ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ ಸಮಸ್ಯೆ ನೀಗಿಸಿ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ನಿರುದ್ಯೋಗ ಸಮಸ್ಯೆ ನೀಗಿಸಿ

ಸರ್ಕಾರದಿಂದ ಬಡವರಿಗೆಂದೇ ಹಲವು ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ ಅಧಿಕಾರಿಗಳ ಜಿಪುಣತನದಿಂದ ಆ ಯೋಜನೆಗಳ ಫಲವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ವಾಲ್ಮೀಕಿ ನಗರದಲ್ಲಿ ನಿರುದ್ಯೋಗಿಗಳು ಮತ್ತು ಸ್ವಂತ ಉದ್ಯೋಗ ಆರಂಭಿಸಲು ಬಂಡವಾಳವಿಲ್ಲದೇ ಯುವಕ ಯುವತಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಮ್ಮನೆ ಕೂರುವಂತಾಗಿದೆ. ಇವರಲ್ಲಿ ಆಟೊ, ಕಾರ್ ಡ್ರೈವರ್‌ಗಳು, ಚಮ್ಮಾರರು, ಛಾಯಾಚಿತ್ರ ಗ್ರಾಹಕರು ಇನ್ನು ಹಲವು ಉದ್ಯೋಗಾಕಾಂಕ್ಷಿಗಳು ಸುಮ್ಮನೆ ಕಾಲ ಕಳೆಯುವಂತಾಗಿದೆ.

ಇದಕ್ಕೆ ಸರ್ಕಾರಿ ಅಧಿಕಾರಿಗಳು ಯೋಜನೆಗಳನ್ನು ಜಾರಿ ಮಾಡದಿರುವುದೇ ಕಾರಣ. ಆದ್ದರಿಂದ ಈ ಭಾಗದ ನಿವಾಸಿಗಳಾದ ನಾವು ಕೇಳಿಕೊಳ್ಳುವುದೇನೆಂದರೆ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಮುಂದೆ ಬಂದು ವಾಲ್ಮೀಕಿ ನಗರವನ್ನು ದತ್ತು ತೆಗೆದುಕೊಂಡು ಸಾಲದ ವ್ಯವಸ್ಥೆ ಮಾಡಿದರೆ ನೂರಾರು ಕುಟುಂಬಗಳಿಗೆ ಸಹಾಯವಾಗುತ್ತದೆ.  ಈ ಊರಿನಲ್ಲಿ ಬಹಳಷ್ಟು ಜನ ಪರಿಶಿಷ್ಟ ಜಾತಿಯವರು,  ಅಲ್ಪಸಂಖ್ಯಾತರು, ಹಿಂದುಳಿದವರೂ ಇದ್ದಾರೆ. ಆದ್ದರಿಂದ ಯಾವುದಾದರೂ ಬ್ಯಾಂಕುಗಳಾಗಲಿ ಅಥವಾ ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿ ಸಂಸ್ಥೆಯಾಗಲಿ ಮುಂದೆ ಬಂದು ಬಡತನ ಹಾಗೂ ನಿರುದ್ಯೋಗವನ್ನು ನಿವಾರಿಸಲು ಸಹಾಯ ಮಾಡಬೇಕೆಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ.
- ಎಲ್ಲಪ್ಪ

ಟಿಕೆಟ್ ಇರಲಿ

ಕುಂದು ಕೊರತೆ ಡಿ. 30ರ ಸಂಚಿಕೆಯಲ್ಲಿ ಶ್ರೀನಿವಾಸಯ್ಯನವರ ಪ್ರಯತ್ನಕ್ಕೆ ಬಿಎಂಟಿಸಿಯವರು ಸ್ಪಷ್ಟೀಕರಣ ಕೊಡುತ್ತಾ ಹಿರಿಯ ನಾಗರಿಕರ ಸಲುವಾಗಿ ಕೊಟ್ಟಿರುವ ರಿಯಾಯಿತಿ ಪ್ರಕಾರ ಮೊದಲನೇ ಹಂತದ ಪ್ರಯಾಣದ ದರ 4 ರೂ ಬದಲಿಗೆ 3 ರೂ ಚೀಟಿ ಎಂದು ಹೇಳಿದೆ. ಇದರ ಬಗ್ಗೆ ನಿರ್ವಾಹಕ ಸಿಬ್ಬಂದಿಗೆ ಅರಿವು ಇದೆ. ಆದರೆ 3 ರೂ. ಬೆಲೆ ಚೀಟಿ ವ್ಯವಸ್ಥೆ ಮಾಡಿಲ್ಲ. 

  ಒಂದು ವಿಧದಲ್ಲಿ `ಕನ್ನಡಿಯಲ್ಲಿರುವ ಗಂಟು~ ಎನ್ನುವ ಹಾಗೆ. ಇದು ಯಾವ ನ್ಯಾಯ? ಇದಕ್ಕಾಗಿ ಈ ಹಿಂದೆ ಮೊದಲನೆ ಹಂತಕ್ಕೆ 3 ರೂ. ಚಾರ್ಜ್ ಇದ್ದಾಗ ಕೊಡುತ್ತಿದ್ದ ಚೀಟಿಗಳನ್ನು ಈಗ ಯಾಕೆ ಉಪಯೋಗಿಸಬಾರದು. ಅಥವಾ 3 ರೂ. ಗಳ ಚೀಟಿಗಳನ್ನು ಮುದ್ರಿಸಬಹುದಲ್ಲವೇ? ಆದಷ್ಟು ಬೇಗ ಈ ವ್ಯವಸ್ಥೆಯನ್ನು ಸಂಬಂಧಪಟ್ಟವರು ನೆರವೇರಿಸುವರೆಂದು ಆಶಿಸುತ್ತೇನೆ.
- ಗೋವಿಂದಯ್ಯ

ಸ್ಮಾರಕ ಗೌರವ ಪ್ರಕಟಿಸಿ
550ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಎನ್. ನರಸಿಂಹಯ್ಯನವರು ಇನ್ನಿಲ್ಲ ಎನ್ನುವ ಸುದ್ದಿ ಅವರ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ. 

  ಎನ್. ನರಸಿಂಹಯ್ಯ ಸೃಷ್ಟಿಸಿದ ಪತ್ತೇದಾರರಾದ ಪುರುಷೋತ್ತಮ, ಮಧುಸೂದನ, ಅರಿಂಜಯನ, ಸಾಹಸಗಳು, ಅಂದಿನ ಓದುಗರಲ್ಲಿ ಪುಳಕ ಮೂಡಿಸಿದ್ದವು.
  ಆದರೆ ಕನ್ನಡ ಸಾಹಿತ್ಯ ವಿಮರ್ಶೆ ವಲಯದಲ್ಲಿ, ಸಮ್ಮೇಳನಗಳಲ್ಲಿ ಪತ್ತೇದಾರಿ ಕಾದಂಬರಿಗಳ ಹಾಗೂ ಕಾದಂಬರಿಕಾರರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಎನ್. ನರಸಿಂಹಯ್ಯನವರ ಪ್ರತಿಭೆ ಜನಸಾಮಾನ್ಯರಲ್ಲಿ ಜನಪ್ರಿಯವಾದರೂ ಸಾಹಿತ್ಯ ವಲಯದಲ್ಲಿ ಮೂಲೆಗುಂಪಾಯಿತು. ಬಿ.ಬಿ.ಎಂ.ಪಿ. ಬಸವೇಶ್ವರ ನಗರದ ಪ್ರಮುಖ ರಸ್ತೆ, ಉದ್ಯಾನವನ, ವೃತ್ತಕ್ಕೆ ಎನ್. ನರಸಿಂಹಯ್ಯನವರ ಹೆಸರನ್ನು ನಾಮಕರಣ ಮಾಡಿ ಅವರ ಸವಿನೆನಪು ಉಳಿಯುವಂತಹ ಗೌರವ ಪ್ರಕಟಿಸಲಿ. ಪತ್ರಿಕೆಗಳಲ್ಲಿ ಅವರ ಜನಪ್ರಿಯ ಕಾದಂಬರಿಗಳ ಒಂದೆರಡು ಪುಟಗಳು ಪ್ರಕಟವಾಗಲಿ. 60-70ರ ದಶಕದ ಜನಪ್ರಿಯ ಕನ್ನಡ ಕಾದಂಬರಿಕಾರನಿಗೆ ಸರ್ಕಾರ ಸೂಕ್ತ ಸ್ಮಾರಕ ಗೌರವ ಪ್ರಕಟಿಸಲಿ.
- ಕಾಡನೂರು ರಾಮಶೇಷ

ಮೆಟ್ರೋ ನಿಲ್ದಾಣದಲ್ಲಿ ತಡೆಗೋಡೆ ನಿರ್ಮಿಸಿ

ನಮ್ಮ-ಮೆಟ್ರೋ ರೈಲ್ವೆ ನಿಲ್ದಾಣಗಳ ಪ್ಲಾಟ್‌ಫಾರಂಗಳಲ್ಲಿ ಎಳೆದಿರುವ `ಹಳದಿ ಪಟ್ಟಿ~ಯನ್ನು ದಾಟದಂತೆ ಪ್ರಯಾಣಿಕರನ್ನು ನಿಯಂತ್ರಿಸುವ ಕೆಲಸ ಮೆಟ್ರೋ ಸಿಬ್ಬಂದಿ ನಿರ್ವಹಿಸುತ್ತಿರುವುದು ಶ್ಲಾಘನೀಯ. ಆದರೆ ಪ್ರತಿ 15 ನಿಮಿಷಕ್ಕೊಮ್ಮೆ ರೈಲು-ಗಾಡಿಗಳು ಸಂಚರಿಸುವುದರಿಂದ ನಿಲ್ದಾಣಗಳಲ್ಲಿ ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. 

 ಈ ಅಧಿಕ ಸಂಖ್ಯೆಯ ಜನರನ್ನು ನಿಯಂತ್ರಿಸುವುದು ಸಿಬ್ಬಂದಿಗೆ ಕಷ್ಟವಾಗಬಹುದು. ಆದ್ದರಿಂದ ಪ್ರಯಾಣಿಕರ ರಕ್ಷಣೆಗಾಗಿ ದುಬೈ ಮೆಟ್ರೋ ರೈಲ್ವೆ ನಿಲ್ದಾಣದ ಮಾದರಿಯಂತೆ ಇಲ್ಲಿಯೂ ತಡೆಗೋಡೆಗಳನ್ನು ನಿರ್ಮಿಸುವುದು ಸೂಕ್ತ.
- ಎಂ. ಕೃಷ್ಣಯ್ಯ

ಗುಂಡಿ ಮುಚ್ಚಿದ್ದು ಸಾಕು, ಕಾಂಕ್ರೀಟ್ ರಸ್ತೆ ಬೇಕು
ಕರ್ನಾಟಕ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶದ ರಾಜ್ಯ ಹೆದ್ದಾರಿ ರಸ್ತೆಗಳಲ್ಲಿ ಮತ್ತು ಜಿಲ್ಲಾ ಪ್ರಮುಖ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಹತ್ತಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಲೇ ಇದೆ. ಇಂತಹ ರಸ್ತೆಗಳಲ್ಲಿ ಹೊಂಡ ಮುಚ್ಚುವಂತಹ ತೇಪೆ ಹಾಕುವ ಕೆಲಸವನ್ನು ಸರ್ಕಾರ ಮೊದಲು ನಿಲ್ಲಿಸಲಿ.  ಇದರ ಬದಲು ಹೆಚ್ಚುಕಾಲ ಬಾಳಿಕೆ ಬರುವಂತ ಶಾಶ್ವತವಾದಂತಹ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡುವುದು ಒಳ್ಳೆಯದು. ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ.

ಹೊಂಡ ಬಿದ್ದಿರುವ ರಸ್ತೆಗಳಿಗೆ ಲೋಕೋಪಯೋಗಿ ಇಲಾಖೆಯವರು ಪದೇ ಪದೇ ಹಣ ಹೂಡುವ ಬದಲು ಒಂದೇ ಸಲ ಸ್ವಲ್ಪ ಹೆಚ್ಚಿನ ಮೊತ್ತವಾದರೂ ಸರಿಯೇ ಶಾಶ್ವತವಾದಂತಹ ಕಾಮಗಾರಿಗಳನ್ನು ಮಾಡುವುದು ಒಳ್ಳೆಯದು ಇಲ್ಲದಿದ್ದರೆ, ಹೊಂಡ ಮುಚ್ಚುವ ಕಾಮಗಾರಿಗಳಿಗೆ ಹಾಕುವ ಹಣ ಸಮುದ್ರಕ್ಕೆ ಹುಳಿ ಹಿಂಡಿದಂತೆ ನಿರುಪಯುಕ್ತವಾಗುತ್ತದೆ.
- ಕೆ.ಎಸ್. ನಾಗರಾಜ

ಇತ್ತ ಗಮನಕೊಡಿ

ಬೆಂಗಳೂರು ನಗರ ಮಾಗಡಿ ರಸ್ತೆಯ ಕೆಂಪಾಪುರ ಅಗ್ರಹಾರದ 5ನೇ ಮುಖ್ಯ ರಸ್ತೆಯಲ್ಲಿ ವೃಷಭಾವತಿ ಮೇಲ್ಸೆತುವೆ ಸಮಸ್ಯೆಗಳ ಆಗರವಾಗಿದೆ. ಇಲ್ಲಿ ಪ್ರತಿದಿನ ಕಸ ತುಂಬಿ ದುರ್ನಾತ ಬೀರುತ್ತಿರುತ್ತದೆ. ಮೇಲ್ಸೇತುವೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಜಾಗ ಕೊಳಕಾಗಿದೆ. ಇಲ್ಲಿ ರಸ್ತೆಯ ನಾಮಫಲಕ ಬಿದ್ದು 2 ತಿಂಗಳಾದರೂ ಈ ಕುರಿತು ಗಮನಹರಿಸಿಲ್ಲ. 

  ಈ ರಸ್ತೆಯಲ್ಲಿ ಬೀದಿ ದೀಪ ಹೋಗಿ 3 ತಿಂಗಳಾದರೂ ಇದರ ಬಗ್ಗೆ ಕಾಳಜಿ ಮಾಡುವವರೇ ಇಲ್ಲ. ಕಸ ತುಂಬಿದ ಈ ರಸ್ತೆಯಲ್ಲಿ 10-12 ಬೀದಿನಾಯಿಗಳಿದ್ದು ದಾರಿಹೋಕರ ಮೇಲೆ ದಾಳಿ ಮಾಡುತ್ತಿರುತ್ತವೆ. ಮಕ್ಕಳು ನಿರ್ಭಿಡೆಯಿಂದ ಓಡಾಡುವುದೇ ಕಷ್ಟವಾಗಿದೆ.

ಇಷ್ಟಾದರೂ ಇಲ್ಲಿನ ನಗರಪಾಲಿಕೆ ಸದಸ್ಯರಾಗಲೀ  ಶಾಸಕರಾಗಲೀ ವಿಷಯ ತಿಳಿದೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಈ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕಾಗಿ ಕೇಳಿಕೊಳ್ಳುತ್ತೇನೆ.
- ಜಯಲಕ್ಷ್ಮಿ ಶ್ಯಾಮರಾವ್

ರಸ್ತೆ ಸಂಪರ್ಕ ಕಲ್ಪಿಸಿ
ಕೆ. ಆರ್. ಪುರ, ದೇವಸಂದ್ರ ಮುಖ್ಯ ರಸ್ತೆಯಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನ ಮಾರ್ಗವಾಗಿ ಗರುಡಾಚಾರ್ ಪಾಳ್ಯ ಮುಖ್ಯ ರಸ್ತೆಗೆ (ವೈಟ್‌ಫೀಲ್ಡ್) ಹೊಂದಿಕೊಂಡಂತೆ ರೈಲ್ವೆ ಅಂಡರ್ ಪಾಸ್ ಇದ್ದು, ಈ ಮಾರ್ಗದಲ್ಲಿ ದಿನನಿತ್ಯ ನೂರಾರು ಆಟೊ, ದ್ವಿಚಕ್ರ ವಾಹನಗಳು ಸಂಚರಿಸುತ್ತಿರುತ್ತದೆ.
  ಆದರೆ ಈ ರಸ್ತೆಯಲ್ಲಿ ತಗ್ಗು, ಹಳ್ಳ, ದಿಣ್ಣೆಗಳು ಹೆಚ್ಚಿದ್ದು, ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಜನ ಸಾಮಾನ್ಯರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿದರೆ ಸುತ್ತಮುತ್ತಲಿನ ಬಡಾವಣೆಗಳಿಗೆ ತುಂಬಾ ಅನುಕೂಲವಾಗುತ್ತದೆ.
- ಡಿ. ಎಸ್. ಓಂಕಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT