ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿದರೆ ಕ್ರಿಮಿನಲ್ ಮೊಕದ್ದಮೆ: ಎಚ್ಚರಿಕೆ

Last Updated 19 ಫೆಬ್ರುವರಿ 2011, 9:00 IST
ಅಕ್ಷರ ಗಾತ್ರ

 ಗೋಣಿಕೊಪ್ಪಲು: ಉದ್ಯೋಗ ಖಾತ್ರಿ ಕಾಮಗಾರಿ ನಿಯಮಗಳಿಗೆ ಅನುಗುಣವಾಗಿ ನಡೆಯದಿದ್ದರೆ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು. ಜೊತೆಗೆ ನಿಮಯ ಮೀರಿ ಕಾಮಗಾರಿ ನಡೆಸುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರೆಡ್ಡಪ್ಪ ಶುಕ್ರವಾರ ಎಚ್ಚರಿಕೆ ನೀಡಿದರು.

ತಾ.ಪಂ. ಅಧ್ಯಕ್ಷ ಎಚ್.ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ತಾ.ಪಂ. ಸಭಾಂಗಣದಲ್ಲಿ ನಡೆದ  ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯಾ ಇಲಾಖಾ ಅಧಿಕಾರಿಗಳಿಂದ ಪ್ರಗತಿ ಬಗ್ಗೆ ಮಾಹಿತಿ ಪಡೆದ ಕಾರ್ಯ ನಿರ್ವಾಹಣಾಧಿಕಾರಿ, ಒಂದೇ ದಿನದಲ್ಲಿ ಎರಡು ಮೂರು ಕಾಮಗಾರಿಗಳನ್ನು ಕೈಗೊಳ್ಳಬಾರದು. ಇದರಿಂದ ಕಾಮಗಾರಿಯ ಗುಣಮಟ್ಟ ಹಾಳಾಗಲಿದೆ. ಅಲ್ಲದೆ ಕಾಮಗಾರಿ ಪರಿಶೀಲನೆಗೂ ಸಮಸ್ಯೆಯಾಗಲಿದೆ ಎಂದು ಜಿ.ಪಂ.ಸಹಾಯಕ ಎಂಜಿನಿಯರ್ ನಾಯಿಕೋಡ್ ಅವರಿಗೆ ಸೂಚಿಸಿದರು.

ಆಹಾರ ಇಲಾಖೆಯ ಪಡಿತರ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಅವರು, ನ್ಯಾಯ ಬೆಲೆ ಅಂಗಡಿಗಳಲ್ಲಿ   ಸಾರಿಗೆ ವೆಚ್ಚ ಸೇರಿಸಿ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದರ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನು ಕುರಿತು ಮಾಹಿತಿ ನೀಡಬೇಕು ಎಂದು ಆಹಾರ ಇಲಾಖೆಯ ಅಧಿಕಾರಿ ರಾಜಣ್ಣ ಅವರನ್ನು ಇಓ ಕೇಳಿದರು.

ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲು ತಬ್ಬಿಬ್ಬಾದ ರಾಜಣ್ಣ ಕೂಡಲೆ ಮಾಹಿತಿ ನೀಡದೆ ಇದ್ದಾಗ ಪ್ರತಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ಆಯಾ ವಸ್ತುಗಳ ಬೆಲೆ ಮತ್ತು ಲಭ್ಯವಿರುವ ವಸ್ತುಗಳನ್ನು ನಮೂದಿಸಬೇಕು ಎಂದು ಸೂಚಿಸಿದರು.

ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆಗೆ ಸೂಕ್ತ ಸೌಲಭ್ಯಗಳಿಲ್ಲ. ಎಕ್ಸರೆ ಶೀಟ್ ಗುಣ ಮಟ್ಟದಿಂದ ಕೂಡಿಲ್ಲ. ಇದರಿಂದ ಜನತೆಗೆ ತೊಂದರೆ ಎದುರಾಗಿದೆ ಎಂದು ಉಪಾಧ್ಯಕ್ಷೆ ಧರಣಿ ಕಟ್ಟಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಾ.ಯತಿರಾಜ್ ಎಕ್ಸರೇ ಶೀಟ್‌ಗಳನ್ನು ಕೊಂಡುಕೊಳ್ಳಲು ಅಲ್ಲಿನ ವೈದ್ಯರಿಗೆ ಅಧಿಕಾರವಿದೆ. ಗುಣಮಟ್ಟದ ಶೀಟ್‌ಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಗೋಣಿಕೊಪ್ಪಲು ವಸತಿ ನಿಲಯದಲ್ಲಿ ನಿರ್ಮಿಸಿರುವ ನೂತನ ಕೊಳವೆ ಬಾವಿ ನೀರನ್ನು ಸಾರ್ವಜನಿಕರ ಬಳಕೆಗೆ ಬಿಡಬಾರದು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಸಾರ್ವಜನಿಕರಿಗೆ ನೀರಿನ ಸೌಲಭ್ಯವನ್ನು ಪ್ರತ್ಯೇಕ ವ್ಯವಸ್ಥೆ ಮಾಡುವ ಮೂಲಕ ಒದಗಿಸಬೇಕು ಎಂದು ಇಓ ರೆಡ್ಡಪ್ಪ ಅಲ್ಲಿನ ಪಿಡಿಒ ಅವರಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಕಲ ಚೇತನರಿಗೆ ನೀಡುತ್ತಿರುವ ಸೌಲಭ್ಯವನ್ನು ಪಡೆದುಕೊಳ್ಳಲು ದಾಖಲಾತಿಗಾಗಿ ಜಿಲ್ಲಾ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ. ತಾಲ್ಲೂಕು ಕೇಂದ್ರದಲ್ಲಿಯೇ ಇದರ ದಾಖಲಾತಿ ಪಡೆದುಕೊಂಡು ಸಲ್ಲಿಸಬೇಕು. ಇದೀಗ ತಾಲ್ಲೂಕು ಅಧಿಕಾರಿಯ ಹುದ್ದೆ ಖಾಲಿ ಇದ್ದು ಇದರ ಭರ್ತಿಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅಧ್ಯಕ್ಷ ದಿನೇಶ್ ಸದಸ್ಯರ ಪ್ರಶ್ನೆಗೆ  ಉತ್ತರಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೈತರಿಗೆ ನೀಡುವ ಸೌಲಭ್ಯ ವ್ಯವಸ್ಥೆ ಪಾರದರ್ಶಕವಾಗಿಲ್ಲ.  ಮೊದಲು ಅರ್ಜಿಗಳನ್ನು ಪಡೆದುಕೊಂಡು ಪರಿಶೀಲಿಸಿ ಬಳಿಕ ಅರ್ಹರಿಗೆ ಸೌಲಭ್ಯ ನೀಡಬೇಕು ಎಂದು ರೆಡ್ಡಪ್ಪ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚೆನ್ನಯ್ಯ ಅವರಿಗೆ ಸೂಚಿಸಿದರು.

ತಾ.ಪಂ.ಚುನಾವಣೆಯ ಬಳಿಕ ರಚನೆಯಾದ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಇದ್ದವರೆಲ್ಲರೂ ಹೊಸಬರೇ ಅಗಿದ್ದು, ಮೊದಲ ಸಭೆಯಲ್ಲಿ ಎಲ್ಲ ಆಧಿಕಾರಿಗಳಿಂದ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಾಯಿತು. ತಾಲ್ಲೂಕಿಗೆ ಕಳೆದ ಎರಡು ತಿಂಗಳ ಹಿಂದೆ ಆಗಮಿಸಿದ ಕಾರ್ಯ ನಿರ್ವಹಣಾಧಿಕಾರಿ ರೆಡ್ಡಪ್ಪ ಅವರಿಗೂ ಕೂಡ ಇದು ಪ್ರಥಮ ಸಭೆಯಾಗಿತ್ತು. ವೇದಿಕೆಯಲ್ಲಿ ಸದಸ್ಯ ಅರುಣ್ ಭೀಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT