ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿ ಪ್ರೊಬೇಷನರಿ ಮುಕ್ತಾಯ ಘೋಷಣೆ

ತುಮಕೂರು ವಿಶ್ವವಿದ್ಯಾಲಯ ಅಕ್ರಮ
Last Updated 6 ಜನವರಿ 2014, 19:33 IST
ಅಕ್ಷರ ಗಾತ್ರ

ಬೆಂಗಳೂರು: ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿದ್ದರೂ 37 ಮಂದಿ ಬೋಧಕೇತರ ಸಿಬ್ಬಂದಿಯ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಘೋಷಿ­ಸಿರುವ ತುಮಕೂರು ವಿಶ್ವ­ವಿದ್ಯಾಲಯದ ಕ್ರಮ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಡಾ.ಎಸ್‌.ಸಿ.ಶರ್ಮಾ ಅವರು ಕುಲಪತಿ ಆಗಿದ್ದಾಗ ನಡೆದಿರುವ ಅಕ್ರಮ­ಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದರ ಬೆನ್ನಿಗೇ  ನಿಯಮಾವಳಿ ಉಲ್ಲಂ­ಘಿಸಿ ತರಾತುರಿಯಲ್ಲಿ ಪ್ರೊಬೇಷ­ನರಿ ಅವಧಿ  ಮುಕ್ತಾಯ ಘೋಷಣೆ ಮಾಡ­ಲಾಗಿದೆ. ಈ ಎಲ್ಲ ಸಿಬ್ಬಂದಿ ಶರ್ಮಾ ಅಧಿಕಾರ ಅವಧಿಯಲ್ಲಿ (2010) ನೇಮಕ­ಗೊಂಡಿದ್ದು, 2012ರ ಸೆಪ್ಟೆಂಬ­ರ್‌, ನವೆಂಬರ್‌ನಲ್ಲೇ ಎರಡು ವರ್ಷದ ಕಾಯಂಪೂರ್ವ ಸೇವೆ ಪೂರೈಸಿದ್ದರು.

ಆದರೆ, ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಪ್ರೊಬೇಷನರಿ ಅವಧಿ ಮುಕ್ತಾಯ­ವಾಗಿದೆ ಎಂದು 2012ರಲ್ಲಿ ಘೋಷಣೆ ಮಾಡಿರಲಿಲ್ಲ. ಈಗ ಏಕಾಏಕಿ ಪ್ರೊಬೇ­ಷನರಿ ಅವಧಿ ಮುಕ್ತಾಯವಾಗಿದೆ ಎಂದು ಘೋಷಿಸಿರುವುದರ ಹಿಂದಿನ ಮರ್ಮ ಏನು ಎಂಬ ಪ್ರಶ್ನೆ ಸಚಿವಾಲ­ಯದಲ್ಲಿ ಕೇಳಿಬರುತ್ತಿದೆ.

2012ರಿಂದಲೇ ಪೂರ್ವಾನ್ವಯ ಆಗು­ವಂತೆ ನೌಕರರ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದು ಸಹ ವಿವಾದಕ್ಕೆ ಆಸ್ಪದವಾಗಿದೆ. ಇವರ ಪ್ರೊಬೇಷನರಿ ಅವಧಿ 2012ರಲ್ಲಿ ವಿಸ್ತರಣೆ ಆಗಿದ್ದರೆ, ಈಗ ಪೂರ್ವಾನ್ವಯ­ಗೊಳಿಸಿ ಆದೇಶ ಹೊರಡಿ­ಸಲು ಅವಕಾಶ ಇಲ್ಲ. ಪ್ರೊಬೇಷನರಿ ಅವಧಿ ಮುಕ್ತಾಯ­ವಾಗಿದೆ ಎಂದು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿ­ಯಾಗುತ್ತದೆಯೇ ಹೊರತು, ಹಿಂದಿನಿಂದ ಅನ್ವಯವಾಗು­ವಂತೆ ಆದೇಶ ಹೊರಡಿಸಲು ನಿಯಮಾ­ವಳಿಯಲ್ಲಿ ಅವ­ಕಾಶ ಇಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮೂಲಗಳು ತಿಳಿಸಿವೆ.

37 ಮಂದಿಯಲ್ಲಿ ಬಹುತೇಕ ನೌಕ­ರರು ಒಂದೇ ಸಮುದಾಯಕ್ಕೆ ಸೇರಿದ­ವ­ರಾಗಿದ್ದು, ನಿಯಮಾ­ವಳಿಗಳನ್ನು ಉಲ್ಲಂ­ಘಿಸಿ ನೇಮಕಾತಿ ಮಾಡಲಾಗಿದೆ ಎಂಬ ಆರೋಪಗಳಿವೆ.

ವಿ.ವಿ.ಯಲ್ಲಿ ಯಾವುದೇ ಸಿಬ್ಬಂದಿ­ಯನ್ನು ನೇಮಕಾತಿ ಮಾಡಿಕೊಳ್ಳಬೇಕಾ­ದರೆ ‘ನೇಮಕಾತಿ ಮಂಡಳಿ’ಯನ್ನು ಮೊದಲು ರಚಿಸಬೇಕು. ಮಂಡಳಿಯು ವಿ.ವಿ. ನಿಯಮಾವಳಿ ಮತ್ತು ಅರ್ಹತೆ ಆಧರಿಸಿ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ಸಿಬ್ಬಂದಿಯ ನೇಮಕಾತಿ ಸಂದರ್ಭದಲ್ಲಿ ಮಂಡಳಿಯೇ ರಚನೆ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

19 ಮಂದಿ ದ್ವಿತೀಯ ದರ್ಜೆ ಸಹಾ­ಯ­ಕರು, ಆರು ಮಂದಿ ಪ್ರಥಮ ದರ್ಜೆ ಸಹಾ­ಯಕರು, ನಾಲ್ಕು ಮಂದಿ ಬೆರಳ­ಚ್ಚು­ಗಾರರು, ಮೂವರು ಗ್ರಂಥಾಲಯ ಸಹಾಯಕರು, ತಲಾ ಇಬ್ಬರು ಕಂಪ್ಯೂ­ಟರ್‌ ಆಪರೇಟರ್‌ ಹಾಗೂ ಪ್ರಯೋಗಾ­ಲಯ ಸಹಾಯಕರು, ಒಬ್ಬರು ಶೀಘ್ರ­ಲಿಪಿ­ಗಾರರ ನೇಮಕಾತಿ 2010ರಲ್ಲಿ ನಡೆದಿತ್ತು.

ನಿಯಮಾವಳಿಯಲ್ಲಿ ಏನಿದೆ?
1977ರ ಕರ್ನಾಟಕ ನಾಗರಿಕ ಸೇವೆಗಳ ನಿಯಮ 5(2) ಪ್ರಕಾರ 37 ಮಂದಿಯ ಪ್ರೊಬೇಷನರಿ ಅವಧಿ ಮುಕ್ತಾಯವಾಗಿದೆ ಎಂದು ಘೋಷಿಸಿರು­ವು­ದಾಗಿ ಈ ತಿಂಗಳ 1ರಂದು ವಿಶ್ವವಿದ್ಯಾಲಯದ ಕುಲಸಚಿವರು ಹೊರಡಿಸಿರುವ ಆದೇಶದಲ್ಲಿ ತಿಳಿಸ­ಲಾಗಿದೆ.

ಆದರೆ, ಈ ನಿಯಮದಡಿ ಪ್ರೊಬೇಷನರಿ ಅವಧಿ ಘೋಷಿಸಬೇಕಾದರೆ, ನಿಯಮ 5 (1) ಎ ಪ್ರಕಾರ ನೌಕರರು ಇಲಾಖಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣ­ರಾಗಬೇಕು. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕರ್ನಾಟಕ ಲೋಕಸೇವಾ ಆಯೋಗ ಇಲಾಖಾ ಪರೀಕ್ಷೆಗಳನ್ನು ನಡೆಸುತ್ತದೆ. ಆದರೆ, ವಿಶ್ವವಿದ್ಯಾಲಯದ ಸಿಬ್ಬಂದಿಗೆ ಆಯಾ ವಿ.ವಿ.ಗಳೇ ಇಲಾಖಾ ಪರೀಕ್ಷೆಗಳನ್ನು ನಡೆಸ­ಬೇಕು. ತುಮಕೂರು ವಿಶ್ವ­ವಿದ್ಯಾಲಯ ಇದುವರೆಗೂ ಇಲಾಖಾ ಪರೀಕ್ಷೆಗಳನ್ನು ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.

‘ನಾನು ನೋಡಿಲ್ಲ’
ನಾನು ಕಡತ ನೋಡಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಲು ಕುಲಸಚಿವರಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ವಿವರಗಳನ್ನು ತಿಳಿಸುತ್ತೇನೆ.
– ರಾಜಾಸಾಬ್‌, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT