ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮದೇ ವಿನ್ಯಾಸದ ಐಸ್‌ಕ್ರೀಂ ಇದು `ಇಬಾಕೊ' ವಿಶೇಷ

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಐಸ್‌ಕ್ರೀಂ... ಓದುತ್ತಿದ್ದಂತೆ ಒಮ್ಮೆ ಚಪ್ಪರಿಸಿಕೊಂಡಾಯಿತಲ್ವೇ? ಭರಪೂರ ಮಳೆಯನ್ನು ಸುಖಿಸುತ್ತಾ ಐಸ್‌ಕ್ರೀಂ ಸವಿಯುವುದು, ಕೊರೆಯುವ ಚಳಿಯಲ್ಲಿ ಹಲ್ಲಿನ ಬೇರೂ ಮರಗಟ್ಟುವಂತಾದರೂ ಐಸ್‌ಕ್ರೀಂ ತಿಂದು ಗಡಗಡ ನಡುಗುವುದು... ಮೆಚ್ಚಿದವರೇ ಬಲ್ಲರು ಐಸ್‌ಕ್ರೀಂ ಮೆಲ್ಲುವ ಸುಖವ!

ಹೀಗಿರುವಾಗ ಗ್ರಾಹಕರ ಈ ಅಭೀಷ್ಟೆಗಳನ್ನೇ ತಮ್ಮ ವಹಿವಾಟಿನ ತಂತ್ರವಾಗಿಸಿಕೊಳ್ಳುವಲ್ಲಿ ಐಸ್‌ಕ್ರೀಂ ಕಂಪೆನಿಗಳು ಹಿಂದೆಬೀಳುವುದುಂಟೇ?

ಅಂತಹ ಒಂದು ತಂತ್ರದೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಚೆನ್ನೈ ಮೂಲದ ಐಸ್‌ಕ್ರೀಂ ಕಂಪೆನಿ `ಇಬಾಕೊ'. ಜಯನಗರ, ಬನಶಂಕರಿ, ಲಾಲ್‌ಬಾಗ್, ಕೋರಮಂಗಲ ಸೇರಿದಂತೆ ನಗರ 13 ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ `ಇಬಾಕೊ' ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿಕೊಳ್ಳಲು ತಯಾರಿ ನಡೆಸುತ್ತಿದೆ.

ನಿಮ್ಮದೇ ವಿನ್ಯಾಸ ಮಾಡಿಕೊಳ್ಳಿ!
ಸಾಮಾನ್ಯವಾಗಿ ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಮೆನು ಕಾರ್ಡ್ ನೋಡಿ ಲಭ್ಯ ಫ್ಲೇವರ್, ಕಾಂಬಿನೇಶನ್‌ಗಳಿಂದ ನಮಗೆ ಬೇಕಾದುದನ್ನು ನಾವು ಆರಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ `ಇಬಾಕೊ'ದಲ್ಲಿ ಹೊಸ ವ್ಯವಸ್ಥೆಯಿದೆ. `ನಮ್ಮಲ್ಲಿ ಲಭ್ಯವಿರುವ 36 ಬಗೆಯ ಸ್ವಾದಗಳ ಪೈಕಿ ಗ್ರಾಹಕರು ತಮ್ಮಿಷ್ಟದ ಸ್ವಾದವನ್ನು ಆರಿಸಿಕೊಳ್ಳಬಹುದು. ಕಾಂಬಿನೇಶನ್ ಮಾಡಿಕೊಳ್ಳಲೂ ಅವಕಾಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ತಮಗೆ ಮೆಚ್ಚುಗೆಯಾಗುವ ಅಥವಾ ಆಯಾ ಕಾಂಬಿನೇಶನ್‌ಗೆ ಹೊಂದುವ ಸಾಸ್‌ಗಳನ್ನೂ, ಡ್ರೈಫ್ರೂಟ್‌ಗಳನ್ನೂ ತಾವೇ ಸೂಚಿಸಬಹುದು.

ಅಲ್ಲಿಗೆ ನಿಮ್ಮದೇ ಆಯ್ಕೆಯ, ವಿನ್ಯಾಸದ ಪರಿಪೂರ್ಣ ಐಸ್‌ಕ್ರೀಂ ನೀವೇ ಆರಿಸಿಕೊಂಡಂತಾಯಿತು. ಕೊನೆಯಲ್ಲಿ ಈ ಐಸ್‌ಕ್ರೀಂನ್ನು ತೂಕ ಮಾಡಿ ಬಿಲ್ ಮಾಡಲಾಗುತ್ತದೆ' ಎಂದು ಮಾಹಿತಿ ಕೊಡುತ್ತಾರೆ ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿ (ಡಯಾಗನಲ್ ರಸ್ತೆ) ಶಾಖೆಯ ವ್ಯವಸ್ಥಾಪಕ ವಿಜಯಕುಮಾರ್.

ಇಲ್ಲಿನ ಒಂದು ಸ್ಕೂಪ್ ಐಸ್‌ಕ್ರೀಂ ಕನಿಷ್ಠ 100 ಗ್ರಾಂ ತೂಗುತ್ತದೆ. ಸ್ಕಾಚ್ ಎನ್ ಬ್ರೌನಿ, ಚಾಕೊ ಮಿಂಟೊ, ಕಾರಾಮೆಲ್, ಓಲ್‌ಮೀಲ್ ಟ್ರೀಟ್, ಬೆಲ್ಜಿಯನ್ ಚಾಕೊಹಾಲಿಕ್, ಮ್ಯಾಂಗೋ ಮಾಹೆಮ್, ಲಿಚಿ ಬಡ್ಡಿ, ಇಟಾಲಿಯನ್ ವಂಡರ್, ನ್ಯೂಯಾರ್ಕ್ ಫಡ್ಜ್, ಮಹಾರಾಜಾ ಭೋಗ್, ಫಿಗ್ ಎನ್ ಹನಿ, ಆಲ್ಮಂಡ್ ಕ್ರಂಚ್, ಕ್ರೀಮ್ ಎನ್ ಕುಕೀಸ್, ಮೆಕಡೇಮಿಯ, ಕಸ್ಟರ್ಡ್ ಆ್ಯಪಲ್ ಕಾರ್ನಿವಲ್, ವೆನಿಲಾ ಚಾಕೊ ಚಿಪ್ಸ್, ಕ್ವೀನ್ಸ್ ಟಾಫಿ, ಬೀನ್ ವೆನಿಲಾ, ಜಿಲ್ ಎನ್ ಜಾಕ್‌ಫ್ರೂಟ್, ಹೇಜಲ್‌ನಟ್ ಕೇಸ್, ರಮ್ ಎನ್ ರೈಸಿನ್, ಕೆರಿಬಿಯನ್ ಆಲ್ಮಂಡ್ ಫಡ್ಜ್ ಹೀಗೆ ತರಹೇವಾರಿ ಸ್ವಾದಗಳಿವೆ. ಚಾಕೊಲೆಟ್, ಚಾಕೊಲೆಟ್ ಫಡ್ಜ್, ಕಾರಾಮೆಲ್, ಬ್ಲೂ ಕುರಾಕೊ ಮುಂತಾದ ಸಾಸ್‌ಗಳು, ಕ್ರೀಮ್ ಸ್ಟಿಕ್, ಕ್ಯಾಶ್ಯೂ, ಅಸಾರ್ಟೆಡ್ ನಟ್ಸ್, ಚಾಕೊಲೆಟ್ ಬಟನ್, ರೇನ್‌ಬೋ ಬಟನ್ ಮುಂತಾದ ಟಾಪಿಂಗ್ಸ್ ಲಭ್ಯ.

ಗ್ರಾಹಕರ ಮೆಚ್ಚುಗೆ
ಮಂಗಳವಾರ ಮಧ್ಯಾಹ್ನ ಮೂರೂವರೆ ಹೊತ್ತಿಗೆ ಸುರಿದ ಜೋರುಮಳೆಗೆ ಓಡೋಡುತ್ತಲೇ `ಇಬಾಕೊ'ದೊಳಗೆ ಬಂದರು ವೇದವ್ಯಾಸ ಶಾಸ್ತ್ರಿ ಮತ್ತು ಎಂಟರ ಹರೆಯದ ಮಗಳು ಹಂಸಿಕಾ. ಬಟರ್‌ಸ್ಕಾಚ್‌ಗೆ ನಾಲ್ಕಾರು ಬಗೆಯ ಡ್ರೈಫ್ರೂಟ್ಸ್ ಮತ್ತು ಸಾಸ್ ಜತೆ ಟಾಪಿಂಗ್ಸ್ ಆರಿಸಿಕೊಂಡಳು.

`ಇಲ್ಲಿ ಎಷ್ಟೊಂದು ಫ್ಲೇವರ್‌ಗಳಿವೆ. ನನಗೆ ಬೇಕಾದ ಡ್ರೈ ಫ್ರೂಟ್ಸ್, ಚೆರ್ರಿ, ಸಾಸ್, ಜೆಲ್‌ನಲ್ಲಿ ಒಂದೊಂದು ಸಲ ಒಂದೊಂದನ್ನು ಹಾಕಲು ಹೇಳುತ್ತೇನೆ. ಕಲರ್ ಪೆಪ್ಪರ್‌ಮಿಂಟ್ ಕೂಡ ಟಾಪಿಂಗ್ಸ್‌ಗೆ ಆಯ್ಕೆ ಮಾಡಿಕೊಳ್ಳಬಹುದು' ಎಂದು ನಕ್ಕಳು.
ಅರೆ! ನೀವಿನ್ನೂ ಚಪ್ಪರಿಸುತ್ತಲೇ ಇದ್ದೀರಾ? `ಇಬಾಕೊ' ಐಸ್‌ಕ್ರೀಂ ಸವಿದುನೋಡಿ. ವಿಶೇಷ ಬಾಕ್ಸ್‌ನಲ್ಲಿ ಪಾರ್ಸೆಲ್ ಬೇಕಾದರೂ ಒಯ್ಯಿರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT