ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಪಕರಿಂದ ಸಂಕಷ್ಟ: ಪ್ರದರ್ಶಕರ ಅಳಲು

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಚಾಮರಾಜನಗರ: `ಸಿನಿಮಾ ನಷ್ಟ ಅನುಭವಿಸಿದರೆ ಚಿತ್ರಮಂದಿರದ ಮಾಲೀಕರಿಗೆ ಮುಂಗಡ ಹಣ ವಾಪಸ್ ನೀಡಲು ನಿರ್ಮಾಪಕರು ಮತ್ತು ವಿತರಕರು ಸಿದ್ಧರಿಲ್ಲ. ಹೀಗಾಗಿ, ಸಂಕಷ್ಟ ಎದುರಿಸುವಂತಾಗಿದೆ~ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್. ಓದುಗೌಡರ್ ದೂರಿದರು.

ತಾಲ್ಲೂಕಿನ ಹೊಂಡರಬಾಳು ಗ್ರಾಮದಲ್ಲಿ ಮಂಗಳವಾರ ನಡೆದ ಮಹಾಮಂಡಳದ 7ನೇ ತ್ರೈಮಾಸಿಕ ಸಭೆಗೂ ಮೊದಲು ಪತ್ರಕರ್ತರೊಂದಿಗೆ ಮಾತನಾಡಿದರು.

`ಚಿತ್ರಮಂದಿರದಲ್ಲಿ ಯಾವುದೇ ಸಿನಿಮಾ ಪ್ರದರ್ಶನಕ್ಕೂ ಮೊದಲು ನಿರ್ಮಾಪಕರು ಮತ್ತು ವಿತರಕರಿಗೆ ಮುಂಗಡ ಹಣ ನೀಡಬೇಕಿದೆ. ಆದರೆ,  ಕೆಲವು ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುವುದಿಲ್ಲ. ಅಂತಹ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆದು ಬೇರೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಕನಿಷ್ಠ ಮುಂಗಡ ಹಣ ವಾಪಸ್ ನೀಡಿದರೆ ಪ್ರದರ್ಶಕರು ಬದುಕುತ್ತಾರೆ. ಅಂತಹ ವಾತಾವರಣವೇ ಇಲ್ಲ. ಪ್ರದರ್ಶಕರ ಕೂಗಿಗೆ ನಿರ್ಮಾಪಕರು ಹಾಗೂ ವಿತರಕರು ಸ್ಪಂದಿಸುತ್ತಿಲ್ಲ~ ಎಂದು ದೂರಿದರು.

ಕನಿಷ್ಠ 8 ವಾರಗಳ ಕಾಲ ಪ್ರದರ್ಶನ ಕಾಣುವ ಸಿನಿಮಾಗಳು ಬರುತ್ತಿರುವುದು ಅಪರೂಪ. ಯಾವುದೇ, ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ ಚಿತ್ರಮಂದಿರದಿಂದ ಎತ್ತಂಗಡಿ ಮಾಡುವುದಿಲ್ಲ. ಆದರೆ, ಕೆಲವು ವೇಳೆ ಬೇರೆ ಸಿನಿಮಾಗಳ ಪ್ರದರ್ಶನಕ್ಕೆ ಒಪ್ಪಂದವಾಗಿರುತ್ತದೆ. ಈ ಬಗ್ಗೆ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾದ ನಿರ್ಮಾಪಕರಿಗೂ ಮಾಹಿತಿ ನೀಡಿರುತ್ತೇವೆ. ಸತ್ಯ ಮರೆಮಾಚಿ ಪ್ರದರ್ಶಕರನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ ಎಂದು ಟೀಕಿಸಿದರು.

ಕನ್ನಡ ಚಿತ್ರರಂಗದಲ್ಲಿ `ಬ್ಯಾನ್~ ಪದಕ್ಕೆ ನಿಷೇಧ ಹೇರಬೇಕಿದೆ. ಯಾವುದೇ, ಕಲಾವಿದರಿಗೆ ನಿಷೇಧ ಹೇರುವುದಕ್ಕೆ ಮಹಾಮಂಡಳದ ವಿರೋಧವಿದೆ. ಈಗಾಗಲೇ, ನಟಿ ನಿಖಿತಾ ಮೇಲಿನ ನಿಷೇಧದ ವಿಚಾರ ಅಂತ್ಯ ಕಂಡಿದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ಹೆಂಡತಿ ಮೇಲೆ ನಟ ದರ್ಶನ್ ಅವರು ದೌರ್ಜನ್ಯ ನಡೆಸಿರುವುದನ್ನು ಮಹಾಮಂಡಳ ಖಂಡಿಸುತ್ತದೆ ಎಂದರು.
 
ಪ್ರಸ್ತುತ ಪ್ರದರ್ಶಕರು ಮತ್ತು ಚಿತ್ರಮಂದಿರದ ಪರವಾನಗಿ ನವೀಕರಣ ಅವಧಿಯನ್ನು ಮೂರು ವರ್ಷಕ್ಕೆ ನಿಗದಿಪಡಿಸಲಾಗಿದೆ. ಇದನ್ನು ಎಷ್ಟು ವರ್ಷಕ್ಕೆ ಹೆಚ್ಚಿಸಬೇಕೆಂಬ ಬಗ್ಗೆ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT