ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಪಾಲನೆ: ಸಮಿತಿಗೆ ಬಹುಮಾನ

Last Updated 11 ಸೆಪ್ಟೆಂಬರ್ 2013, 9:05 IST
ಅಕ್ಷರ ಗಾತ್ರ

ಕಾರವಾರ: ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬರದಂತೆ ಗಣಪತಿಯನ್ನು ಪೂಜಿಸಿ, ವಿಸರ್ಜಿಸುವ ಪ್ರತೀ ತಾಲ್ಲೂಕಿನ ಗಣಪತಿ ಉತ್ಸವ ಸಮಿತಿಗೆ ಇಲಾಖೆ ವತಿಯಿಂದ ಬಹುಮಾನ ಹಾಗೂ ಅಭಿನಂದನೆ ಪತ್ರ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ದಿಲೀಪ ಹೇಳಿದರು.

ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಪ್ರತಿಷ್ಠಾಪನೆ ಮಾಡುವುದರ ಜೊತೆಗೆ ಮೂರ್ತಿ ವಿಸರ್ಜನೆ ಮಾಡುವ ವರೆಗೆ, ಇಲಾಖೆಯ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸುವ ಸಮಿತಿಗೆ ಈ ಬಹುಮಾನ ನೀಡಲಾಗುವುದು. ಇದಕ್ಕಾಗಿ ಪ್ರತೀ ತಾಲ್ಲೂಕಿನ ಪೊಲೀಸ್‌ ಠಾಣೆಯಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು ಎಂದರು.

ದೇಶದಲ್ಲಿ ಅಲ್ಲಲ್ಲಿ ಕೋಮುಗಲಬೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟೂ 825 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಗಣೇಶ ಉತ್ಸವ ಸಮಿತಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಅಗತ್ಯವಿದ್ದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ಗಣಪತಿ ವಿಸರ್ಜನೆ ಸಂದಭರ್ದಲ್ಲಿ ಮದ್ಯ ಸೇವನೆ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಸಮಿತಿ ಸದಸ್ಯರೇ ಎಚ್ಚರ ವಹಿಸಬೇಕು. ಗಣಪತಿ ಹಬ್ಬ ಹಿಂದುಗಳ ಪವಿತ್ರ ಹಬ್ಬವಾದ್ದರಿಂದ ಎಲ್ಲರೂ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ಹೊಸ ರೌಡಿಗಳ ಪಟ್ಟಿ
ಜಿಲ್ಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಳೆಯ ರೌಡಿ ಪಟ್ಟಿಯ ಬದಲು ಈಗ ಹೊಸದಾಗಿ ರೌಡಿಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಮಹಿಳೆಯರಿಗೆ ತೊಂದರೆ ನೀಡು­ವುದು, ಬಲವಂತವಾಗಿ ದೇಣಿಗೆ ವಸೂಲಿ ಮಾಡುವುದು, ಹೀಗೆ ಸಮಾಜದ ಶಾಂತಿ ಕದಡುವವರನ್ನು ರೌಡಿ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದರು.

ಜಿಲ್ಲೆಗೆ 330 ಪೊಲೀಸ್‌ ವಸತಿ ಗೃಹ
ಜಿಲ್ಲೆಗೆ ಹೊಸದಾಗಿ 330 ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಿಸಲು ಮಂಜೂರಾತಿ ದೊರೆತಿದೆ. ಶೀಘ್ರದಲ್ಲಿ ಇದನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಇರುವ ವಸತಿ ಗೃಹಗಳನ್ನು ಸಹ ಕೂಡಲೇ ದುರಸ್ತಿ­ಗೊಳಿಸಲಾಗುವುದು ಎಂದರು.

ಜೋಗ ಜಲಪಾತ ಜಿಲ್ಲೆಯ ಗಡಿ ಭಾಗದಲ್ಲಿರುವುದರಿಂದ ಅಲ್ಲಿ ಉಪ ಪೊಲೀಸ್‌ ಠಾಣೆಯನ್ನು ತೆರೆಯಲಾಗುವುದು ಎಂದು ಎಸ್‌ಪಿ ಆರ್‌. ದಿಲೀಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT