ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಣಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಂಪೆನಿಯೊಂದಕ್ಕೆ ನಿವೇಶನ ನೀಡುವ ವಿಷಯದಲ್ಲಿ ಪಕ್ಷಪಾತ ತೋರಿದ ಆರೋಪದ ಅಡಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಲೋಕಾಯುಕ್ತ ಪೊಲೀಸರಿಂದ ವಿಚಾರಣೆಗೆ ಒಳಗಾಗುವ ಸಾಧ್ಯತೆ ಇದೆ.

ಪಾಷ್ ಸ್ಪೇಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕಂಪೆನಿಗೆ ಮಂಜೂರಾಗಿರುವ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ಪ್ರೈಸಾಕ್ ಹೌಸಿಂಗ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಲು ನಿರಾಣಿ ಪ್ರಯತ್ನಿಸುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರೊಂದರಲ್ಲಿ ಆರೋಪಿಸಲಾಗಿದೆ.

ಈ ಭೂಮಿಯನ್ನು 2006ರಲ್ಲಿ ಪಾಷ್ ಸ್ಪೇಸ್ ಕಂಪೆನಿಗೆ ಮಂಜೂರು ಮಾಡಲಾಗಿತ್ತು. ಆದರೆ ಪ್ರೈಸಾಕ್ ಕಂಪೆನಿ ಆಗಸ್ಟ್ 2010ರಲ್ಲಿ ಇದೇ ಭೂಮಿಯಲ್ಲಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರವನ್ನು ಕೋರಿತು. ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಿದ್ದ ನಿರಾಣಿ ಅವರು ಪ್ರೈಸಾಕ್ ಕಂಪೆನಿಗೆ ಈ ಜಮೀನು ನೀಡಲು ನಿರಾಕರಿಸಲಿಲ್ಲ.

ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಪಾಷ್ ಕಂಪೆನಿ ಈ ವಿಚಾರದ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿತ್ತು. ಆದರೆ ಆರೋಪಿಗಳ ಪಟ್ಟಿಯಲ್ಲಿ ನಿರಾಣಿ ಅವರನ್ನೂ ಸೇರಿಸಬೇಕು ಎಂದು ಪಾಷ್ ಕಂಪೆನಿ ಶುಕ್ರವಾರ (ಸೆ. 2) ಲೋಕಾಯುಕ್ತರನ್ನು ಕೋರಿದೆ.

`ಕಾನೂನಿನ ಪ್ರಕಾರ ಈ ಭೂಮಿ ನಮಗೆ ಸೇರಿದ್ದು ಎಂಬುದು ನಿರಾಣಿ ಅವರಿಗೆ ತಿಳಿದಿದೆ. ಆದರೂ ಅವರು ಪ್ರೈಸಾಕ್ ಕಂಪೆನಿಯ ಪ್ರಸ್ತಾವವನ್ನು ತಿರಸ್ಕರಿಸಲು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಣಿ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ನಾವು ಲೋಕಾಯುಕ್ತರನ್ನು ಕೋರಿದ್ದೇವೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆತಿದೆ~ ಎಂದು ಪಾಷ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆಲಂ ಪಾಷಾ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ನಿರಾಣಿ, `ಪಾಷ್ ಸ್ಪೇಸ್ ಕಂಪೆನಿಗೆ ನಿಗದಿ ಮಾಡಿದ್ದ ಗಡುವಿನ ಒಳಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅದು ಆರೋಪ ಮಾಡುತ್ತಿದೆ~ ಎಂದು ತಿಳಿಸಿದರು.

`ಆ ಭೂಮಿಯನ್ನು ಯಾವ ಯೋಜನೆಗೆ ನೀಡಲಾಗಿತ್ತೋ ಅದೇ ಯೋಜನೆ ಅಲ್ಲಿ ಅನುಷ್ಠಾನಕ್ಕೆ ಬರಬೇಕು ಎಂಬುದು ನಮ್ಮ ಆಶಯ~ ಎಂದು ಅವರು ಹೇಳಿದರು. ಆದರೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ) ಮತ್ತು ಪಾಷ್ ಕಂಪೆನಿಯ ನಡುವೆ ಆಗಿರುವ ಒಪ್ಪಂದದಲ್ಲಿ ಯೋಜನೆಯ ಅನುಷ್ಠಾನಕ್ಕೆ ನಿರ್ದಿಷ್ಟ ಗಡುವು ವಿಧಿಸಲಾಗಿಲ್ಲ.

2003ರಲ್ಲಿ ಪಾಷ್ ಕಂಪೆನಿ ತನ್ನ ಯೋಜನೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. `ದೊಡ್ಡತೋಗೂರು ಮತ್ತು ಚಿಕ್ಕತೋಗೂರಿನಲ್ಲಿ ನಾವು ಜಮೀನು ಖರೀದಿ ಮಾಡಿದ್ದೆವು. (ಸರ್ವೆ ಸಂಖ್ಯೆ ಕ್ರಮವಾಗಿ: 133/1, 2, 3, 5, 6 ಮತ್ತು 41/1.) ಆದರೆ ಅಂದಿನ ಸರ್ಕಾರ ಈ ವ್ಯವಹಾರದಲ್ಲಿ ಕೆಐಎಡಿಬಿ ಕೂಡ ಭಾಗಿಯಾಗಬೇಕು ಎಂದು ತೀರ್ಮಾನಿಸಿತು~ ಎಂದು ಪಾಷಾ ಅವರು ತಿಳಿಸಿದರು.

`ಒಪ್ಪಂದದಲ್ಲಿ ಯಾವುದೇ ಗಡುವು ವಿಧಿಸದ ಕಾರಣ ಪ್ರಕ್ರಿಯೆ ಪೂರ್ಣಗೊಳಿಸಲು ನಾವು ನಮ್ಮ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಿದೆವು~ ಎಂದು ಪಾಷಾ ಹೇಳಿದರು.

ಕರ್ನಾಟಕ ಉದ್ಯೋಗ ಮಿತ್ರಕ್ಕೆ ಪಾಷ್ ಕಂಪೆನಿ ಸಂಸ್ಕರಣಾ ಶುಲ್ಕ ಪಾವತಿಸಿದೆ. ಪರಿಗಣಿಸಬಹುದಾದ ಮೊತ್ತ 1,66,01,000 ರೂಪಾಯಿಯನ್ನು ಕೆಐಎಡಿಬಿಗೆ ಪಾವತಿಸಿದೆ.

ಇದರ ನಂತರ ಕೆಐಎಡಿಬಿ 2004ರ ಡಿಸೆಂಬರ್ ಮತ್ತು 2006ರ ನವೆಂಬರ್‌ನಲ್ಲಿ ಈ ಭೂಮಿಯನ್ನು ಪಾಷ್ ಕಂಪೆನಿಗೆ ಹಸ್ತಾಂತರ ಮಾಡಿತು. ಈ ಭೂಮಿಯ ಮೇಲೆ ಪಾಷ್ ಕಂಪೆನಿ ಒಡೆತನ ಹೊಂದಿದೆ ಎಂದು ಕೆಐಎಡಿಬಿ ಖಚಿತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT