ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣ ಸಂಸ್ಥೆ ಬೇಕು

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನೂತನ ಮಸೂದೆ ಮೂಲಕ ಕ್ರೀಡೆಗಳ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಲು ಹೊರಟಿರುವುದು ನನಗೆ ಅಚ್ಚರಿ ಮೂಡಿಸಿದೆ.

ಈ ನಿರ್ಧಾರ ಕ್ರೀಡಾ ಸಂಸ್ಥೆಗಳಿಗೆ ಮಾತ್ರವಲ್ಲ; ಕ್ರೀಡೆಗಳು ಹಾಗೂ ಕ್ರೀಡಾಪಟುಗಳಿಗೆ ಮುಜುಗರ ಉಂಟು ಮಾಡುವಂಥದ್ದು. ನಾನು ತಿಳಿದ ಮಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕ್ರೀಡಾ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ಯಾವುದೇ ಕಾನೂನು ಇಲ್ಲ.

ಹಾಗಾಗಿ ಸ್ವಾಯತ್ತವಾಗಿ ಇರಲು ಕ್ರೀಡಾ ಸಂಸ್ಥೆಗಳಿಗೆ ಸರ್ಕಾರ ಅವಕಾಶ ಕೊಡಬೇಕು. ಆಕಸ್ಮಾತ್ ಸ್ವಾಯತ್ತೆಯನ್ನು ಕಸಿದುಕೊಂಡರೆ ನಮ್ಮ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಎ) ನಮ್ಮ ಮೇಲೆ ನಿಷೇಧ ಹೇರುವ ಸಾಧ್ಯತೆ ಇರುತ್ತದೆ.

ಹಾಗೇ, ನೂತನ ಮಸೂದೆಯ ಪ್ರಕಾರ ಕ್ರೀಡಾ ಆಡಳಿತದಲ್ಲಿ ಕ್ರೀಡಾಪಟುಗಳಿಗೆ ಶೇಕಡಾ 25ರಷ್ಟು ಅವಕಾಶ ನೀಡಬೇಕು ಎಂದಿದೆ. ರಾಜಕಾರಣಿಗಳನ್ನು ಹೊರಗಿಡಲು ಇದೊಂದು ಉಪಾಯ ಎನಿಸುತ್ತದೆ. ಆದರೆ ರಾಜಕಾರಣಿಗಳಿಗಿಂತ ಕ್ರೀಡಾಪಟುಗಳು ಉತ್ತಮ ಆಡಳಿತ ನಡೆಸುತ್ತಾರೆ ಎಂಬುದಕ್ಕೆ ಗ್ಯಾರಂಟಿ ಏನು?

ಈಗಲೂ ಕೂಡ ಹೆಚ್ಚಿನ ಫೆಡರೇಷನ್‌ಗಳಲ್ಲಿ ಮಾಜಿ ಕ್ರೀಡಾಪಟುಗಳು ಆಡಳಿತ ನಡೆಸುತ್ತಿದ್ದಾರೆ. ಆದರೆ ಅಲ್ಲೇನೂ ಪರಿಸ್ಥಿತಿ ಭಿನ್ನವಾಗಿಲ್ಲ. ಕರ್ನಾಟಕದಲ್ಲಿಯೇ ಅದಕ್ಕೆ ಉದಾಹರಣೆ ನೀಡಬಹುದು!

ಬಿಸಿಸಿಐ, ಹಾಕಿ ಇಂಡಿಯಾ ಆಡಳಿತ ನಡೆಸುತ್ತಿರುವ ರೀತಿಗೆ ಖಂಡಿತ ನನ್ನ ವಿರೋಧವಿದೆ. ಹಾಗಂತ ಅವುಗಳನ್ನು ನಿಯಂತ್ರಿಸಲು ಕ್ರೀಡಾ ಮಸೂದೆ ಬೇಕು ಎನ್ನುವುದು ಮಾತ್ರ ನಗೆಪಾಟಲಿನ ವಿಷಯ.

ಆದರೆ ನನ್ನ ಪ್ರಕಾರ ನಿಯಂತ್ರಣ ಸಂಸ್ಥೆಯೊಂದರ ಅಗತ್ಯವಿದೆ. ಕ್ರೀಡಾ ಮಸೂದೆ ಜಾರಿಯ ವಿಷಯವನ್ನು ಬದಿಗಿಟ್ಟು ಇದರ ಬಗ್ಗೆ ಸರ್ಕಾರ ಚಿಂತಿಸಬೇಕು. ನಿಯಂತ್ರಣ ಸಂಸ್ಥೆಯು ಕ್ರೀಡಾ ಸಂಸ್ಥೆಗಳ ಚುನಾವಣೆ, ತಂಡಗಳ ಆಯ್ಕೆಯಂತಹ ವಿಷಯವನ್ನು ಪರಿಶೀಲಿಸಬೇಕು.

ಆದರೆ ಕ್ರೀಡಾ ಸಂಸ್ಥೆಗಳ ಸ್ವಾಯತ್ತೆಯನ್ನು ಕಸಿದುಕೊಳ್ಳಲು ಹೊರಟಿರುವ ನೂತನ ಕ್ರೀಡಾ ಮಸೂದೆಗೆ ನನ್ನ ಬಲವಾದ ವಿರೋಧವಿದೆ.

ಆರ್‌ಟಿಐಗೆ ನನ್ನ ವಿರೋಧವಿದೆ...

ನೂತನ ಕ್ರೀಡಾ ಮಸೂದೆಯ ಅಗತ್ಯವೇ ಇಲ್ಲ. ಅದರಲ್ಲೂ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಯಲ್ಲಿ ಬಿಸಿಸಿಐ ಬರಲೇಬಾರದು. ಏಕೆಂದರೆ ಬಿಸಿಸಿಐ ಸ್ವಾಯತ್ತ ಸಂಸ್ಥೆ. ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಪಡೆಯುತ್ತಿಲ್ಲ. ಬೇರೆ ಕ್ರೀಡಾ ಸಂಸ್ಥೆಗಳ ವಿಷಯ ನನಗೆ ಗೊತ್ತಿಲ್ಲ.

ಆದರೆ ಬಿಸಿಸಿಐಗೆ ಕೂಡ ಸರ್ಕಾರದ ಸಹಾಯ ಬೇಕು. ಸರ್ಕಾರದ ಸಹಾಯವಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ಹಾಗೇ, ಕ್ರೀಡಾ ಸಂಸ್ಥೆಗಳ ಆಡಳಿತದಲ್ಲಿ ಮಾಜಿ ಕ್ರೀಡಾಪಟುಗಳಿಗೆ ಶೇಕಡಾ 25ರಷ್ಟು ಅವಕಾಶ ನೀಡಬೇಕು ಎಂಬ ಅಂಶಕ್ಕೆ ನನ್ನ ಒಪ್ಪಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT