ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾತಂಕವಾಗಿ ನಡೆದ ಗುಟ್ಕಾ ಮಾರಾಟ

ಜಿಲ್ಲಾಡಳಿತದ ಕೈಸೇರಿದ ಸರ್ಕಾರದ ಆದೇಶ ಪತ್ರ
Last Updated 4 ಜೂನ್ 2013, 5:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದೆಡೆ ಅಪೂರ್ಣ ಮಾಹಿತಿ ಒಳಗೊಂಡ ಸರ್ಕಾರಿ ಆದೇಶವನ್ನು ಹಿಡಿದುಕೊಂಡು ದಾಳಿಗಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಇನ್ನೊಂದೆಡೆ ಎಷ್ಟೇ ಹಣ ತೆತ್ತಾದರೂ `ಕೊನೆಯ ಗುಟುಕು' ಸವಿಯಲು ಸಿದ್ಧರಾಗಿರುವ ಗ್ರಾಹಕರು. ಕೊಡುವ ಮತ್ತು ಬಚ್ಚಿಡುವ ಗೊಂದಲದಲ್ಲಿರುವ ಅಂಗಡಿಯವರು ಮತ್ತೊಂದು ಕಡೆ. ಇದೆಲ್ಲದರ ನಡುವೆ ನಗರದಲ್ಲಿ ಗುಟ್ಕಾ ವ್ಯಾಪಾರ ನಿರಾತಂಕವಾಗಿ ನಡೆಯುತ್ತಿದೆ.

ವಿಶ್ವ ತಂಬಾಕು ರಹಿತ ದಿನವಾದ ಮೇ 31ರಂದು ರಾಜ್ಯದಲ್ಲಿ ಗುಟ್ಕಾವನ್ನು ಸರ್ಕಾರ ನಿಷೇಧಿಸಿತ್ತು. ಮರುದಿನ ಜಿಲ್ಲಾಡಳಿತಗಳಿಗೆ ಈ ಕುರಿತ ಆದೇಶವನ್ನು ಕಳುಹಿಸಿದೆ. ಆದರೆ ಗುಟ್ಕಾ ಮಾರಾಟ, ಸೇವನೆ ಇತ್ಯಾದಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶದಲ್ಲಿ ಸ್ಪಷ್ಟ ಮಾರ್ಗದರ್ಶನ ಇಲ್ಲದ ಕಾರಣ ಪರಿಣಾಮಕಾರಿ ಹೆಜ್ಜೆ ಇಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.

ನಿಷೇಧದ ಹಿನ್ನೆಲೆಯಲ್ಲಿ ಗುಟ್ಕಾ ಮಾರಾಟ ಮಾಡಿದರೆ ಯಾರ ಮೇಲೆ ಕ್ರಮ ಕೈಗೊಳ್ಳಬೇಕು, ಆದೇಶವನ್ನು ಹೇಗೆ  ಜಾರಿಗೆ ತರಬೇಕು ಮೊದಲಾದ ಮಾಹಿತಿಯನ್ನು ನಿರೀಕ್ಷಿಸಿದ್ದ ಅಧಿಕಾರಿಗಳಿಗೆ ಆದೇಶಪತ್ರ ನಿರಾಸೆ ಮೂಡಿಸಿದೆ. ಆದರೂ ಕಾರ್ಯಪ್ರವೃತ್ತರಾಗಿರುವ ಅವರು ಗುಟ್ಕಾ ಮಾರಾಟ ಮಾಡದಂತೆ ವರ್ತಕರಿಗೆ  ಸೂಚಿಸುತ್ತಿದ್ದಾರೆ.

`ಜಿಲ್ಲಾಡಳಿತಕ್ಕೆ ಬಂದ ಸರ್ಕಾರದ ಆದೇಶವನ್ನು ಆರೋಗ್ಯ ಇಲಾಖೆಗೆ ಕಳುಹಿಸಿದ್ದು ಗುಟ್ಕಾ ನಿಷೇಧವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಸರ್ಕಾರದಿಂದ ಸ್ಪಷ್ಟ ಸೂಚನೆ ಬರದಿದ್ದರೆ ಜಿಲ್ಲಾಡಳಿತ ಸ್ಥಳೀಯವಾಗಿ ಯೋಜನೆ ಹಾಕಿಕೊಳ್ಳಲಿದೆ' ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ `ಪ್ರಜಾವಾಣಿ'ಗೆ ತಿಳಿಸಿದರು.

`ರಾಜ್ಯದಲ್ಲಿ ಗುಟ್ಕಾ ನಿಷೇಧಿಸಲಾಗಿದ್ದು ಆರೋಗ್ಯ ಇಲಾಖೆ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂಬ ಮಾಹಿತಿ ಇರುವ ಸರ್ಕಾರಿ ಆದೇಶಪತ್ರ ಕೈಸೇರಿದೆ. ತಕ್ಷಣ ಎಚ್ಚೆತ್ತುಕೊಂಡು ಗುಟ್ಕಾ ಮಾರಾಟ ತಡೆಯಲು ಮುಂದಾಗಿದ್ದೇವೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ. ಎನ್. ಅಂಗಡಿ ತಿಳಿಸಿದರು.

ಮಾಯವಾಗದ ಮಾಲೆ
ಸರ್ಕಾರಿ ಆದೇಶ ಮತ್ತು ಅಧಿಕಾರಿಗಳ ದಾಳಿಯ ನಡುವೆಯೂ ಅಂಗಡಿಗಳಲ್ಲಿ ಗುಟ್ಕಾ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಪೆಟ್ಟಿಗೆ ಅಂಗಡಿಗಳಲ್ಲಿ ಗುಟ್ಕಾ ಚೀಟಿಗಳ ಮಾಲೆಗಳು ಇನ್ನೂ ಮಾಯವಾಗಿಲ್ಲ. ಆರಂಭದಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಿದ ವರ್ತಕರು ಈಗ ಮೊದಲಿನಂತೆ ಅಂಗಡಿಗಳ ಮುಂದೆಯೇ ಮಾಲೆಗಳನ್ನು ತೂಗುಹಾಕಿದ್ದಾರೆ.

`ತಂದಿಟ್ಟ ಮಾಲು ಏನು ಮಾಡಲಾಗುತ್ತದೆ. ಅಧಿಕಾರಿಗಳು ಬಂದು ಮಾರಬೇಡಿ ಎಂದು ಹೇಳಿದರೂ ಸ್ಟಾಕ್ ಮುಗಿಯುವವರೆಗೆ ಮಾರಲೇಬೇಕು' ಎನ್ನುತ್ತಾರೆ ಉಣಕಲ್ ಅಂಗಡಿಯೊಂದರ ಮಾಲೀಕರು. 

ಅಂಗಡಿಯಲ್ಲಿ ಸಿಗುವಷ್ಟು ದಿನ ಗುಟ್ಕಾ ಜಗಿಯುವ ಗೀಳನ್ನು ಮುಂದುವರಿಸಲು ಗ್ರಾಹಕರು ಕೂಡ ನಿರ್ಧರಿಸಿದ್ದಾರೆ. `ಚಟ ಬಿಡಲು ಆಗುತ್ತಿಲ್ಲ. ಸರ್ಕಾರ ನಿಷೇಧ ಹೇರಿದ್ದರೂ ಮನಸ್ಸು ಕೇಳುವುದಿಲ್ಲ. ಸಿಗುವಷ್ಟು ದಿನ ಹಾಕುವುದು, ನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಲಾಗುವುದು' ಎನ್ನುತ್ತಾರೆ ವಿಶ್ವೇಶ್ವರ ನಗರ ನಿವಾಸಿ ಶಿವಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT