ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮದ ಚಕ್ರದಡಿ ಸಿಲುಕಿದ ಸೈಕಲ್‌ಗಳು

Last Updated 10 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ಧಾರವಾಡ: ವಿಶ್ವವಿಖ್ಯಾತ ಮೈಸೂರು ದಸರಾದ ಕ್ರೀಡಾಕೂಟದ `ವೇಳಾಪಟ್ಟಿ~ಯನ್ನು ಸಿದ್ಧಪಡಿಸಿದ ಕ್ರಮದ ಬಗ್ಗೆ ಅಸಮಾಧಾನಗೊಂಡು ವಾಪಸಾದ ಬೆಳಗಾವಿ ಜಿಲ್ಲೆಯ ಸೈಕ್ಲಿಸ್ಟ್‌ಗಳು ಈಗ ಮತ್ತೊಂದು ಆಘಾತಕ್ಕೆ ಒಳಗಾಗಿದ್ದಾರೆ. ಆಘಾತದಿಂದ ಹೊರಬರಲಾಗದೆ ಅವರು ಒದ್ದಾಡುತ್ತಿದ್ದಾರೆ, ಅವರ ಸೈಕಲ್‌ಗಳು ಇಲ್ಲಿನ ರೈಲು ನಿಲ್ದಾಣದಲ್ಲಿ `ಗತಿ~ ಕಾಣದೆ ಬಿದ್ದಿವೆ.

ರೈಲ್ವೆಯ ನಿಯಮಗಳು ತಿಳಿಯದೆ ತಮ್ಮ ನೆಚ್ಚಿನ ಸೈಕಲ್‌ಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ಸೈಕ್ಲಿಸ್ಟ್‌ಗಳು.

ಮೈಸೂರು ದಸರಾ ಕ್ರೀಡಾಕೂಟದ ಸೈಕಲ್ ಪೋಲೋ ವಿಭಾಗದಲ್ಲಿ ಭಾಗವಹಿಸಲು ಅಲ್ಲಿನ ಒಟ್ಟು 55 ಮಂದಿ ಸೈಕ್ಲಿಸ್ಟ್‌ಗಳು ಈ ಬಾರಿ ಆಯ್ಕೆಯಾಗಿದ್ದರು. ಇವರು ರೈಲಿನಲ್ಲಿ ಸೈಕಲ್‌ಗಳನ್ನು ತೆಗೆದುಕೊಂಡು ಹೋಗಿ ರೈಲಿನಲ್ಲೇ ಅವುಗಳನ್ನು ವಾಪಸ್ ತಂದಿದ್ದಾರೆ. ಆದರೆ ಆರು ತಾಸಿನಲ್ಲಿ ಅವುಗಳನ್ನು ಪಡೆದುಕೊಳ್ಳಬೇಕೆಂದು ಅವರಿಗೆ ತಿಳಿದಿರಲಿಲ್ಲ. ಹೀಗಾಗಿ ದಂಡ ತೆರಬೇಕೆಂಬ ಸೂಚನೆ ಬಂದಿದೆ, ದಂಡ ತೆರಲು ಸಾಧ್ಯವಾಗದೆ ಅವುಗಳನ್ನು ಪಡೆಯಲಾಗಲಿಲ್ಲ. ಸೈಕಲ್‌ಗಳು ಭಾನುವಾರವೂ ರೈಲು ನಿಲ್ದಾಣದಲ್ಲೇ ಬಿದ್ದುಕೊಂಡಿದ್ದವು.

ಬೆಳಗಾವಿಯಿಂದ ತೆರಳಿದ ಸೈಕ್ಲಿಸ್ಟ್‌ಗಳ ತಂಡದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಸುಮಾರು ಹದಿನೈದು ಮಂದಿ ಕೂಡ ಇದ್ದರು. ಇವರೆಲ್ಲರೂ ಶಾಲಾ-ಕಾಲೇಜು ವಿದ್ಯಾರ್ಥಿಗಳು. 16 ಸೈಕಲ್‌ಗಳನ್ನು ಇವರು ಅಕ್ಟೋಬರ್ ಒಂದು ಹಾಗೂ ಎರಡರಂದು ಧಾರವಾಡ ರೈಲು ನಿಲ್ದಾಣದಿಂದ ತೆಗೆದುಕೊಂಡು ಹೋಗಿದ್ದರು. ಅಕ್ಟೋಬರ್ ಮೂರು ಹಾಗೂ ನಾಲ್ಕರಂದು ಸೈಕಲ್ ಪೋಲೋ ಸ್ಪರ್ಧೆಗಳು ನಡೆದಿದ್ದವು. ಆದರೆ ವೇಳಾಪಟ್ಟಿ ನಿಗದಿಗೆ ಸಂಬಂಧಪಟ್ಟು ಅಸಮಾಧಾನಗೊಂಡ ತಂಡ ಸ್ಪರ್ಧೆಗಳನ್ನು ಪೂರ್ತಿಗೊಳಿಸದೆ ವಾಪಸಾಗಿತ್ತು.

ನಂತರ ನಡೆದ ಘಟನೆಗಳನ್ನು ಅಥಣಿಯ ರಾಕೇಶ ಬಾಳಿಕಾಯಿ `ಪ್ರಜಾವಾಣಿ~ಗೆ ವಿವರಿಸಿದ್ದು ಹೀಗೆ:
`ನಾಲ್ಕನೇ ತಾರೀಕಿನಂದು ನಾವು ಮೈಸೂರು ರೈಲು ನಿಲ್ದಾಣಕ್ಕೆ ತೆರಳಿ ಸೈಕಲ್‌ಗಳನ್ನು ಧಾರವಾಡಕ್ಕೆ ತಲುಪಿಸಲು ಹೇಳಿದೆವು. ಆಗ ಎಲ್ಲ ಸೈಕಲ್‌ಗಳನ್ನು ಒಂದೇ ಬಾರಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೇಳಿಯೇ ಬುಕ್ ಮಾಡಿದ್ದಾರೆ. ರೈಲಿನಲ್ಲಿ ಸೀಟು ಸಿಗದ ಕಾರಣ ನಾವು ಬಸ್‌ನಲ್ಲಿ ವಾಪಸಾಗಿದ್ದೆವು. ಇಲ್ಲಿಗೆ ತಲುಪಿದ ನಂತರ ತಿಳಿಯಿತು, ಸೈಕಲ್‌ಗಳನ್ನು ಒಂದೇ ರೈಲಿನಲ್ಲಿ ತರಲಾಗಿದೆ ಎಂದು. ಧಾರವಾಡ ನಿಲ್ದಾಣಕ್ಕೆ ಹೋಗಿ ಸೈಕಲ್ ಕೇಳಿದಾಗ ಆರು ತಾಸು ಒಳಗೆ ಸೈಕಲ್‌ಗಳನ್ನು ಪಡೆಯದ ಕಾರಣ ನಂತರದ ಪ್ರತಿ ತಾಸಿಗೆ ಸೈಕಲ್ ಒಂದಕ್ಕೆ ಹತ್ತು ರೂಪಾಯಿಯಂತೆ ದಂಡ ತೆರಬೇಕು ಎಂದು ಹೇಳಿದ್ದಾರೆ~

ಅಧಿಕಾರಿಗಳ ಈ ಮಾತು ಕೇಳಿ ತಬ್ಬಿಬ್ಬಾದ ಸೈಕ್ಲಿಸ್ಟ್‌ಗಳು ಹುಬ್ಬಳ್ಳಿಯಲ್ಲಿರುವ ವಿಭಾಗೀಯ ಕಚೇರಿಗೆ ತೆರಳಿ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಅಲ್ಲಿ ಭರವಸೆ ಲಭಿಸಿದರೂ ಧಾರವಾಡಕ್ಕೆ ತಲುಪಿದಾಗ ಲಿಖಿತ ದಾಖಲೆಗಳಿಲ್ಲದೆ ಏನೂ ಮಾಡುವಂತಿಲ್ಲ ಎಂಬ ಮಾಹಿತಿ ದೊರೆತಿದೆ.

ಇದಾಗಿ ದಿನಗಳು ಅನೇಕ ಕಳೆದಿವೆ. ಈಗ ದಂಡದ ಮೊತ್ತ ನೂರಾರು ರೂಪಾಯಿ ತಲುಪಿದೆ. ಹೀಗಾಗಿ ಸೈಕ್ಲಿಸ್ಟ್‌ಗಳು ಸೈಕಲ್‌ಗಳ ಆಸೆಯನ್ನೇ ಬಿಟ್ಟಿದ್ದಾರೆ.

`ನಾವೆಲ್ಲರೂ ಬಡ ವಿದ್ಯಾರ್ಥಿಗಳು. ಸೈಕಲ್‌ನಲ್ಲಿ ಸಾಧನೆ ಮಾಡಿದರೂ ಆರ್ಥಿಕವಾಗಿ ಹಿಂದುಳಿದವರು. ಹೀಗಿರುವಾಗ ನೂರಾರು ರೂಪಾಯಿ ದಂಡ ತೆತ್ತು ಸೈಕಲ್‌ಗಳನ್ನು ಬಿಡಿಸುವುದು ಅಸಾಧ್ಯ. ಹೀಗಾಗಿ ಈಗ ಆ ಪ್ರಯತ್ನವನ್ನೇ ಕೈಬಿಟ್ಟಿದ್ದೇವೆ~ ಎಂದು ಹೇಳಿದರು, ರಾಕೇಶ.

`ದಂಡ ಕಟ್ಟುವಷ್ಟು ಹಣ ನಮ್ಮಲ್ಲಿಲ್ಲ. ಮಾತ್ರವಲ್ಲ, ಈಗ ದಂಡದ ಮೊತ್ತದಲ್ಲಿ ಹೊಸ ಸೈಕಲ್ ತೆಗೆದುಕೊಳ್ಳಬಹುದು. ಈಗ ದಂಡ ಇಲ್ಲದೆ ವಾಪಸ್‌ಕೊಟ್ಟರಷ್ಟೇ ಸೈಕಲ್ ತೆಗೆದುಕೊಳ್ಳುವುದು ಎಂಬ ಸ್ಥಿತಿಯಲ್ಲಿದ್ದೇವೆ~ ಎಂದು ಹೇಳಿದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT