ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮಾವಳಿ ಉಲ್ಲಂಘಿಸಿದರೆ ದಂಡ

ಬೆಂಗಳೂರು ವಿ.ವಿ ಎಂ.ಇಡಿ ಕಾರ್ಯಪಡೆ ಶಿಫಾರಸು
Last Updated 25 ಏಪ್ರಿಲ್ 2013, 20:00 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿದ್ಯಾಲಯದ ನಿಯಮಾವಳಿ ಉಲ್ಲಂಘಿಸುವ ಎಂ.ಇಡಿ ಕಾಲೇಜುಗಳಿಗೆ ರೂ 25,000 ದಂಡ ವಿಧಿಸಬೇಕು. ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆಯದ ಎಂ.ಇಡಿ ಕಾಲೇಜುಗಳಲ್ಲಿ ಪಡೆಯಲಾಗುವ ಪ್ರವೇಶಗಳಿಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಮುದ್ರೆ ಒತ್ತಬಾರದು. ಖಾಸಗಿ ಕಾಲೇಜುಗಳಲ್ಲಿ ನಡೆಸುವ ಎಂ.ಇಡಿ ಕೋರ್ಸ್‌ಗಳ ಮೇಲೆ ಸದಾ ನಿಗಾ ಇಡಬೇಕು...

ಬೆಂಗಳೂರು ವಿಶ್ವವಿದ್ಯಾಲಯ ಎಂ.ಇಡಿ (ಸ್ನಾತಕೋತ್ತರ ಪದವಿ ಶಿಕ್ಷಣ) ಕೋರ್ಸ್‌ನಲ್ಲಿ ಸುಧಾರಣೆ ತರಲು ನೇಮಿಸಿದ್ದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಎಚ್. ಕರಣ್ ಕುಮಾರ್ ನೇತೃತ್ವದ ಕಾರ್ಯಪಡೆ ತನ್ನ ಅಂತಿಮ ವರದಿಯಲ್ಲಿ ಮಾಡಿರುವ ಪ್ರಮುಖ ಶಿಫಾರಸುಗಳು ಇವು.

ವಿಶ್ವವಿದ್ಯಾಲಯದ ನಿಗದಿ ಪ್ರಕಾರ ಕನಿಷ್ಠ ಹಾಜರಾತಿಯನ್ನು ಪರಿಶೀಲಿಸಬೇಕು. ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ನೀಡಲಾಗಿದ್ದ ಅವಧಿ ಕೊನೆಗೊಂಡ ತಕ್ಷಣವೇ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಿಶ್ವವಿದ್ಯಾಲಯದಿಂದ ಬಿಡುಗಡೆ ಮಾಡಬೇಕು. ಶೈಕ್ಷಣಿಕ ವರ್ಷದ ಆರಂಭವಾಗುವ ಮುನ್ನವೇ ಪ್ರತಿ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ವಿವರವನ್ನು ವಿಶ್ವವಿದ್ಯಾಲಯದಿಂದಲೇ ಪ್ರಕಟಿಸಬೇಕು ಎಂಬ ಶಿಫಾರಸು ಸಹ ಮಾಡಲಾಗಿದೆ.

ಬೆಂಗಳೂರು ವಿಜಯನಗರದ ಸೆಂಟ್ ಪಾಲ್ಸ್ ಎಂ.ಇಡಿ ಕಾಲೇಜು, ಹೊರಮಾವಿನ ಮೆಹ್ರಾ ಕಾಲೇಜ್ ಆಫ್ ಏಜ್ಯುಕೇಶನ್, ಬೆಂಗಳೂರು ಸಿಟಿ ಕಾಲೇಜ್ ಆಫ್ ಏಜ್ಯುಕೇಶನ್, ಮೇಡಹಳ್ಳಿ ಎಸ್‌ಜೆಇಎಸ್ ಕಾಲೇಜು, ಬಿಸ್ಮಿಲ್ಲಾನಗರದ ಕೈಇಟಿ ಕಾಲೇಜು ಮತ್ತು ಕೋಲಾರದ ಗೋಲ್ಡ್‌ಫೀಲ್ಡ್ ಆಫ್ ಎಜುಕೇಶನ್ (ಎಂ.ಇಡಿ) ಕಾಲೇಜಿಗೆ ಎಂ.ಇಡಿ ಕೋರ್ಸ್ ನಡೆಸಲು ನೀಡಿದ್ದ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಶಿಫಾರಸಲು ಮಾಡಲಾಗಿದೆ.

ಅಗತ್ಯವಾದ ಪಾಠದ ಕೋಣೆಗಳು, ಗ್ರಂಥಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳು ಈ ಕಾಲೇಜುಗಳಲ್ಲಿ ಇಲ್ಲ. ಪ್ರವೇಶಾತಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ತರಗತಿಗಳಿಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿ ಇಲ್ಲ ಎಂಬ ಲೋಪಗಳನ್ನು ಪಟ್ಟಿ ಮಾಡಲಾಗಿದೆ. ಕಾರ್ಯಪಡೆ ಮಧ್ಯಂತರ ಶಿಫಾರಸುಗಳು ಇನ್ನೂ ಜಾರಿ ಆಗದಿರುವುದಕ್ಕೆ ಅದರ ಮುಖ್ಯಸ್ಥರು ಮತ್ತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸಭೆ ಮತ್ತು ರಾಜ್ಯ ಸರ್ಕಾರ ಕಾರ್ಯಪಡೆ ಮಧ್ಯಂತರ ಶಿಫಾರಸುಗಳನ್ನು ಒಪ್ಪಿಕೊಂಡ ಬಳಿಕವೂ ಕುಲಪತಿಗಳು ಅವುಗಳನ್ನು ಏಕೆ ಅನುಷ್ಠಾನಕ್ಕೆ ತಂದಿಲ್ಲ ಎಂಬ ಆಕ್ಷೇಪವನ್ನು ಅಂತಿಮ ವರದಿಯಲ್ಲಿ ಎತ್ತಲಾಗಿದೆ. ಕಾರ್ಯಪಡೆಗೆ ಸಂಬಂಧಿಸಿದಂತೆ ಕುಲಪತಿಗಳು ಮಾಧ್ಯಮಗಳಲ್ಲಿ ನೀಡಿರುವ ಪ್ರತಿಕ್ರಿಯೆಗೂ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT