ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಸೆಯ ನಡುವೆ ಆಶಾಕಿರಣ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ತಮ್ಮ ಮುಂದಿದ್ದ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಗೆದ್ದುಕೊಂಡ ಭಾರತ ಹಾಕಿ ತಂಡಕ್ಕೆ ಸೂಕ್ತ ಗೌರವ ಲಭಿಸದ್ದು ದುರದೃಷ್ಟ ಎನ್ನಬೇಕು.

ದೇಶದಲ್ಲಿ ಹಾಕಿ ಕ್ರೀಡೆಯ ಆಡಳಿತ ನೋಡಿಕೊಳ್ಳುತ್ತಿರುವವರು ಯಾರು? ಏನಾದರೂ ವಿವಾದ ಉಂಟಾದರೆ ಬಗೆಹರಿಸಲು ಯಾರಿದ್ದಾರೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಾಕಿ ಕ್ರೀಡೆಯನ್ನು ಪ್ರತಿನಿಧಿಸುತ್ತಿರುವ ಸಂಸ್ಥೆ ಯಾವುದು?

`ರಾಷ್ಟ್ರೀಯ ಕ್ರೀಡೆ~ಯ ಬಗ್ಗೆ ತಿಳಿದಿರುವ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಗಳಿವು. ಇದಕ್ಕೆ ಸ್ಪಷ್ಟ ಉತ್ತರ ಲಭಿಸುತ್ತಿಲ್ಲ. ರಾಜ್ಪಾಲ್ ಸಿಂಗ್ ನೇತೃತ್ವದ ಭಾರತ ತಂಡದ ಆಟಗಾರರನ್ನೂ ಇಂತಹ ಪ್ರಶ್ನೆಗಳು ಕಾಡುತ್ತಿರಬಹುದು.

ಹಾಕಿ ಇಂಡಿಯಾ ಮತ್ತು ಭಾರತ ಹಾಕಿ ಫೆಡರೇಷನ್ ಎಂಬ ಎರಡು ಸಂಸ್ಥೆಗಳು ಹಾಕಿ ಆಡಳಿತ ನೋಡಿಕೊಳ್ಳಲು ಕಚ್ಚಾಟದಲ್ಲಿ ನಿರತವಾಗಿವೆ. ಇದರ ಪರಿಣಾಮ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯದ ಹಕ್ಕು ಭಾರತದ ಕೈತಪ್ಪಿದೆ.
 
ಯಾವ ಸಂಸ್ಥೆಯ ಮಾತನ್ನು ಕೇಳಬೇಕು ಎಂಬ ಬಗ್ಗೆ ಆಟಗಾರರಿಗೆ ಗೊಂದಲವಿದೆ. ಯಾರ ಆದೇಶ ಪಾಲಿಸಬೇಕು ಎಂಬುದೂ ತಿಳಿಯುತ್ತಿಲ್ಲ.

ಒಂದು ಸಂಸ್ಥೆಯ ಮಾತನ್ನು ಕೇಳಿದರೆ ಇನ್ನೊಬ್ಬರ ಕೆಂಗಣ್ಣಿಗೆ ಗುರಿಯಾಬೇಕಾದ ಪರಿಸ್ಥಿತಿ. ಈ ದೇಶದಲ್ಲಿ ಹಾಕಿ ಕ್ರೀಡೆಯ ಸುತ್ತ ಅಂಧಕಾರ ಆವರಿಸಿದೆ. ಸೂಕ್ತ ಮಾರ್ಗದರ್ಶನ ಲಭಿಸದೆ ಆಟಗಾರರು ಕತ್ತಲೆಯಲ್ಲಿ ತಡಕಾಡುತ್ತಿದ್ದಾರೆ.

ಇಂತಹ ಅಂಧಕಾರದ ನಡುವೆಯೂ ಆಶಾಕಿರಣವೊಂದು ಮೂಡಿಬಂದಿದೆ. ಅದು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ದೊರೆತ ಗೆಲುವು.

ಸಂದಿಗ್ಧ ಪರಿಸ್ಥಿತಿಯಲ್ಲೂ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಟ್ರೋಫಿ ಜಯಿಸಿದ ಸಾಧನೆಯನ್ನು ಭಾರತ ತಂಡ ಮಾಡಿದೆ. ಚೀನಾದ ಓರ್ಡೊಸ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಲಭಿಸಿದ ಜಯ  ಒಂದು ರೀತಿಯಲ್ಲಿ ಶುಭ ಸೂಚನೆ.

ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಟ್ರೋಫಿ ಎತ್ತಿಹಿಡಿದ ಆ ಕ್ಷಣವನ್ನು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ.ಬಿಕ್ಕಟ್ಟಿನ ನಡುವೆ ಮೂಡಿಬಂದ ಈ ಸಾಧನೆ ದೇಶದ ಹಾಕಿ ಕ್ರೀಡೆಯಲ್ಲಿ ಹೊಸ ಶಕೆಗೆ ನಾಂದಿಹಾಡಲಿದೆಯೇ ಎಂಬುದನ್ನು ನೋಡಬೇಕು.

ರಾಜ್ಪಾಲ್ ನೇತೃತ್ವದ ತಂಡ ಹಾಕಿ ಕ್ರೀಡೆಗೆ ಎದುರಾಗಿರುವ ಕೆಟ್ಟ ಪರಿಸ್ಥಿತಿಯನ್ನು ಮರೆತು ಅಂಗಳದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿತು. ಮಾತ್ರವಲ್ಲ ಹಾಕಿ ಕ್ರೀಡೆಯ ಮೇಲಿನ ಸಂಪೂರ್ಣ ಭರವಸೆ ಕೈಬಿಡಬೇಡಿ ಎಂಬ ಸಂದೇಶವನ್ನು ಅಭಿಮಾನಿಗಳಿಗೆ ನೀಡಿತು.

ಸರ್ಕಾರಕ್ಕೆ, ಆಡಳಿತ ನೋಡಿಕೊಳ್ಳುವವರಿಗೆ ರಾಷ್ಟ್ರೀಯ ಕ್ರೀಡೆಯ ಬೆಳವಣಿಗೆ ಬೇಕಿಲ್ಲ. ಆದರೆ ಹಾಕಿ ಮೇಲೆ ಮೋಹ ಹೊಂದಿರುವ ಕೆಲವು ಹುಡುಗರು ಇನ್ನೂ ಈ ದೇಶದಲ್ಲಿರುವುದು ಅದೃಷ್ಟ ಎನ್ನಬೇಕು.

ಓರ್ಡೊಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಕೆಲವು ಯುವ ಪ್ರತಿಭೆಗಳು ನೀಡಿದ ಪ್ರದರ್ಶನ ಹಾಕಿ ಕ್ರೀಡೆಗೆ ಉಜ್ವಲ ಭವಿಷ್ಯ ಇದೆ ಎಂಬುದನ್ನು ತೋರಿಸಿಕೊಟ್ಟಿದೆ.

ಸೂಕ್ತ ಬೆಂಬಲ ಇಲ್ಲದಿದ್ದಾಗ ಉತ್ತಮ ಪ್ರದರ್ಶನ ನೀಡುವುದು ಸುಲಭವಲ್ಲ. ಆದರೆ ಈ ಯುವ ಪ್ರತಿಭಾನ್ವಿತರು ಅದನ್ನೂ ಮಾಡಿ ತೋರಿಸಿದ್ದಾರೆ. ಆದರೆ ಚಾಂಪಿಯನ್ ತಂಡ ತವರಿಗೆ ಬಂದಿಳಿದ ಬಳಿಕ ತಕ್ಕ ಗೌರವ ಲಭಿಸದ್ದು ದುರದೃಷ್ಟ ಎನ್ನಬೇಕು.
 
ತಂಡದ ಆಟಗಾರರಿಗೆ ಹಾಕಿ ಇಂಡಿಯಾ ಮೊದಲು ಪ್ರಕಟಿಸಿದ್ದು ಕೇವಲ ರೂ. 25000 ಮಾತ್ರ. ಅದನ್ನು ಆಟಗಾರರು ನಯವಾಗಿ ತಿರಸ್ಕರಿಸಿದ್ದರು. ಆ ಬಳಿಕ ಕ್ರೀಡಾ ಸಚಿವ ಅಜಯ್ ಮಾಕನ್ ತಲಾ 1.5 ಲಕ್ಷ ರೂ. ಪ್ರಕಟಿಸಿದರು.

ಕರ್ನಾಟಕ ಸರ್ಕಾರ ತಂಡದಲ್ಲಿದ್ದ ರಾಜ್ಯದ ನಾಲ್ಕು ಆಟಗಾರರಿಗೆ ತಲಾ ರೂ. 5 ಲಕ್ಷ ಪ್ರಕಟಿಸಿತು. ಅನಂತರ ಕೆಲವೊಂದು ರಾಜ್ಯಗಳು ಬಹುಮಾನ ಮೊತ್ತ ಪ್ರಕಟಿಸತೊಡಗಿದವು.

ಈ ಸಾಧನೆ ಆಟಗಾರರ ಆರ್ಥಿಕ ಪರಿಸ್ಥಿತಿಯನ್ನು ಅಲ್ಪ ಉತ್ತಮಪಡಿಸಿದ್ದು ನಿಜ. ಇದು ಮುಂದಿನ ದಿನಗಳಲ್ಲಿ ಉತ್ತೇಜನಕ್ಕೆ ಕಾರಣವಾಗಬಹುದು. ಈ ಗೆಲುವಿನಿಂದಾಗಿ ತಂಡದಲ್ಲಿದ್ದ ಮಹಾರಾಷ್ಟ್ರದ ಆಟಗಾರ ಯುವರಾಜ್ ವಾಲ್ಮೀಕಿ ಅವರ ಮನೆಗೆ ವಿದ್ಯುತ್ ಸಂಪರ್ಕ ದೊರೆತಿದೆ! ಈ ಯುವ ಆಟಗಾರನನ್ನು ಇದುವರೆಗೆ ಯಾರೂ ಗುರುತಿಸಿರಲಿಲ್ಲ.

ಮಹಾರಾಷ್ಟ್ರ ಸರ್ಕಾರ ಇದೀಗ ಎಚ್ಚೆತ್ತುಕೊಂಡು ಯುವರಾಜ್‌ಗೆ ನೆರವು ನೀಡಿದೆ. ಇಷ್ಟು ವರ್ಷ ಅವರ ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ.ಐಸಿಸಿ ವಿಶ್ವಕಪ್ ಗೆದ್ದ ಕ್ರಿಕೆಟ್ ತಂಡದ ಆಟಗಾರರಿಗೆ ಬಿಸಿಸಿಐ ತಲಾ ಎರಡು ಕೋಟಿ ರೂ. ನೀಡಿತ್ತು.

ಆದರೆ ಈ ದೇಶದಲ್ಲಿ ಕ್ರಿಕೆಟ್ ಮತ್ತು ಹಾಕಿ ಕ್ರೀಡೆಯನ್ನು ಹೋಲಿಸುವುದು ಸರಿಯಲ್ಲ. ಅಜಗಜಾಂತರ ವ್ಯತ್ಯಾಸವಿದೆ. ಪ್ರಚಾರ ಮತ್ತು ಜನಪ್ರಿಯತೆಯ ವಿಚಾರದಲ್ಲಿ ಕ್ರಿಕೆಟ್ `ರಾಷ್ಟ್ರೀಯ ಕ್ರೀಡೆ~ಯನ್ನು ಹಿಂದಿಕ್ಕಿ ಎಷ್ಟೋ ಮುಂದೆ ಸಾಗಿದೆ.

ಈ ಎರಡು ಕ್ರೀಡೆಗಳಿಗೆ ಲಭಿಸುವ ಸೌಲಭ್ಯಗಳಲ್ಲೂ ಸಾಕಷ್ಟು ವ್ಯತ್ಯಾಸ ಕಾಣಬಹುದು. ಆದರೆ ಹಾಕಿ ಇಂಡಿಯಾ `ಹಣ ಇಲ್ಲ~ ಎಂದು ಹೇಳಿ ಕೇವಲ 25 ಸಾವಿರ ಕೊಡಲು ಮುಂದಾಗಿದ್ದು ಮಾತ್ರ ಅವಮಾನ.

ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದಿದ್ದರೂ `ಏಷ್ಯನ್ ಚಾಂಪಿ ಯನ್ಸ್~ ಎನಿಸಿದ ಹುಡುಗರು ಅಭಿನಂದನೆಗೆ ಅರ್ಹರು. ನೂತನ ಕೋಚ್ ಮೈಕಲ್ ನಾಬ್ಸ್ ಹೊಸ ಭರವಸೆ ಮೂಡಿಸಿದ್ದಾರೆ. ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟೂರ್ನಿಯಲ್ಲೇ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ.

ಈ ಟೂರ್ನಿಯ ವೇಳೆ ತಂಡದ ಆಟಗಾರರು ಶೂಗಳ ಕೊರತೆ ಎದುರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಕೆಲವು ಆಟಗಾರರ ಬಳಿ ಸಾಕಷ್ಟು ಶೂ ಇರಲಿಲ್ಲ. ಅಭ್ಯಾಸಕ್ಕೆ ಮತ್ತು ಪಂದ್ಯಗಳಿಗೆ ಒಂದೇ ಜೊತೆ ಶೂ ಬಳಸಬೇಕಿತ್ತು! ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡ ಆಟಗಾರರಿಗೆ ಇಂತಹ ಪರಿಸ್ಥಿತಿ ಎದುರಾದದ್ದು ನಾಚಿಕೆಗೇಡಿನ ಸಂಗತಿ.

ಏನೇ ಇರಲಿ, ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದ್ದ ಹಾಕಿ ಕ್ರೀಡೆಗೆ ಈ ಗೆಲುವು ಮರುಜೀವ ನೀಡಿದೆ. ಲಂಡನ್ ಒಲಿಂಪಿಕ್‌ಗೆ ಅರ್ಹತೆ ಪಡೆಯುವುದು ಭಾರತದ ಮುಂದಿನ ಗುರಿ. ಆದರೆ ಅದು ನಿರೀಕ್ಷಿಸಿದಷ್ಟು ಸುಲಭವಲ್ಲ.
 
ಏಕೆಂದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯದ ಜೊತೆಗೆ ನೇರ ಪ್ರವೇಶದ ಅವಕಾಶ ಭಾರತ ಕಳೆದುಕೊಂಡಿದೆ. ಇನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಚಾಂಪಿಯನ್ಸ್ ಚಾಲೆಂಜ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ನ್ಯೂಜಿಲೆಂಡ್‌ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಿಟ್ಟಿಸಬೇಕಿದೆ.

ಇದರಲ್ಲಿ ವಿಫಲವಾದರೆ   
ಮುಂದಿನ ವರ್ಷ ನಡೆಯುವ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಲಂಡನ್ ಒಲಿಂ ಪಿಕ್‌ಗೆ ಟಿಕೆಟ್ ಗಿಟ್ಟಿಸಬೇಕು. ಇದೊಂದು ಸವಾಲಿನ ಹಾದಿ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯಗಳ ನೇರ ಪ್ರಸಾರ ನೋಡುವ ಭಾಗ್ಯ ಭಾರತದ ಅಭಿಮಾನಿಗಳಿಗೆ ಲಭಿಸಲಿಲ್ಲ.

ನ್ಯೂಸ್ ಚಾನೆಲ್‌ಗಳು ಕೂಡಾ ಪಂದ್ಯದ ತುಣುಕುಗಳನ್ನು ಪ್ರಸಾರ ಮಾಡಲಿಲ್ಲ. ಹಾಕಿ ಕ್ರೀಡೆಯ ಅಪ್ಪಟ ಅಭಿಮಾನಿಗಳು ಪಂದ್ಯದ `ಅಪ್‌ಡೇಟ್~ ತಿಳಿಯಲು ಸಾಕಷ್ಟು ಪ್ರಯಾಸಪಟ್ಟರು.

ರಾಜ್ಪಾಲ್ ಪಡೆ ಪಾಕ್ ವಿರುದ್ಧ ಗೆಲುವು ಪಡೆದಾಗ ಇತ್ತ ಭಾರತದ ಪ್ರಮುಖ ನಗರಗಳಲ್ಲಿ ಯಾರೂ ಬೀದಿಗೆ ಇಳಿದು ಸಂಭ್ರಮಿಸಲಿಲ್ಲ. `ಚಕ್‌ದೇ ಇಂಡಿಯಾ~ ಎಂಬ ಘೋಷಣೆ ಮೊಳಗಲಿಲ್ಲ. ತ್ರಿವರ್ಣ ಧ್ವಜ ಹಾರಾಡಲಿಲ್ಲ. ಹಾಕಿ ಕ್ರೀಡೆಗೆ ಎಂದೂ ಕ್ರಿಕೆಟ್‌ನಷ್ಟು ಗ್ಲಾಮರ್ ಲಭಿಸಲು ಸಾಧ್ಯವಿಲ್ಲವಲ್ಲವೇ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT