ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಿರಂತರ ಮೌಲ್ಯಮಾಪನ' ಪ್ರಸಕ್ತ ವರ್ಷ ಜಾರಿ

ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕಾರ್ಯಕ್ರಮ
Last Updated 5 ಏಪ್ರಿಲ್ 2013, 19:39 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ `ನಿರಂತರ ಮೌಲ್ಯಮಾಪನ' (ಸಿಇಕ್ಯೂಇ) ಕಾರ್ಯಕ್ರಮ ರೂಪಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಬಿ.ಎಲ್.ಭಾಗ್ಯಲಕ್ಷ್ಮಿ ತಿಳಿಸಿದರು.

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜು ವತಿಯಿಂದ ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಸಂಸ್ಥೆಯ (ನ್ಯಾಕ್) ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಸುಧಾರಣೆ' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಟ್ಟು 350 ಪ್ರಥಮ ದರ್ಜೆ ಕಾಲೇಜುಗಳು ಕಾಲೇಜು ಶಿಕ್ಷಣ ಇಲಾಖೆ ಅಡಿ ಇವೆ. ಈಗಾಗಲೇ `ಪೈಲೆಟ್' ಯೋಜನೆ ಅಡಿ ಆರು ವಿಭಾಗಗಳನ್ನು ಮಾಡಿಕೊಂಡು, ಒಂದೊಂದು ವಿಭಾಗದಲ್ಲಿ ಹತ್ತರಂತೆ ಒಟ್ಟು ಅರವತ್ತು ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಪರಿಶೀಲನೆ ಕೈಗೊಳ್ಳಲಾಗಿದೆ. ಈಗ `ನಿರಂತರ ಮೌಲ್ಯಮಾಪನ' ಕಾರ್ಯಕ್ರಮದಡಿ ಎಲ್ಲಾ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದರು.

ಪಾಠದ  ವಿಧಾನ, ವಿದ್ಯಾರ್ಥಿಗಳ ಅಭಿಪ್ರಾಯ, ಆಡಳಿತದ ನಿರ್ವಹಣೆ ಮತ್ತು ಮೂಲಸೌಕರ್ಯ ಮುಂತಾದ ವಿಷಯಗಳ ಕುರಿತಾಗಿ ಪ್ರಶ್ನೆಗಳನ್ನು ಹೊಂದಿರುವ ಸ್ವಯಂ ಮೌಲ್ಯಮಾಪನ ಕೈಪಿಡಿಯನ್ನು ಎಲ್ಲಾ ಕಾಲೇಜುಗಳಿಗೂ ನೀಡಲಾಗುವುದು. ಕಾಲೇಜುಗಳು ಕೈಪಿಡಿಯಲ್ಲಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ, ಆರು ತಿಂಗಳಿಗೆ ಒಮ್ಮೆ ವರದಿ ನೀಡಬೇಕು. ವರದಿಯಲ್ಲಿ ನಿಜಾಂಶ ಇದಯೇ ಎಂಬ ಬಗ್ಗೆಇಲಾಖೆ ಸಿಬ್ಬಂದಿಗಳು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಈ ಸಂಬಂಧ ಈಗಾಗಲೇ 60 ಮಂದಿಗೆ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.

ಯುಜಿಸಿ ನೀಡಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 1950ರಲ್ಲಿ 16 ವಿಶ್ವವಿದ್ಯಾಲಯಗಳು ಇದ್ದವು. 2011ರ ವೇಳೆಗೆ  ವಿಶ್ವವಿದ್ಯಾಲಯಗಳ ಸಂಖ್ಯೆ 700ಕ್ಕೆ ಏರಿದೆ. ಅಲ್ಲದೆ 38 ಸಾವಿರ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶೇಕಡ 30 ದಾಖಲಾತಿ ಸಾಧಿಸಲು 2020ರ ವೇಳೆಗೆ ಇನ್ನೂ 1500 ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆ ಎಂದು ಪ್ರೊ.ಯಶಪಾಲ್ ವರದಿ ಹೇಳಿದೆ. ಆದರೆ ಕಾಲೇಜುಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ ಸಾಲದು ಶಿಕ್ಷಣದ ಗುಣಮಟ್ಟವೂ ಉತ್ತಮವಾಗಿರಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಖಾತ್ರಿ ಸಲಹೆಗಾರ್ತಿ ಪ್ರೊ.ಶಕುಂತಲಾ ಕಾಟ್ರೆ, ಮಾತನಾಡಿ ದೇಶದ 38 ಸಾವಿರ ಕಾಲೇಜುಗಳಲ್ಲಿ ಕೇವಲ 4 ಸಾವಿರ ಕಾಲೇಜುಗಳು ಮಾತ್ರ ನ್ಯಾಕ್‌ನಿಂದ ಮಾನ್ಯತೆ ಪಡೆದಿವೆ. ಕಾಲೇಜುಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಕೌಶಲ್ಯಗಳನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ನಿರ್ದೇಶಕಿ ಡಾ.ಟಿ.ಎಲ್.ಶಾಂತಾ ವಹಿಸಿದ್ದರು. ಪ್ರಾಚರ್ಯೆ ಪ್ರೊ.ಎಚ್.ಸರಸ್ವತಮ್ಮ, ಪ್ರೊ.ಸುಶ್ಮಾ ಭಾವ್ಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT