ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ನೀರು: ನಿರಾತಂಕ ನಿದ್ದೆ

Last Updated 17 ಜೂನ್ 2011, 9:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಅವಳಿನಗರದ ಎಂಟು ವಾರ್ಡುಗಳಲ್ಲಿ 24x7 ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಜಾರಿಯಾದ ಮೇಲೆ ನೀರು ಪೋಲಾಗುತ್ತಿಲ್ಲ. ಆದರೆ ನಳ ಇದ್ದವರಿಗೆ ಉಚಿತ ನೀರು ಎನ್ನುವ ಭರವಸೆ ಸುಳ್ಳಾಗಿದೆ. ತಿಂಗಳಿಗೆ 30 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ~ ಎಂದು ಪಾಲಿಕೆ ಸದಸ್ಯೆ ಸರೋಜಾ ಪಾಟೀಲ ಆರೋಪಿಸಿದರು.

ನಿರಂತರ ನೀರು ಸರಬರಾಜು ಪ್ರಾಯೋಗಿಕ ಯೋಜನೆಯ ಅನುಷ್ಠಾನದ ಮುಕ್ತಾಯ ಹಾಗೂ ಪರಿಣಾಮ ಕುರಿತು ವಿಶ್ವ ಬ್ಯಾಂಕ್ ತಂಡದೊಂದಿಗೆ ಇಲ್ಲಿಯ ಪಾಲಿಕೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

`67 ವಾರ್ಡುಗಳಲ್ಲಿ ಕೇವಲ 8 ವಾರ್ಡುಗಳಿಗೆ ಮಾತ್ರ ಕುಡಿಯುವ ನೀರು 24್ಡ7 ಸಿಗುತ್ತಿದೆ. ಆದರೆ ಈ ಸೌಲಭ್ಯದಿಂದ 8 ವಾರ್ಡುಗಳಲ್ಲಿಯ ಕೆಲ ಪ್ರದೇಶಗಳು ವಂಚಿತವಾಗಿವೆ~ ಎಂದು ಸಭೆಯ ಗಮನಕ್ಕೆ ತಂದರು.

ಮೊದಲು 12-15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಆದರೆ ನಿರಂತರ ನೀರು ಸರಬರಾಜು ನೀರಿನ ವ್ಯವಸ್ಥೆಯಾದ ಮೇಲೆ ನಿರಾಂತಕವಾಗಿ ನಿದ್ದೆ ಮಾಡುತ್ತಿದ್ದೇವೆ. ಮೊದಲು ಕುಡಿಯುವ ನೀರು ಬರುವುದನ್ನೇ ಕಾಯುತ್ತಿದ್ದೆವು. ಇದರಿಂದ ಮದುವೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮುಂದೂಡಿ ಎನ್ನುವ ಕೋರಿಕೆ ಸಲ್ಲಿಸುತ್ತಿದ್ದೆವು. ಈಗ ಅಂಥ ಪರಿಸ್ಥಿತಿಯಿಲ್ಲ. ಆಗ ನೀರು ಬಂದರೆ ತುಂಬಿದ್ದನ್ನು ಚೆಲ್ಲಿ ಮತ್ತೆ ಸಂಗ್ರಹಿಸುತ್ತಿದ್ದೆವು. ಹೀಗಾಗಿ ಈಗ ನೀರು ಪೋಲಾಗುವುದಿಲ್ಲ~ ಎಂದು ಅವರು ಹೇಳಿದರು.

ವಿಶ್ವಬ್ಯಾಂಕಿನ ನೀರು ಮತ್ತು ನೈರ್ಮಲ್ಯ ತಜ್ಞ ಶ್ರೀನಿವಾಸ ರಾವ್ ಪೊಡಿತಿರೆಡ್ಡಿ, `ನಿರಂತರ ನೀರು ಸರಬರಾಜು ಯೋಜನೆ ಸಮರ್ಪಕವಾಗಿ ಜಾರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿದೆವು. ಇದಕ್ಕಾಗಿ ಸಾರ್ವಜನಿಕರನ್ನು, ಆಯಾ ವಾರ್ಡಿನ ಸದಸ್ಯರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಿದೆವು.

ಈ ಯೋಜನೆಯಿಂದ ಸಾರ್ವಜನಿಕರ ಜೀವನ ಬದಲಾಗಿದೆ ಅದರಲ್ಲೂ ಬಡವರು ಮತ್ತು ಕೆಳಮಧ್ಯಮ ವರ್ಗದವರು ನೆಮ್ಮದಿಯಾಗಿದ್ದಾರೆ. ಈ ಯೋಜನೆಯಿಂದ ನೀರು ಮತ್ತು ಸಮಯ ಉಳಿಯುತ್ತಿದೆ ಎಂಬುದನ್ನು ಮನಗಂಡೆವು~ ಎಂದರು.

`ಈ ಯೋಜನೆಯು ಸಾರ್ವಜನಿಕ ಸ್ಥಳಗಳಿಗೆ ಅಳವಡಿಸಲಿಲ್ಲ. ಹಾಗೆ ಅಳವಡಿಸಿದ್ದರೆ ನೀರು ಪೋಲಾಗುತ್ತಿತ್ತು. ಇದಕ್ಕಾಗಿ ಮನೆಗಳಿಗೆ ಸೌಲಭ್ಯ ಕಲ್ಪಿಸಿದ್ದೇವೆ. ಶುಲ್ಕ ವಿಧಿಸುವುದರಿಂದ ನೀರು ಪೋಲಾಗದಂತೆ ಬಳಸುತ್ತಾರೆ~ ಎಂದರು.

ಸಭೆಯಲ್ಲಿ ವಿಶ್ವಬ್ಯಾಂಕಿನ ಆರ್ಥಿಕ ತಜ್ಞೆ ಎಲಿಸಾ ಮುಜಿನಿ, ಮೇಯರ್ ಪೂರ್ಣಾ ಪಾಟೀಲ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ಕೃಷ್ಣಮೂರ್ತಿ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ.ಕೆ. ಮನಗೊಂಡ, ಪಾಲಿಕೆ ಸದಸ್ಯರಾದ ಗಾಯತ್ರಿ ಕನವಳ್ಳಿ, ಪ್ರಕಾಶ ಘಾಟಗೆ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT