ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಗತಿಕವಾಗಿರುವ ಸೀಮಿಕೇರಿ ಪುನರ್ವಸತಿ ಕೇಂದ್ರ

Last Updated 7 ಮೇ 2012, 8:35 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗಿರುವ ಘಟಪ್ರಭಾ ನದಿ ದಂಡೆಯ 12 ಹಳ್ಳಿಗಳ ಸಂತ್ರಸ್ತರಿಗೆ ಬಾಗಲಕೋಟೆ ತಾಲ್ಲೂಕಿನ ಬೀಳಗಿ ಮತಕ್ಷೇತ್ರದ ಸೀಮಿಕೇರಿ ಪುನರ್ವಸತಿ ಕೇಂದ್ರ -1 ಮತ್ತು 2ರಲ್ಲಿ ವಸತಿ ಕಲ್ಪಿಸಿದ್ದರೂ ಇದುವರೆಗೆ ಸಂಪೂರ್ಣ ಸ್ಥಳಾಂತರವಾಗದೇ ಪುನರ್ವಸತಿ ಕೇಂದ್ರ ನಿರ್ಗತಿಕವಾಗಿದೆ.

ಬಾಗಲಕೋಟೆ ತಾಲ್ಲೂಕಿನ ವೀರಾಪುರ, ಸಾಳಗುಂದಿ, ಸಿದ್ನಾಳ, ನಕ್ಕರಗುಂದಿ, ಸಿಂದಗಿ ಮತ್ತು ಕೇಸನೂರ ಗ್ರಾಮದ ಸಂತ್ರಸ್ತರಿಗೆ ಸೀಮಿಕೇರಿ ಪುನರ್ವಸತಿ ಕೇಂದ್ರ 1ರಲ್ಲಿ ಹಾಗೂ ಮುರನಾಳ. ಆನದಿನ್ನಿ,  ಬನ್ನಿದಿನ್ನಿ, ಯಡಹಳ್ಳಿ, ಸೋರಕೊಪ್ಪ ಮತ್ತು ಹೊನ್ನರೊಳ್ಳಿ ಗ್ರಾಮದ ಸಂತ್ರಸ್ತರಿಗಾಗಿ ಸೀಮಿಕೇರಿ ಪುನರ್ವಸತಿ ಕೇಂದ್ರ 2ರಲ್ಲಿ ನಿವೇಶನ ಒದಗಿಸಿ ಹಕ್ಕುಪತ್ರ ನೀಡಿ ದಶಕವಾದರೂ ಸಂತ್ರಸ್ತರು ತಮ್ಮ ಮೂಲ ಊರನ್ನು ಬಿಟ್ಟು ಬಾರದ ಕಾರಣ ಪುನರ್ವಸತಿ ಕೇಂದ್ರಗಳು ಬಿಕೋ ಎನ್ನುತ್ತಿವೆ.

ಸೀಮಿಕೇರಿ ಪುನರ್ವಸತಿ ಕೇಂದ್ರ 1ಮತ್ತು 2ರಲ್ಲಿ ಅಗತ್ಯವಿರುವ ಆರೋಗ್ಯ ಕೇಂದ್ರ, ಶಾಲೆ, ರಸ್ತೆ, ವಿದ್ಯುತ್ ದೀಪ ವ್ಯವಸ್ಥೆ ಕಲ್ಪಿಸಿದ್ದರೂ ಕೂಡ ಸಂತ್ರಸ್ತರು ಬಾರದ ಕಾರಣ ಸರ್ಕಾರಿ ಕಟ್ಟಡಗಳು ಉಪಯೋಗವಾಗದೇ ಹಾಳುಬಿದ್ದಿವೆ.

ಕೆಲವು ಸರ್ಕಾರಿ ಕಟ್ಟಡಗಳನ್ನು ಖಾಸಗಿ ಶಾಲೆ ನಡೆಸಲು ಬಾಡಿಗೆ ನೀಡಲಾಗಿದೆ. ಜನ ಬಾರದೇ ಮೂಲಸೌಲಭ್ಯ ಒದಗಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಮೂಲಸೌಲಭ್ಯ ಒದಗಿಸದೇ ಜನ ಬರಲು ಹಿಂದೆ ಸರಿಯುತ್ತಿದ್ದಾರೆ. ಕಾರಣ ಮಹತ್ವದ ಯೋಜನೆ ಅತಂತ್ರವಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ಮುಳುಗಡೆಯಾಗಿರುವ ಘಟಪ್ರಭಾ ನದಿ ದಂಡೆಯ ಈ ಹಳ್ಳಿಗಳು ಮಳೆಗಾಲದಲ್ಲಿ ಕೇವಲ ಮೂರು ತಿಂಗಳು ಮಾತ್ರ ಜಲಾವೃತವಾಗುತ್ತವೆ. ಉಳಿದಂತೆ ವರ್ಷವಿಡೀ ಮಾಮೂಲಿಯಂತೆ ಇರುತ್ತದೆ. ಇದರಿಂದಾಗಿ ತಮ್ಮ ಮೂಲ ಮನೆ-ಹೊಲವನ್ನು ಬಿಟ್ಟು ಬಾರದ ಈ ಜನತೆ ಅಲ್ಲಿಯೇ ಕೃಷಿ ಮಾಡಿಕೊಂಡಿದ್ದಾರೆ.

ಮುಳುಗಡೆಯಾಗಿರುವ ಎಲ್ಲ ಹಳ್ಳಿಯ ಸಂತ್ರಸ್ತರಿಗೆ ಸಂಪೂರ್ಣ ಪರಿಹಾರ ನೀಡಲಾಗಿದೆ. ಆದರೆ ಹಳ್ಳಿ, ಹೊಲ, ಮನೆಗಳು ಯೋಜನೆಯಿಂದ ಸಂಪೂರ್ಣ ಬಾಧಿತವಾಗದ ಕಾರಣ ಸಂತ್ರಸ್ತರು ಅಲ್ಲಿಯೇ ಬದುಕು ನಡೆಸುತ್ತಿದ್ದಾರೆ.

ಕೋಟ್ಯಂತರ ರೂಪಾಯಿ ಮೊತ್ತದಲ್ಲಿ ಸರ್ಕಾರ ನಿರ್ಮಿಸಿರುವ ಶಾಲೆ, ಆಸ್ಪತ್ರೆ ಮತ್ತಿತರ ಕಟ್ಟಡಗಳು ಹಾಳುಬಿದ್ದಿವೆ. ಕೆಲವು ಕಟ್ಟಡಗಳ ಬಾಗಿಲು, ಕಿಟಕಿಗಳನ್ನು ಕಳವು ಮಾಡಿದ್ದಾರೆ. ಬೀದಿ ದೀಪಗಳನ್ನು ಒಡೆದುಹಾಕಲಾಗಿದೆ. ಕಟ್ಟಡಗಳ ಒಳಗೆ ಜೂಜು, ಇಸ್ಪೀಟು, ಕುಡಿತದಂತಹ ಅನೈತಿಕ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೇ ಇಲ್ಲಿ ನಡೆಯುತ್ತಿವೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ  ವಿಭಾಗದ ಶಾಖಾಧಿಕಾರಿ ಪ್ರಕಾಶ ದಡ್ಡಿ,  ಆಲಮಟ್ಟಿ ಅಣೆಕಟ್ಟೆ 524.26ಕ್ಕೆ ಎತ್ತರಗೊಂಡಾಗ ಈ ಹಳ್ಳಿಗಳು ಸಂಪೂರ್ಣ ಜಲಾವೃತವಾಗುವುದರಿಂದ ಆಗ ಜನತೆ ಅನಿವಾರ್ಯವಾಗಿ ಸ್ಥಳಾಂತರವಾಗಲೇ ಬೇಕಾಗುತ್ತದೆ. ಅಲ್ಲಿಯ ವರೆಗೆ ಸಂತ್ರಸ್ತರು ತಮ್ಮ ಮೂಲ ಹೊಲ-ಮನೆಯಲ್ಲೇ ವಾಸವಿರಲಿದ್ದಾರೆ. ಅವರನ್ನು ಬಲವಂತವಾಗಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ಆಗದು ಎಂದು ತಿಳಿಸಿದರು.

ಸೀಮಿಕೇರಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣವಾಗಿರುವ ಶಾಲೆ, ಆಸ್ಪತ್ರೆ ಕಟ್ಟಡಗಳನ್ನು ಆಯಾ ಇಲಾಖೆಗಳ ಸುಪರ್ದಿಗೆ ನೀಡಲಾಗಿದೆ. ಅವುಗಳ ಉಸ್ತುವಾರಿ ಆಯಾ ಇಲಾಖೆಗೆ ಸೇರಿದ್ದು ಎಂದು ಹೇಳಿದರು.

ಪುನರ್ವಸತಿ ಕೇಂದ್ರದ ಅವ್ಯವಸ್ಥೆ ಕುರಿತು  ಮಾತನಾಡಿದ ಮುರನಾಳ ನಿವಾಸಿ ಸಂಗಮೇಶ ಬಡಿಗೇರ, ಈಗಾಗಲೇ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿರುವ ಜನತೆ ಮೂಲಸೌಲಭ್ಯ ಇಲ್ಲದೇ ಪರದಾಡುವಂತಾಗಿದೆ, ವ್ಯವಸ್ಥಿತವಾದ ಸಾರಿಗೆ-ಸಂಪರ್ಕ, ಉದ್ಯೋಗವಿಲ್ಲದ ಕಾರಣ ಜನತೆ ತೊಂದರೆಗೆ ಸಿಲುಕಿದ್ದಾರೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಹಾಳು ಬಿದ್ದಿದೆ, ಆಸ್ಪತ್ರೆಗೆ ಅಗತ್ಯವಿರುವ ವೈದ್ಯ ಸಿಬ್ಬಂದಿ ನೇಮಿಸಬೇಕು, ಸಂತ್ರಸ್ತರಿಗೆ ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹಾಳಾಗಿರುವ ರಸ್ತೆಗಳಿಗೆ ಡಾಂಬರ್ ಹಾಕಿಸಿ, ಬೀದಿ ದೀಪ ವ್ಯವಸ್ಥೆ ಕಲ್ಪಿಸಬೇಕು, ಬಾಗಲಕೋಟೆ ನಗರಕ್ಕೆ ಸಂಪರ್ಕ ಕಲ್ಪಿಸಲು ಅಗತ್ಯ ಸರ್ಕಾರಿ ಬಸ್‌ಗಳನ್ನು ಸಮಯಕ್ಕೆ ಸರಿಯಾಗಿ ಓಡಿಸಬೇಕು, ರಾತ್ರಿ ವೇಳೆ ಭಯದ ವಾತಾವರಣದಲ್ಲಿ ಜನತೆ ಸಂಚರಿಸಬೇಕಾಗಿರುವುದರಿಂದ  ಪೊಲೀಸ್ ಗಸ್ತು ಏರ್ಪಡಿಸಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT