ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: ಪ್ರಕರಣ ದಾಖಲು

Last Updated 20 ಏಪ್ರಿಲ್ 2013, 10:48 IST
ಅಕ್ಷರ ಗಾತ್ರ

ಕುಷ್ಟಗಿ: ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಬಕಾರಿ ನಿಯಮ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ ಪಟ್ಟಣದ ಆರು ಮದ್ಯ ಮಾರಾಟಗಾರರ ಮೇಲೆ ಕ್ರಮ ಜರುಗಿಸಿರುವ ಇಲ್ಲಿಯ ಅಬಕಾರಿ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ನ್ಯಾಯಾಲಯಕ್ಕೆ ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದಾರೆ.

ಎಸ್.ವೈ.ಹಂಪನಾಳ, ಚನ್ನಮ್ಮ ಹಂಪನಾಳ, ಬಿ.ವಿ.ವೈಜಾಪುರ, ಶಶಿಕಾಂತ, ಎಂ.ಎನ್.ಬಿಚ್ಚಾಲಿ, ಮಹಾಂತೇಶ ಹಾನಗಲ್ ಎಂಬುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂಬುದರ ಕುರಿತು ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್ ಆರ್ .ಎಸ್. ಮುದಿಗೌಡರ್ ಶುಕ್ರವಾರ ವಿವರ ನೀಡಿದರು.

ಮದ್ಯ ಮಾರಾಟ ಮಳಿಗೆ ಹೊಂದಿ ರುವ ಇವರು ಸಿ.ಎಲ್-2 ಪರವಾನಗಿ ಪಡೆದಿದ್ದಾರೆ, ಆದರೆ ಇಂಥ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಬೇಕೆ ಹೊರತು ಅಲ್ಲಿಯೇ ಕುಳಿತು ಕುಡಿಯುವುದಕ್ಕೆ ಅವಕಾಶ ನೀಡುವಂತಿಲ್ಲ. ಪರವಾನಗಿ ನಿಯಮ ಉಲ್ಲಂಘಿ ಸಿದ್ದಕ್ಕಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು ವಿಚಾರಣೆ ಮುಂದುವರಿದಿದೆ ಎಂದು ತಿಳಿಸಿದರು. ಅಲ್ಲದೇ ಮುಂದೆ ಇಂಥ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ಜರುಗಿಸುವುದಾಗಿಯೂ ಗೌಡರ ಎಚ್ಚರಿಕೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ದಿನಗಳಂದು ಈ ಅಂಗಡಿಗಳಲ್ಲಿ ಸ್ಥಳದಲ್ಲೇ ಕುಡಿಯುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೇ ನೂರಾರು ಜನ ಮುಗಿಬಿದ್ದು ಮದ್ಯ ಖರೀದಿಸಿ ಅಲ್ಲೇ ಕುಡಿದು ಕುಪ್ಪಳಿಸುತ್ತಿದ್ದುದರ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ `ಪ್ರಜಾವಾಣಿ'ಯಲ್ಲಿ ವರದಿ ಪ್ರಕಟಗೊಂಡ ನಂತರ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ಮದ್ಯ ತಾಲ್ಲೂಕನ್ನು ಪ್ರವೇಶಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

51 ಪ್ರಕರಣ ದಾಖಲು
ಕೊಪ್ಪಳ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾ. 20ರಿಂದ ಏ. 18ರ ವರೆಗಿನ ಅವಧಿಯಲ್ಲಿ 51 ಪ್ರಕರಣಗಳು ದಾಖಲಾಗಿವೆ.

38 ಜನರನ್ನು ಬಂಧಿಸಲಾಗಿದ್ದು, 142.430 ಲೀ. ಅಕ್ರಮ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದೇ ಅವಧಿಯಲ್ಲಿ 115 ಕಡೆ ದಾಳಿ ನಡೆಸಲಾಗಿದೆ. ಈ ಪೈಕಿ ಕೊಪ್ಪಳ ತಾಲ್ಲೂಕಿನಲ್ಲಿ 33 ಕಡೆಗಳಲ್ಲಿ ದಾಳಿ ನಡೆಸಿ 15 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿ, 14 ಜನರನ್ನು ಬಂಧಿಸಲಾಗಿದೆ.

ಗಂಗಾವತಿ ತಾಲ್ಲೂಕಿನಲ್ಲಿ 48 ಕಡೆ ದಾಳಿ ನಡೆಸಿ, 27 ಪ್ರಕರಣಗಳನ್ನು ದಾಖಲಿಸಿ 17 ಜನರನ್ನು ಬಂಧಿಸಲಾಗಿದೆ.

ಕುಷ್ಟಗಿ ತಾಲ್ಲೂಕಿನಲ್ಲಿ 18 ಕಡೆ ದಾಳಿ ನಡೆದಿದ್ದು, 6 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿ, 4 ಜನರನ್ನು ಬಂಧಿಸಲಾಗಿದೆ. ಯಲಬುರ್ಗಾ ತಾಲ್ಲೂಕಿನಲ್ಲಿ 16 ಕಡೆ ದಾಳಿ ನಡೆದಿದ್ದು, 3 ಪ್ರಕರಣಗಳನ್ನು ದಾಖಲಿಸಿ, 3 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ  ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT