ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುತ್ಸಾಹದಲ್ಲೂ ಬೆಳಕು ಹೊಮ್ಮಿಸಿ...

Last Updated 22 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮನೆಗೆಲಸವೋ, ಕಚೇರಿ ಕೆಲಸವೋ....ನಾವೆಷ್ಟು ಸಲ ಇದೆಂಥ ಕೆಲಸ ಎಂದು ಗೊಣಗುತ್ತ ಇರುತ್ತೇವಲ್ಲ. ನಮಗೆ ಇಷ್ಟವಿಲ್ಲದನ್ನು ನಮ್ಮ ಮೇಲೆ ಹೇರಿದಂತಹ ಭಾವವೊಂದು ಆಗ ಕೆಲಸ ಮಾಡುತ್ತ ಇರುತ್ತದೆ. ನಾನಿದನ್ನು ಮಾಡಲು ಸಾಧ್ಯವಿಲ್ಲ ಎಂಬ ಯೋಚನೆ ಆಗಾಗ್ಗೆ ಬರುತ್ತದೆ.
ಪ್ರತಿರೋಧ, ಸಂಘರ್ಷ ಒಳಗಿನಿಂದ ಭುಗಿಲೇಳುತ್ತದೆ. ಇಂತಹ ಮನೋಭಾವ ತಿಂಗಳುಗಟ್ಟಲೇ ಮುಂದುವರಿದಲ್ಲಿ ನಮ್ಮ ರೋಗನಿರೋಧಕ ವ್ಯವಸ್ಥೆ ಹದಗೆಡುತ್ತದೆ. ಕಾಯಿಲೆ ಬೀಳುತ್ತೇವೆ. ಒಮ್ಮೊಮ್ಮೆ ಆರೋಗ್ಯ ಹದಗೆಡದಿದ್ದರೂ ಒಂದು ರೀತಿಯ ಕಿರಿಕಿರಿ ನಮ್ಮೊಳಗೆ ಇರುತ್ತದೆ.

ನಮ್ಮೊಳಗೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಅಮಾವಾಸ್ಯೆಯ ರಾತ್ರಿ ದೆವ್ವವೊಂದು ತನ್ನ ಕೆಟ್ಟ ಗುಣಗಳನ್ನೆಲ್ಲ ಜನರಿಗೆ ಮಾರಾಟ ಮಾಡಲು ನಿರ್ಧರಿಸಿತು. ಕತ್ತಲು ತುಂಬಿದ ಗ್ಯಾರೇಜ್‌ನಲ್ಲಿ ಈ ಗುಣಗಳನ್ನು ಬಾಟಲಿಯಲ್ಲಿ ಮಾರಾಟಕ್ಕೆ ಇಟ್ಟಿತು. ಈ ಬಾಟಲ್‌ಗಳಿಗೆ ದ್ವೇಷ, ಸ್ವಾರ್ಥ, ಸಿಟ್ಟು, ಅಸೂಯೆ, ಅಹಂಕಾರ......ಇತ್ಯಾದಿ ಲೆಬಲ್ ಅಂಟಿಸಲಾಗಿತ್ತು. ಅಷ್ಟೇ ದುಬಾರಿ ಬೆಲೆಯೂ ಅವುಗಳಿಗಿತ್ತು.

ಕೊಳಕಾದ, ಬಣ್ಣರಹಿತ, ಗೀರು ಬಿದ್ದ ಬಾಟಲಿಯೊಂದು ಎಲ್ಲರ ಗಮನ ಸೆಳೆಯುತ್ತಿತ್ತು. ಅದಕ್ಕೆ ಅತಿ ದುಬಾರಿಯಾದ ಬೆಲೆ ಚೀಟಿ ಅಂಟಿಸಲಾಗಿತ್ತು. ಸಂದರ್ಶಕನೊಬ್ಬ ಅದೇನು ಎಂದು ಪ್ರಶ್ನಿಸಿದ.  ಓ.. ಅದು ನನ್ನ ಅತಿದೊಡ್ಡ ಅಸ್ತ್ರ ಎಂದು ಗಹಗಹಿಸಿತು ದೆವ್ವ. ನನ್ನ ಬೇರೆಲ್ಲ ಉಪಾಯಗಳು ಕೆಲಸ ಮಾಡದಾಗ ಇದರ ಒಂದು ಹನಿಯನ್ನು ವ್ಯಕ್ತಿಯ ತಲೆಯೊಳಗೆ ಹಾಕುತ್ತೇನೆ. ಆಮೇಲೆ ತಣ್ಣಗೆ ಕುಳಿತು ಮಜಾ ತೆಗೆದುಕೊಳ್ಳುತ್ತೇನೆ.

ಕೆಲವರು ಮಹತ್ವದ ಕೆಲಸಗಳನ್ನೆಲ್ಲ ಮುಂದೂಡುತ್ತಾರೆ. ಕೆಲವರು ಕೆಲಸವನ್ನೇ ಬಿಡುತ್ತಾರೆ. ಮತ್ತೆ ಕೆಲವರು ಖಿನ್ನರಾಗುತ್ತಾರೆ. ಇನ್ನೂ ಕೆಲವರು ಕಾಯಿಲೆ ಬೀಳುತ್ತಾರೆ. ಒಂದಿಷ್ಟು ಜನ ಸತ್ತೂ ಹೋಗುತ್ತಾರೆ. ಈ ಬಾಟಲಿ ಬಣ್ಣರಹಿತವಾಗಿದೆ. ಏಕೆಂದರೆ ನಾನು ಇದನ್ನು ಎಲ್ಲರ ಮೇಲೂ ಯಶಸ್ವಿಯಾಗಿ ಪ್ರಯೋಗಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿತು ದೆವ್ವ.

ಅಷ್ಟೊಂದು ಪರಿಣಾಮಕಾರಿಯಾದ ಆ ಗುಣ ಯಾವುದು ಎಂದು ಸಂದರ್ಶಕ ಕೇಳಿದ.
ನಿರುತ್ಸಾಹ...!
ದಯವಿಟ್ಟು ಇದನ್ನು ಆಳವಾಗಿ ಅರ್ಥ ಮಾಡಿಕೊಳ್ಳಿ. ನಾವೆಲ್ಲ ಆ ಅನಂತ ಬೆಳಕಿನ ಭಾಗವಾಗಿದ್ದೇವೆ. ನಮ್ಮೊಳಗೆ ಬೆಳಕು ಇದೆ....ಬೆಳಕು...ಬೆಳಕು...ಮತ್ತು ಬೆಳಕು ಮಾತ್ರ. ಸಂತನೊಬ್ಬ ಇದನ್ನು ಅತ್ಯಂತ ಸುಂದರವಾಗಿ ಬಣ್ಣಿಸಿದ್ದ. “ನಾನೊಂದು ನೀರ್ಗಲ್ಲು. ನನ್ನ ಅತ್ಯಂತ ಆಳದಲ್ಲೂ ಬೆಳಕು ತುಂಬಿದೆ. ನಾನು ಆ ಬೆಳಕಿನಿಂದಲೇ ಜೀವಿಸುತ್ತಿದ್ದೇನೆ. ಆಕಾಶ ಮಿನುಗುವ ನಕ್ಷತ್ರಗಳನ್ನು ಜಗತ್ತಿಗೆ ತೋರಿದಂತೆ ನಾನು ಈ ಬೆಳಕನ್ನು ಹೊರಹೊಮ್ಮಿಸುತ್ತೇನೆ...”

 ಎಂಥದ್ದೇ ಪರಿಸ್ಥಿತಿಯಲ್ಲೂ ಖಿನ್ನತೆಗೆ ಜಾರಬೇಡಿ. ಸಕಾರಾತ್ಮಕವಾಗಿ ಯೋಚಿಸಿ. ಉರಿಯುತ್ತಿರುವ ಮೇಣದಬತ್ತಿಯನ್ನು ತಲೆಕೆಳಗಾಗಿ ಹಿಡಿದರೂ ಸಹ ಜ್ವಾಲೆಗಳು ಮೇಲ್ಮುಖವಾಗಿಯೇ ಉರಿಯುತ್ತವೆ. ಇವೆಲ್ಲ ಎಂಥ ಕೆಲಸ. ಇದನ್ನು ಮಾಡುವುದರಿಂದ ಯಾರು ನನ್ನನ್ನು ಗುರುತಿಸುತ್ತಾರೆ ಎಂದೆಲ್ಲ ಗೊಣಗುತ್ತ ಕೂರಬೇಡಿ. ಈ ಕೆಲಸಕ್ಕೆ ಹೇಗೆ ಬೆಳಕು ತುಂಬಬಹುದು ಎಂದು ಯೋಚಿಸಿ.
ಜಗತ್ತಿಗೆ ಬೆಳಕು ನೀಡಲು ನೀವು ಶ್ರೇಷ್ಠ ಕೆಲಸಗಳನ್ನೇ ಮಾಡಬೇಕಿಲ್ಲ.  ನಿಮ್ಮಲ್ಲಿನ ಅತ್ಯುತ್ತಮ ಗುಣವೇ ನಿಮ್ಮ ಬೆಳಕಾಗುತ್ತದೆ.

ಕಾಲೇಜಿಗೆ ಹೋಗುವಾಗ ನಾನು ನಸುಕಿನಲ್ಲಿ 5.45ಕ್ಕೆ ಎದ್ದು ಫ್ರೆಂಚ್ ಕ್ಲಾಸ್‌ಗೆ ಹೋಗುತ್ತಿದೆ. ಮುಂಗಾರಿನ ಅಬ್ಬರದ ಮಳೆಯಲ್ಲಿ ಕತ್ತಲು ತುಂಬಿರುವಾಗಲೂ ಬಸ್ ಸ್ಟಾಪ್ ಬಳಿಯ ಟೀ ಸ್ಟಾಲ್‌ನಲ್ಲಿ ಲಾಟೀನು ಉರಿಯುತ್ತಿತ್ತು. ಆ ಸ್ಟಾಲ್‌ನ ಬಾಗಿಲು ಎಂದೂ ಮುಚ್ಚುತ್ತಿರಲಿಲ್ಲ. ಆ ದಾರಿಯಲ್ಲಿ ಹೋಗುವವರಿಗೆ ಬಿಸಿ, ಬಿಸಿಯಾದ ಹಿತವಾದ ಟೀ ಸಿಗುತ್ತಿತ್ತು. ನಾನು ನೌಕರಿಗೆ ಸೇರಿದ ಮೇಲೂ ಆ ಸ್ಟಾಲ್‌ನಲ್ಲಿ ಟೀ ಗುಟಕರಿಸುತ್ತಿದೆ. ನನ್ನ ಉತ್ಸಾಹ ಕುಂದಿದಾಗಲೆಲ್ಲ ಕತ್ತಲಲ್ಲಿ ಉರಿಯುವ ಆ ಲಾಟೀನಿನ ಚಿತ್ರ ಕಣ್ಣ ಮುಂದೆ ತುಂಬಿಕೊಳ್ಳುತ್ತೇನೆ.

ನೀವು ಮಾಡುವ ಕೆಲಸವನ್ನೆಲ್ಲ ಪ್ರೀತಿಸಲು ಸಾಧ್ಯವಿಲ್ಲ. ಆದರೆ, ಬದ್ಧತೆ ಮತ್ತು ಶ್ರದ್ಧೆಯಿಂದ ಎಂಥದ್ದೇ ಸಣ್ಣ ಕೆಲಸವನ್ನೂ ಶ್ರೇಷ್ಠವಾಗಿಸಬಹುದು. ಬದ್ಧತೆಗೆ ಬದ್ಧರಾಗಿದ್ದರೆ ಎಂಥ ಸಂದರ್ಭದಲ್ಲೂ ನಿರುತ್ಸಾಹ ಕಾಡಲಾರದು. ಜೀವನವನ್ನು ಸುಂದರಗೊಳಿಸುವುದು ಇದೇ ತತ್ವ.
ಹಾಂ...ಮತ್ತೊಂದು ಮಾತು. ನಿಮಗೆ ಧನ್ಯವಾದ ಹೇಳುತ್ತಾರೆ. ಹೊಗಳುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಬೇಡಿ. ನಿಮ್ಮನ್ನು ಯಾರೂ ಹೊಗಳದಿದ್ದರೂ ದೊರಕುವ ಅನುಭವ,  ನಿಸ್ವಾರ್ಥದಿಂದ ಕೆಲಸ ಮಾಡುವ ಸುಖ ಮತ್ತು ಬದ್ಧತೆ ನಿಮ್ಮನ್ನು ಬೆಳೆಸುತ್ತದೆ. ಮತ್ತಷ್ಟು ಎತ್ತರಕ್ಕೆ ಏರಿಸುತ್ತದೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT