ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಿತಿ ಕೇಂದ್ರಕ್ಕೆ ನಗರಸಭೆ ಕಾಮಗಾರಿ: ಸದಸ್ಯರ ಆಕ್ಷೇಪ

Last Updated 7 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಹಾಸನ: ನಿರ್ಮಿತಿ ಕೇಂದ್ರದವರಿಗೆ ಮತ್ತೆ ಮತ್ತೆ ನಗರಸಭೆಯ ಕಾಮಗಾರಿಗಳನ್ನು ನೀಡುವುದು ಮತ್ತು ಮೊದಲೇ ತಿಳಿಸಿದ ವಿಷಯಗಳಲ್ಲದೆ ಕೊನೆಯ ಗಳಿಗೆಯಲ್ಲಿ  ಹೆಚ್ಚುವರಿಯಾಗಿ ಕೆಲವು  ವಿಷಯಗಳನ್ನು ಸೇರ್ಪಡೆಗೊಳಿಸುವ ಕ್ರಮಕ್ಕೆ ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಸುರೇಶ್ ಕುಮಾರ್, `ಇವರ ಕಾಮಗಾರಿ ಗುಣಮಟ್ಟ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನಗರಸಭೆಯಿಂದ ಯಾವುದೇ ಕಾಮಗಾರಿ ನೀಡಬಾರದು ಎಂದು ಹಿಂದೆಯೇ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೂ ಮತ್ತೆ ಮತ್ತೆ ಅವರಿಗೆ ಕಾಮಗಾರಿ ನೀಡಲಾಗುತ್ತಿದೆ.

ಈಚೆಗೆ ಒಟ್ಟಾರೆ 55 ಲಕ್ಷ ರೂಪಾಯಿ ಕಾಮಗಾರಿಯನ್ನು ನೀಡಲಾಗಿದ್ದು, ನಾವು ಕಾಮಗಾರಿ ಮಾಡುವುದಿಲ್ಲ ಎಂದು ನಿರ್ಮಿತಿ ಕೇಂದ್ರದವರೇ 40ಲಕ್ಷ ರೂಪಾಯಿಗಳನ್ನು ನಗರಸಭೆಗೆ ಮರಳಿಸಿದ್ದಾರೆ. ಕೇಂದ್ರದವರು ಬೇಡ, ಬೇಡವೆಂದರೂ ಸುಭಾಸ್ ವೃತ್ತ ಅಭಿವೃದ್ಧಿ ಕಾಮಗಾರಿಯನ್ನು ಅವರಿಗೆ ವಹಿಸಿ 15ಲಕ್ಷ ರೂಪಾಯಿ ನೀಡಲಾಗಿದೆ. ಇದರ ಉದ್ದೇಶವೇನು ? ಎಂದು ಸುರೇಶ್ ಪ್ರಶ್ನಿಸಿದರು.

ಅಧ್ಯಕ್ಷರ ಅನುಮತಿಯ ಮೇರೆಗೆ ಎಂದು ಸಭೆಯಲ್ಲಿ ಇನ್ನಷ್ಟು ವಿಚಾರಗಳನ್ನು ಸೇರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಯಶವಂತ್, `ಅತ್ಯಂತ ತುರ್ತು ಸ್ಥಿತಿಯಲ್ಲಿ ಮಾತ್ರ ಹೀಗೆ ಮಾಡಲು ಅವಕಾಶವಿದೆ. ಆದರೆ ನಗರಸಭೆ ಪ್ರತಿ ಬಾರಿ ಸಣ್ಣ-ಪುಟ್ಟ ವಿಷಯಗಳನ್ನು `ಅಧ್ಯಕ್ಷರ ಅನುಮತಿಯ ಮೇರೆಗೆ~ ಎಂದು ಚರ್ಚೆಗೆ ಎತ್ತಿಕೊಳ್ಳುತ್ತಿದೆ.

ಸದಸ್ಯರಿಗೆ ಮಾಹಿತಿಯೇ ನೀಡದಿರುವ ಕಾರಣ ಇಂಥ ವಿಚಾರಗಳ ಬಗ್ಗೆ ಸರಿಯಾಗಿ ಚರ್ಚೆಯೇ ನಡೆಯದೆ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಬಾರಿ ಚರ್ಚೆಗೆ 60ಕ್ಕೂ ಹೆಚ್ಚು ವಿಷಯಗಳನ್ನು ಎತ್ತಿಕೊಳ್ಳಲಾಗಿತ್ತು. ಸಾಲದೆಂಬಂತೆ 18 ವಿಷಯಗಳನ್ನು `ಅಧ್ಯಕ್ಷರ ಅನುಮತಿ ಮೇರೆಗೆ~ ಎತ್ತಿಕೊಳ್ಳಲಾಗಿತ್ತು. ಈ ವ್ಯವಸ್ಥೆಯನ್ನು ನಿಲ್ಲಿಸಬೇಕು~ಎಂದರು.

ಇದಕ್ಕೆ ದನಿಗೂಡಿಸಿದ ಸುರೇಶ್ ಕುಮಾರ್ `ಕಳೆದಬಾರಿ ಅಧ್ಯಕ್ಷರ ಅನುಮತಿಯ ಮೇರೆಗೆ ಎಂದು ಕೈಗೆತ್ತಿಕೊಂಡಿರುವ ವಿಷಯಗಳನ್ನು ಸಭೆಯಲ್ಲಿ ಚರ್ಚಿಸದಿದ್ದರೂ ಸರ್ವಾನುಮತ/ ಬಹುಮತದಿಂದ ಅಂಗೀಕರಿಸಲಾಗಿದೆ ಎಂದು ಬರೆಸಿದ್ದೀರಿ. ವಿಷಯಪಟ್ಟಿಯಲ್ಲಿ ಇಲ್ಲದಿದ್ದ ವಿಚಾರಗಳನ್ನೂ ಇದರೊಳಗೇ ಸೇರಿಸಿ ಅಂಗೀಕರಿಸಲಾಗಿದೆ ಎಂದು ನಮೂದಿಸಲಾಗಿದೆ. ಇದನ್ನು ರದ್ದು ಮಾಡಬೇಕು~ ಎಂದು ಆಗ್ರಹಿಸಿದರು.

ಬಿಜೆಪಿಯ ಬಂಗಾರಿ ಮಂಜು, ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷ ಕೆ.ಟಿ. ಪ್ರಕಾಶ್ ಮತ್ತಿತರರು ಈ ಬಗ್ಗೆ ಮಾತನಾಡಿ, `ಅಗತ್ಯ ಸಂದರ್ಭದಲ್ಲಿ ತುರ್ತು ಸಭೆಗಳನ್ನು ಕರೆಯಲು ಅವಕಾಶವಿರುತ್ತದೆ. ಅತ್ಯಂತ  ತುರ್ತು ವಿಚಾರಗಳನ್ನು ಮಾತ್ರ ಹೆಚ್ಚುವರಿ ವಿಷಯಪಟ್ಟಿಯಲ್ಲಿ ತರಬೇಕು~ ಎಂದು ಸಲಹೆ ನೀಡಿದರು.

ಈ ಬಗ್ಗೆ ಜಿಲ್ಲಾಧಿಕಾರಿ ನಗರಸಭೆಗೆ ಕಳುಹಿಸಿದ ಸುತ್ತೋಲೆಯ ಬಗೆಗೂ ಚರ್ಚಿಸಲಾಯಿತು. ಹಿಂದಿನ ಸಭೆಯಲ್ಲಿ ಹೆಚ್ಚುವರಿ ವಿಷಯವಾಗಿ ಸೇರ್ಪಡೆ ಮಾಡಿರುವ ಎಲ್ಲ ವಿಷಯಗಳನ್ನೂ ಕೈಬಿಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಕೆ.ಎಂ.ಎಫ್‌ಗೆ ಜಾಗ ಬೇಡ: ನೆಲಬಾಡಿಗೆ ಆಧಾರದಲ್ಲಿ ಹಾಲು ಮಾರಾಟ ಕೇಂದ್ರ ಆರಂಭಿಸಲು ಕೆ.ಎಂ.ಎಫ್‌ಗೆ ಜಾಗ ನೀಡುವುದಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಪ್ರಸನ್ನಕುಮಾರ್, `ನಗರಸಭೆಯ ಜಾಗವನ್ನು ನೆಲಬಾಡಿಗೆ ಆಧಾರದಲ್ಲಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ, ಅದೂ ಅಲ್ಲದೆ ಕಡಿಮೆ ಬಾಡಿಗೆ ಆಧಾರದಲ್ಲಿ ಪಡೆದ ಜಾಗವನ್ನು ಕೆ.ಎಂ.ಎಫ್‌ನವರು ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ನೀಡುತ್ತಿದ್ದಾರೆ.

ನಮ್ಮ ಜಾಗದಿಂದ ಅವರೇಕೆ ದುಡ್ಡು ಮಾಡಬೇಕು. ಜಾಗ ಬೇಕಾದಲ್ಲಿ ಅದೇ ಬಾಡಿಗೆಯನ್ನು ನಗರಸಭೆಗೆ ಕಟ್ಟಲಿ. ಈಗಾಗಲೇ ಕೊಟ್ಟಿರುವ ಜಾಗಗಳ ಬಗೆಗೂ ಮರು ಪರಿಶೀಲನೆ ನಡೆಸಿ ನಗರಸಭೆಗೆ ಆದಾಯ ಬರುವಂತೆ ಮಾಡಬೇಕು~ ಎಂದರು. ಚಿಪ್ಪಿನಕಟ್ಟೆ ಬಡಾವಣೆಯಲ್ಲಿ ಜಾಗನೀಡಲು ಕೆ.ಎಂ.ಎಫ್ ಮಾಡಿರುವ ಮನವಿಯನ್ನು ಸಭೆ ತಿರಸ್ಕರಿಸಿತು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆನಂದ್, ಆಯುಕ್ತ ನಾಗಭೂಷಣ, ಅಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿದ್ದರು.


ಲೆಕ್ಕಪತ್ರದ ಬಗ್ಗೆ ಮಾಹಿತಿ ನೀಡಿ
2008-09ನೇ ಸಾಲಿನಲ್ಲಿ ನಗರಸಭೆಯಲ್ಲಿ ನಾಲ್ಕು ಕೋಟಿ ರೂಪಾಯಿ ದುರ್ಬಳಕೆಯಾಗಿದೆ. ಈ ಹಣವನ್ನು ಯಾರ‌್ಯಾರು ಬಳಕೆ ಮಾಡಿದ್ದಾರೆ ಎಂಬ ಬಗ್ಗೆ ಲೆಕ್ಕ ಪರಿಶೋಧಕರು ವರದಿ ನೀಡಿದ್ದರು. ಆ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ? ಎಂದು ಸುರೇಶ್ ಕುಮಾರ್ ಆಯುಕ್ತರನ್ನು ಪ್ರಶ್ನಿಸಿದರು.

ಲೆಕ್ಕಪತ್ರಗಳನ್ನು ಓದಿ ಒಪ್ಪುವ ವಿಚಾರ ಚರ್ಚೆಗೆ ಬಂದಾಗ ಈ ಪ್ರಶ್ನೆ ಎತ್ತಿದ ಅವರು, `ಸುಮಾರು ನಾಲ್ಕು ಕೋಟಿ ರೂಪಾಯಿಗೆ ವೋಚರ್‌ಗಳನ್ನು ನೀಡಿಲ್ಲ ಎಂದು ಪರಿಶೋಧಕರು ತಿಳಿಸಿದ್ದಾರೆ. ಆ ಬಗ್ಗೆ ಯಾವ್ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು.

ಮಾತ್ರವಲ್ಲದೆ ಮುಂದಿನ ಸಭೆಯಲ್ಲಿ ಇದನ್ನೇ ಒಂದು ಚರ್ಚೆಯ ವಿಷಯವಾಗಿ ತೆಗೆದುಕೊಳ್ಳಬೇಕು  ಎಂದು ಅವರು ನಗರಸಭೆ ಆಯುಕ್ತರನ್ನು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರೂ ಸಮ್ಮತಿ ಸೂಚಿಸಿದರು.

ಸರ್ವಾಧಿಕಾರಿ ಡಿಸಿ
ಮಂಗಳವಾರ ನಡೆದ ಸಭೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್ ಬಗ್ಗೆ ನಗರಸಭೆ ಅಧ್ಯಕ್ಷ, ಸದಸ್ಯರಾದಿಯಾಗಿ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು.

`ಹಿಂದಿನ ಜಿಲ್ಲಾಧಿಕಾರಿ ನಗರಸಭೆಯ ನಿರ್ಣಯಗಳನ್ನೆಲ್ಲ ಗಾಳಿಗೆ ತೂರಿ ತಮಗೆ ಬೇಕಾದಂತೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಅವರ ಕಾಲದಲ್ಲಿ ಸಭೆಯ ನಿರ್ಣಯಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಮಹಾರಾಜ ಪಾರ್ಕ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದೂ ಅವರೇ ಎಂದು ಆರೋಪಿಸಿದ ಕೆ.ಟಿ. ಪ್ರಕಾಶ್, ನವೀನ್‌ರಾಜ್ ಇಂಥ ಹಲವು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಇದನ್ನು ಮುಂದುವರಿಸಿದ ಅಧ್ಯಕ್ಷ ಶಂಕರ್, `ನಮ್ಮಲ್ಲೇ ಕೆಲವರು ಅವರಿಗೆ ನಗರಸಭೆಯನ್ನು ದುರ್ಬಲಗೊಳಿಸುವಂಥ ಶಕ್ತಿಯನ್ನು ಕೊಟ್ಟಿದ್ದರು. ಕೆಲವರು ತಮಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಈ ಸ್ಥಿತಿ ತಂದಿದ್ದರು~ ಎಂದು ಪರೋಕ್ಷವಾಗಿ ಕೆಲವು ಸದಸ್ಯರನ್ನು ಕೆಣಕಿದರು.  ಕೊನೆಯಲ್ಲಿ  `ಈಗ ಒಳ್ಳೆ ಡಿ.ಸಿ. ಬಂದಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಜನಪರ ಕೆಲಸ ಮಾಡೋಣ~ ಎಂದು ಚರ್ಚೆಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT