ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲ ಮೈಸೂರು; ಪಾಲಿಕೆ ಗುರಿ

ಮೂಲದಲ್ಲೇ `ಕಸ' ಬೇರ್ಪಡಿಸಲು ಜಾಥಾ
Last Updated 6 ಡಿಸೆಂಬರ್ 2012, 10:15 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ `ಕಸ ಸಮಸ್ಯೆ'ಯಿಂದ ಸಾಕಷ್ಟು ಎಚ್ಚೆತ್ತು ಕೊಂಡಿರುವ ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಮೂಲದಲ್ಲೇ ಕಸ ವನ್ನು ಬೇರ್ಪಡಿಸಿ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.

ಈ ಬಗ್ಗೆ ಅರಿವು ಮೂಡಿಸುವ ವಾಹನ, ಬೀದಿ ನಾಟಕ ಪ್ರದರ್ಶನ ಮತ್ತು ಕರಪತ್ರಗಳ ಮೂಲಕ ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರಲ್ಲಿ ಕಸ ವಿಂಗಡಣೆ ಬಗ್ಗೆ ಮಾಹಿತಿ ನೀಡ ಲಾಗುತ್ತಿದೆ. ಕೊಳೆಯುವ ಕಸ ಮತ್ತು ಕೊಳೆಯದ ಕಸವನ್ನು ಬೇರ್ಪಡಿಸಿ, ಪಾಲಿಕೆ ಸಿಬ್ಬಂದಿಗೆ ನೀಡುವಂತೆ ಮನವಿ ಮಾಡಲಾಗುತ್ತಿದೆ.

`ಮನೆಯಲ್ಲೇ ವಿಂಗಡಿಸಿದ ಕಸವನ್ನು ಪ್ರತಿನಿತ್ಯ ಸಂಗ್ರಹಿಸಲು ಬರುವ ಪಾಲಿಕೆ ಪೌರಕಾರ್ಮಿಕರಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸವನ್ನು ಬಿಸಾಕಬಾರದು. ಪ್ಲಾಸ್ಟಿಕ್ ಬದಲು ಕೈಚೀಲ, ಪೇಪರ್ ಬ್ಯಾಗ್ ಬಳಸಬೇಕು' ಎಂಬ ಸೂಚನೆ ಯುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಗುತ್ತಿದೆ.

ಮೇಯರ್ ಚಾಲನೆ: ನಗರದ ಮಾತೃಮಂಡಳಿ ವೃತ್ತದಲ್ಲಿ ಬುಧವಾರ ಆರಂಭವಾದ `ನಿರ್ಮಲ ಮೈಸೂರು' ಜಾಗೃತಿ ಜಾಥಾಕ್ಕೆ ಮೇಯರ್ ಎಂ.ಸಿ.ರಾಜೇಶ್ವರಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, `ಡಿ. 5ರಿಂದ ಜನವರಿ 5ರ ವರೆಗೆ ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಘನತ್ಯಾಜ್ಯ ವಸ್ತುವಿನ ಸಂಗ್ರಹ ಹಾಗೂ ವೈಜ್ಞಾನಿಕ ವಿಲೇವಾರಿ ಅತ್ಯಂತ ಪ್ರಮುಖ ಕೆಲಸ. ಇದನ್ನು ಸರಿಯಾಗಿ ನಿರ್ವಹಿಸಿದರೆ ಸುಂದರ ಮೈಸೂರು ಕನಸು ನನಸಾಗುತ್ತದೆ. ಇದಕ್ಕಾಗಿ ನಾಗರಿಕರು ಸಹಕಾರ ನೀಡಬೇಕು' ಎಂದು ಮನವಿ ಮಾಡಿದರು.

`ಪ್ರತಿ ನಿತ್ಯ ಒಂದೊಂದು ವಾರ್ಡ್ ಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರು, ಬಡಾವಣೆಯ ನಿವಾಸಿಗಳಲ್ಲಿ ಕಸ ಬೇರ್ಪಡಿಸುವ ಬಗ್ಗೆ ಅರಿವು ಮೂಡಿಸ ಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ರೂ. 50 ದಂಡ ವಿಧಿಸಲಾಗುವುದು' ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಂಗಾಯಣದ ಕಲಾವಿದರು ಬೀದಿ ನಾಟಕ ಪ್ರದರ್ಶಿಸಿದರು. ಪಾಲಿಕೆ ಆಯುಕ್ತ ಎಂ.ಆರ್.ರವಿ, ಉಪ ಮೇಯರ್ ಮಹದೇವಪ್ಪ, ರಂಗಾಯಣ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಪಾಲಿಕೆ ಸದಸ್ಯರಾದ ಕೆಂಪಣ್ಣ, ಮಾ.ವಿ.ರಾಮ ಪ್ರಸಾದ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್, ಪಶು ವೈದ್ಯಾಧಿಕಾರಿ, ಪರಿಸರ ಎಂಜಿನಿಯರುಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT