ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆ ಹುಸಿಗೊಳಿಸಿದ ಕಾಲುವೆ ಕಾಮಗಾರಿ

Last Updated 11 ಆಗಸ್ಟ್ 2011, 8:40 IST
ಅಕ್ಷರ ಗಾತ್ರ

ರಾಮನಾಥಪುರ: ಈ ಭಾಗದ ಜನರು ಭಾರೀ ನಿರೀಕ್ಷೆ ಇಟ್ಟುಕೊಂಡಿರುವ ಕಟ್ಟೇಪುರ ಅಣೆಕಟ್ಟೆಯ ಕಾಲುವೆಗಳ ದುರಸ್ತಿ ಕಾಮಗಾರಿ ಈಗ ಎಲ್ಲ ನಿರೀಕ್ಷೆಗಳನ್ನು ಹುಸಿಮಾಡಿದೆ. 121.39 ಕೋಟಿ ರೂಪಾಯಿಯ ಕಾಮಗಾರಿ ಸರಿಯಾಗಿ ನಡೆದಿದ್ದರೆ ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ನಾಲ್ಕನೇ ಒಂದರಷ್ಟು ಕಾಮಗಾರಿಯೂ ನಡೆದಿಲ್ಲ. ನಾಲೆಗೆ ನೀರು ಬಿಟ್ಟಿರುವುದರಿಂದ ಆಗಿರುವ ಕಾಮಗಾರಿಯ ಗುಣಮಟ್ಟವೂ  ಈಗ ಬಯಲಾಗಿದೆ.

ನಾಲೆಗಳ ಆಧುನೀಕರಣದ ನೆಪದಲ್ಲಿ ಹೂಳೆತ್ತದೆಯೇ ಕಾಂಕ್ರಿಟ್ ಲೈನಿಂಗ್ ನಿರ್ಮಿಸಿ ಮಣ್ಣು ಸುರಿದಿದ್ದಾರೆ. ಪರಿಣಾಮ ನೀರು ಹರಿಯುತ್ತಿದ್ದಂತೆಯೇ ಮಣ್ಣು (ಆ ಮೂಲಕ ಸರ್ಕಾರದ ಹಣ) ನೀರು ಪಾಲಾಗಿದೆ. ಕಾಮಗಾರಿ ಕಳಪೆಯಾಗಿದೆ. ಇತ್ತ ಗಮನಹರಿಸಿ ಎಂದು ಜನರು ಎಚ್ಚರಿಸಿದ್ದರೂ ಕಿವಿ ಮುಚ್ಚಿಕೊಂಡಿದ್ದುದರ ಪರಿಣಾಮ ಈಗ ಕಂಡುಬಂದಿದೆ. ಕಾಲುವೆಯೇ ಕೊಚ್ಚಿಹೋಗುವ ಅಪಾಯ ಈಗ ಎದುರಾಗಿದೆ.

ಈಚೆಗೆ ಸುರಿದ ಮಳೆಯಿಂದಾಗಿ ಎಡದಂಡೆ ನಾಲೆ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡುವ ಮೊದಲೇ ಕುಸಿಯುವ ಹಂತ ತಲುಪಿತ್ತು. ಈಗ ಇನ್ನಷ್ಟು ಹದಗೆಟ್ಟಿದೆ.

ಶತಮಾನ ಕಂಡ ನಾಲೆ: ರೈತರಿಗೆ ಉಪಕಾರವಾಗಲಿ ಎಂಬ ಉದ್ದೇಶದಿಂದ ಸುಮಾರು ಒಂದು ಶತಮಾನ ಹಿಂದೆ ಮೈಸೂರು ಅರಸರು ಕಟ್ಟೇಪುರ ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಿಸಿದ್ದರು. ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ಅರಕಲಗೂಡು ತಾಲ್ಲೂಕಿನ 3026 ಹಾಗೂ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ 5744 (ಒಟ್ಟು 8770) ಎಕರೆ ಜಮೀನಿಗೆ ನೀರು ಒದಗಿಸಲಾಗುತ್ತಿತ್ತು. ಈ ಭಾಗದಲ್ಲಿ ಹೆಚ್ಚಾಗಿ ಭತ್ತವನ್ನೇ ಬೆಳೆಯುತ್ತಿದ್ದರು.

ಕಾಲ ಕಳೆದಂತೆ ಅಣೆಕಟ್ಟೆಯ ನಾಲೆಗಳು ಶಿಥಿಲವಾದವು. ಇದರಿಂದ ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಯದಂತಾಯಿತು. ನಾಲೆಗಳ ಆಧುನೀಕರಣ ಮಾಡಬೇಕು ಎಂದು ರೈತರು ಹಲವು ವರ್ಷಗಳಿಂದ ಒತ್ತಾಯ ಮಾಡುತ್ತ ಬಂದಿದ್ದರು. ರೈತರ ಹಲವು ವರ್ಷಗಳ ಒತ್ತಾಯಕ್ಕೆ ಮಣಿದ ಸರ್ಕಾರ 2010ರಲ್ಲಿ 121.39 ಕೋಟಿ ರೂಪಾಯಿ ಬಿಡುಗಡೆ ಮಾಡಿತು. ಇದರಿಂದ ಹಲವು ವರ್ಷಗಳ ನಮ್ಮ ಬೇಡಿಕೆ ಈಡೇರಿದೆ, ಸದ್ಯದಲ್ಲೇ ಸರಾಗವಾಗಿ ನೀರು ಬರಲಿದೆ ಎಂಬ ಭಾವನೆ ರೈತರಲ್ಲಿ ಮೂಡಿತ್ತು.

ಕಾಮಗಾರಿಯ ಗುತ್ತಿಗೆ ಪಡೆದಿದ್ದ ಬೆಂಗಳೂರಿನ ಎಸ್.ಎನ್.ಸಿ. ಪವರ್ ಕಾರ್ಪೊರೇಷನ್ ಕಂಪೆನಿ ಕಳೆದ ಫೆಬ್ರುವರಿ ತಿಂಗಳಿನಲ್ಲಿ ಕಟ್ಟೇಪುರ ಬಳಿ ನಾಲೆಗೆ ಸಿಮೆಂಟ್ ಕಾಂಕ್ರಿಟ್ ಲೈನಿಂಗ್ ಕೆಲಸ ಆರಂಭಿಸಿತು. ಟೆಂಡರ್ ಕರಾರಿನಂತೆ ಸೆಪ್ಟೆಂಬರ್ ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ಇನ್ನೂ ಕಾಲು ಭಾಗ ಕೆಲಸವೂ ಆಗಿಲ್ಲ. ಕಳೆದ ಜೂನ್ ತಿಂಗಳ ಅಂತ್ಯದಲ್ಲಿ ನಾಲೆಗಳ ಕೆಲಸ ಸ್ಥಗಿತಗೊಂಡಿದೆ.

ಪ್ರಾರಂಭದಲ್ಲೇ ತೆವಳುತ್ತಾ ಸಾಗಿದ್ದ ನಾಲೆಗಳ ಆಧುನೀಕರಣ ಕಾರ್ಯವನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಆಧುನೀಕರಣದ ನೆಪದಲ್ಲಿ ನಾಲೆಯ ಆಕಾರವೇ ಹದಗೆಟ್ಟಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಸರ್ಕಾರದ ಹಣ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನೀರಾವರಿ ಇಲಾಖೆ ಅಧಿಕಾರಿಗಳ ಮೇಲಿತ್ತು. ಆದರೆ ಸಂಬಂಧಪಟ್ಟ ನೀರಾವರಿ ಎಂಜಿನಿಯರ್ ಗುಣಮಟ್ಟದ ಕಡೆಗೆ ನಿಗಾ ವಹಿಸಿಲ್ಲ. ನಾಲೆಗಳಲ್ಲಿ ಕಳಪೆ ಕೆಲಸ ಎಗ್ಗಿಲ್ಲದೇ ಸಾಗಿದ್ದರೂ ಕ್ಷೇತ್ರದ ಶಾಸಕ ಎ. ಮಂಜು ಒಮ್ಮೆಯೂ ಇತ್ತ ತಲೆ ಹಾಕಲಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ನೂರಾರು ಕೋಟಿ ರೂಪಾಯಿ ಹಣ ವ್ಯರ್ಥವಾಗಿ ಪೋಲಾಗುವುದನ್ನು ತಡೆಯಲು ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT