ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕರ ಬದಲಿಸಲು ಸಚಿವರ ಆದೇಶ

Last Updated 6 ಜನವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: ಪರೀಕ್ಷಾ ವಿಷಯದಲ್ಲಿ ಸಮರ್ಪಕ ಕಾರ್ಯನಿರ್ವಹಣೆ ಆಗದೇ ಇರುವ ಹಿನ್ನೆಲೆಯಲ್ಲಿ ಬೆಂಗಳೂರು ದೂರಶಿಕ್ಷಣ ವಿಭಾಗದ ನಿರ್ದೇಶಕ ಹುದ್ದೆಯಿಂದ ಡಾ.ಬಿ.ಆರ್.ನಿರಂಜನ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಆದೇಶಿಸಿದ್ದಾರೆ.

`ಪರೀಕ್ಷೆಗಳು ಸಕಾಲದಲ್ಲಿ ನಡೆಯದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲು ಈಗಾಗಲೇ ಆದೇಶಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರಂಜನ ಅವರ ಜಾಗಕ್ಕೆ ಬೇರೊಬ್ಬ ಸೂಕ್ತ ಅಧಿಕಾರಿಯನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು~ ಎಂದು ಸಚಿವರು ವಿ.ವಿ.ಗೆ ಸೂಚನೆ ನೀಡಿದ್ದಾರೆ.

ದೂರ ಶಿಕ್ಷಣ ವಿಭಾಗದಲ್ಲಿನ ಅವ್ಯವಸ್ಥೆ ಮತ್ತು ಅವ್ಯವಹಾರಗಳ ವಿರುದ್ಧ ವಿದ್ಯಾರ್ಥಿಗಳು ನಗರ, ದಾವಣಗೆರೆ, ಕೊಪ್ಪಳ, ಬಳ್ಳಾರಿ ಮೊದಲಾದ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಅಧ್ಯಯನ ಕೇಂದ್ರಗಳ ದೂರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಒತ್ತಾಯದ ಮೇರೆಗೆ ಸಚಿವರು ಈ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

2010- 11ರ ಸಾಲಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 2011ರ ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ನಂತರ ಡಿಸೆಂಬರ್ 14ರಿಂದ ನಿಗದಿಗೊಳಿಸಲಾಗಿದ್ದ ಪರೀಕ್ಷೆಗಳನ್ನು ಸಹ ದಿಢೀರ್ ರದ್ದುಗೊಳಿಸಲಾಯಿತು. ಇದರಿಂದ ಕೆರಳಿದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳು ಹಾಗೂ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.

ಆರ್ಥಿಕ ಅವ್ಯವಹಾರ: ಇನ್ನೊಂದೆಡೆ ಬೆಂಗಳೂರು ವಿ.ವಿ ದೂರ ಶಿಕ್ಷಣ ಅಧ್ಯಯನ ಕೇಂದ್ರಗಳ ಒಕ್ಕೂಟವು ಉನ್ನತ ಶಿಕ್ಷಣ ಸಚಿವರಿಗೆ ಇತ್ತೀಚೆಗೆ ನೀಡಿದ ದೂರಿನಲ್ಲಿ ದೂರ ಶಿಕ್ಷಣ ವಿಭಾಗದಲ್ಲಿ ಮೂರು ವರ್ಷಗಳಿಂದ ನಡೆದಿರುವ ಆಡಳಿತ ಮತ್ತು ಆರ್ಥಿಕ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಸಮಸ್ಯೆ ಗಳನ್ನು ಪರಿಹರಿಸುವುದಿರಲಿ, ಕೇಳಲು ಸಹ ಕುಲಪತಿ ಡಾ.ಎನ್.ಪ್ರಭುದೇವ್ ಅವರು ಸಿದ್ಧರಿಲ್ಲ ಎಂದು ಒಕ್ಕೂಟವು ಆಕ್ರೋಶ ವ್ಯಕ್ತಪಡಿಸಿತ್ತು.

`ಪ್ರವೇಶಾತಿಯಲ್ಲಿ ವಿಳಂಬವಾಗುತ್ತಿರುವುದು, ಹಣ ಪಾವತಿ ಮಾಡಿದರೂ ಅಧ್ಯಯನ ಸಾಮಗ್ರಿಗಳನ್ನು ಕೊಡದೇ ಇರುವುದು, ಕಾಲ ಕಾಲಕ್ಕೆ ಪರೀಕ್ಷೆಗಳನ್ನು ನಡೆಸದೇ ಇರುವುದು, ಫಲಿತಾಂಶ ಮತ್ತು ಅಂಕಪಟ್ಟಿಗಳು ದೋಷಪೂರಿತವಾಗಿರುವುದು- ಇವೆಲ್ಲದರಿಂದ ಸಾವಿರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಭಗ್ನ ವಾಗಿದೆ. 
 
ಜೂನ್/ಜುಲೈ ತಿಂಗಳಲ್ಲಿ ನಡೆಸಬೇಕಾಗಿದ್ದ ಪ್ರವೇಶ ಪ್ರಕ್ರಿಯೆಯನ್ನು ಆರು ತಿಂಗಳು ತಡವಾಗಿ ಆರಂಭಿಸಲಾಗಿದೆ~ ಎಂದು ಒಕ್ಕೂಟವು ದೂರಿತ್ತು.

 `2008-09ರ ಸಾಲಿನಿಂದ ಈವರೆಗೆ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಿ ಆರು ಸಲ ಜಾಹೀರಾತು ನೀಡಲಾಗಿತ್ತು. 2010-11ರ ಸಾಲಿನಲ್ಲಿ ಮೂರು ಬಾರಿ ಜಾಹೀರಾತು ಕೊಡಲಾಗಿತ್ತು. ಹೊಸ ಅಧ್ಯಯನ ಕೇಂದ್ರ ಪ್ರಾರಂಭಿಸಲು ಪ್ರತಿ ಕೇಂದ್ರದಿಂದ 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ವಸೂಲಿ ಮಾಡಲಾಗಿತ್ತು.ಹಣ ಕೊಟ್ಟ ಮೇಲೂ ಒಡಂಬಡಿಕೆ (ಎಂಒಯು) ಮಾಡಿಕೊಟ್ಟಿಲ್ಲ. ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ನೀಡಿದವರಿಗೆ ಮಾತ್ರ ಹೆಚ್ಚು ಕೋರ್ಸ್‌ಗಳನ್ನು ನಡೆಸಲು ಅನುಮತಿ ಕೊಡಲಾಗಿದೆ~ ಎಂದು ಆರೋಪಿಸಿತ್ತು.

ದೂರ ಶಿಕ್ಷಣ ವಿಭಾಗದ ನಿರ್ದೇಶಕರ ವಿರುದ್ಧ ಒಕ್ಕೂಟ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೂಕ್ತ ಕ್ರಮ: ಈ ಬಗ್ಗೆ ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರಿಜಿಸ್ಟ್ರಾರ್ ಪ್ರೊ.ಬಿ.ಸಿ.ಮೈಲಾರಪ್ಪ, `ನಿರಂಜನ ಅವರನ್ನು ತೆಗೆದುಹಾಕುವಂತೆ ಸಚಿವರಿಂದ ಸೂಚನೆ ಬಂದಿದೆ. ಕುಲಪತಿಯವರ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು~ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT