ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕಿಯ `ಕ್ವಾಟ್ಲೆ'

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಚಿತ್ರ ನಿರ್ಮಾಣಕ್ಕೆ ಗುಂಡಿಗೆ ಬೇಕು. ಅದರಲ್ಲಿಯೂ ಕನ್ನಡ ಚಿತ್ರ ತಯಾರಿಸಲು ಎರಡೆರಡು ಗುಂಡಿಗೆ ಇರಬೇಕು...'- ನಿರ್ಮಾಪಕ ಕರಿಸುಬ್ಬು ವಸ್ತುಸ್ಥಿತಿಯನ್ನು ವಿವರಿಸುತ್ತ ಹೋದರು. ಇಂಥ ಕ್ಲಿಷ್ಟ ಸಂದರ್ಭದಲ್ಲಿ ನಿರ್ಮಾಣ, ಸಾಹಿತ್ಯ, ನಿರ್ದೇಶನದ ಹೊಣೆ ಹೊತ್ತ ಜೆ. ಚಂದ್ರಕಲಾ ಅವರನ್ನು ಶ್ಲಾಘಿಸಿದರು. ಅದು `ಕ್ವಾಟ್ಲೆ' ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ.

ಪತ್ರಕರ್ತರಾಗಿದ್ದ ಚಂದ್ರಕಲಾ ರೌಡಿಗಳ ಬದುಕನ್ನು ಹತ್ತಿರದಿಂದ ಬಲ್ಲವರು. ಒಬ್ಬರಲ್ಲ, ಇಬ್ಬರಲ್ಲ ಭೂಗತ ಜಗತ್ತಿನ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಅವರು ಸಂದರ್ಶಿಸಿದ್ದಾರೆ. ಆ ಸಮೀಪ ದರ್ಶನವೇ ಕ್ವಾಟ್ಲೆ ಹುಟ್ಟಿಗೆ ಕಾರಣ. ಚಿತ್ರದ ಯುವ ಪ್ರತಿಭೆಗಳನ್ನು ಅವರು ಈ ಸಂದರ್ಭದಲ್ಲಿ ಬಹುವಾಗಿ ಮೆಚ್ಚಿಕೊಂಡರು.

ಚಿತ್ರದ ನಾಯಕ ನಟ ಪಾರ್ಥ. ಅವರು ನಟನೆಗಿಳಿಯುತ್ತೇನೆ ಎಂದಾಗ ಚಿತ್ರರಂಗ ತಿರಸ್ಕಾರದ ದೃಷ್ಟಿಯಿಂದ ನೋಡಿತ್ತು. ಆದರೆ ನಿರ್ಮಾಪಕಿಯೂ ಆಗಿರುವ ಚಂದ್ರಕಲಾ ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿದರು. `ದಿನ ನಿತ್ಯ ಲಕ್ಷಾಂತರ ಮಂದಿ ಯುವಕರು ಹೀರೋ ಆಗುವ ಕನಸು ಕಂಡು ಗಾಂಧಿನಗರದ ಕದ ತಟ್ಟುತ್ತಾರೆ. ಆದರೆ ನಿರ್ಮಾಪಕರು ಇರುವುದು ಬೆರಳೆಣಿಕೆಯಷ್ಟು ಮಾತ್ರ' ಎನ್ನುತ್ತ ಹೊಸಬರನ್ನು ಹುರಿದುಂಬಿಸಿದ ನಿರ್ದೇಶಕಿಯನ್ನು ಪಾರ್ಥ ಅಭಿನಂದಿಸಿದರು.

`ಪಿಬಿ' ಹೆಸರಿನಲ್ಲಿ ಪ್ರಶಸ್ತಿ ನೀಡಲಿ...
ಇತ್ತೀಚೆಗೆ ಅಗಲಿದ ಹಿರಿಯ ಗಾಯಕ ಪಿ.ಬಿ. ಶ್ರೀನಿವಾಸ್ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ನೀಡಬೇಕು ಎಂದು ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಒತ್ತಾಯಿಸಿದರು.

`ಸಂಪತ್ತಿಗೆ ಸವಾಲ್' ಚಿತ್ರಕ್ಕೆ ಪಿಬಿ ಧ್ವನಿ ನೀಡದಿದ್ದರೆ ರಾಜ್ ಗಾಯನ ಪ್ರತಿಭೆ ಹೊರ ಹೊಮ್ಮುತ್ತಿರಲಿಲ್ಲ. ಪರೋಕ್ಷವಾಗಿ ರಾಜ್ ಅವರ ಗಾಯನ ಪ್ರತಿಭೆಯನ್ನು ಹೊರತಂದ ಮಹಾನ್ ಗಾಯಕನ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಔಚಿತ್ಯಪೂರ್ಣ ಎಂದು ಅವರು ಮನವಿ ಮಾಡಿದರು.

ನಾಯಕಿ ಯಜ್ಞಾ ಶೆಟ್ಟಿ ಮಾತು ಚಿತ್ರೀಕರಣದ ದಿನಗಳತ್ತ ಹೊರಳಿತು. ನಿರ್ದೇಶಕರ ತನ್ಮಯತೆ, ತೀರಾ ಕಚ್ಚಾವಸ್ತುವಿರುವ ಕತೆಯನ್ನು ತೆರೆಗೆ ತಂದಿರುವ ರೀತಿ, ಮಹಿಳಾ ನಿರ್ದೇಶಕರೊಂದಿಗೆ ಕೆಲಸ ಮಾಡುವ ಹಿತಕರ ಅನುಭವವನ್ನು ಅವರು ಬಿಚ್ಚಿಟ್ಟರು. `ಕ್ವಾಟ್ಲೆ'ಯಲ್ಲಿ ಒಟ್ಟು ಆರು ಹಾಡುಗಳಿವೆ. ನಟ ಪಾರ್ಥ ಒಂದು ಹಾಡನ್ನು ಹಾಡಿದ್ದಾರೆ. ಸಂಗೀತ ನೀಡಿರುವುದು ಲಿಯೊ. ನಿರ್ದೇಶಕ ಎ.ಎಂ.ಆರ್. ರಮೇಶ್, ವಿತರಕ ಕೆ.ವಿ. ನಾಗೇಶ್‌ಕುಮಾರ್, `ಝೇಂಕಾರ್' ಆಡಿಯೋ ಕಂಪೆನಿಯ ನಿರ್ಮಲ್ ಜೈನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT