೇ ತೊಂದರೆ ಕಂಡುಬಂದಿರುವುದಿಲ್ಲ.ಆದರೂ ನನಗೆ 1/2 ಕಿ.ಮಿ. ನಡೆದರೆ ಸುಸ್ತಾಗುತ್ತದೆ ಮತ್ತು ಆ ಸಂದರ್ಭದಲ್ಲಿ ಎದೆನೋವು ಬರುವುದಿಲ್ಲ, ಉಸಿರಾಟಕ್ಕೆ ತೊಂದರೆಯಾದಂತಾಗುತ್ತದೆ.  ಪರಿಹಾರ ತಿಳಿಸಿ.

ಸಾಮಾನ್ಯವಾಗಿ ಹೃದಯಕ್ಕೆ ಸಂಬಂಧಪಟ್ಟ ನೋವಾದರೆ, ಎದೆಯ ಎಡಭಾಗದಲ್ಲಿ ಅಥವಾ ಮಧ್ಯಭಾಗದಲ್ಲಿ ಎದೆನೋವು/ಉರಿ, ಭಾರವಾದ ಹಾಗೆ ಆಗುವುದು, ಒತ್ತಿದ ಹಾಗೆ ಆಗುತ್ತದೆ.  ಕೆಲವರಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಾಗ/ ಮಲಗಿದ್ದಾಗ/ ಕೂತಿದ್ದಾಗ ಎದೆಯ ನೋವು,  ಭುಜ ನೋವಿದ್ದು, ನಡೆಯುವಾಗ ನೋವಿಲ್ಲದ್ದಿದ್ದರೆ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಅಲ್ಲ.

ಆದರೆ ನಿಮಗೆ ನಡೆಯುವಾಗ ಉಸಿರಾಟದ ತೊಂದರೆಯಾಗುತ್ತದೆ ಎಂದು ತಿಳಿಸಿರುವಿರಿ, ಅದು ನಿಮಗೆ ಶ್ವಾಸಕೋಶದಲ್ಲಿ ಏನಾದರು ಸಮಸ್ಯೆ ಇರಬಹುದು.  ಆದ್ದರಿಂದ ನೀವು ಶ್ವಾಸಕೋಶದ ತಜ್ಞರನ್ನು ಸಂಪರ್ಕಿಸಿದರೆ ನಿಮಗೆ ಪರಿಹಾರ ದೊರೆಯಬಹುದು. 

ಕೆಲವರಲ್ಲಿ ರಕ್ತಹೀನತೆ ಇದ್ದರೂ ಸಹಾ ಈ ರೀತಿಯ ತೊಂದರೆ ಕಂಡುಬರುವ ಸಾಧ್ಯತೆ ಇರುತ್ತದೆ. ಆದರೂ ಒಂದು ಭಾರಿ ನೀವು ಎಕೋ / ಟಿಎಂಟಿ / ಎಕ್ಸ್-ರೇ ಮತ್ತು ರಕ್ತ ಪರೀಕ್ಷೆಗಳನ್ನು (ಏಚಿ%) ಮಾಡಿಸಿಕೊಂಡಲ್ಲಿ, ತಮಗೆ ಆಗುತ್ತಿರುವ ಸುಸ್ತು ಯಾವುದರಿಂದ ಎಂದು ಖಚಿತವಾಗಿ ತಿಳಿಯಬಹುದಾಗಿರುತ್ತದೆ.

ಚೇತನ, ತುಮಕೂರು.
*ನನ್ನ ನಾಲ್ಕು ತಿಂಗಳ ಮಗುವಿನ ಹೃದಯದಲ್ಲಿ ರಂಧ್ರವಿದ್ದು, ಅದು ಮಾತ್ರೆಯ ಮೂಲಕ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಮುಚ್ಚಿಕೊಳ್ಳುತ್ತದೆಯೇ ತಿಳಿಸಿ.
ಸಾಮಾನ್ಯವಾಗಿ ಹುಟ್ಟಿನಿಂದ ಈ ರಂಧ್ರದ ಕಾಯಿಲೆ ಬರುತ್ತದೆ.  ಹುಟ್ಟುವ ಪ್ರತಿ 1000 ಮಕ್ಕಳಲ್ಲಿ 4 ರಿಂದ 5 ಮಕ್ಕಳಲ್ಲಿ ಹೃದಯದ ರಂಧ್ರ ಕಾಣಿಸಿಕೊಳ್ಳುತ್ತದೆ. ಈ ರಂಧ್ರದ ಗಾತ್ರ ಮತ್ತು ಹೃದಯದ ಯಾವ ಭಾಗದಲ್ಲಿ ಇದು ಇರುತ್ತದೆ ಎಂದು ತಿಳಿಯಬೇಕಾದರೆ,

ಎಕೋಕಾರ್ಡಿಯೋಗ್ರಾಮ್ ಪರೀಕ್ಷೆಯನ್ನು ಮಾಡಿಸಬೇಕು. ಅತೀ ಚಿಕ್ಕ ವಿಎಸ್‌ಡಿ ರಂಧ್ರವಿದ್ದಲ್ಲಿ ಅದು ತಾನಾಗಿಯೇ ಮುಚ್ಚಿಕೊಳ್ಳುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಎಎಸ್‌ಡಿ ಅಥವಾ ಪಿಡಿಎ ರಂಧ್ರವಿದ್ದಲ್ಲಿ, ಇದು ತಾನಾಗಿಯೇ ಮುಚ್ಚಿಕೊಳ್ಳುವುದಿಲ್ಲ. ಇದನ್ನು ಅಂಬ್ರೆಲ್ಲಾ ಡಿವೈಸ್ ಮೂಲಕ ಅಥವಾ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿರುತ್ತದೆ. ಆದ್ದರಿಂದ ತಮ್ಮ ಮಗುವಿನ ರಂಧ್ರದ ಬಗ್ಗೆ ತಿಳಿಯಬೇಕಾದರೆ, ಸೂಕ್ತ ತಜ್ಞವೈದ್ಯರ ಸಲಹೆ ಪಡೆಯಬಹುದು.
 

ವಿವೇಕ, 38 ವರ್ಷ, ಬೆಳಗಾವಿ
* ನಾನು ಅವಿವಾಹಿತ.  ಕಳೆದ ಎರಡು ವರ್ಷಗಳಿಂದ ಹೃದಯ ಬಡಿತ ವೇಗವಾಗುತ್ತದೆ.  ಅದರಲ್ಲೂ ಮಧ್ಯಾಹ್ನ ಊಟವಾದ ನಂತರ ಹಾಗೂ ಮಹಡಿಯ ಮೇಲೆ ಹತ್ತಿದರೆ/ಓಡಾಡಿದರೂ ಸಹ ಹೃದಯದ ಬಡಿತ ವಿಪರೀತ ಹೆಚ್ಚಾಗುತ್ತದೆ. ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದೇನೆ, ಎಲ್ಲಾ ನಾರ್ಮಲ್ ಎಂದು ತಿಳಿದು ಬಂದಿರುತ್ತದೆ.  ಇದಕ್ಕೆ ಕಾರಣವನ್ನು ತಿಳಿಸಿ.
ತಾವು ಇಸಿಜಿ/ಎಕೋ/ಬಿಪಿ/ ಶುಗರ್/ಎಕ್ಸ್-ರೇ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಂಡಿರುತ್ತೇನೆ, ಎಲ್ಲವೂ ನಾರ್ಮಲ್ ಬಂದಿರುತ್ತದೆ ಎಂದಿದ್ದೀರಿ. ಆದರೂ ಒಮ್ಮಮ್ಮೆ ಹೃದಯದ ಬಡಿತ ವೇಗವಾಗುತ್ತದೆಂದು ಹೇಳಿರುತ್ತೀರಿ. 

ಸಾಮಾನ್ಯವಾಗಿ ಎಕೋಕಾರ್ಡಿಯೋಗ್ರಾಮ್ / ಥೈರಾಯ್ಡ ಮತ್ತು ಟಿಎಂಟಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು, ಇವು ನಾರ್ಮಲ್ ಬಂದರೆ, ಭಯಪಡುವ ಅವಶ್ಯಕತೆ ಇಲ್ಲ. ಹೃದಯದ ಬಡಿತ ಏರುಪೇರಾಗಿ ರಾತ್ರಿ ತಮಗೆ ನಿದ್ರೆ ಸರಿಯಾಗಿ ಬಾರದೇಯಿದ್ದಲ್ಲಿ ವೈದ್ಯರು ಹೇಳುವ ಮಾತ್ರೆಯನ್ನು ರಾತ್ರಿ ಸಮಯ ತೆಗೆದುಕೊಳ್ಳಬೇಕು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT