ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಪಕನ ಬೂಟಿನೊಳಗೆ ದೇವರಾಜ್ ಕಾಲು

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಉತ್ಕರ್ಷ’ದಲ್ಲಿನ ವಿಕೃತಕಾಮಿ ಪಾತ್ರವಿರಬಹುದು; ‘ಹುಲಿಯಾ’ದಲ್ಲಿ ಹಳ್ಳಿ ಮುಗ್ಧನ ಪಾತ್ರ ಇರಬಹುದು. ‘ವೀರಪ್ಪನ್’ನ ಕ್ರೌರ್ಯ, ‘ಗೋಲಿಬಾರ್’ನ ಪೊಲೀಸ್‌ ಅಧಿಕಾರಿ ಗತ್ತು... ಹೀಗೆ ಯಾವುದೇ ಪಾತ್ರದಲ್ಲೂ ಸಮರ್ಥವಾಗಿ ಛಾಪು ಮೂಡಿಸಿದ ನಟ ದೇವರಾಜ್.

ಎಚ್ಎಂಟಿ ಕಾರ್ಖಾನೆಯ ಉದ್ಯೋಗಿಯಾಗಿದ್ದ ದೇವರಾಜ್, ಬಿ.ಜಯಶ್ರೀ ಅವರ ‘ಸ್ಪಂದನ’ ರಂಗತಂಡದ ಬಳಿಕ ಶಂಕರನಾಗ್ ಅವರ ‘ಸಂಕೇತ್’ನಲ್ಲಿ ಕೆಲಸ ಮಾಡಿದವರು. ‘27 ಮಾವಳ್ಳಿ ಸರ್ಕಲ್’ ಅವರ ಮೊದಲ ಸಿನಿಮಾ. ಅಲ್ಲಿಂದ ಅವರ ಚಿತ್ರಲೋಕದ ಪಯಣ ಆರಂಭ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ದೇವರಾಜ್, ಖಳ, ನಾಯಕ, ಪೋಷಕ ಪಾತ್ರಗಳ ಪೋಷಾಕು ಹಾಕಿದ್ದಾರೆ. ಅವರಿಗೆ ಅಭಿಮಾನಿಗಳು ಕೊಟ್ಟ ಬಿರುದು– ‘ಡೈನಮಿಕ್ ಸ್ಟಾರ್’.

ಈಗ ತಮ್ಮದೇ ಆದ ಸಂಸ್ಥೆ ‘ಡೈನಮಿಕ್ ವಿಷನ್’ ಮೂಲಕ ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ. ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ ‘ನೀನಾದೆ ನಾ’ ಮುಹೂರ್ತ ಶುಕ್ರವಾರ ನಡೆದ ಸಮಯದಲ್ಲಿ ದೇವರಾಜ್ ತಮ್ಮ ಹೊಸ ‘ಸಾಹಸ’ದ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಎರಡು ದಶಕಕ್ಕೂ ಹೆಚ್ಚು ಕಾಲ ಅಭಿನಯ ಕ್ಷೇತ್ರದಲ್ಲೇ ಇದ್ದವರು ಈಗ ಚಿತ್ರ ನಿರ್ಮಾಣಕ್ಕೆ ಮುಂದಾದ ಉದ್ದೇಶ?
    ಇದು ನನ್ನ ಅನೇಕ ದಿನಗಳ ಕನಸು. ಬಹಳ ದಿನದಿಂದ ಕಾಡುತ್ತಿದ್ದ ವಿಷಯ. ಸ್ನೇಹಿತರು ಆಗಾಗ್ಗೆ ಕೇಳುತ್ತಲೇ ಇದ್ದರು, ಚಿತ್ರ ನಿರ್ಮಾಣ ಯಾಕೆ ಮಾಡುತ್ತಿಲ್ಲ ಅಂತ. ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಪತ್ನಿ ಚಂದ್ರಲೇಖ ಆ ಕಡೆ ಗಮನ ವಹಿಸಿದ್ದರು. ಮಕ್ಕಳು ಬೆಳೆದ ಬಳಿಕ ಪತ್ನಿಗೆ ಸ್ವಲ್ಪ ಬಿಡುವು ಸಿಕ್ಕಿತು. ಅವರ ಜತೆ ನಾನೂ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸುವ ನಿರ್ಧಾರ ಮಾಡಿದೆವು. ಹಲವು ಒಳ್ಳೆಯ ಚಿತ್ರಗಳನ್ನು ಕೊಡುವ ಆಸೆ ನಮ್ಮದು. ಇದೇ ಉದ್ದೇಶದೊಂದಿಗೆ ‘ಡೈನಮಿಕ್ ವಿಷನ್ಸ್’ ಆರಂಭವಾಗಿದೆ.

ಎಂಥ ಕಥೆಗಳಿಗೆ ಆದ್ಯತೆ ಕೊಡುತ್ತೀರಿ?
    ವಾಸ್ತವಕ್ಕೆ ಹತ್ತಿರವಾಗಿರಬೇಕು; ಮಾನವೀಯತೆ ಪ್ರತಿಪಾದಿಸುವಂಥದ್ದು ಆಗಿರಬೇಕು. ಸಿನಿಮಾಕ್ಕೆ ವಿಶಿಷ್ಟ ತಿರುವು ಕೊಡುವ ಅಂಶ ಅದರಲ್ಲಿರಬೇಕು. ಮಾನವೀಯತೆ ಚೌಕಟ್ಟು ಬಿಟ್ಟು ಹೊರಗೆ ಹೋಗುವಂಥ ಹಾಗೂ ವಾಸ್ತವಕ್ಕೆ ದೂರ ಇರುವ ಕಥೆಗಳು ನನಗೆ ಇಷ್ಟವಿಲ್ಲ. ಪ್ರತಿ ಚಿತ್ರ ನಿರ್ಮಾಣಕ್ಕೂ ಮುನ್ನ ಇದನ್ನು ಗಮನದಲ್ಲಿ ಇಟ್ಟುಕೊಂಡೇ ಕಥೆ ಆಯ್ದುಕೊಳ್ಳುತ್ತೇನೆ.

ವರ್ಷಕ್ಕೆ ಇಂತಿಷ್ಟೇ ಸಿನಿಮಾ ಮಾಡಬೇಕು ಅಂತ ಏನಾದರೂ ನಿರ್ಧರಿಸಿದ್ದೀರಾ?
    ಒಂದು ಅಥವಾ ಎರಡು... ನನ್ನ ಶಕ್ತ್ಯಾನುಸಾರ ಅಂತ ಅಂದುಕೊಂಡಿದ್ದೇನೆ. ನಮ್ಮ ನಿರ್ಮಾಣ ಸಂಸ್ಥೆ ಪ್ರಕ್ರಿಯೆ ಶುರುವಾಗಿ ಏಳು ತಿಂಗಳಾಗಿವೆ. ಅವತ್ತಿನಿಂದಲೇ ಕಥೆಗೆ ಹುಡುಕಾಟ ನಡೆಸಿದ್ದೇನೆ. ‘ನೀನಾದೆ ನಾ’ ಸಿನಿಮಾದ ಕಥೆ ನನ್ನ ಕೈಗೆ ಬಂದು ಎರಡು ತಿಂಗಳಾಗಿದೆ. ಹೀಗೆ... ಒಳ್ಳೆಯ ಕಥೆ ಸಿಕ್ಕಾಗ ಅದನ್ನು ಸಿನಿಮಾ ಮಾಡುವ ಪ್ರಕ್ರಿಯೆ ಆರಂಭಿಸುತ್ತೇನೆ.

ನಿರ್ದೇಶನ ಮಾಡುವತ್ತ ಒಲವು ಇದೆಯೇ?
    ಖಂಡಿತ. ನಿರ್ದೇಶನ ಮಾಡುವ ಆಸೆ ತುಂಬಾ ಕಾಲದಿಂದ ಇದೆ. ಆದರೆ ಈಗ ಒಟ್ಟೊಟ್ಟಿಗೇ ಎರಡು ಕೆಲಸ ಮಾಡುವುದು ಕಠಿಣ ಅಲ್ಲವೇ? ಒಂದೊಂದೇ ಹೆಜ್ಜೆ ಇಡಬೇಕು. ಅದಕ್ಕೇ ಮೊದಲಿಗೆ ನಿರ್ಮಾಣದ ಅನುಭವ ಪಡೆದುಕೊಂಡು, ನಂತರ ನಿರ್ದೇಶನದ ಅನುಭವ ಪಡೆದುಕೊಳ್ಳೋಣ ಅಂತ.

ಮೊದಲ ಸಿನಿಮಾದಲ್ಲೇ ಮಗನಿಗೆ ನಾಯಕನ ಪಾತ್ರ ಕೊಟ್ಟಿದ್ದೀರಿ. ಮುಂದಿನ ಸಿನಿಮಾಗಳಲ್ಲೂ...?
    ಹಾಗೇನಿಲ್ಲ. ಆ ಪಾತ್ರಕ್ಕೆ ಸೂಕ್ತ ಅಂತ ಪ್ರಜ್ವಲ್‌ಗೆ ಅವಕಾಶ ಕೊಟ್ಟಿದ್ದೇನೆ. ಮಕ್ಕಳಿಗೆ ಭದ್ರ ಅಡಿಪಾಯ ಹಾಕಿಕೊಡಬೇಕು ಅನ್ನುವ ಆಸೆ ಖಂಡಿತಾ ಇದೆ. ಆದರೆ ಅದೇ ಅಂತಿಮವಲ್ಲ. ಇತರರಿಗೂ ಅವಕಾಶಗಳನ್ನು ಕೊಡುವೆ.

ಈಗಿನ ಕನ್ನಡ ಸಿನಿಮಾಗಳ ಕುರಿತು ನಿಮ್ಮ ಅಭಿಪ್ರಾಯ?
    ನಮ್ಮಲ್ಲಿ ಒಳ್ಳೆಯ ನಿರ್ದೇಶಕರು ಇದ್ದಾರೆ; ಒಳ್ಳೆಯ ಸಿನಿಮಾಗಳೂ ಬರ್ತಿವೆ. ಆದರೆ ಕಥೆಗೆ ಹುಡುಕಾಟ ನಡೆಸದೇ ಸದ್ಯ ಚಾಲ್ತಿಯಲ್ಲಿ ಇರುವ ಟ್ರೆಂಡ್‌ಗಳನ್ನು ಮಾತ್ರ ನಂಬಿ ಅನೇಕ ಮಂದಿ ಸಿನಿಮಾ ಮಾಡುತ್ತಿದ್ದಾರೆ. ಕಥೆ ಗಟ್ಟಿಯಾಗದೇ ಹೋದಾಗ ಅಂಥ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುವುದು ಕಷ್ಟವಾಗುತ್ತಿದೆ. ಇವುಗಳನ್ನೆಲ್ಲ ನಾನು ಗಮನಿಸಿ, ಉತ್ತಮ ಚಿತ್ರ ನಿರ್ಮಾಣ ಮಾಡಲು ಯತ್ನಿಸುವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT