ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಿತಿ ಕೇಂದ್ರದಿಂದ ಹಾಸ್ಟೆಲ್ ಬೇಡ

Last Updated 10 ಆಗಸ್ಟ್ 2011, 8:25 IST
ಅಕ್ಷರ ಗಾತ್ರ

ಮಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕದ್ರಿಯಲ್ಲಿ ಶಿಲಾನ್ಯಾಸ ಮಾಡಿ ವರ್ಷ ಕಳೆದಿದೆ. ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಕಾಮಗಾರಿಗೆ ನೀಡಿರುವ ರೂ.44 ಲಕ್ಷವನ್ನು, ನಿರ್ಮಾಣ ಕಾರ್ಯವನ್ನು ನಿರ್ಮಿತಿ ಕೇಂದ್ರದಿಂದ ತಕ್ಷಣ ವಾಪಸು  ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಎಸ್. ರಾಮ್‌ಪ್ರಸಾದ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಳ್ಯ ತಾಲ್ಲೂಕಿನ ಅಜ್ಜಾವರದಲ್ಲಿ ರೂ 88 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ಅಂತಿಮ ಹಂತದಲ್ಲಿದೆ. ಕದ್ರಿಯಲ್ಲಿ ರೂ.191 ಲಕ್ಷ  ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ವರ್ಷದ ಹಿಂದೆ ಶಿಲಾನ್ಯಾಸವಾಗಿದ್ದು, ನಿರ್ಮಿತಿ ಕೇಂದ್ರಕ್ಕೆ ರೂ 44 ಲಕ್ಷ ಬಿಡುಗಡೆ ಮಾಡಲಾಗಿದೆ. ಆದರೆ ಕಾಮಗಾರಿಯಲ್ಲಿಪ್ರಗತಿ ಆಗಿಲ್ಲ. ಬಿಡುಗಡೆಗೊಂಡ ಮೊತ್ತವನ್ನು ಬಡ್ಡಿ ಸಹಿತ ವಾಪಸ್ ಪಡೆಯಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ 19 ಪ್ರೌಢಪೂರ್ವ, ಐದು ಪ್ರೌಢೋತ್ತರ ವಿದ್ಯಾರ್ಥಿ ನಿಲಯಗಳು ಹಾಗೂ ನಾಲ್ಕು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. 18 ವಾರ್ಡನ್‌ಗಳಿದ್ದು, 10 ಹುದ್ದೆಗಳು ಖಾಲಿ ಇವೆ ಎಂದು ಇಲಾಖಾಧಿಕಾರಿ ಮಾಹಿತಿ ನೀಡಿದರು.

ಸರಿಯಾದ ಮಾಹಿತಿ ಇಲ್ಲದೆ ಪರದಾಡುತ್ತಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ, `ಸೂಕ್ತ ಮಾಹಿತಿಯೊಡನೆ ಸಭೆಗೆ ಹಾಜರಾಗಬೇಕು~ ಎಂದು ತಾಕೀತು ಮಾಡಿದರು. ಸಭೆಯಲ್ಲಿ ಮಾಹಿತಿ ನೀಡದೇ ಇದ್ದರೆ ಸಹಿಸುವುದು ಅಸಾಧ್ಯ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆಗಳು ತೀರಾ ಹದಗೆಟ್ಟಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠ ಲಾಬೂರಾಮ್, ರಸ್ತೆ ಅಪಘಾತ ಹೆಚ್ಚುತ್ತಿವೆ. ವಾಹನ ಸಂಚಾರ ನಿಯಂತ್ರಿಸುವುದೇ ಸವಾಲಿನ ಕೆಲಸವಾಗಿದೆ. ರಸ್ತೆಗಳನ್ನು ಸುಸ್ಥಿತಿಗೆ ತಾರದೇ ಇದ್ದರೆ ಇನ್ನಷ್ಟು ಅವಘಡಗಳನ್ನು ಎದುರಿಸಬೇಕಾದೀತು ಎಂದು ಗಮನ ಸೆಳೆದರು.

ಆದಿವಾಸಿ ಅಭಿವೃದ್ಧಿ: ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಬೆಳ್ತಂಗಡಿ ತಾಲ್ಲೂಕಿನ ಎಳನೀರು ಸಹಿತ 12 ಹಳ್ಳಿಗಳ ಜನರ ಸೌಕರ್ಯಕ್ಕೆ ಎಲ್ಲ ಇಲಾಖೆಗಳು ಒಟ್ಟಾಗಿ ಶ್ರಮಿಸಬೇಕು ಎಂದು ಎಸ್‌ಪಿ ಸಲಹೆ ನೀಡಿದರು.

ನಿಗದಿತ ಸಮಯದೊಳಗೆ ರಸ್ತೆ ಕಾಮಗಾರಿಗಳು ಮುಗಿಯದೆ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಷಯವನ್ನು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು.

ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ವಿರೂಪಾಕ್ಷಪ್ಪ, ಡಿಸಿಪಿ ಎಂ.ಮುತ್ತೂರಾಯ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ವಿಜಯಪ್ರಕಾಶ್‌ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT