ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೆ ಕೈಗನ್ನಡಿ ಈ ‘ಕಾಡು’

Last Updated 30 ಸೆಪ್ಟೆಂಬರ್ 2013, 8:18 IST
ಅಕ್ಷರ ಗಾತ್ರ

ಮಂಡ್ಯ: ಮಂಡ್ಯ ನಗರದಲ್ಲಿ ಕಾಡೊಂದು ಬೆಳೆದು ನಿಂತಿದೆ. ಯಾವುದೇ ಇಲಾಖೆಯ ಮುತುವರ್ಜಿಯಿಂದ ಬೆಳಸಿದ್ದಲ್ಲ. ಮುಡಾ ಹಾಗೂ ನಗರಸಭೆಯ ನಿರ್ಲಕ್ಷ್ಯದಿಂದ ಬೆಳದಿರುವ ಕಾಡು. ಪರಿಣಾಮ ಕಾಡು ಪ್ರಾಣಿಗಳ ಭಯದಲ್ಲಿ ನರಳುವಂತಾಗಿದೆ.

ಕೆರೆಯಂಗಳದಲ್ಲಿ ನಿರ್ಮಿಸಲಾಗಿರುವ ಬಡಾವಣೆಯ ಕೆಲವು ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಉಳಿದಂತೆ ಆ ಪ್ರದೇಶ ಜಾಲಿ ಗಿಡಗಳಿಂದ ತುಂಬಿ ಹೋಗಿದೆ. ಅದರೆ ಜತೆಗೆ ವಿವಿಧ ಗಿಡಗಳು ಬೆಳೆದುಕೊಂಡಿದ್ದು, ಅಲ್ಲಿ ಹೋದರೆ ಕಾಡು ಪ್ರವೇಶಿಸಿದ ಅನುಭವವಾಗುತ್ತದೆ.
ವಿವೇಕಾನಂದ ನಗರ, ಬೀಡಿ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳಿವೆ. ಈ ಬಡಾವಣೆಗಳಲ್ಲಿ ಹಗಲು ಹೊತ್ತಿನಲ್ಲಿಯೂ ಒಬ್ಬರೇ ಸಂಚರಿಸಲು ಸಾಧ್ಯವಾಗುವುದಿಲ್ಲ.

ಪ್ರಸಕ್ತ ವಾರದಲ್ಲಿ ಎರಡು ಬಾರಿ ಈ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು ಎಂಬ ಸುದ್ದಿ ಹರಡಿಕೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲನೆಯನ್ನೂ ಮಾಡಿದ್ದಾರೆ. ಚಿರತೆ ಕಂಡು ಬಂದಿಲ್ಲ. ಆದರೂ ಜನರಿಗೆ ಮಾತ್ರ ನಂಬಿಕೆ ಬಂದಿಲ್ಲ.

ಅಲ್ಲಿ ತಿರುಗಾಡುವ ಕೆಲವರು, ಚಿರತೆಯನ್ನು ಕಣ್ಣಾರೆ ಕಂಡಿದ್ದೇವೆ ಎಂದು ಹೇಳಿರುವುದು ಉಳಿದವರ ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ಸಂಜೆಯೊಳಗೆ ಮನೆ ಸೇರಿಕೊಳ್ಳಬೇಕು. ರಾತ್ರಿ ಬಂದರೆ ಜೀವಭಯದಲ್ಲಿಯೇ ಮನೆಗೆ ತೆರಳುವಂತಾಗಿದೆ.

ಹಾವು, ಚೇಳುವಿನಂತಹ ವಿಷ ಜಂತುಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ನಾಯಿಗಳ ಹಾವಳಿಯೂ ವಿಪರೀತವಾಗಿದೆ. ಅಕ್ರಮ ಚಟುವಟಿಕೆಗಳಿಗೂ ಅದು ತಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತಕ್ಕೆ ದಾರಿ ಮಾಡಿಕೊಟ್ಟರೆ ಅಚ್ಚರಿಯಿಲ್ಲ.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನಗಳ ಹಂಚಿಕೆ ಮಾಡಿ ಹತ್ತು ವರ್ಷಗಳೇ ಕಳೆದಿವೆ. ಐದು ವರ್ಷದಲ್ಲಿ ನಿವೇಶನ ತೆಗೆದುಕೊಂಡವರು ಮನೆಗಳನ್ನು ನಿರ್ಮಿಸಿಕೊಳ್ಳದಿದ್ದರೆ, ನಿವೇಶನವನ್ನು ಮರಳಿ ಪಡೆಯಬಹುದಾಗಿದೆ.

ಇಲ್ಲಿನ ಬಹುತೇಕ ನಿವೇಶನಗಳು ಖಾಲಿ ಉಳಿದಿವೆ. ಅವುಗಳನ್ನು ಮರಳಿ ಪಡೆದು, ಬೇರೆಯವರಿಗೆ ಹಂಚುವ ಕೆಲಸಕ್ಕೆ ಮಾತ್ರ ಮುಡಾ ಮುಂದಾಗಿಲ್ಲ. ಬಡಾವಣೆ ರಚನೆ ಮಾಡಿದ ಆರಂಭದಲ್ಲಿ ಡಾಂಬರ ಕಂಡಿದ್ದ ಕೆಲವು ರಸ್ತೆಗಳು ಇಂದಿಗೂ ಡಾಂಬರು ಕಂಡಿಲ್ಲ. ಕೆಲವು ರಸ್ತೆಗಳಿಗೆ ಇಂದಿಗೂ ಡಾಂಬರ ಭಾಗ್ಯ ಲಭಿಸಿಯೇ ಇಲ್ಲ.

ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಹೊಣೆ ಆ ನಿವೇಶನಗಳ ಮಾಲೀಕರದ್ದಾಗಿದೆ. ಈ ಬಗ್ಗೆ ನಗರಸಭೆ ನಿಗಾವಹಿಸಬೇಕು. ಮಾಲೀಕರೂ ಸ್ವಚ್ಛವಾಗಿಟ್ಟುಕೊಂಡಿಲ್ಲ. ನಗರಸಭೆಯೂ ಕೇಳಲು ಹೋಗಿಲ್ಲ.
ಅಲ್ಲಲ್ಲಿ ಮನೆ ಕಟ್ಟಿಕೊಂಡಿರುವವರು ಮಾತ್ರ ಸಮಸ್ಯೆಗಳನ್ನು ಎದುರಿಸುವುದು ತಪ್ಪಿಲ್ಲ.

ಜಾಲಿ ಗಿಡಗಳನ್ನು ಕಡಿಸುವಂತೆ ಹಲವಾರು ಬಾರಿ ಮುಡಾ ಹಾಗೂ ನಗರಸಭೆಗೆ ಮನವಿ ಮಾಡಿಕೊಳ್ಳಲಾಗಿದೆ. ಏನೂ ಪ್ರಯೋಜನವಾಗಿಲ್ಲ. ರಸ್ತೆಯು ದುರಸ್ತಿ ಕಂಡಿಲ್ಲ. ಇಲ್ಲಿ ಜೀವನ ಸಾಗಿಸುವುದೇ ನರಕವಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿ ಕೃಷ್ಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT