ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಲೋಪ: ಹೈಕೋರ್ಟ್ ತರಾಟೆ

ಲೋಕ ಶಿಕ್ಷಣ ಟ್ರಸ್ಟ್ ಆಡಳಿತ
Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಪ್ರಕಾಶನ ಸಂಸ್ಥೆಯಾದ `ಲೋಕ ಶಿಕ್ಷಣ ಟ್ರಸ್ಟ್'ನ ಹಣಕಾಸಿನ ವ್ಯವಹಾರಗಳ ಕುರಿತು ಯಾವುದೇ ಉತ್ತರದಾಯಿತ್ವ ಇಲ್ಲವಾಗಿದೆ. ಟ್ರಸ್ಟ್‌ನ ಹಣಕಾಸಿನ ವ್ಯವಹಾರಗಳನ್ನೆಲ್ಲ ಟ್ರಸ್ಟಿಗಳ ವಿವೇಚನೆಗೆ ಬಿಡಲಾಗಿದೆ. ಇದು ಟ್ರಸ್ಟ್‌ನ ಹಿತಾಸಕ್ತಿಗೆ ಮಾರಕ ಎಂದು ಹೈಕೋರ್ಟ್ ಹೇಳಿದೆ.

`ಟ್ರಸ್ಟ್‌ನ ಒಟ್ಟು ಟ್ರಸ್ಟಿಗಳ ಸಂಖ್ಯೆ ಐದು. ನಿಯಮಗಳ ಪ್ರಕಾರ ಮೂರನೆಯ ಒಂದು ಭಾಗದಷ್ಟು ಟ್ರಸ್ಟಿಗಳು ಸಭೆಯಲ್ಲಿ ಪಾಲ್ಗೊಂಡರೆ, ನೀತಿ ನಿರೂಪಣೆ ಕುರಿತು ನಿರ್ಧಾರ ಕೈಗೊಳ್ಳಬಹುದು. ಅಂದರೆ ಐವರಲ್ಲಿ ಇಬ್ಬರು ಮಾತ್ರ ಸಭೆಯಲ್ಲಿ ಪಾಲ್ಗೊಂಡರೂ, ಟ್ರಸ್ಟ್‌ನ ಹಣಕಾಸಿನ ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳಬಹುದು ಎಂದಾಯಿತು. ಈ ರೀತಿಯ ನಿಯಮ ಸಮಂಜಸವಲ್ಲ' ಎಂದೂ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ಮತ್ತು ನ್ಯಾಯಮೂರ್ತಿ ಬಿ.ವಿ. ಪಿಂಟೊ ಅವರನ್ನು ಒಳಗೊಂಡ ವಿಭಾಗೀಯ ಪೀಠ ಶುಕ್ರವಾರ ನೀಡಿರುವ ಮಧ್ಯಂತರ ಆದೇಶದಲ್ಲಿ ಹೇಳಿದೆ.

ಧೀರೇಂದ್ರ ಡಿ. ಜಂಬ್ಳೆ ಎಂಬುವರು 1984ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವಸಂತ್ ಮತ್ತು ಇತರರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಟ್ರಸ್ಟ್ ಕಾರ್ಯನಿರ್ವಹಣೆ ಕುರಿತು ಈ ಕಟು ಮಾತುಗಳನ್ನು ಆಡಿದೆ. ಮಧ್ಯಂತರ ಅರ್ಜಿಗಳ ಕುರಿತು ಹೆಚ್ಚಿನ ವಿಚಾರಣೆ ಬೇಕಿದೆ ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿದೆ.

`ಲೋಕ ಶಿಕ್ಷಣ ಟ್ರಸ್ಟ್‌ನ ಟ್ರಸ್ಟಿಗಳು ಆಜೀವ ಸದಸ್ಯತ್ವ ಹೊಂದಿರುತ್ತಾರೆ. ಆದರೆ ಹಾರನಹಳ್ಳಿ ರಾಮಸ್ವಾಮಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸರಿತಾ ಕೆ. ದೇಸಾಯಿ, ಆರ್.ವಿ. ದೇಶಪಾಂಡೆ, ಯು.ಬಿ. ವೆಂಕಟೇಶ್, ಉಮೇಶ್ ಭಟ್ ಮತ್ತು ಪ್ರಹ್ಲಾದ ಜೋಶಿ ಅವರನ್ನು ಮೂರು ವರ್ಷಗಳ ಅವಧಿಗೆ ಟ್ರಸ್ಟಿಗಳನ್ನಾಗಿ ನೇಮಕ ಮಾಡಲಾಯಿತು. ಅಶೋಕ ಹಾರನಹಳ್ಳಿ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಯು.ಬಿ. ವೆಂಕಟೇಶ್ ಮತ್ತು ಉಮೇಶ್ ಭಟ್ ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಟ್ರಸ್ಟಿಗಳನ್ನಾಗಿ ನೇಮಕ ಮಾಡಲಾಯಿತು. ಟ್ರಸ್ಟ್‌ನ ಅಧ್ಯಕ್ಷರು ತಮ್ಮ ಅಧಿಕಾರವನ್ನು ಮನಸೋಇಚ್ಛೆ ಬಳಸಿ ಈ ನೇಮಕಾತಿ ನಡೆಸಿರುವಂತಿದೆ' ಎಂದು ಪೀಠ ಹೇಳಿದೆ.

ಟ್ರಸ್ಟ್‌ನ ಕೆಲವು ಅಧ್ಯಕ್ಷರು ನಿಯಮಗಳನ್ನು ಮುರಿದಿದ್ದಾರೆ. ಈ ಸಾರ್ವಜನಿಕ ಟ್ರಸ್ಟನ್ನು ಅಧ್ಯಕ್ಷರುಗಳು ಖಾಸಗಿ ಟ್ರಸ್ಟ್‌ನ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಅಧ್ಯಕ್ಷರ ಅವಧಿ ಒಂದು ವರ್ಷ ಮಾತ್ರ. ಒಬ್ಬರು ನಿರಂತರವಾಗಿ ಮೂರು ವರ್ಷ ಅಧ್ಯಕ್ಷರಾಗಬಹುದು. ಆದರೆ ರಾಮಸ್ವಾಮಿ ಮತ್ತು ಅಶೋಕ ಅವರು ದಾಖಲೆಗಳನ್ನು ತಿರುಚಿ, ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಅಧ್ಯಕ್ಷರಾಗಿದ್ದರು ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT