ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಣಯಗಳು ಜಾರಿಯಾಗಲಿ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಸಾರ್ಥಕತೆ ಬರುವುದು ಅವು ಅನುಷ್ಠಾನಗೊಂಡಾಗ. ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳುತ್ತಿದ್ದ ನಾಡು ನುಡಿಗೆ ಸಂಬಂಧಿಸಿದ ನಿರ್ಣಯಗಳು ಜಾರಿಗೆ ಬರದಿದ್ದಾಗ ಬೇಸರಪಟ್ಟುಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಈಚಿನ ಸಮ್ಮೇಳನಗಳಲ್ಲಿ ನಿರ್ಣಯ ಕೈಗೊಳ್ಳುವುದನ್ನು ಬಹುಮಟ್ಟಿಗೆ ಕೈಬಿಟ್ಟಿತ್ತು. ಮೂಡುಬಿದಿರೆ ಸಾಹಿತ್ಯ ಸಮ್ಮೇಳನದಲ್ಲಿ, ಹಿಂದೆ ಅಂಗೀಕರಿಸಿದ ನಿರ್ಣಯಗಳನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸುವ ಒಂದೇ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
 
ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಜಾರಿಗೊಳಿಸಲು ಸರ್ಕಾರ ಮನಸ್ಸು ಮಾಡದಿದ್ದರೆ ನಿರ್ಣಯಗಳನ್ನು ಮಾಡುವುದೇ ವ್ಯರ್ಥ ಕಸರತ್ತು. ಆದರೂ, ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೆಲವು ನಿರ್ಣಯಗಳನ್ನು ಅಂಗೀಕರಿಸಿ ಅವುಗಳನ್ನು ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಿದೆ. ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ, ಹಿಂದಿನ ನಿರ್ಣಯಗಳನ್ನು ಜಾರಿಗೊಳಿಸುವ, ಅನ್ಯಭಾಷಿಕರು ಕನ್ನಡ ಕಲಿಯಬೇಕೆಂಬ ಒತ್ತಾಯಗಳಲ್ಲಿ ಹೊಸತೇನೂ ಇಲ್ಲ.
 
ಅಸಮಾನತೆಯಿಂದ ಹಿಂದೆ ಉಳಿದಿರುವ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ವಿಶೇಷ ಮಾನ್ಯತೆ ನೀಡಿ ಅಭಿವೃದ್ಧಿ ಪಡಿಸಬೇಕೆಂಬ ಒತ್ತಾಯವೂ ಹಳೆಯದು. ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಘಟಕಗಳಿಗೆ ಸ್ವಂತ ನಿವೇಶನ ಕೊಡಬೇಕೆಂಬ ನಿರ್ಣಯ  ಪರಿಷತ್ತಿನ ಸಾಂಸ್ಥಿಕ ಸ್ವರೂಪದ ಬಲವರ್ಧನೆಗೆ ನೆರವಾಗುವಂಥದ್ದು.

ಅಣ್ಣಿಗೇರಿಯಲ್ಲಿ ‘ಪಂಪ ಪ್ರಶಸ್ತಿ’ ನೀಡಬೇಕೆಂಬ ಸಲಹೆ ಪರಿಶೀಲನೆಗೆ ಅರ್ಹವಾದದ್ದು. ಈಗ ಬನವಾಸಿಯಲ್ಲಿ ನಡೆಸುವ ಕದಂಬೋತ್ಸವದಲ್ಲಿ ‘ಪಂಪ ಪ್ರಶಸ್ತಿ’ ವಿತರಿಸಲಾಗುತ್ತಿದೆ. ಬನವಾಸಿಯಂತೆಯೇ ಅಣ್ಣಿಗೇರಿಯೂ ಆದಿಕವಿಯ ನೆನಪನ್ನು ಹಸಿರಾಗಿಟ್ಟ ಐತಿಹಾಸಿಕ ಸ್ಥಳ. ಅದು ಪಂಪನ ತಾಯಿಯ ತವರು ಎಂಬುದಕ್ಕಾಗಿ ಅಲ್ಲಿ ಕವಿಸ್ಮರಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಉಚಿತವಾದ ಚಿಂತನೆ.
 
ಆದರೆ ಚಿತ್ರಗಳ ಡಬಿಂಗ್‌ಗೆ ವ್ಯಕ್ತಪಡಿಸಿದ ವಿರೋಧ ಈಗ ಸಮರ್ಥನೀಯವೆನಿಸದು. ಚಿತ್ರರಂಗದ ಆರಂಭದ ದಿನಗಳಲ್ಲಿ ತೆಲುಗು, ತಮಿಳು ಅಥವಾ ಹಿಂದಿಯಿಂದ ಕನ್ನಡಕ್ಕೆ ಡಬ್ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿದ್ದರೆ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಅಡ್ಡಿಯಾಗುತ್ತಿತ್ತು. ಆಗ ಅದನ್ನು ವಿರೋಧಿಸಿದ್ದು ಸರಿಯಾದ ಕ್ರಮವೇ.
 
ಆದರೆ ಅಮೃತ ಮಹೋತ್ಸವವನ್ನು ಆಚರಿಸಿ ಮುನ್ನಡೆ ಸಾಧಿಸುತ್ತಿರುವ ಕನ್ನಡ ಚಿತ್ರರಂಗ ಈಗ ಪ್ರಭಾವಿ ಉದ್ಯಮ. ವರ್ಷವೊಂದರಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಬಿಡುಗಡೆ ಮಾಡುವಷ್ಟು ಸಾಮರ್ಥ್ಯ ಪಡೆದಿದೆ. ಪರಭಾಷೆಯಲ್ಲಿ ಯಶಸ್ವಿಯಾದ ಚಿತ್ರಗಳನ್ನು ರೀಮೇಕ್ ಹೆಸರಿನಲ್ಲಿ ಕನ್ನಡದಲ್ಲಿ ನಿರ್ಮಿಸುವ ಅವಕಾಶವನ್ನೂ ಮಾಡಿಕೊಂಡಿದೆ. ಬೇರೆ ಭಾಷೆಗಳಿಂದ ಅತ್ಯುತ್ತಮ ಸಾಹಿತ್ಯ ಕನ್ನಡಕ್ಕೆ ಬರಬೇಕೆಂದು ‘ಕುವೆಂಪು ಭಾಷಾ ಭಾರತಿ’ ಹೆಸರಲ್ಲಿ ಅನುವಾದ ಅಕಾಡೆಮಿಯನ್ನು ಆರಂಭಿಸಿ ರಾಜ್ಯ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಡಬಿಂಗ್ ಎನ್ನುವುದು ಕೂಡ ಅನುವಾದವೇ.
 
ಮುಕ್ತ, ಅನಿರ್ಬಂಧಿತ ವಾತಾವರಣ ಇದ್ದಾಗಲಷ್ಟೆ ಉತ್ತಮ ಕಲಾಕೃತಿ ರೂಪುಗೊಳ್ಳುತ್ತದೆ. ಡಬಿಂಗ್‌ಗೆ ನಿರ್ಬಂಧ ಹೇರುವುದು ಇಂಗ್ಲಿಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳ ಉತ್ತಮ ಚಿತ್ರಗಳನ್ನು ಈ ಭಾಷೆಗಳು ಅರ್ಥವಾಗದ ಕನ್ನಡಿಗರು ನೋಡಲಾಗದಂತೆ ತಡೆಹಿಡಿಯುವುದಷ್ಟೆ. ಸಾಹಿತ್ಯ ಕ್ಷೇತ್ರದಲ್ಲಿ ಅಂಗೀಕೃತವಾದದ್ದು ಚಿತ್ರರಂಗದಲ್ಲಿ ಹೇಗೆ ತಿರಸ್ಕಾರಯೋಗ್ಯವಾಗುತ್ತದೆ? ಉದ್ಯಮದಲ್ಲಿ ಈ ಬಗ್ಗೆ ಆರೋಗ್ಯಕರ ಚಿಂತನೆ ನಡೆಯುವುದು ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT