ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷಿತ ವರ್ಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಯಲಹಂಕ: `2020ರ ವೇಳೆಗೆ ನಿರ್ಲಕ್ಷಿತ ಸಮುದಾಯದ ಶೇಕಡಾ 30ರಷ್ಟು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ~ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಡಾ.ಡಿ. ಪುರಂದೇಶ್ವರಿ ಹೇಳಿದರು.

ಇಲ್ಲಿನ ರೇವಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆರಂಭವಾದ ನೂತನ ಕೇಂದ್ರ ಗ್ರಂಥಾಲಯ ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ತರಗತಿಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, `ಈ ಗುರಿ ಸಾಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಖಾಸಗಿ ಸಂಸ್ಥೆಗಳೂ ಸಹಕರಿಸಬೇಕು~ ಎಂದು ಹೇಳಿದರು.

`ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ನಿಟ್ಟಿನಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವುದು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆಗಾಗಿ ಪರೀಕ್ಷಾ ಮಂಡಳಿ ರಚನೆ ಸೇರಿದಂತೆ ಕೆಲವು ಮಹತ್ವದ ಮಸೂದೆಗಳಿಗೆ ಸಂಸತ್ತು ಅನುಮೋದನೆ ನೀಡಬೇಕಿದೆ~ ಎಂದು ಹೇಳಿದರು.

`ವಿದ್ಯಾರ್ಥಿಗಳು ಐಟಿ-ಬಿಟಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಉದ್ಯೋಗವನ್ನಷ್ಟೇ ನಿರೀಕ್ಷಿಸದೇ, ಸೂಕ್ತ ಅವಕಾಶವಿದ್ದರೆ ಉದ್ಯಮಿಗಳಾಗುವ ಮೂಲಕ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು~ ಎಂದು ಅವರು ಕಿವಿಮಾತು ಹೇಳಿದರು.

ರೇವಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಶ್ಯಾಮರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ.ಆರ್.ಪಿ.ರೆಡ್ಡಿ, ಡಾ.ಎನ್.ರಮೇಶ್, ಡಾ.ಎನ್.ರಾಜಶೇಖರ್ ಉಪಸ್ಥಿತರಿದ್ದರು.

ತೆಲಂಗಾಣ: ಕೇಂದ್ರ ಸೂಕ್ತ ನಿರ್ಧಾರ
`ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟಕ್ಕೆ ಸಂಬಂಧಪಟ್ಟ ಬೆಳವಣಿಗೆಗೆಳು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು, ಇದಕ್ಕಾಗಿ ರಚನೆಗೊಂಡಿದ್ದ ಶ್ರೀಕೃಷ್ಣ ಸಮಿತಿಯು ಎಲ್ಲಾ ಆಯಾಮಗಳಲ್ಲೂ ಚರ್ಚೆ ನಡೆಸಿ ಸಮಗ್ರ ವರದಿ ನೀಡಿದೆ. ಆಂಧ್ರದ ರಾಯಲಸೀಮಾ ಮತ್ತು ತೆಲಂಗಾಣ ಭಾಗದ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ~ ಎಂದು ಕೇಂದ್ರ ಸಚಿವೆ ಡಾ.ಡಿ.ಪುರಂದೇಶ್ವರಿ ಅವರು ಹೇಳಿದರು.

`ಹೋರಾಟದ ಭಾಗವಾಗಿ ನಡೆಯುತ್ತಿರುವ ಪ್ರತಿಭಟನೆಯಿಂದ ಸಾಮಾನ್ಯ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಎಚ್ಚರ ವಹಿಸಬೇಕಿದೆ.

ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಆ ರಾಜ್ಯಕ್ಕೆ ಮಾತ್ರವಲ್ಲ, ರಾಷ್ಟ್ರಕ್ಕೂ ಸಾಕಷ್ಟು ನಷ್ಟವಾಗುತ್ತಿದೆ~ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT