ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣ ಹಂತದ ಗೋಡೆ ಕುಸಿತ: ಐದು ಸಾವು

Last Updated 2 ಫೆಬ್ರುವರಿ 2011, 14:10 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಹಂತದ ದಾಸ್ತಾನು ಮಳಿಗೆಯ ಗೋಡೆ ಕುಸಿದು ಬಿದ್ದು ಐವರು ಕಾರ್ಮಿಕರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡ ದಾರುಣ ಘಟನೆ ಬನ್ನೇರುಘಟ್ಟ ರಸ್ತೆಯ ಚತ್ತೇಕೆರೆ ಪಾಳ್ಯದಲ್ಲಿ ಬುಧವಾರ ನಡೆದಿದೆ.

ಬಿಹಾರ ಮೂಲದ ಪರಗುಯಾದವ್ (40), ರಾಜೀವ್ (60), ಸಂಜೀವ್ (25), ರಾಘು (60) ಮತ್ತು ಜುಗೇಶ್ (40) ಎಂಬುವರು ಮೃತಪಟ್ಟಿದ್ದಾರೆ. ಸೋನು (35), ಸಂತೋಷ್ (18), ಪರಮಾನಂದ (35) ಮತ್ತು ನಾಗಾರ್ಜುನ (22) ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ನಾಗಾರ್ಜುನ ಅವರು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಉಳಿದವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗೋಡೆ ಕುಸಿತಕ್ಕೆ ಕಳಪೆ ಗುಣಮಟ್ಟದ ಕಟ್ಟಡಗಳ ಸಾಮಗ್ರಿಗಳನ್ನು ಕಾಮಗಾರಿಗೆ ಬಳಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಬನ್ನೇರುಘಟ್ಟ ಸಮೀಪದ ನೈಸ್ ರಸ್ತೆ ಜಂಕ್ಷನ್ ಬಳಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಶ್ರೀನಿವಾಸ್ ರೆಡ್ಡಿ ಎಂಬುವರು ಬೃಹತ್ ದಾಸ್ತಾನು ಮಳಿಗೆ ನಿರ್ಮಿಸುತ್ತಿದ್ದಾರೆ. ಸುಮಾರು ಇನ್ನೂರು ಅಡಿ ಉದ್ದ ಮತ್ತು ಇಪ್ಪತ್ತು ಅಡಿ ಎತ್ತರದ ಗೋಡೆಗೆ ಹತ್ತು ಮಂದಿ ಕಾರ್ಮಿಕರು ಪ್ಲಾಸ್ಟರಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗೋಡೆ ಇದ್ದಕ್ಕಿದ್ದಂತೆ ಕುಸಿದು ಕಾರ್ಮಿಕರ ಮೇಲೆ ಬಿತ್ತು. ಅವಶೇಷಗಳಡಿ ಸಿಲುಕಿದ ಐದು ಮಂದಿ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ 11.30ರ ಸುಮಾರಿಗೆ ದುರ್ಘಟನೆ ಸಂಭವಿಸಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಗೋಡೆಯ ಅವಶೇಷಗಳ ಅಡಿ ಸಿಲುಕಿದ್ದವರನ್ನು ಹೊರಗೆ ಎಳೆದರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರೆಲ್ಲರೂ ಬಿಹಾರದವರಾಗಿದ್ದು ರಾಜು ಎಂಬ ಮೇಸ್ತ್ರಿಯು ಕಾರ್ಮಿಕರನ್ನು ಬಿಹಾರದಿಂದ ಕರೆ ತಂದಿದ್ದ. ಅವರೆಲ್ಲ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಿದ್ದರು. ಮೂರು ತಿಂಗಳಿನಿಂದ ಅವರು ದಾಸ್ತಾನು ಮಳಿಗೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಒಟ್ಟು ಹತ್ತು ಮಂದಿ ಬೆಳಿಗ್ಗೆ ಗೋಡೆಗೆ ಪ್ಲಾಸ್ಟರಿಂಗ್ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಗೋಡೆ ಕುಸಿದು ಬಿತ್ತು. ನನ್ನ ತಲೆಯ ಮೇಲೂ ಇಟ್ಟಿಗೆಗಳು ಬಿದ್ದ ಪರಿಣಾಮ ಕುಸಿದು ಬಿದ್ದೆ. ಆ ನಂತರ ಏನಾಯಿತು ಎಂದು ಗೊತ್ತಾಗಲಿಲ್ಲ. ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ’ ಎಂದು ನಾಗಾರ್ಜುನ ಅವರು ಘಟನೆಯ ಬಗ್ಗೆ ವಿವರಿಸಿದರು.

ದಾಸ್ತಾನು ಮಳಿಗೆಯು ಶ್ರೀನಿವಾಸ್ ರೆಡ್ಡಿ ಎಂಬುವರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸ ರೆಡ್ಡಿ ಮತ್ತು ಮೇಸ್ತ್ರಿ ರಾಜು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 304ರ (ಉದ್ದೇಶಪೂರ್ವಕವಲ್ಲದ ಕೊಲೆ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನೂ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಕುಟುಂಬದವರೆಲ್ಲ ಬಿಹಾರದಲ್ಲಿದ್ದಾರೆ. ಶವ ಪರೀಕ್ಷೆ ನಡೆಸಿದ ನಂತರ ಮೃತ ದೇಹಗಳನ್ನು ಬಿಹಾರಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ‘ನಿರ್ಲಕ್ಷ್ಯದಿಂದಾಗಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರು ಸಾವನ್ನಪ್ಪುವ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ.ಆದರೆ ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಭವಿಷ್ಯದಲ್ಲಿ ದುರ್ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಐದು ಮಂದಿಯ ಸಾವಿಗೆ ಕಾರಣ ಆಗಿರುವ ಈ ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಸಿ ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಆರ್.ಅಶೋಕ ಮತ್ತು ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ‘ಕಳಪೆ ಕಾಮಗಾರಿಯಿಂದಲೇ ಈ ದುರ್ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ’ ಎಂದರು. ಬನ್ನೇರುಘಟ್ಟ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT