ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಜ್ಜೆಯ ಮುಖವಾಡದ ಕಾಲದಲ್ಲಿ...

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಪಾಕಿಸ್ತಾನಿ ಕವಿ ಘನಶ್ಯಾಮ್ ಅಗರವಾಲ್ ಸಾಲುಗಳಿವು. ಅಂದರೆ ಸಮಾಜದಲ್ಲಿ ರಾಜಕಾರಣಿ, ಧರ್ಮಗುರುವಿಗಿಂತ ಒಬ್ಬ ಕವಿ, ಲೇಖಕ, ಕಲಾವಿದರ ಜವಾಬ್ದಾರಿ ಹೆಚ್ಚೆಂದು ಈ ಕಾವ್ಯ ಹೇಳುತ್ತದೆ. ಇದು ವರ್ತಮಾನದಲ್ಲಿ ಘಟಿಸುವ ಘಟನೆಗೂ ಕವಿ-ಕಲಾವಿದರಿಗೂ ನೇರವಾದ ಸಂಬಂಧವನ್ನು ಬೆಸೆಯುತ್ತಿದೆ. ಅಂತೆಯೇ ಕವಿಯ ಕಾವ್ಯಾಭಿವ್ಯಕ್ತಿ, ಲೇಖಕನ ಬರಹ, ಕಲಾವಿದನ ಕಲಾಕೃತಿಯ ಆಚೆಗೂ ವರ್ತಮಾನದ ಸಂಗತಿಗಳೊಡನೆ ಇವರ ಬದ್ಧತೆಯ ಪ್ರಶ್ನೆಯನ್ನೂ ಇದು ಪರೋಕ್ಷವಾಗಿ ಧ್ವನಿಸುತ್ತಿದೆ.

ಸದ್ಯದ ಕರ್ನಾಟಕದ ವರ್ತಮಾನದ ಸಂಗತಿಗಳಿಗೂ, ಇಲ್ಲಿನ ಕವಿ-ಕಲಾರಿದರಿಗೂ ನಂಟು ಬೆಸೆದು ನೋಡಬೇಕೆಂದಾಗ ಅಗರವಾಲ್ ಅವರ ಮೇಲಿನ ಪದ್ಯ ನೆನಪಾಯಿತು. ಬರೆಯುವ ಉತ್ಸಾಹದಲ್ಲಿರುವ ನನ್ನಂತವರಿಂದ ಹಿಡಿದು ಹಿರಿ ತಲೆಮಾರಿನ ಕವಿ-ಕಲಾವಿದರು ನಮ್ಮ ಕಾಲದ ಎಲ್ಲ ಬಗೆಯ ಜನವಿರೋಧಿ ಸಂಗತಿಗಳನ್ನು ನೋಡಿಯೂ ನೋಡದ ಹಾಗೆ ನಮ್ಮಷ್ಟಕ್ಕೆ ನಾವು ಇದ್ದು ಬಿಡುವ ಒಳ್ಳೆಯತನವೆಂಬ ಕೆಟ್ಟ ರೋಗದಲ್ಲಿ ನಾವುಗಳೆಲ್ಲ ನರಳುತ್ತಿದ್ದೇವೆ.

ಯಾಕೆ ಹೀಗಾಗುತ್ತಿದೆ?
ನಾವು ಬದುಕುತ್ತಿರುವ ಕಾಲದ ಜತೆ ಸಂಬಂಧ ಕಡಿದುಕೊಂಡು ನಿರಾಳವಾಗಿ ಇದ್ದುಬಿಡುವ ಬೇಜಾವಬ್ದಾರಿತನದ ಈ ಕಾಲಘಟ್ಟದ ಮನಃಸ್ಥಿತಿ ಏನನ್ನು ಸೂಚಿಸುತ್ತಿದೆ? ಸಾಹಿತಿ-ಕಲಾವಿದರು ಹೀಗೆ ನಿರ್ಲಿಪ್ತವಾಗಿ ಮುಗುಮ್ಮಾಗಿರುವಂತೆ ಮಾಡಿದ ಕಾಲದ ಮಹಿಮೆಯಾದರೂ ಎಂತಹದ್ದು? ಇಂತಹ ಹಲವು ಪ್ರಶ್ನೆಗಳು ಕಾಡುತ್ತವೆ.

ಸಾಮಾಜಿಕತೆ ಎನ್ನುವ ಪದದ ಜಾಗದಲ್ಲಿ ವಯಕ್ತಿಕತೆ ಎಂದು ಬಳಕೆಯಾಗುತ್ತಿದ್ದರೆ ಖಂಡಿತ ಅದು ವ್ಯಾಕರಣ ದೋಷವಲ್ಲ. ನಮ್ಮ ನಮ್ಮ ಮನೆಗೆ ಸುತ್ತಲೂ ಕಾಂಪೌಂಡ್ ಕಟ್ಟಿಕೊಂಡು ಅದರೊಳಗೆ ಸೊಳ್ಳೆಯೂ ನುಸುಳದಂತೆ ಕಾಯುವ, ಕಾಂಪೌಂಡಿನ ಆಚೆಗಿನದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಮಟ್ಟಿಗೆ ನಮ್ಮ ವಯಕ್ತಿಕ ಜಗತ್ತುಗಳು ನಿರ್ಮಾಣವಾಗಿಬಿಟ್ಟಿವೆ. ಉತ್ತರ ಕರ್ನಾಟಕದ ಜನ ನೆರೆಗೆ ಸಿಕ್ಕು ಮನೆ-ಮಠ ಕಳೆದುಕೊಂಡು ಹೆಲಿಕ್ಯಾಪ್ಟರ್‌ನಲ್ಲಿ ಎಸೆಯುವ ಆಹಾರದ ಪೊಟ್ಟಣವನ್ನು ಬಡಿದಾಡಿಕೊಂಡು ಹಿಡಿಯುತ್ತಿದ್ದರೆ, ಇದರ ಲೈವ್ ಅನ್ನು ಕುರುಕಲು ತಿಂದುಕೊಂಡು ಬಿಸಿ ಕಾಫಿ ಕುಡಿದುಕೊಂಡು ಟೀವಿಯಲ್ಲಿ ನೋಡುತ್ತಿರುವವರ ಟಿ.ಆರ್.ಪಿ. ಸಂಖ್ಯೆ ಹೆಚ್ಚಿದಂತೆ, ಜಾಹೀರಾತಿನ ರೇಟು ದುಪ್ಪಟ್ಟಾಗುತ್ತದೆಯಂತೆ. ಇದು ನಮ್ಮ ಕಾಲದ ವಿಪರ್ಯಾಸಕ್ಕೊಂದು ರೂಪಕವಷ್ಟೆ.

ಇವತ್ತಿನ ಕರ್ನಾಟಕದ್ದು ಉರಿವ ವರ್ತಮಾನ. ವ್ಯಾಪಕ ಭ್ರಷ್ಟಾಚಾರ ಬೇರು ಬಿಡುತ್ತಿದೆ. ಸಾಮಾನ್ಯ ಜನರು ನೂರಾರು ಸಂಕಷ್ಟಗಳಿಗೆ ಸಿಲುಕಿದ್ದಾರೆ. ರೈತರ ಭೂಮಿಯನ್ನು ಬೇಕಾಬಿಟ್ಟಿಯಾಗಿ ಸರ್ಕಾರ ಕಬಳಿಸುತ್ತಿದೆ. ನೆರೆ ಸಂತ್ರಸ್ತರ ಹೆಸರಲ್ಲಿ ಸಂಗ್ರಹಿಸಿದ ಹಣ ಕೂಡ ರಾಜಕಾರಣಿಗಳ ಬೊಕ್ಕಸ ತುಂಬಿದೆ. ನೈಸರ್ಗಿಕ ಸಂಪತ್ತು ಗಣಿಗಾರಿಕೆ ವೇಷದಲ್ಲಿ ಲೂಟಿಯಾಗುತ್ತಿದೆ. ಸರಕಾರ ಜನವಿರೋಧಿ ನೀತಿಗಳನ್ನು ಲಜ್ಜೆಯಿಲ್ಲದೆ ಜಾರಿಗೊಳಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ವಿನಾಶದ ಅಂಚಿನಲ್ಲಿರುವಂತೆ ಭಾಸವಾಗುತ್ತಿದೆ. ನಿತ್ಯವು ಇದೆಲ್ಲವನ್ನು ನೋಡಿಯೂ ಬೆರಳೆಣಿಕೆಯ ಕೆಲ ಸಾಹಿತಿಗಳು ಸಣ್ಣದೊಂದು ಧ್ವನಿ ಎತ್ತಿದ್ದು ಬಿಟ್ಟಧ್ವಿತರ ಬುದ್ಧಿಜೀವಿಗಳು ಮಾತ್ರ ಇದೇನೂ ನಡೆದೇ ಇಲ್ಲವೆನ್ನುವಷ್ಟು ಸೇಪರ್ ರೆನ್‌ನಲ್ಲಿ ನಿರಾತಂಕವಾಗಿ ಜೀವಿಸುತ್ತಿದ್ದಾರೆ. ನಮಗೆ ತೊಂದರೆಯಾದರೆ ಬೇರೆಯವರು ನಮ್ಮ ಬೆಂಬಲಕ್ಕೆ ಬರಬೇಕೆಂದು ಬಯಸುವ ನಾವುಗಳು, ಬೇರೊಬ್ಬರು ತೊಂದರೆಯಲ್ಲಿ ಸಿಕ್ಕಿಕೊಂಡಾಗ ಅವರ ನೆರವಿಗೆ ಧಾವಿಸುವುದಿಲ್ಲ. ಇಲ್ಲದ ಉಸಾಬರಿ ನಮಗ್ಯಾಕೆ ಎನ್ನುವ ಮನಸ್ಥಿತಿ ಇಂದು ಹೆಚ್ಚುತ್ತಿದೆ.

ಕರ್ನಾಟಕದ ಯಾವುದೋ ಮೂಲೆಯಲ್ಲಿ ದಲಿತರ ಶೋಷಣೆಯಾದರೆ, ಜನಸಾಮಾನ್ಯರಿಗೆ-ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆದರೆ, ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತಿದ್ದ ಪರಂಪರೆ ಇರುವ ಈ ನೆಲದ ಪ್ರಗತಿಪರರು, ಬುದ್ಧಿಜೀವಿಗಳು ಇಂದೇಕೆ ಮೌನತಾಳಿದ್ದಾರೆ. ಧ್ವನಿ ಎತ್ತದಷ್ಟು ನೈತಿಕ ದಿವಾಳಿತನಕ್ಕೆ ಇಳಿದಿದ್ದಾರೆಯೇ? ಧ್ವನಿ ಎತ್ತಿದರೆ ಅದರಿಂದೇನು ಪ್ರಯೋಜನ ಎನ್ನುವ ಸಿನಿಕತನ ಇವರನ್ನೆಲ್ಲಾ ಆವರಿಸಿದೆಯೇ? ಎಲ್ಲದಕ್ಕೂ ನಾವೇ ಏಕೆ ಪ್ರತಿಕ್ರಿಯಿಸಬೇಕು ಎನ್ನುವ ಬೇಜವಾಬ್ದಾರಿತನ ಅವರಲ್ಲಿ ಮನೆಮಾಡಿದೆಯೇ? ಮೇಲಿನ ಪ್ರಶ್ನೆಗಳಿಗೆ ಈ ನಿರ್ಲಿಪ್ತ ಕಾಲದ ನಡುವೆಯೇ ಉತ್ತರಗಳನ್ನು ಹುಡುಕಬೇಕಿದೆ.

ಈ ನಡುವೆಯೇ ಸಣ್ಣ ಪವಾಡವೊಂದು ಜರುಗಿತು. ಹಂಪಿ ವಿ.ವಿ. ಜಮೀನನ್ನು ಸರಕಾರ ಖಾಸಗಿ ಸಂಸ್ಥೆಯೊಂದಕ್ಕೆ ಕೊಡುವ ಪ್ರಸ್ತಾವ ಬಂದಾಗ ಕರ್ನಾಟಕದ ಪ್ರಗತಿಪರರು, ಚಿಂತಕರು ಒಗ್ಗಟ್ಟಿನಿಂದ ಪ್ರತಿರೋಧಿಸಿದರು. ಈ ಧ್ವನಿಗೆ ಯಶಸ್ಸು ದೊರೆಯಿತು. ಸಾಂಸ್ಕೃತಿಕ ಕೇಂದ್ರವಾದ ವಿಶ್ವವಿದ್ಯಾಲಯದ ಭೂ ಕಬಳಿಕೆಯನ್ನು ವಿರೋಧಿಸಿದ ಜನರೇ, ರೈತರ ಸಾವಿರಾರು ಎಕರೆ ಭೂಮಿಯನ್ನು ಪ್ರಭುತ್ವ ನಿರಂತರವಾಗಿ ಕಬಳಿಸುತ್ತಿದ್ದರೆ ತಣ್ಣಗಿದ್ದಾರೆ. ಈ ಕಾಲದ ವಿಪರ್ಯಾಸವಿದು.

ಬಿಕ್ಕಟ್ಟು ಸಂಘರ್ಷಗಳಿಲ್ಲದ ಕಾಲವೊಂದು ಇರಲಾರದು. ಆದರೆ ಇಂದು ಅವುಗಳೆಲ್ಲವನ್ನೂ ಸಾಮಾನ್ಯ ಜನರು, ಅಲ್ಪ ಸಂಖ್ಯಾತರು ಹಿಂದೆಂದಿಗಿಂತಲೂ ಹೆಚ್ಚು ಅನುಭವಿಸುತ್ತಿದ್ದಾರೆ. ಎಲ್ಲ ಕಾಲದಲ್ಲಿಯೂ ನಿರ್ಲಿಪ್ತವಾಗಿ ತಮ್ಮ ಪಾಡಿಗೆ ತಾವು ಬರೆದುಕೊಂಡಿರುವ ಸಾಹಿತಿಗಳು ಇದ್ದೇ ಇದ್ದಾರೆ. ಆದರೆ ನಮ್ಮ ಕಾಲದಲ್ಲಿ ಅಂಥವರ ಸಂಖ್ಯೆಯೇ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ.

ಈಚಿನ ಸಾಹಿತ್ಯದ ವ್ಯಾಖ್ಯಾನಗಳು ವರ್ತಮಾನದ ಜತೆಗಿನ ಬರಹಗಾರರ ಸಂಬಂಧವನ್ನು ಬೇರೆಯದೇ ರೀತಿಯಲ್ಲಿ ನಿರೂಪಿಸುತ್ತಿವೆ. ಸಾಹಿತ್ಯ ರಚನೆಯೊಂದು ಶುದ್ಧ ಕಲಾಕೃತಿ, ಇದರಲ್ಲಿ ಸಮಾಜದ ಗೋಳಿನ ಬದಲು ನವಿರು ಭಾವಗಳಿರಬೇಕು, ರಮ್ಯ ಕಲ್ಪನೆಗಳಿರಬೇಕು, ಮನಸ್ಸಿಗೆ ಮುದ ನೀಡಬೇಕು ಎನ್ನುವಂತಹ ‘ಹಾಗೇ ಸುಮ್ಮನೆ’ ಬರೆಯಬೇಕೆಂಬ ನಿಲುವುಗಳು ಹೆಚ್ಚಾಗುತ್ತಿವೆ. ಸಮಾಜದ ಸಂಕಷ್ಟಗಳನ್ನು ವಿವರಿಸಿ ಪತ್ರ ಬರೆದರೆ, ‘ವಾಚಕರವಾಣಿ ಸಾಹಿತಿ’ ಎಂದು ಗೇಲಿ ಮಾಡುವ, ವರ್ತಮಾನದ ಸಂಗತಿಗಳನ್ನು ಇದ್ದಹಾಗೆಯೇ ಬರಹದಲ್ಲಿ ಅಭಿವ್ಯಕ್ತಿಸಿದರೆ ‘ವಾಚ್ಯ’ ಎಂದು ನಿರಾಕರಿಸುವ ವಾತಾವರಣವೊಂದು ನಿರ್ಮಾಣವಾಗಿದೆ.

ಕರ್ನಾಟಕದಲ್ಲಿ ಈಗ ಹೊಸ ತಲೆಮಾರಿನ ಲೇಖಕರು ತುಂಬ ಶಕ್ತಿಯುತವಾಗಿ ಬರೆಯುತ್ತಿದ್ದಾರೆ. ಆದರೆ ಅವರಲ್ಲಿ ಬಹುಪಾಲು ಬರಹಗಾರರು ಜನಸಮುದಾಯದ ಪರವಾಗಿ ಸಣ್ಣದೊಂದು ಪ್ರತಿರೋಧವನ್ನು ದಾಖಲಿಸಲು ಸಾದ್ಯವಾಗುತ್ತಿಲ್ಲ. ಯಾವ ಸಿದ್ಧಾಂತಗಳ ಹಂಗಿಲ್ಲದೆ ಇವರೆಲ್ಲ ಮುಕ್ತವಾಗಿ ಬರೆಯುತ್ತಿದ್ದಾರೆಂದು ವಿಮರ್ಶಾ ವಲಯ ಇದನ್ನು ಸಮರ್ಥಿಸಿಕೊಳ್ಳುತ್ತಿದೆ.

ರೋಲ್‌ಕಾಲ್ ಚಳವಳಿಗಾರರು ಹುಟ್ಟಿಕೊಳ್ಳುತ್ತಿದ್ದಾರೆ. ಬ್ಲಾಕ್‌ಮೇಲ್ ಪ್ರಗತಿಪರರು ಹೆಚ್ಚಾಗುತ್ತಿದ್ದಾರೆ. ಇಂತಹ ವೈರುಧ್ಯಗಳ ಕಾಲದಲ್ಲಿ ಚಳುವಳಿ, ಪ್ರತಿರೋಧ, ಪ್ರಭುತ್ವ ವಿರೋಧಿ ನಿಲುವು ಮುಂತಾದ ಶಬ್ದಗಳು ಅರ್ಥ ಕಳೆದುಕೊಳ್ಳುತ್ತಿವೆಯೇ? ಅಥವಾ ಇಂತಹ ಕಾಲದಲ್ಲಿ ಇವುಗಳನ್ನೆಲ್ಲ ಮತ್ತೆ ನಿರೀಕ್ಷಿಸುವುದು ಹುಚ್ಚುತನವೇ? ಅಥವಾ ಇಂತಹ ನಿರ್ವಾತ ಸ್ಥಿತಿಯ ಹೊಟ್ಟೆಯೊಳಗಿಂದಲೇ ಪ್ರತಿರೋಧದ ಚಳವಳಿಯ ಧ್ವನಿಯೊಂದು ಹೊರಡುವ ಬಗ್ಗೆ ಆಶಾವಾದದಿಂದ ಕಾಯೋಣವೇ? ಇಂತಹ ಪ್ರಶ್ನೆಗಳನ್ನು ಎತ್ತಿ ಬೇರೆ ಯಾರಿಂದಲೋ ಏನೋ ಆಗುತ್ತದೆ ಎಂದು ಕಾಯುವುದಕ್ಕಿಂತ ನಮ್ಮಿಂದಲೇ ಸಣ್ಣದಾಗಿಯಾದರೂ ಏನಾದರೂ ಆರಂಭಿಸುವುದೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT