ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂಜನ್‌ಗೆ 9, ಸ್ಮಿತೇಶ್‌ಗೆ 8 ಚಿನ್ನ

ಇಂದು ಬೆಂಗಳೂರು ವಿಶ್ವವಿದ್ಯಾಲಯದ 48ನೇ ಘಟಿಕೋತ್ಸವ
Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಭೂಗರ್ಭಶಾಸ್ತ್ರ ವಿಭಾಗದ ತಲವಡೇಕರ್ ಸ್ಮಿತೇಶ್ ಸೀತಾರಾಮ್ ಎಂಟು ಚಿನ್ನದ ಪದಕ, ಪದವಿ ವಿಭಾಗದಲ್ಲಿ ಯುವಿಸಿಇ ಕಾಲೇಜಿನ ಬಿ.ಇ (ಸಿವಿಲ್) ವಿದ್ಯಾರ್ಥಿ ನಿರಂಜನ್ ಸಿ.ಬಿ. ಒಂಬತ್ತು ಚಿನ್ನದ ಪದಕ ಪಡೆದಿದ್ದಾರೆ.

`ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ವಿವಿಯ 48ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು. ರಾಜ್ಯಪಾಲ ಡಾ.ಹಂಸರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸುವರು. ಇಸ್ರೊ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಉಪಸ್ಥಿತರಿರುವರು' ಎಂದು ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ (ಗಣಿತಶಾಸ್ತ್ರ)ಯ ಕಾಂಚನ ಸಿ. ಅವರು ಐದು ಚಿನ್ನದ ಪದಕ, ಎಂಎಸ್ಸಿ (ಸಸ್ಯವಿಜ್ಞಾನ)ಯ ಮಾಧುರಿ ನಾಗೇಶ್ ಆರು ಚಿನ್ನದ ಪದಕ, ಎಂಎ (ಕನ್ನಡ) ವಿಭಾಗದ ಆನಂದ ಜಿ. ಅವರು ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಪದವಿ ವಿಭಾಗದಲ್ಲಿ ಗೌರಿಬಿದನೂರಿನ ಎ.ಇ.ಎಸ್ ನ್ಯಾಷನಲ್ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಮಾನಸ ಎಂ.ಎಸ್. ಅವರು ಏಳು ಚಿನ್ನದ ಪದಕ, ನಗರದ ವಿ.ಇ.ಟಿ. ಪ್ರಥಮದರ್ಜೆ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಅಕ್ಷತಾ ವಿ. ನಾಲ್ಕು ಚಿನ್ನದ ಪದಕ, ನಗರದ ಎಂ.ಇ.ಎಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಅಶ್ವಿನಿ ಟಿ.ಕೆ. ಏಳು ಚಿನ್ನದ ಪದಕ, ಬಿ.ಇಡಿಯಲ್ಲಿ ಸಿ.ಎಂ.ಆರ್. ಶಿಕ್ಷಕರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಲೋರಾ ಜಿಂಕಿ ಆರು ಚಿನ್ನದ ಪದಕ ಪಡೆದಿದ್ದಾರೆ' ಎಂದು ಅವರು ಹೇಳಿದರು.

176 ಮಂದಿಗೆ ಚಿನ್ನದ ಪದಕ: ಪದವಿಯಲ್ಲಿ 69 ಹಾಗೂ ಸ್ನಾತಕೋತ್ತರ ಪದವಿಯಲ್ಲಿ 108 ವಿದ್ಯಾರ್ಥಿಗಳು ಸೇರಿದಂತೆ 176 ಮಂದಿ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ. ಈ ಪೈಕಿ ಪದವಿಯಲ್ಲಿ ಪ್ರಥಮ ರ‍್ಯಾಂಕ್ಪಡೆದ 22 ಮಂದಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ಪಡೆದ 65 ವಿದ್ಯಾರ್ಥಿಗಳು ಸೇರಿದಂತೆ 87 ಮಂದಿಗೆ ವಿಶ್ವವಿದ್ಯಾಲಯದ ವತಿಯಿಂದ ಚಿನ್ನದ ಪದಕ ಪ್ರದಾನ ಮಾಡಲಾಗುವುದು. ಚಿನ್ನದ ಪದಕ ಐದು ಗ್ರಾಂ ಚಿನ್ನವನ್ನು ಒಳಗೊಂಡಿದೆ (11,300 ರೂಪಾಯಿ ಮೌಲ್ಯ). ಉಳಿದ ವಿದ್ಯಾರ್ಥಿಗಳಿಗೆ ನಗದು ಪ್ರದಾನ ಮಾಡಲಾಗುವುದು. ಇವರಲ್ಲದೆ ಪದವಿಯ 47 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯ 24 ವಿದ್ಯಾರ್ಥಿಗಳು ನಗದು ಬಹುಮಾನ ಪಡೆಯಲಿದ್ದಾರೆ' ಎಂದರು.

`ವಿವಿಯಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪಿಸಿದ ದತ್ತಿ ನಿಧಿಗಳಿವೆ. ಇದರಲ್ಲಿ ಕೆಲವು ದತ್ತಿ ನಿಧಿಗಳ ಮೊತ್ತ 500 ರೂಪಾಯಿ ಆಗಿದೆ. ಅದರಿಂದ ಬಂದ ಬಡ್ಡಿ ಮೊತ್ತದಿಂದ ಈಗ ಚಿನ್ನದ ಪದಕ ನೀಡುವುದು ಅಸಾಧ್ಯ. ಹೀಗಾಗಿ ನಗದು ಬಹುಮಾನ ನೀಡಲಾಗುತ್ತದೆ.

ಕೆಲವು ವಿದ್ಯಾರ್ಥಿಗಳು ನಾಲ್ಕೈದು ದತ್ತಿನಿಧಿಯ ಬಹುಮಾನ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ಕನಿಷ್ಠ 500 ರೂಪಾಯಿಯಿಂದ ಗರಿಷ್ಠ 32,500 ರೂಪಾಯಿ ವರೆಗೆ ನಗದು ಬಹುಮಾನ ಪಡೆಯಲಿದ್ದಾರೆ. ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮಹಮದ್ ಅನೀಸುಲ್ ಮಹಮದ್ ಅವರು 32,000 ರೂಪಾಯಿ ನಗದು ಬಹುಮಾನ ಪಡೆಯಲಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.

`ಸಮಾರಂಭದಲ್ಲಿ ಕನ್ನಡ ವಿಭಾಗದ 24, ಭೌತಶಾಸ್ತ್ರ ವಿಭಾಗದ 11 ಹಾಗೂ ಸಿವಿಎಲ್ ಎಂಜಿನಿಯರ್ ವಿಭಾಗದ 10 ಮಂದಿಗೆ ಸೇರಿದಂತೆ 168 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. 45,815 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಇವರಲ್ಲಿ 34,523 ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ' ಎಂದು ಅವರು ತಿಳಿಸಿದರು.

ವಾಹನ ನಿಲುಗಡೆ: ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವವರು ಅರಮನೆ ರಸ್ತೆಯ ಪ್ರಸನ್ನ ಕುಮಾರ್ ಬ್ಲಾಕ್, ಗಾಂಧಿನಗರ ಕ್ರಿಕೆಟ್ ಮೈದಾನ ಹಾಗೂ ಸೆಂಟ್ರಲ್ ಕಾಲೇಜು ಆವರಣದಲ್ಲಿ ವಾಹನ ನಿಲುಗಡೆ ಮಾಡಬಹುದು ಎಂದು ಕುಲಸಚಿವರಾದ ಪ್ರೊ.ಕೆ.ಕೆ. ಸೀತಮ್ಮ ತಿಳಿಸಿದರು.
ಕುಲಸಚಿವ (ಮೌಲ್ಯಮಾಪನ) ಪ್ರೊ.ಆರ್. ಕೆ.ಸೋಮಶೇಖರ್ ಉಪಸ್ಥಿತರಿದ್ದರು.

ಪಿಎಚ್.ಡಿಗೆ 542 ಮಂದಿ ನೋಂದಣಿ
ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಪಿಎಚ್.ಡಿ ಪದವಿ ಪಡೆಯಲು ಈ ಬಾರಿ 542 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

`ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಕೋರ್ಸ್ ವರ್ಕ್ ಮುಂದಿನ ತಿಂಗಳಿಂದ ಆರಂಭವಾಗಲಿದೆ' ಎಂದು ಅವರು ಹೇಳಿದರು.

ಏಳು ಗಣ್ಯರಿಗೆ ಗೌರವ ಡಾಕ್ಟರೇಟ್
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್, ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರ, ಕ್ರಿಕೆಟ್ ಆಟಗಾರ ಜಿ.ಆರ್.ವಿಶ್ವನಾಥ್, ಲೇಖಕ ಕೆ.ಸತ್ಯನಾರಾಯಣ, ಸಂಸ್ಕೃತ ವಿದ್ವಾಂಸೆ ಡಾ.ವನಿತಾ ರಾಮಸ್ವಾಮಿ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT